ಕುಶಾಲನಗರ, ಜು. 13: ಕೊಡಗು ಜಿಲ್ಲೆಯ ಜನತೆಯ ಸಮಸ್ಯೆಗಳ ಬಗ್ಗೆ ಶಾಸಕರು, ಸಂಸದರು ಗಮನಹರಿಸುತ್ತಿಲ್ಲ ಎಂದು ಎಸ್‍ಡಿಪಿಐ ಸಂಘಟನೆಯ ರಾಷ್ಟ್ರೀಯ ಪ್ರಧಾನ ಕಾರ್ಯದರ್ಶಿ ಅಬ್ದುಲ್ ಮಜೀದ್ ಅವರು ಆರೋಪಿಸಿದ್ದಾರೆ. ಕುಶಾಲನಗರದಲ್ಲಿ ಅವರು ಕಾರ್ಯಕರ್ತರೊಂದಿಗೆ ಮಾತನಾಡಿ, ಜಿಲ್ಲೆಯಲ್ಲಿ ಭ್ರಷ್ಟಾಚಾರ ತಾಂಡವವಾಡುತ್ತಿದೆ. ಕಾಡಾನೆಗಳಿಂದ ನಾಗರಿಕರಿಗೆ ತೊಂದರೆಯಾಗುವದರೊಂದಿಗೆ ಬೆಳೆಗಾರರಿಗೆ ಕಷ್ಟನಷ್ಟ ಉಂಟಾಗುತ್ತಿದೆ. ಈ ಬಾರಿ ವಿಧಾನಸಭೆಗೆ ಆಯ್ಕೆ ಮಾಡಿದ ಜನತೆ ಆತ್ಮಾವಾಲೋಕನ ಮಾಡಬೇಕಾಗಿದೆ ಎಂದ ಅವರು, ಸಂಸತ್ ಸದಸ್ಯ ಪ್ರತಾಪ್‍ಸಿಂಹ ಇವುಗಳನ್ನು ಗಮನಕ್ಕೆ ತೆಗೆದುಕೊಳ್ಳದೆ ಕೇವಲ ಮುಸ್ಲಿಂ ವಿರೋಧಿ ಹೇಳಿಕೆಗಳನ್ನು ನೀಡುವದರಲ್ಲಿ ನಿರತರಾಗಿದ್ದಾರೆ ಎಂದು ಆಕ್ರೋಷ ವ್ಯಕ್ತಪಡಿಸಿದರು.

ಖಾಸಗಿ ಕಾರ್ಯಕ್ರಮವೊಂದಕ್ಕೆ ವೀರಾಜಪೇಟೆಗೆ ತೆರಳುವ ಮಾರ್ಗ ಮಧ್ಯೆ ಕುಶಾಲನಗರದಲ್ಲಿ ಕುಶಾಲನಗರ ಹೋಬಳಿ ಎಸ್‍ಡಿಪಿಐ ಪದಾಧಿಕಾರಿಗಳು ಮಜೀದ್ ಅವರನ್ನು ಸ್ವಾಗತಿಸಿದರು.

ಈ ಸಂದರ್ಭ ಹೋಬಳಿ ಅಧ್ಯಕ್ಷ ಜೈನುಲ್ ಆಬೀದ್, ಕ್ಷೇತ್ರಾಧ್ಯಕ್ಷ ಮಹಮ್ಮದ್ ಶಫಿ ಮತ್ತಿತರರು ಇದ್ದರು.