ಗೋಣಿಕೊಪ್ಪ ವರದಿ, ಜು. 15: ಬೆಮ್ಮತ್ತಿ ಕಾಫಿ ಬೆಳೆಗಾರ ಪಾರುವಂಗಡ ಬೆಳ್ಯಪ್ಪ ಅವರ ಕಾಫಿ ತೋಟದಲ್ಲಿ ಸೆರೆಯಾದ ಕಾಡಾನೆ ಮತ್ತಿಗೋಡು ಸಾಕಾನೆ ಶಿಬಿರದಲ್ಲಿ ಭಾನುವಾರ ಬೆಳಿಗ್ಗೆ ಸಾವನ್ನಪ್ಪಿದೆ.

ಕಾಲಿಗೆ ಆಗಿದ್ದ ಗಾಯ ಹೊಟ್ಟೆಯನ್ನು ಪ್ರವೇಶಿಸಿದ್ದೆ ಸಾವಿಗೆ ಕಾರಣವಾಗಿದೆ. 2 ದಿನಗಳ ಕಾಲ ಸುಮಾರು 30ಕ್ಕೂ ಹೆಚ್ಚು ಸಿಬ್ಬಂದಿ ನಡೆಸಿದ ಯಶಸ್ವಿ ಕಾರ್ಯಾಚರಣೆ ನೋವಿನಲ್ಲಿ ಅಂತ್ಯವಾಗಿದೆ. ಭಾನುವಾರ ಬೆಳಿಗ್ಗೆ 6 ಗಂಟೆ ಸುಮಾರಿಗೆ ಆನೆ ಸಾವನ್ನಪ್ಪಿದ್ದು ಕಾರ್ಯಾಚರಣೆ ತಂಡಕ್ಕೆ ಬೇಸರ ತರಿಸಿದೆ.

ಸೆರೆಯಾಗಿದ್ದ 40 ವರ್ಷ ಪ್ರಾಯದ ಗಂಡಾನೆಯ ಕಾಲಿನಲ್ಲಿ ಊದಿಕೊಂಡಿರುವ ಜಾಗದಲ್ಲಿ ಸುಮಾರು 2 ಬಕೆಟ್‍ಗಳಷ್ಟು ಕೀವುನ್ನು ಶನಿವಾರ ವೈದÀ್ಯರು ಹಾಗೂ ಸಿಬ್ಬಂದಿ ಹೊರ ತೆಗೆದಿದ್ದರು. ಕಾಲಿನ ಮೇಲ್ಪದರ ಕೊಳೆತಿರುವದರಿಂದ ಕಾಲಿಗೆ ಬಲವಿಲ್ಲ ದಾಗಿತ್ತು. ಗಾಯದ ಒಳಭಾಗದಲ್ಲಿ ಕೊಳೆತು ಕಾಲಿನ ಮೇಲಿನವರೆಗೂ ಆಕ್ರಮಿಸಿಕೊಂಡು ಹೊಟ್ಟೆಗೆ ಸೇರಿದ್ದೇ ಸಾವಿಗೆ ಕಾರಣವಾಗಿದೆ.

5 ತಿಂಗಳ ಹಿಂದಷ್ಟೆ ಜಂಗಲಾಡಿ ಎಂಬಲ್ಲಿ ಮತ್ತೊಂದು ಗಂಡಾನೆ ಯೊಂದಿಗೆ ಕಾದಾಡಿ ಆನೆಯನ್ನು ಕೊಂದು ಗಾಯಗೊಂಡಿತ್ತು. ಮೈಯಲ್ಲಿ ಹೆಚ್ಚಿನ ಗಾಯವಿದ್ದ ಕಾರಣ ಕಾಗೆ, ಪಕ್ಷಿಗಳಿಂದ ರಕ್ಷಿಸಿಕೊಳ್ಳಲು ಕೆರೆಯಲ್ಲಿಯೇ ದಿನದೂಡಿ ಗಾಯ ವಾಸಿ ಮಾಡಿಕೊಂಡಿತ್ತು. ಕಾಲಿನಲ್ಲಿನ ಗಾಯ ವಾಸಿಯಾಗದ ಕಾರಣ ಆನೆ ನಿತ್ರಾಣ ಸ್ಥಿತಿಯಲ್ಲಿತ್ತು. 20 ದಿನಗಳ ಹಿಂದಷ್ಟೆ ಬೆಮ್ಮತ್ತಿಯಲ್ಲಿ ಬೈಕ್ ಸವಾರ ಮಜೀದ್ ಎಂಬವರ ಮೇಲೆ ಧಾಳಿ ನಡೆಸಿ ಬೈಕ್ ಜಖಂಗೊಳಿಸಿತ್ತು. ಧನುಗಾಲ, ಬೆಮ್ಮತ್ತಿ ಗ್ರಾಮದಲ್ಲಿ ಸೇರಿಕೊಂಡು ಆತಂಕ ಮೂಡಿಸಿದ್ದ ಆನೆಯನ್ನು ಕಳೆದ ಗುರುವಾರ ಸಂಜೆ 6 ಗಂಟೆಗೆ ಸೆರೆ ಹಿಡಿಯಲಾಗಿತ್ತು. ನಂತರ 14 ಗಂಟೆಗಳ ಕಾಲ ಮೇಲೇಳದೆ ಇದ್ದ ಆನೆಯನ್ನು ಎಳೆದುಕೊಂಡು ಬಂದು ಲಾರಿ ಹತ್ತಿಸಲು ಪ್ರಯತ್ನ ನಡೆಸಿದ್ದರು. ನಂತರ ಆನೆ ಮೇಲೆದ್ದು ಸಾಕಾನೆಗಳೊಂದಿಗೆ ಶಿಬಿರ ಸೇರಿತ್ತು.

ಪಶು ವೈದ್ಯಾಧಿಕಾರಿ ಮುಜಿಬ್ ರೆಹಮನ್ ಶವ ಪರೀಕ್ಷೆ ನಡೆಸಿದರು. ನಂತರ ಶಿಬಿರದ ಸಮೀಪವಿರುವ ಕಾಡಿನಲ್ಲಿ ಸುಡಲಾಯಿತು.

ವರದಿ - ಸುದ್ದಿಪುತ್ರ