ಗೋಣಿಕೊಪ್ಪಲು, ಜು. 15: ಕೊಡಗು ಜಿಲ್ಲೆಗೆ ತಾ. 19 ರಂದು ಭೇಟಿ ನೀಡಿ ಜಿಲ್ಲಾಮಟ್ಟದ ಅಧಿಕಾರಿಗಳೊಂದಿಗೆ ಸಭೆ ನಡೆಸಿ ಜಿಲ್ಲೆಯ ಸಮಸ್ಯೆಗಳ ಬಗ್ಗೆ ಚರ್ಚಿಸುವದಾಗಿ ರಾಜ್ಯದ ಮುಖ್ಯಮಂತ್ರಿ ಹೆಚ್.ಡಿ. ಕುಮಾರಸ್ವಾಮಿ ಹೇಳಿದರು.

ಬೆಂಗಳೂರಿನ ಜೆಡಿಎಸ್ ಕೇಂದ್ರ ಕಚೇರಿ ಜೆ.ಪಿ. ಭವನದಲ್ಲಿ ಪಕ್ಷದ ವತಿಯಿಂದ ನೂತನ ಶಾಸಕರಿಗೆ, ವಿದಾನ ಪರಿಷತ್ ಸದಸ್ಯರಿಗೆ, ಸಚಿವರಿಗೆ ಏರ್ಪಡಿಸಲಾಗಿದ್ದ ಅಭಿನಂಧನಾ ಕಾರ್ಯಕ್ರಮದಲ್ಲಿ ಮಾತನಾಡಿದ ಕುಮಾರಸ್ವಾಮಿ, ತಾನು ರಾಜ್ಯದ ಎಲ್ಲಾ ಜಿಲ್ಲೆಗಳಿಗೂ ಮುಖ್ಯಮಂತ್ರಿ ಯಾಗಿದ್ದೇನೆ ಎಂದರು.

ಈ ಸಂದರ್ಭ ಮುಖ್ಯಮಂತ್ರಿಗಳನ್ನು ಜೆಡಿಎಸ್ ಜಿಲ್ಲಾಧ್ಯಕ್ಷ ಸಂಕೇತ್ ಪೂವಯ್ಯ ಜಿಲ್ಲೆಗೆ ಆಗಮಿಸುವ ಬಗ್ಗೆ ಚರ್ಚೆ ನಡೆಸಿದರು. ಈವೇಳೆ ತಾ. 19ರ ಕೊಡಗು ಜಿಲ್ಲೆಯ ಭೇಟಿಯನ್ನು ಖಾತರಿಪಡಿಸಿದರು.

ನಂತರ ಜೆಡಿಎಸ್ ರಾಷ್ಟ್ರೀಯ ಅಧ್ಯಕ್ಷ ಹೆಚ್.ಡಿ. ದೇವೇಗೌಡರವರನ್ನು ಭೇಟಿ ಮಾಡಿದ ಸಂಕೇತ್ ಪೂವಯ್ಯ, ಕೊಡಗು ಜಿಲ್ಲೆಯಲ್ಲಿ ಸುರಿಯುತ್ತಿರುವ ಭಾರೀ ಮಳೆಯಿಂದ ಅಪಾರ ಆಸ್ತಿಪಾಸ್ತಿ ನಷ್ಟಗೊಂಡಿವೆ. ಈ ಬಗ್ಗೆ ವಿಶೇಷವಾಗಿ ಜಿಲ್ಲೆಗೆ ಪರಿಹಾರ ಬಿಡುಗಡೆಗೊಳಿಸಲು ಮನವಿ ಮಾಡಿದರು.