ಸೋಮವಾರಪೇಟೆ, ಜು. 15: ಸುಮಾರು 15 ಲಕ್ಷಕ್ಕೂ ಅಧಿಕ ವೆಚ್ಚದಲ್ಲಿ ಹೂಳು ತೆಗೆದ ಯಡೂರು ದೇವರ ಕೆರೆ ಮತ್ತು ಪಟ್ಟಣದ ಆನೆಕೆರೆಯಲ್ಲಿ ಪ್ರಸಕ್ತ ವರ್ಷ ನೀರಿನ ಸೆಲೆ ಕಂಡುಬಂದಿದ್ದು, ಇದೀಗ ಬೀಳುತ್ತಿರುವ ವರ್ಷಾಧಾರೆಗೆ ಮೈದುಂಬಿರುವ ಹಿನ್ನೆಲೆ ದಾನಿಗಳಾದ ಹರಪಳ್ಳಿ ರವೀಂದ್ರ ಅವರು ಬಾಗಿನ ಅರ್ಪಿಸಿದರು.

ಕಳೆದ ಕೆಲ ದಶಕಗಳ ಹಿಂದೆ ಬತ್ತಿ ಬರಿದಾಗಿದ್ದ ಎರಡೂ ಕೆರೆಗಳನ್ನು ದಾನಿಗಳಾದ ಹರಪಳ್ಳಿ ರವೀಂದ್ರ ಅವರು ತಮ್ಮ ಸ್ವಂತ ದುಡಿಮೆಯ ಹಣದಿಂದ ಸುಮಾರು 15 ಲಕ್ಷಕ್ಕೂ ಅಧಿಕ ಹಣ ವ್ಯಯಿಸಿ, ಖುದ್ದು ಮುತುವರ್ಜಿ ವಹಿಸಿ ಹೂಳು ತೆಗೆಸಿದ್ದರು.

ಪರಿಣಾಮ ಯಡೂರು ಗ್ರಾಮದ ದೇವರ ಕೆರೆ ಹಾಗೂ ಆನೆಕೆರೆಯಲ್ಲಿ ಜಲದ ಕಣ್ಣು ತೆರೆದುಕೊಂಡು ನೀರು ಶೇಖರಣೆಗೊಳ್ಳಲಾರಂಭಿಸಿತ್ತು. ಇದೀಗ ಸುರಿಯುತ್ತಿರುವ ವರ್ಷಾಧಾರೆಯೂ ಜತೆಗೂಡಿ ಎರಡೂ ಕೆರೆಗಳು ತುಂಬಿದ್ದು, ಹರಪಳ್ಳಿ ರವೀಂದ್ರ ಅವರು ಕುಟುಂಬ ಸಹಿತ ಸಾರ್ವಜನಿಕರೊಡಗೂಡಿ ಬಾಗಿನ ಅರ್ಪಿಸಿದರು.

ಈ ಸಂದರ್ಭ ಮಾತನಾಡಿದ ರವೀಂದ್ರ ಅವರು, ಕಳೆದ ಅನೇಕ ದಶಕಗಳ ಹಿಂದೆ ಕುಡಿಯುವ ನೀರಿನ ಪ್ರಮುಖ ಮೂಲವಾಗಿದ್ದ ಕೆರೆಗಳು ಇತ್ತೀಚೆಗೆ ಬತ್ತಿ ಬರಿದಾಗಿದ್ದು, ಜಾನುವಾರುಗಳಿಗೂ ಕುಡಿಯುವ ನೀರಿಗೆ ತೊಂದರೆ ಎದುರಾಗಿತ್ತು. ಯಡೂರಿನಲ್ಲಿ ರೈತಾಪಿ ವರ್ಗದ ಕೃಷಿ ಕಾರ್ಯಗಳಿಗೂ ಬಳಕೆಯಾಗುತ್ತಿದ್ದ ಕೆರೆ ಬತ್ತಿರುವದನ್ನು ಕಂಡು ತನ್ನ ಕೈಲಾದ ಅಳಿಲು ಸೇವೆ ಸಲ್ಲಿಸುವ ಉದ್ದೇಶದಿಂದ ಹೂಳು ತೆಗೆಯಲಾಗಿದ್ದು, ಇದೀಗ ಕೆರೆ ಭರ್ತಿಯಾಗಿದೆ. ತನ್ನ ಸೇವೆಯೂ ಸಾರ್ಥಕವಾಗಿದೆ ಎಂದರು.

ಪಟ್ಟಣದ ಆನೆಕೆರೆಯನ್ನು ಪುನಶ್ಚೇತನಗೊಳಿಸಲು ಯಾರೂ ಮುಂದಾಗದ ಬಗ್ಗೆ ಸಾರ್ವಜನಿಕರು ಮಾಹಿತಿ ನೀಡಿದ ಮೇರೆ ಅದನ್ನೂ ಹೂಳು ತೆಗೆಸಲಾಗಿದೆ. ತನ್ನ ದುಡಿಮೆಯ ಒಂದಿಷ್ಟು ಪಾಲನ್ನು ಸಮಾಜಮುಖಿ ಕಾರ್ಯಗಳಿಗೆ ವಿನಿಯೋಗಿಸುತ್ತಿದ್ದು, ಸಾರ್ವಜನಿಕರ ಸ್ಪಂದನೆಯಿಂದ ಸೇವೆಯಲ್ಲಿ ಸಂತೃಪ್ತಿ ಕಾಣಬಹುದಾಗಿದೆ. ಕೆರೆಕಟ್ಟೆಗಳನ್ನು ಉಳಿಸಿಕೊಳ್ಳುವತ್ತ ಜಾಗೃತ ಸಮಾಜ ಚಿಂತನೆ ಹರಿಸಬೇಕಾಗಿದೆ ಎಂದರು.

ಬಾಗಿನ ಸಲ್ಲಿಕೆ ಸಂದರ್ಭ ಹರಪಳ್ಳಿ ರವೀಂದ್ರ ಅವರ ಪತ್ನಿ ನಯನ, ಜಲಾ ವೆಂಕಟೇಶ್, ಜಗದೀಶ್, ಸರಳ ಕೃಪಾಲ್, ರವೀಂದ್ರ ಅಭಿಮಾನಿಗಳ ಸಂಘದ ಅಧ್ಯಕ್ಷ ಹೆಚ್.ಎ. ನಾಗರಾಜು, ಪದಾಧಿಕಾರಿಗಳಾದ ಹೆಚ್.ಬಿ. ರಾಜಪ್ಪ, ಹೆಚ್.ಓ. ಪ್ರಕಾಶ್, ಎನ್. ನಾಗರಾಜು, ಶಿವಕುಮಾರ್, ಪ್ರಸಾದ್, ನವೀನ, ಶೇಷಪ್ಪ, ತೋಳೂರುಶೆಟ್ಟಳ್ಳಿ ಘಟಕದ ಅಧ್ಯಕ್ಷ ಶಿವಪ್ಪ, ಯಡೂರು ಗ್ರಾಮದ ಭಾನುಪ್ರಕಾಶ್ ಸೇರಿದಂತೆ ಇತರರು ಉಪಸ್ಥಿತರಿದ್ದರು.