ಮಡಿಕೇರಿ, ಜು. 15: ಕೊಡಗು ಜಿಲ್ಲೆಯಲ್ಲಿ ವಿಪರೀತ ಗಾಳಿಯೊಂದಿಗೆ ನಿರೀಕ್ಷೆಗೂ ಮೀರಿ ಮಳೆಯಾಗುತ್ತಿರುವ ಪರಿಣಾಮ ಮೈಸೂರು-ಬಂಟ್ವಾಳ ರಾಷ್ಟ್ರೀಯ ಹೆದ್ದಾರಿಯಲ್ಲಿ ಭಾರೀ ವಾಹನಗಳ ಸಂಚಾರದಿಂದ ಅಪಾಯ ಎದುರಾಗುವ ಸಂಭವವಿದೆಯೆಂದು; ವೀರಾಜಪೇಟೆ ಕ್ಷೇತ್ರದ ಶಾಸಕ ಕೆ.ಜಿ. ಬೋಪಯ್ಯ ಆತಂಕ ವ್ಯಕ್ತಪಡಿಸಿದ್ದಾರೆ.ಇಂದು ನಗರದ ಮಂಗಳೂರು ರಸ್ತೆಯು ಬಿರುಕು ಕಾಣಿಸಿಕೊಂಡು, ರಸ್ತೆ ಕುಸಿಯುವ ಸ್ಥಿತಿಯಲ್ಲಿ ಇರುವ ಬಗ್ಗೆ ಖುದ್ದು ಪರಿಶೀಲಿಸಿದ ಅವರು, ಕಳೆದ ಮುಂಗಾರುವಿನಲ್ಲಿ ಭಾರೀ ಅನಾಹುತ ಸೃಷ್ಟಿಸಿದ್ದ ಕೊಯನಾಡುವಿ ನಲ್ಲಿ ವೀಕ್ಷಣೆ ಮಾಡಿದರು.ಅಲ್ಲಿಯೂ ಮತ್ತೆ ಅಪಾಯದ ಪರಿಸ್ಥಿತಿ ಎದುರಾಗಿರುವ ಬಗ್ಗೆ ಪ್ರತಿಕ್ರಿಯಿಸಿದ ಶಾಸಕರು, ಮಳೆ ಹೀಗೆ ಮುಂದುವರಿದ್ದು, ಶಿರಾಡಿಘಾಟ್ ಮುಖಾಂತರ ತೆರಳಲಿದ್ದ ಭಾರೀ ವಾಹನಗಳು ಕೊಡಗಿನ ಮೂಲಕ ಸಂಚರಿಸುತ್ತಿರುವ ಕಾರಣ ಮತ್ತಷ್ಟು ಅಪಾಯ ಎದುರಾಗಲಿದೆ ಎಂದು ಕಳವಳ ವ್ಯಕ್ತಪಡಿಸಿದರು.ಮಂಗಳೂರು ರಸ್ತೆಯ ಎರಡು ಕಡೆಗಳಲ್ಲಿ ಅಪಾಯದ ಮುನ್ಸೂಚನೆ ಅರಿತು, ಜಿಲ್ಲಾಡಳಿತ ಮುಂಚಿತವಾಗಿ ಪರ್ಯಾಯ ಮಾರ್ಗೋಪಾಯ ಕಂಡುಕೊಳ್ಳಬೇಕಿದೆ

(ಮೊದಲ ಪುಟದಿಂದ) ಎಂದು ಸಲಹೆ ನೀಡಿದ ಅವರು, ಒಂದು ವೇಳೆ ಭೂಕುಸಿತ ಸಂಭವಿಸಿದರೆ ಮಾರ್ಗದಲ್ಲಿ ಲಘು ವಾಹನಗಳ ನಿತ್ಯದ ಓಡಾಟಕ್ಕೂ ತೊಂದರೆಯಾಗಲಿದೆ ಎಂದು ನೆನಪಿಸಿದರು.

ಮಂಗಳೂರು ರಸ್ತೆಯಲ್ಲಿ ಅನಾಹುತ ಎದುರಾಗುವ ಸಾಧ್ಯತೆ ಬೆನ್ನಲ್ಲೇ ಸಂಬಂಧಿಸಿದ ಸ್ಥಳದಲ್ಲಿ ಪೊಲೀಸರನ್ನು ನಿಯೋಜಿಸಿ ಸಂಚಾರ ವ್ಯವಸ್ಥೆಗೆ ನಿಗಾವಹಿಸಲಾಗಿದೆಯಾದರೂ, ಈ ಸ್ಥಳದಲ್ಲಿ ಸಾಕಷ್ಟು ಬಿರುಕು ಕಾಣಿಸಿಕೊಂಡು ಅಪಾಯದ ಮುನ್ಸೂಚನೆಯೂ ಎದುರಾಗಿದೆ. ಘಟನೆ ಸ್ಥಳಕ್ಕೆ ಶಾಸಕರೊಂದಿಗೆ ಪಕ್ಷದ ಕಾರ್ಯಕರ್ತರಾದ ಮಹೇಶ್ ಜೈನಿ, ಬಿ.ಕೆ. ಅರುಣ್ ಕುಮಾರ್, ಜಗದೀಶ್, ಕೀರ್ತನ್ ಹಾಜರಿದ್ದರು.ಮಂಗಳೂರು ರಸ್ತೆಯಲ್ಲಿ ಮತ್ತಷ್ಟು ಅಪಾಯ.