ಕುಶಾಲನಗರ, ಜು 15: ಕರ್ನಾಟಕ ನಗರ ನೀರು ಸರಬರಾಜು ಮತ್ತು ಒಳಚರಂಡಿ ಮಂಡಳಿ ಮೂಲಕ ಕುಶಾಲನಗರದಲ್ಲಿ ನಡೆದಿರುವ ಒಳಚರಂಡಿ ಕಾಮಗಾರಿ ಬಹುತೇಕ ಕಾವೇರಿ ನದಿ ಒಡಲು ಸೇರಿದ್ದು ಹಲವೆಡೆ ಮ್ಯಾನ್‍ಹೋಲ್, ಪೈಪ್‍ಲೈನ್‍ಗಳು ಕುಸಿದಿರುವ ದೃಶ್ಯ ಕಂಡುಬಂದಿದೆ. ಸುರಿಯುತ್ತಿರುವ ಮಳೆಯಿಂದ ತುಂಬಿ ಹರಿಯುತ್ತಿರುವ ಕಾವೇರಿ ನದಿ ದಂಡೆಯಲ್ಲಿ ಕೈಗೊಂಡ ಒಳಚರಂಡಿ ಕಾಮಗಾರಿ ಬಹುತೇಕ ನೀರಿನಿಂದ ಆವೃತಗೊಂಡಿದೆ.
ಕುಶಾಲನಗರ ಸಾಯಿ ಬಡಾವಣೆಯ ಬಳಿ ಕಾವೇರಿ ನದಿ ಬದಿಯಲ್ಲಿ ಅಳವಡಿಸಿರುವ ಪೈಪ್‍ಗಳು ಕುಸಿದು ಬಿದ್ದಿದ್ದು ಪೈಪ್ ಮೂಲಕ ಹರಿದು ಬರುತ್ತಿರುವ ಕಲುಷಿತ ನೀರು ನದಿ ಪಾಲಾಗುತ್ತಿದೆ.
ಇನ್ನೊಂದೆಡೆ ಕುಶಾಲನಗರ ಅಯ್ಯಪ್ಪಸ್ವಾಮಿ ದೇವಾಲಯ ಬಳಿಯ ಖಾಸಗಿ ಕಾಲೇಜು ಬಳಿ ನಿರ್ಮಾಣಗೊಂಡಿರುವ ವೆಟ್‍ವೆಲ್ ನೀರಿನಲ್ಲಿ ಆವೃತಗೊಂಡಿದೆ. ಸಮೀಪದಲ್ಲಿ ನದಿ ತಟದಲ್ಲಿರುವ ಆಳುಗುಂಡಿಗಳು ನೀರಿನಲ್ಲಿ ಕುಸಿದು ಒಳಭಾಗದಿಂದ ಭಾರೀ ಪ್ರಮಾಣದ ಕಲುಷಿತ ತ್ಯಾಜ್ಯ ಹರಿಯುತ್ತಿರುವ ದೃಶ್ಯ ಕಂಡುಬಂದಿದೆ.
ಪಟ್ಟಣದ ವಿವಿಧ ಬಡಾವಣೆಗಳ ರಸ್ತೆಗಳಲ್ಲಿ ಕೂಡ ಒಳಚರಂಡಿ ಪೈಪ್‍ಗಳ ಮೂಲಕ ತ್ಯಾಜ್ಯಗಳು ಹರಿದು ರಸ್ತೆಗೆ ಸೇರುತ್ತಿದ್ದು ಕಾಮಗಾರಿ ಬಹುತೇಕ ಕಳಪೆ ಮಟ್ಟದ್ದಾಗಿದೆ ಎನ್ನುವದಕ್ಕೆ ಸಾಕ್ಷಿಯಾಗಿದೆ. ರಥಬೀದಿಯಲ್ಲಿ ಕಾಮಗಾರಿ ನಡೆದ ನಂತರ ಎರಡು ಬಾರಿ ಆಳುಗುಂಡಿಗಳು ಕುಸಿದಿದ್ದು ನಿರ್ವಹಣೆಯಲ್ಲಿ ನೌಕರರು ತೊಡಗಿದ್ದಾರೆ.
ಕಾಮಗಾರಿ ಪೂರ್ಣಗೊಳ್ಳುವ ಮೊದಲೇ ಈ ಆವಾಂತರಗಳು ಕಂಡುಬಂದಿದ್ದು ಅಂದಾಜು ರೂ. 53 ಕೋಟಿ ವೆಚ್ಚದ ಕಾಮಗಾರಿ ನದಿ ಪಾಲಾದಂತೆ ಕಾಣುತ್ತಿದೆ. ಈ ಬಗ್ಗೆ ಈಗಾಗಲೇ ಒಳಚರಂಡಿ ಮಂಡಳಿಯ ಉನ್ನತ ಅಧಿಕಾರಿಗಳಿಗೆ ದೂರು ನೀಡಲಾಗಿದ್ದು ಕಾಮಗಾರಿಯನ್ನು ಪುನರ್ ಪರಿಶೀಲನೆ ನಡೆಸುವದರೊಂದಿಗೆ ತಪ್ಪಿತಸ್ಥ ಅಧಿಕಾರಿಗಳ ಮೇಲೆ ಕ್ರಮಕೈಗೊಳ್ಳುವಂತೆ ಕುಶಾಲನಗರ ಹಿತರಕ್ಷಣಾ ಸಮಿತಿ ಪ್ರಮುಖರು ಜಿಲ್ಲಾಧಿಕಾರಿಗಳನ್ನು ಆಗ್ರಹಿಸಿದ್ದಾರೆ.
ಪಟ್ಟಣದ ಸ್ವಚ್ಛತೆ ಮತ್ತು ಕಾವೇರಿ ನದಿ ಸಂರಕ್ಷಣೆಯ ಉದ್ದೇಶ ಹೊತ್ತು ನಿರ್ಮಾಣಗೊಳ್ಳುತ್ತಿರುವ ಯೋಜನೆ ಇದೀಗ ಸಂಪೂರ್ಣ ವೈಫಲ್ಯವಾಗಿರುವದು ಖಚಿತಗೊಂಡಿದೆ.