ಮಡಿಕೇರಿ, ಜು. 15: ಮಡಿಕೇರಿ ಜಿಲ್ಲಾ ಕೇಂದ್ರವೂ ಸೇರಿದಂತೆ ಕೊಡಗಿನ ಸಿದ್ದಾಪುರ, ಮಾದಾಪುರ, ಗರ್ವಾಲೆ, ಕುಂಬೂರು ಮುಂತಾದೆಡೆಗಳಲ್ಲಿ ವಿಪರೀತ ಗಾಳಿಯೊಂದಿಗೆ ಅಲ್ಲಲ್ಲಿ ಮರಗಳು ಬಿದ್ದು ರಸ್ತೆ ಸಂಚಾರ ಸ್ಥಗಿತಗೊಂಡಿದ್ದರೆ, ಅನೇಕ ಕಡೆಗಳಲ್ಲಿ ವಿದ್ಯುತ್ ಕಂಬಗಳು ನೆಲಕಚ್ಚುವ ಮೂಲಕ ಗ್ರಾಮೀಣ ಜನತೆ ರಾತ್ರಿಯಿಂದ ಕಾರ್ಗತ್ತಲೆಯಲ್ಲಿ ಸಿಲುಕಿದ್ದಾರೆ. ಕಳೆದ 48 ಗಂಟೆಗಳಲ್ಲಿ ಎದುರಾಗಿರುವ ಗಾಳಿಯ ಅವಾಂತರ ಹಲವಷ್ಟು ಸಮಸ್ಯೆ ಸೃಷ್ಟಿಸಿದೆ.ಮಾದಾಪುರ ಸುತ್ತಮುತ್ತಲಿನ ಹೆದ್ದಾರಿಯ ಇಗ್ಗೋಡ್ಲು, ಹಟ್ಟಿಹೊಳೆ, ಮುಕ್ಕೋಡ್ಲು, ಕುಂಬೂರು ವ್ಯಾಪ್ತಿಯಲ್ಲಿ ಮರಗಳು ನೆಲಕಚ್ಚುವದರೊಂದಿಗೆ ಶಿರಂಗಳ್ಳಿ- ಗರ್ವಾಲೆ ನಡುವೆ ಹಾದಿಗಲ್ಲು ಹೊಳೆಯ ಸಮೀಪ ಬರೆ ಕುಸಿದು ಸಂಚಾರ ಸ್ಥಗಿತಗೊಂಡಿದೆ. ಸಿದ್ದಾಪುರ ವ್ಯಾಪ್ತಿಯಲ್ಲಿ ಭಾರೀ ಮರ ಧರೆಗುರುಳಿದೆ.
ಮಂಗಳೂರು ರಸ್ತೆ ಆತಂಕ: ಮೈಸೂರು- ಬಂಟ್ವಾಳ ಹೆದ್ದಾರಿಯಲ್ಲಿ ಜಿಲ್ಲಾ ಕೇಂದ್ರ ಮಡಿಕೇರಿಯಿಂದ ಅನತಿ ದೂರದಲ್ಲಿ ಮೊನ್ನೆ ಹಾನಿಗೊಂಡಿರುವ ರಸ್ತೆ ಮತ್ತಷ್ಟು ಅನಾಹುತ ಸೃಷ್ಟಿಸುವ ಭೀತಿಯಿದೆ, ಅಲ್ಲದೆ ಕೊಯನಾಡುವಿನಲ್ಲಿ ಕಳೆದ ಮಳೆಗಾಲದಲ್ಲಿ ಭೂಕುಸಿತ ಸಂಭವಿಸಿದ್ದ ಸ್ಥಳದಲ್ಲಿ ಮತ್ತೆ ಬಿರುಕು ಕಾಣಿಸಿಕೊಂಡು ಭೂಕುಸಿತದೊಂದಿಗೆ ಹೆದ್ದಾರಿ ಸಂಪರ್ಕ ಕಡಿತಗೊಳ್ಳುವ ಆತಂಕ ಎದುರಾಗಿದೆ.
ಸಿದ್ದಾಪುರ: ಸಿದ್ದಾಪುರ, ಪಿರಿಯಾಪಟ್ಟಣ ಮಾರ್ಗದಲ್ಲೂ ಮರ ಬಿದ್ದು ರಸ್ತೆ ಸಂಪರ್ಕ ಸ್ಥಗಿತಗೊಂಡಿತ್ತು. ಈ ಮಾರ್ಗದಲ್ಲಿ ಭಾರೀ ಮರವೊಂದು ರಸ್ತೆಗೆ ಅಡ್ಡಲಾಗಿ ಮುರಿದು ಬಿದ್ದು, ವಿರಾಟ್ ರಾಮರಾಜ್ ಎಂಬವರ ತಡೆಗೋಡೆ ಹಾಗೂ ವಾಹನ ಸೇರಿದಂತೆ ಮನೆಗೂ ಹಾನಿ ಸಂಭವಿಸಿದೆ.
ಸಿದ್ದಾಪುರ ಮಾರ್ಗದ ಅಲ್ಲಲ್ಲಿ ಮರಗಳು ನೆಲಕಚ್ಚುವದರೊಂದಿಗೆ ಸಾರ್ವಜನಿಕ ಆಸ್ತಿ-ಪಾಸ್ತಿ ಹಾನಿಗೊಂಡಿವೆ. ಭಾನುವಾರ ಸಿದ್ದಾಪುರ ಸಂತೆಯಾದ ಹಿನ್ನೆಲೆ, ವ್ಯಾಪಾರ ವಹಿವಾಟು ನಡೆಸಲು ಬಂದಿದ್ದ ಜನತೆ ಹಲವು ಸಮಸ್ಯೆಗಳಲ್ಲಿ ಸಿಲುಕಿ ಬವಣೆ ಪಡಬೇಕಾಯಿತು. ಗುಹ್ಯ ಶಾಲೆಯ ಬಳಿಯೂ ಮರ ಬಿದ್ದು ತೊಂದರೆ ಎದುರಾಯಿತು. ಅಲ್ಲಲ್ಲಿ ಮರಗಳಿಂದ ಎದುರಾಗಿದ್ದ ರಸ್ತೆ ಸಂಚಾರ ತಡೆಯನ್ನು ತೆರವುಗೊಳಿಸುವಲ್ಲಿ ವಿವಿಧ ಇಲಾಖೆಯ ಸಿಬ್ಬಂದಿ ಜಂಟಿ ಕಾರ್ಯಾಚರಣೆ ಕೈಗೊಂಡು ಜನತೆಯ ತೊಂದರೆ ನಿವಾರಿಸಿದರು.
ಕೂಡಿಗೆ ವರದಿ: ಕೂಡಿಗೆ - ಶಿರಂಗಾಲದ ನಡುವೆ ಭಾರೀ ಮರ ನೆಲಕಚ್ಚಿದ್ದು, ವಿದ್ಯುತ್ ಸಂಪರ್ಕಕ್ಕೂ ಅಡಚಣೆ ಎದುರಾಯಿತು. ಕೂಡಿಗೆ ಸುತ್ತಮುತ್ತ ಅನೇಕ ಮನೆಗಳಿಗೆ ಮರಬಿದ್ದು ಹಾನಿ ಉಂಟಾಗಿದೆ. ಈ ಸಂಬಂಧ ಭಾನುವಾರವೂ ಕಂದಾಯ ಇಲಾಖೆಗೆ ಸಂಬಂಧಿಸಿದ ಮಂದಿ ನಷ್ಟ ಪರಿಹಾರಕ್ಕೆ ಬೇಡಿಕೆ ಸಲ್ಲಿಸಿದ್ದಾರೆ. ಹುದುಗೂರು ಅಂಗನವಾಡಿ ಕಟ್ಟಡಕ್ಕೂ ಮರಬಿದ್ದು ಹಾನಿ ಸಂಭವಿಸಿದೆ.
ಶಾಂತಳ್ಳಿ ವರದಿ: ಶಾಂತಳ್ಳಿ ವ್ಯಾಪ್ತಿಯಲ್ಲಿ ಎಡೆಬಿಡದೆ ಸುರಿಯುತ್ತಿರುವ ಮಳೆ ಹಾಗೂ ಭೀಕರ ಗಾಳಿಯಿಂದ ಪುಷ್ಪಗಿರಿ ತಪ್ಪಲಿನ ಅನೇಕ ಗ್ರಾಮಗಳಲ್ಲಿ ಅಪಾರ ಹಾನಿ ಸಂಭವಿಸಿದೆ. ಅಲ್ಲಿನ ನಿವಾಸಿ ಗೋಪಾಲ್ ಎಂಬವರ ಮನೆ ಮೇಲ್ಚಾವಣಿ ಹಾಗೂ ಜೀಪೊಂದು ಹಾನಿಗೊಂಡಿದೆ ಎಂದು ವಿಧಾನಪರಿಷತ್ ಮಾಜೀ ಸದಸ್ಯ ಎಸ್.ಜಿ. ಮೇದಪ್ಪ ‘ಶಕ್ತಿ’ಗೆ ತಿಳಿಸಿದ್ದಾರೆ. ಗಾಳಿ- ಮಳೆಯ ತೀವ್ರತೆ ಸಂಕಷ್ಟ ತಂದೊಡ್ಡಿದೆ ಎಂದು ಆತಂಕ ತೋಡಿಕೊಂಡಿದ್ದಾರೆ.
ಶನಿವಾರಸಂತೆ: ಇಂದು ಹಗಲು ಗಾಳಿ- ಮಳೆಯ ರಭಸಕ್ಕೆ ಕೊಡ್ಲಿಪೇಟೆ- ಶನಿವಾರಸಂತೆ ಮಾರ್ಗಕ್ಕೆ ಅಡ್ಡಲಾಗಿ ಭಾರೀ ಮರವೊಂದು ಉರುಳಿಬಿದ್ದಿದೆ. ಪರಿಣಾಮ ರಸ್ತೆ ಸಂಚಾರ ಸ್ಥಗಿತಗೊಂಡು, ದುಂಡಳ್ಳಿ ಮುಖಾಂತರ ಬದಲಿ ರಸ್ತೆಯಲ್ಲಿ ಬಸ್ಗಳ ಸಹಿತ ಇತರ ವಾಹನಗಳ ಓಡಾಟ ಕಂಡುಬಂತು. ಮರ ಬಿದ್ದ ರಭಸಕ್ಕೆ ನಾಲ್ಕೈದು ವಿದ್ಯುತ್ ಕಂಬಗಳು ಟ್ರಾನ್ಸ್ಫಾರ್ಮರ್ ಸಹಿತ ನೆಲಕಚ್ಚಿದ್ದು, ಅರಣ್ಯ ಹಾಗೂ ಚೆಸ್ಕಾಂ ಸಿಬ್ಬಂದಿಗಳು ತೆರವು ಕಾರ್ಯದಲ್ಲಿ ತೊಡಗಿದ್ದಾರೆ.
ಶನಿವಾರಸಂತೆಯ ತ್ಯಾಗರಾಜ ಕಾಲೋನಿ ನಿವಾಸಿ ಭಾಷಾ ಎಂಬವರ ಮನೆ ಮೇಲೆ ಮರವೊಂದು ಬಿದ್ದು ಹಾನಿಯುಂಟಾಗಿದೆ. ಅವರ ಪುತ್ರ ನಷಿಮ್ ಎಂಬಾತ ಸಣ್ಣಪುಟ್ಟ ಗಾಯಗೊಂಡಿದ್ದಾರೆ. ಒಟ್ಟಿನಲ್ಲಿ ಶನಿವಾರಸಂತೆ ಸುತ್ತಮುತ್ತ ಸಾಕಷ್ಟು ಅನಾಹುತ ಎದುರಾಗಿದೆ.
(ಮೊದಲ ಪುಟದಿಂದ) ಬೆಳಗಿನ ಜಾವ 3 ಗಂಟೆ ಸುಮಾರಿಗೆ ಅನಾಹುತ ಎದುರಾಗಿದ್ದು, ಸುಮಾರು 50 ಸಾವಿರ ನಷ್ಟ ಉಂಟಾಗಿದೆ ಎಂದು ಅಂದಾಜಿಸಲಾಗಿದೆ.
ಅಲ್ಲಲ್ಲಿ ಹಾನಿ: ಮಾದಾಪುರ, ಗರ್ವಾಲೆ ನಡುವೆ ಹಾನಗಲ್ಲು ಹೊಳೆ ಸೇತುವೆಯಿಂದ ಅನತಿ ದೂರದಲ್ಲಿ ಭೂಕುಸಿತದಿಂದ ಮಣ್ಣು ನೀರಿನಲ್ಲಿ ತಡೆಯೊಡ್ಡಿದ ಪರಿಣಾಮ ಗದ್ದೆ ಜಲಾವೃತಗೊಂಡಿರುವದಾಗಿ ಅಲ್ಲಿನ ನಿವಾಸಿ ಸನ್ನಿ ಕಾವೇರಪ್ಪ ‘ಶಕ್ತಿ’ಗೆ ತಿಳಿಸಿದ್ದಾರೆ. ಇಂದು ಜೆಸಿಬಿ ಮೂಲಕ ಮಣ್ಣು ತೆರವುಗೊಳಿಸಿ ವಾಹನ ಸಂಚಾರಕ್ಕೆ ಸಂಬಂಧಿಸಿದ ಇಲಾಖೆ ಕ್ರಮಕೈಗೊಂಡಿದೆ ಎಂದು ಅವರು ಮಾಹಿತಿ ನೀಡಿದ್ದಾರೆ.
ಮನೆಗಳಿಗೆ ಜಖಂ: ಮಾದಾಪುರ ಬಳಿ ಕುಂಬೂರು ಗ್ರಾಮದ ಸುರೇಶ್, ಎಡವಾರೆ ನಿವಾಸಿ ಮಲ್ಲಿಗೆ ಶಾಂತಪ್ಪ, ಮುಕ್ಕೋಡ್ಲು ಬಳಿ ಜೂಬಿ, ಬೀಟಿಕಟ್ಟೆ ಸುರೇಶ್, ಹಾನಗಲ್ಲು ರಮೇಶ್, ಮಕ್ಕಂದೂರು ಪಕೀರ, ಹೆರವನಾಡುವಿನ ಕಾಸ್ಪಾಡಿ ಸೋಮಯ್ಯ ಮೊದಲಾದವರ ಮನೆಗಳಿಗೆ ಗಾಳಿ- ಮಳೆಯ ಪರಿಣಾಮ ಹಾನಿ ಉಂಟಾಗಿದ್ದು, ಸಂಬಂಧಪಟ್ಟವರಿಗೆ ನಷ್ಟ ಪರಿಹಾರಕ್ಕೆ ಅರ್ಜಿ ಸಲ್ಲಿಸಲಾಗಿದೆ.
ಮರಬಿದ್ದು ತಡೆ: ಹಟ್ಟಿಹೊಳೆ ಸಮೀಪ ಮುಕ್ಕೋಡ್ಲು, ಮಕ್ಕಂದೂರು, ಹಾಲೇರಿ, ಹೆರವನಾಡು, ಮದೆ, ಕುಂಬೂರು, ಗುಹ್ಯ ಮುಂತಾದ ಕಡೆಗಳಲ್ಲಿ ರಸ್ತೆಗೆ ಅಡ್ಡಲಾಗಿ ಮರಗಳು ಬಿದ್ದು ಸಂಚಾರಕ್ಕೆ ತೊಡಕಾಗಿದೆ ಎಂದು ತಿಳಿದು ಬಂದಿದೆ.
ವಿದ್ಯುತ್ ಸಮಸ್ಯೆ: ಮಡಿಕೇರಿ, ಮಂಗಳಾದೇವಿನಗರ, ಉಡೋತ್ಮೊಟ್ಟೆ, ಅಪ್ಪಂಗಳ, ಕೋಪಟ್ಟಿ, ಕತ್ತಲೆಕಾಡು, ಕ್ಲೋಸ್ಬರ್ನ್, ಕಾಟಕೇರಿ, ದೇವರಕೊಲ್ಲಿ, ಹಾಕತ್ತೂರು, ತೊಂಬತ್ತುಮನೆ, ಹೊದ್ದೂರು, ದೇವಸ್ತೂರು, ಹಚ್ಚಿನಾಡು ಮುಂತಾದೆಡೆಗಳಲ್ಲಿ 20ಕ್ಕೂ ಅಧಿಕ ವಿದ್ಯುತ್ ಕಂಬಗಳು ಮುರಿದು ಬಿದ್ದ ಪರಿಣಾಮ ಸಾಕಷ್ಟು ಸಮಸ್ಯೆ ಎದುರಾಗಿದೆ. ಸರಿಪಡಿಸುವ ನಿಟ್ಟಿನಲ್ಲಿ ಇಲಾಖೆಯ ಸಿಬ್ಬಂದಿ ಗಾಳಿ, ಮಳೆಯ ತೀವ್ರತೆಯ ನಡುವೆ ಗಾಳಿಯ ಭೀಕರ ಸ್ಥಿತಿಯಲ್ಲೂ, ವಿದ್ಯುತ್ ಸಮಸ್ಯೆ ನಿವಾರಿಸಲು ಇಲಾಖಾ ಸಿಬ್ಬಂದಿ ಶ್ರಮಿಸುತ್ತಿದ್ದು, ಜನತೆಯ ಸಹಕಾರವೂ ಅಗತ್ಯವೆಂದು ಮಡಿಕೇರಿ ಕೊಡವ ಸಮಾಜದ ಅಧ್ಯಕ್ಷ ಕೆ.ಎಸ್. ದೇವಯ್ಯ ‘ಶಕ್ತಿ’ಯೊಂದಿಗೆ ಅಭಿಪ್ರಾಯಪಟ್ಟಿದ್ದಾರೆ.
ಮೇಲ್ಚಾವಣಿ ಅದೃಶ್ಯ: ಭಾರೀ ಮಳೆ- ಗಾಳಿಯ ರಭಸದ ನಡುವೆ ಚೆಯ್ಯಂಡಾಣೆಯ ಸನಿಹದ ನರಿಯಂದಡ ಕೇಂದ್ರ ಪ್ರೌಢಶಾಲೆಯ ಸಮೀಪದಲ್ಲಿ ಇರುವ ಬಸ್ಸು ತಂಗುದಾಣದ ಮೇಲ್ಚಾವಣಿ ಹಾರಿಹೋಗಿದೆ. ಈ ವಿಭಾಗದಲ್ಲಿಯೂ ವ್ಯಾಪಕ ಗಾಳಿ- ಮಳೆಯಾಗುತ್ತಿದ್ದು, ತಂಗುದಾಣದ ಶೀಟ್ಗಳನ್ನು ಯಾರೋ ಹೊತ್ತೊಯ್ದಿರುವಂತೆ ಗಾಳಿ ಅದೆಷ್ಟೋ ದೂರಕ್ಕೆ ಹಾರಿಸಿದ್ದು, ಅಚ್ಚರಿಯನ್ನುಂಟುಮಾಡಿದೆ ಎಂದು ಅಲ್ಲಿನ ನಿವಾಸಿ ಬೊವ್ವೇರಿಯಂಡ ಪೂವಣ್ಣ ಪ್ರತಿಕ್ರಿಯಿಸಿದ್ದಾರೆ.
ಮಾಧ್ಯಮ ವರದಿಗಾರನ ಗೋಳು
ಮಡಿಕೇರಿಯಲ್ಲಿ ಸುರಿಯುತ್ತಿರುವ ಗಾಳಿ ಮಳೆಗೆ ಕಸ್ತೂರಿ ನ್ಯೂಸ್ ವರದಿಗಾರ ಪ್ರೇಮ್ ಕುಮಾರ್ ಅವರ ಮನೆಯ ಶೀಟ್ ಬಿರುಕು ಬಿಟ್ಟು ಮನೆಯೊಳಗೆ ನೀರು ಸೇರಿದೆ. ಸೀಲಿಂಗ್ ಕೂಡ ಬಿದ್ದಿದೆ. ನಗರದ ರಾಜ್ಯ ಸಾರಿಗೆ ಬಸ್ ನಿಲ್ದಾಣ ಬಳಿಯ ನಿವಾಸದಲ್ಲಿ ಟಿವಿ, ಗ್ಯಾಸ್ ಸ್ಟೌ, ಐರನ್ ಬಾಕ್ಸ್, ಬಟ್ಟೆಗಳು ನೀರು ಪಾಲಾಗಿದ್ದು, ಗಾಬರಿಗೊಂಡು ಮನೆಯೊರಗೆ ಓಡಿದ ಪ್ರೇಂ, ಸ್ನೇಹಿತರ ಸಹಾಯದಿಂದ ರಾತ್ರಿ ಕಗ್ಗತ್ತಲಲ್ಲಿ ರೂಂ ಖಾಲಿ ಮಾಡಿದ್ದಾರೆ. ಬೆಳಿಗ್ಗೆ ಧರ್ಮಸ್ಥಳಕ್ಕೆ ತೆರಳಿ ದೇವರ ಮೊರೆ ಹೋಗಿದ್ದಾರೆ.
ಸುಂಟಿಕೊಪ್ಪ ವ್ಯಾಪ್ತಿ ನಷ್ಟ
ಸುಂಟಿಕೊಪ್ಪ ವ್ಯಾಪ್ತಿಯಲ್ಲಿ ಭಾರೀ ಮಳೆ ಸುರಿದಿದ್ದು, ಮರ, ವಿದ್ಯುತ್ ಕಂಬ ಹಲವು ಮನೆಗಳ ಮೇಲೆಬಿದ್ದ ಪರಿಣಾಮ ಮನೆಗಳು ಜಖಂಗೊಂಡು ಸಂಪರ್ಕ ಸ್ಥಗಿತಗೊಂಡಿದೆ. ಅಪಾರ ಪ್ರಮಾಣದ ನಷ್ಟ ಸಂಭವಿಸಿದೆ.
ಭಾರೀ ಮಳೆ ಗಾಳಿಯಿಂದ ಹಲವು ಗ್ರಾಮಗಳು ಕಳೆದ 15 ದಿನಗಳಿಂದ ಕಾರ್ಗತ್ತಲೆಯಲ್ಲಿದ್ದರೆ, ಮತ್ತೆ ಕೆಲವು ಗ್ರಾಮಗಳಿಗೆ ಸಂಪರ್ಕವೇ ಕಡಿದುಕೊಂಡಿದೆ. ಕಾರ್ಮಿಕರಿಗೆ ತೋಟಗಳಲ್ಲಿ ಕೂಲಿಕೆಲಸವು ನಿರ್ವಹಿಸಲಾಗದೆ ಸಂಕಷ್ಟ ಎದುರಿಸುತ್ತಿದ್ದು, ಜನ ಜೀವನ ಅಸ್ತವ್ಯಸ್ಥಗೊಂಡಿದೆ.
ಕೊಡಗರಹಳ್ಳಿ ಗ್ರಾ.ಪಂ. ವ್ಯಾಪ್ತಿಯ ಸ್ಕೂಲ್ಬಾಣೆಯ ರಮೇಶ್ ಪೂಜಾರಿ ಮತ್ತು ಶಿವರಾಮ ಎಂಬವರ ಮನೆಯ ಹಿಂಭಾಗಕ್ಕೆ ಬೆಳಿಗ್ಗೆ 8.45 ರ ಸಂದರ್ಭ ಪಕ್ಕದ ತೋಟದ ಭಾರೀ ಗಾತ್ರದ ಮರ ಬಿದ್ದಿದ್ದು ಮನೆಯ ಗೋಡೆ ಹಾಗೂ ಮೇಲ್ಚಾವಣಿಗಳು ಹಾನಿಗೊಂಡಿದೆ.
ಶಿವರಾಮ ಅವರ ಮೊಮ್ಮಗ ಸ್ನಾನ ಮಾಡುತ್ತಿದ್ದ ಸಂದರ್ಭ ಗಾಳಿಯ ರಭಸಕ್ಕೆ ಮರವು ಮುರಿದು ಬಿದ್ದಿದ್ದು ಅದೃಷ್ಟವಶಾತ್ ಯಾವದೇ ಪ್ರಾಣಾಪಾಯಗೊಳ್ಳದೆ ಪಾರಾಗಿದ್ದಾರೆ. ಕೊಡಗರಹಳ್ಳಿ ವಾಟರ್ ಮ್ಯಾನ್ ಮಂಜು ಅವರ ಮನೆಗೆ ಮರ ಬಿದ್ದ ಪರಿಣಾಮ ಗೋಡೆ ಬಿರುಕು ಬಿಟ್ಟಿದ್ದು, ಮೇಲ್ಚಾವಣಿ ಸಂಪೂರ್ಣ ಹಾನಿಗೀಡಾಗಿದೆ. ಇದರಿಂದ 50 ಸಾವಿರಕ್ಕೂ ಮಿಕ್ಕಿ ನಷ್ಟ ಉಂಟಾಗಿದೆ
ನಾಕೂರು ಶಿರಂಗಾಲ ಗ್ರಾ.ಪಂ. ವ್ಯಾಪ್ತಿಯ ಮಳ್ಳೂರು ಗ್ರಾಮದ ನಿವಾಸಿ ನಿವೃತ್ತ ಶಿಕ್ಷಕ ಎಂ.ಜಿ. ಗಣಪತಿ ಮನೆಗೆ ಇಂದು ಬೆಳಿಗ್ಗೆ 9.30 ಗಂಟೆಯ ಸಂದರ್ಭ ಮನೆಯ ಮೇಲ್ಛಾವಣಿ ಮೇಲೆ ಮರ ಬಿದ್ದಿದೆ. ಈ ಸಂದರ್ಭ ಮನೆಯಲ್ಲಿದ್ದ ಅವರ ಪತ್ನಿ ರುಕ್ಮಿಣಿ ತಲೆಗೆ ಗಂಭೀರ ಗಾಯವುಂಟಾಗಿ ಕುಶಾಲನಗರ ಸರ್ಕಾರಿ ಆಸ್ಪತ್ರೆಯಲ್ಲಿ ಪ್ರಥಮ ಚಿಕಿತ್ಸೆ ನೀಡಿ ನಂತರ ಹೆಚ್ಚಿನ ಚಿಕಿತ್ಸೆಗಾಗಿ ಮೈಸೂರಿಗೆ ರವಾನಿಸಲಾಗಿದೆ. ಮನೆಯ ಪಕ್ಕದ ಶೆಡ್ ಮೇಲೂ ಮರ ಬಿದ್ದ ಪರಿಣಾಮ ಶೆಡ್ನಲ್ಲಿದ್ದ ಮಾರುತಿ ಓಮ್ನಿ ಮತ್ತು ಬೈಕಿಗೆ ಹಾನಿಯಾಗಿದೆ ಇದರಿಂದ ಅಂದಾಜು ರೂ. 2 ಲಕ್ಷಕ್ಕೂ ಮಿಕ್ಕಿ ನಷ್ಟ ಉಂಟಾಗಿದೆ.
ಮಾದಾಪುರ ರಸ್ತೆಯಲ್ಲಿರುವ ಸ್ವಸ್ಥ ಶಾಲೆಯ ಪಕ್ಕದಲ್ಲಿರುವ ಮುತ್ತಪ್ಪ ಎಂಬವರ ಮನೆಯ ಮೇಲೆ ಶನಿವಾರ ರಾತ್ರಿ ಭಾರೀ ಗಾತ್ರದ ಬೀಟೆ ಮರವು ಬಿದ್ದ ಪರಿಣಾಮ ಮೇಲ್ಚಾವಣಿ, ಮನೆಯ ಗೋಡೆಗಳು ಬಿರುಕುಗೊಂಡು ಸಾವಿರಾರು ರೂ. ಹಾನಿಯಾಗಿದೆ. ಘಟನೆ ಸಂದರ್ಭ ನಿವಾಸಿಗಳು ಮನೆಯಲ್ಲಿದ್ದು ಯಾವದೇ ಪ್ರಾಣಾಪಾಯ ಸಂಭವಿಸಿರುವದಿಲ್ಲ.
ಸುಂಟಿಕೊಪ್ಪ ಪಟ್ಟಣ, ಮಾದಾಪುರ ರಸ್ತೆ, ಚೆಟ್ಟಳ್ಳಿ ರಸ್ತೆ, ನಾಕೂರು, ಕೊಡಗರಹಳ್ಳಿ, ಕಂಬಿಬಾಣೆ, ಕಲ್ಲೂರು, ಹೆರೂರು, ಹೋರೂರು, ಹಾಲೇರಿ, ಕಾಂಡನಕೊಲ್ಲಿ ರಸ್ತೆಗಳಲ್ಲಿ ಭಾರೀ ಗಾತ್ರದ ಮರಗಳು ಬಿದ್ದ ಪರಿಣಾಮ ವಿದ್ಯುತ್ ಕಂಬಗಳು, ತಂತಿಗಳು ಮುರಿದು ಲಕ್ಷಾಂತರ ರೂ. ನಷ್ಟ ಉಂಟಾಗಿದೆ.
ವಿವಿಧೆಡೆಗಳಲ್ಲಿ ನಾಟಿ
ವೀರಾಜಪೇಟೆ ವಿಭಾಗದಲ್ಲಿ ಸುರಿಯುತ್ತಿರುವ ಅಬ್ಬರದ ಮಳೆ ನಡುವೆಯೂ ಇಂದು ಬೆಳಗಿನಿಂದಲೇ ರೈತರು ನಾಟಿ ಆರಂಭಿಸಿದ್ದಾರೆ. ಮಳೆ ನಿಧಾನವಾಗಬಹುದೆಂದು ಕಾದಿದ್ದ ರೈತರು ಕೃಷಿ ಚಟುವಟಿಕೆಯಲ್ಲಿ ತೊಡಗಿದರು. ನಾಟಿ ಕೆಲಸದ ನಡುವೆ ಬೆಳಗಿನಿಂದ ಮಂದ ಗತಿಯ ಮಳೆ ರೈತರ ನಾಟಿ ಕೆಲಸಕ್ಕೆ ಅನುಕೂಲವಾಗಿದೆ.
ಇಂದು ಅಪರಾಹ್ನ ಮಳೆ ಕಡಿಮೆಯಾದ ಹಿನೆÀ್ನಲೆಯಲ್ಲಿ ಕದನೂರು, ಹೆಗ್ಗಳ, ಪೆರುಂಬಾಡಿ, ಆರ್ಜಿ, ಪಚ್ಚಾಟ್, ಬಾಳುಗೋಡು, ವಿ.ಬಾಡಗ, ಬಿಟ್ಟಂಗಾಲ, ನಾಂಗಾಲ ಮಗ್ಗುಲ, ಐಮಂಗಲ, ಸೇರಿದಂತೆ ವಿವಿಧೆಡೆಗಳಲ್ಲಿ ನಾಟಿ ಕೆಲಸಕ್ಕೆ ರೈತರು ಚಾಲನೆ ನೀಡಿದರು. ಶನಿವಾರ ಹಗಲು ಹಾಗೂ ರಾತ್ರಿ ಮಳೆ ಕಡಿಮೆಯಾಗಿದೆ. ಜಲಾವೃತವಾದ ಗದ್ದೆಗಳಲ್ಲಿ ನೀರು ನಿಧಾನವಾಗಿ ಇಳಿಮುಖಗೊಳ್ಳುತ್ತಿದೆ. ಬೇತ್ರಿ ಗ್ರಾಮದ ಕಾವೇರಿ ಹೊಳೆ, ಕದನೂರು ಗ್ರಾಮದ ಕಾವೇರಿಯ ಉಪ ಹೊಳೆಯಲ್ಲಿ ನೀರಿನ ಪ್ರಮಾಣ ಇಳಿ ಮುಖವಾಗುತ್ತಿದೆ. ಆಗಸ್ಟ್ ತಿಂಗಳ ಎರಡನೇ ವಾರದ ವರೆಗೂ ನಾಟಿ ಕೆಲಸ ಮುಂದುವರೆಯಲಿದೆ ಎಂದು ರೈತರು ತಿಳಿಸಿದ್ದಾರೆ.
ನಿನ್ನೆ ಬೆಳಗಿನ 8ಗಂಟೆಯಿಂದ ಇಂದಿನ ಬೆಳಗಿನ 8 ಗಂಟೆಯವರೆಗೆ 1.3 ಇಂಚು ಮಳೆ ಸುರಿದಿದೆ.
ಸಮುದಾಯ ಭವನಕ್ಕೆ ಹಾನಿ
ನಾಪೆÇೀಕ್ಲು ಗ್ರಾಮ ಪಂಚಾಯಿತಿ ವ್ಯಾಪ್ತಿಯ ಕೂರುಳಿ ಗ್ರಾಮದ ಸುಭಾಷ್ ನಗರ ಕಾಲೋನಿಯ ಸಮುದಾಯ ಭವನಕ್ಕೆ ಗಾಳಿ, ಮಳೆಯ ಕಾರಣ ಮರ ಬಿದ್ದು ನಷ್ಟ ಸಂಭವಿಸಿದೆ. ಈ ಬಗ್ಗೆ ಸೂಕ್ತ ಪರಿಹಾರ ನೀಡುವಂತೆ ಪಂಚಾಯಿತಿ ಸದಸ್ಯ ಶಿವಚಾಳಿಯಂಡ ಜಗದೀಶ್ ಜಿಲ್ಲಾಡಳಿತವನ್ನು ಒತ್ತಾಯಿಸಿದ್ದಾರೆ.
ಕಡಗದಾಳು: ಕಡಗದಾಳು ಬಳಿ ಹೋಂಸ್ಟೇ ಒಂದರ ತಗಡಿನ ಛಾವಣಿಯೊಂದು ರಸ್ತೆಗೆ ಹಾರಿ ಬಿದ್ದು, ಕಾರು ಮತ್ತು ಜೀಪೊಂದು ಸ್ವಲ್ಪದರಲ್ಲೇ ಪಾರಾಗಿವೆ. ಗ್ರಾ.ಪಂ. ಉಪಾಧ್ಯಕ್ಷ ಮಾದೇಟಿರ ತಿಮ್ಮಯ್ಯ ಮತ್ತು ಗ್ರಾಮಸ್ಥರು ತೆರವುಗೊಳಿಸಿದರು.
ಮಡಿಕೇರಿ ಮಂಗಳಾದೇವಿನಗರದಲ್ಲಿ ಮರ ಹಾಗೂ ವಿದ್ಯುತ್ ಕಂಬ ಧರೆಗುರುಳಿ ಸಂಚಾರಕ್ಕೆ ತೊಡಕುಂಟಾಗಿತ್ತು. ಸ್ಥಳೀಯ ಯುವಕರು ತೆರವುಗೊಳಿಸಿದರು.