ಸೋಮವಾರಪೇಟೆ, ಜು. 15: ರಾಜ್ಯ ಶೌರ್ಯ ಪ್ರಶಸ್ತಿ ವಿಜೇತೆಯ ಮನೆ ಇದೀಗ ಕುಸಿದು ಬೀಳುವ ಹಂತಕ್ಕೆ ತಲಪಿದ್ದರೂ ಯಾರೂ ಇತ್ತ ಗಮನ ಹರಿಸುತ್ತಿಲ್ಲ. 2014ರಲ್ಲಿ ಬಾಲಕನೋರ್ವನ ಪ್ರಾಣ ಉಳಿಸಿ ಶೌರ್ಯ ಪ್ರಶಸ್ತಿ ಪಡೆದ ಬಾಲಕಿಯ ಕುಟುಂಬ ಇದೀಗ ಪ್ರಾಣ ಭಯದಲ್ಲಿದ್ದರೂ ಸರ್ಕಾರ ಮಾತ್ರ ಗಮನಹರಿಸಿಲ್ಲ.
ತಾಲೂಕಿನ ಚೌಡ್ಲು ಗ್ರಾಮ ಪಂಚಾಯಿತಿ ವ್ಯಾಪ್ತಿಗೆ ಒಳಪಡುವ ಕಿಬ್ಬೆಟ್ಟ ಗ್ರಾಮದ ಸಣ್ಣಮನೆಯಲ್ಲಿ ವಾಸವಿರುವ ಮುದ್ದ-ಲಕ್ಷ್ಮೀ ದಂಪತಿ ಕುಟುಂಬ ಇದೀಗ ದಿನೇ ದಿನೇ ಪ್ರಾಣಭಯದಿಂದ ದಿನದೂಡುತ್ತಿದೆ.
ಮುದ್ದ ಅವರ ಮನೆಗೆ ಹತ್ತು ಮೀಟರ್ ದೂರದ ಅಂತರದಲ್ಲೇ ಬೃಹತ್ ಕೆರೆಯನ್ನು ಖಾಸಗಿ ವ್ಯಕ್ತಿಯೋರ್ವರು ನಿರ್ಮಿಸಿದ್ದು, ಅದರ ಒಂದು ಪಾಶ್ರ್ವ ದಿನೇ ದಿನೇ ಕುಸಿತಕ್ಕೆ ಒಳಗಾಗುತ್ತಿದೆ.
ಕೆರೆಯಲ್ಲಿ ನೀರಿನ ಅಧಿಕ ಸಂಗ್ರಹದಿಂದಾಗಿ ಇಡೀ ಪ್ರದೇಶ ಶೀತಮಯವಾಗಿದ್ದು, ಪರಿಣಾಮ ಮುದ್ದ ಅವರ ಮನೆಯ ಗೋಡೆಗಳಲ್ಲಿ ಬಿರುಕು ಮೂಡಲಾರಂಭಿಸಿದೆ.
ಈ ಕೆರೆಯ ಕಾಮಗಾರಿಯನ್ನು ಪ್ರಾರಂಭಿಸುವ ಸಂದರ್ಭವೇ ಸರ್ಕಾರಿ ಅಧಿಕಾರಿಗಳ ಗಮನಕ್ಕೆ ತಂದು ದೂರು ನೀಡಿದ್ದರೂ ಸಹ ಹಣಬಲದ ಎದುರು ನಮ್ಮ ಅಹವಾಲು ಕಸದ ಬುಟ್ಟಿ ಸೇರುವಂತಾಗಿದೆ ಎಂದು ಮುದ್ದ ಅವರು ನೊಂದು ನುಡಿದಿದ್ದಾರೆ.
ಇದೀಗ ಸುರಿಯುತ್ತಿರುವ ಭಾರೀ ಮಳೆಗೆ ಕೆರೆಯಲ್ಲಿ ನೀರಿನ ಸಂಗ್ರಹ ಅಧಿಕವಾಗಿದ್ದು, ಮನೆಯ ಹತ್ತು ಮೀಟರ್ ದೂರದಲ್ಲೇ ಕೆರೆಗೆ ಅಳವಡಿಸಿರುವ ತಡೆಗೋಡೆ ಕುಸಿಯುತ್ತಿದೆ.
ಮಳೆ ಹೀಗೇ ಮುಂದುವರೆದರೆ ಅತೀ ಶೀತದಿಂದ ರಸ್ತೆಯೂ ಕುಸಿಯಲಿದ್ದು, ರಸ್ತೆಯ ಒತ್ತಿನಲ್ಲೇ ಇರುವ ಮನೆ ಕೆರೆ ನೀರಿನಲ್ಲಿ ಕೊಚ್ಚಿ ಹೋಗುವದು ಖಚಿತ ಎಂದು ಮುದ್ದ ಅವರು ಅಳಲು ತೋಡಿಕೊಂಡಿದ್ದಾರೆ.
ಕೆರೆ ನಿರ್ಮಾಣದಿಂದ ವಾಸದ ಮನೆಯ ಗೋಡೆ ಬಿರುಕುಬಿಟ್ಟಿರುವ ಬಗ್ಗೆ ಜಿಲ್ಲಾಧಿಕಾರಿ, ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ, ತಾಲೂಕು ತಹಸೀಲ್ದಾರ್, ಗ್ರಾಮ ಪಂಚಾಯಿತಿಗೆ ಅಹವಾಲು ಸಲ್ಲಿಸಿದ್ದರೂ ಇದುವರೆಗೆ ಸ್ಪಂದನೆ ದೊರೆತಿಲ್ಲ. ಕೆಲವರು ಕಾಟಾಚಾರಕ್ಕೆ ಸ್ಥಳಪರಿಶೀಲನೆ ನಡೆಸಿ ಹೋಗಿದ್ದಾರೆಯೇ ಹೊರತು ಪರಿಹಾರ ಮಾತ್ರ ದೊರಕಿಸಿಲ್ಲ ಎಂದು ಮುದ್ದ ಅವರ ಪತ್ನಿ ಲಕ್ಷ್ಮೀ ತಿಳಿಸಿದ್ದಾರೆ.
ಮನೆಯಲ್ಲಿ ಮುದ್ದ ಅವರೊಂದಿಗೆ ಪತ್ನಿ ಲಕ್ಷ್ಮೀ, ದ್ವಿತೀಯ ಪಿಯುಸಿ ವ್ಯಾಸಂಗ ಮಾಡುತ್ತಿರುವ ಪುತ್ರಿ, ಶೌರ್ಯ ಪ್ರಶಸ್ತಿ ವಿಜೇತೆ ಪುತ್ರಿ ಕೆ.ಎಂ. ಶಾಂತಿ, ಪುತ್ರರಾದ ಹತ್ತನೇ ತರಗತಿ ವಿದ್ಯಾರ್ಥಿ ನವೀನ್, 5ನೇ ತರಗತಿ ವ್ಯಾಸಂಗ ಮಾಡುತ್ತಿರುವ ರೋಹನ್ ಅವರುಗಳಿದ್ದು, ಈಗಲೋ ಆಗಲೋ ಮನೆ ಬೀಳುವ ಆತಂಕದಲ್ಲೇ ದಿನ ದೂಡುತ್ತಿದ್ದಾರೆ.
ಕಳೆದ 2014ರಲ್ಲಿ ಒಂದನೇ ತರಗತಿ ಬಾಲಕ ಕೆರೆಯ ಏರಿ ಮೇಲೆ ಆಟವಾಡುತ್ತಿದ್ದ ಸಂದರ್ಭ ಆಕಸ್ಮಿಕವಾಗಿ ಕಾಲು ಜಾರಿ ಕೆರೆಯೊಳಗೆ ಮುಳುಗುತ್ತಿದ್ದುದನ್ನು ಗಮನಿಸಿದ ಶಾಂತಿ, ತಕ್ಷಣ ಧೈರ್ಯದಿಂದ ಬಾಲಕನನ್ನು ಪಾರು ಮಾಡಿದ್ದು, ಈ ಕಾರ್ಯಕ್ಕಾಗಿ ರಾಜ್ಯಪಾಲ ವಜುಭಾಯಿ ವಾಲಾರಿಂದ ಬೆಂಗಳೂರಿನಲ್ಲಿ ಶೌರ್ಯ ಪ್ರಶಸ್ತಿ ಸ್ವೀಕರಿಸಿದ್ದಳು.