ವೀರಾಜಪೇಟೆ, ಜು. 15: ಬಿಟ್ಟಂಗಾಲ ಗ್ರಾಮ ಪಂಚಾಯಿತಿ ಬಗ್ಗೆ ಮಂದಮಾಡ ಗ್ರಾಮಸ್ಥರು ಪತ್ರಿಕೆಯ ಮುಖಾಂತರ ರಸ್ತೆಯ ಬಗ್ಗೆ ಮಾಡಿರುವ ಅರೋಪವು ಸತ್ಯಕ್ಕೆ ದೂರವಾದದ್ದು ಎಂದು ಬಿಟ್ಟಂಗಾಲ ಗ್ರಾಮ ಪಂಚಾಯಿತಿ ಅಧ್ಯಕ್ಷ ಪುಚ್ಚಿಮಂಡ ಬೆಳ್ಳಿಯಪ್ಪ ಅವರು ಪತ್ರಿಕಾ ಹೇಳಿಕೆಯಲ್ಲಿ ತಿಳಿಸಿದರು.

ವೀರಾಜಪೇಟೆ ತಾಲೂಕಿನ ಗ್ರಾಮ ಪಂಚಾಯಿತಿಗಳಲ್ಲಿ ಬಿಟ್ಟಂಗಾಲ ಗ್ರಾಮ ಪಂಚಾಯಿತಿಯು ದೊಡ್ಡ ಗ್ರಾಮ ಪಂಚಾಯಿಯಾಗಿದ್ದು, ಬರುವ ಅನುದಾನಗಳಲ್ಲಿ ಕಳೆದ ಮೂರು ವರ್ಷಗಳಿಂದ ಸಮಾನವಾಗಿ ಎಲ್ಲಾ ಗ್ರಾಮಗಳಿಗೂ ವಿತರಿಸಲಾಗಿದೆ ಎಂದು ತಿಳಿಸಿದರು. ಮಂದಮಾಡ ರಸ್ತೆಯು ಸುಮಾರು 5 ಕಿಮೀ ರಸ್ತೆಯಾಗಿದ್ದು ಈಗಾಗಲೆ ಶಾಸಕರ ಅನುದಾನದಡಿಯಲ್ಲಿ ಹಂತ ಹಂತವಾಗಿ 2 ಹಾಗೂ 3 ಲಕ್ಷ ರೂ.ಗಳಲ್ಲಿ ರಸ್ತೆಯ ಕಾಂಕ್ರಿಟೀಕರಣ ಮಾಡಲಾಗಿದೆ. ಮಾಜಿ ಸದಸ್ಯೆ ಬಲ್ಲಡಿಚಂಡ ಸೀತಮ್ಮ ಅವರ ಮನೆಯ ಮುಂದಿನ ಕೇವಲ 50 ಮೀಟರ್ ಉದ್ದದ ರಸ್ತೆಯ ಗುಂಡಿಗಳನ್ನು ಮಾತ್ರವೇ ಮುಚ್ಚಲು ಬಾಕಿ ಇದ್ದು ಅದಕ್ಕಾಗಿ ಸ್ಥಳೀಯ ಸದಸ್ಯರ ಒತ್ತಾಯದ ಮೇರೆಗೆ 35 ಸಾವಿರಗಳನ್ನು ತಾತ್ಕಾಲಿಕವಾಗಿ ನೀಡಿದ್ದೇವೆ ಎಂದು ತಿಳಿಸಿದರು.

ಕಳೆದ ಹಲವಾರು ವರ್ಷಗಳಿಂz ಇದೇ ಬಾಗದಲ್ಲಿ ಪಂಚಾಯಿತಿ ಅಧ್ಯಕ್ಷರುಗಳಾಗಿದ್ದವರು ಮತ್ತು ಸದಸ್ಯರುಗಳು ಮುತುವರ್ಜಿ ತೋರದೆ ನಿರ್ಲಕ್ಷಕ್ಕೆ ಒಳಗಾಗಿದ್ದ ರಸ್ತೆಯನ್ನು ನಮ್ಮ ಅವದಿಯಲ್ಲಿ ಹಂತ ಹಂತವಾಗಿ ರಿಪೇರಿ ಮಾಡುತ್ತಿದ್ದು ಉಳಿದ ಭಾಗವನ್ನು ಮಳೆಯ ಕಾರಣದಿಂದ ಮುಂದಿನ ದಿನಗಳಲ್ಲಿ ಅಭಿವೃದ್ಧಿ ಪಡಿಸಲಾಗುವದು ಎಂದು ತಿಳಿಸಿದರು.

ಸದಸ್ಯರಾದ ನಂಬುಡುಮಾಡ ಪವಿಪೂವಯ್ಯ ಅವರು ಮಾತನಾಡಿ, ಮಂದಮಾಡ ಗ್ರಾಮಕ್ಕೆ ಗ್ರಾಮ ಪಂಚಾಯಿತಿಗೆ ಬಂದಂತಹÀ ಅನುದಾನದಲ್ಲಿ 5 ಬೀದಿ ದೀಪಗಳು ಸುಮಾರು ರೂ. 60 ಸಾವಿರ ವೆಚ್ಚದಲ್ಲಿ ಇದೇ ರಸ್ತೆ ಕಲ್ಲು ಹಾಸು ಕೆಲಸ ಪೂರ್ಣಗೊಂಡಿದೆ ಮತ್ತು ಜಿಲ್ಲಾ ಪಂಚಾಯಿತಿ ಸದಸ್ಯ ಬಾಂಡ್ ಗಣಪತಿ ಅವರ ಅನುದಾನದಲ್ಲಿ ರೂ. 3.5 ಲಕ್ಷಗಳ ಡಾಂಬರೀಕರಣ ಕೂಡ ಮಾಡಲಾಗಿದೆ. ಚರಂಡಿ ವ್ಯವಸ್ಥೆ ಹಾಗೂ ಸುಮಾರು 16 ಮನೆಗಳಿಗೆ ಹಲವಾರು ಅಭಿವೃದ್ಧಿ ಕಾರ್ಯಗಳನ್ನು ಮಾಡಿದ್ದರೂ ಕೆಲವರು ಸುಳ್ಳು ಸುದ್ದಿಗಳನ್ನು ಪತ್ರಿಕೆಗಳಿಗೆ ನೀಡುವದರ ಮುಖಾಂತರ ಜನರಲ್ಲಿ ತಪ್ಪು ಬಾವನೆ ಮೂಡಿಸುತ್ತಿದ್ದಾರೆ ಎಂದರು.

ಗ್ರಾಮ ಪಂಚಾಯಿತಿಗಳಿಗೆ ಅನುದಾನ ಕಡಿಮೆ ಬರುವದರಿಂದ ಹಂತ ಹಂತವಾಗಿ ಮುಂದಿನ ದಿನಗಳಲ್ಲಿ ಸರಿಪಡಿಸಲಾಗುವದು ಎಂದು ತಿಳಿಸಿದ ಅವರು ಇದರ ಬಗ್ಗೆ ಬಹಿರಂಗ ಚರ್ಚೆಗೆ ಸಿದ್ಧ ಎಂದು ತಿಳಿಸಿದರು.