ಸೋಮವಾರಪೇಟೆ, ಜು. 15: ಸೋಮವಾರಪೇಟೆ ತಾಲೂಕು ಪತ್ರಕರ್ತರ ಸಂಘದಿಂದ ಕೊಡ ಮಾಡುವ ವಾರ್ಷಿಕ ಪ್ರಶಸ್ತಿಗೆ ಭಾಜನರಾದ ಪತ್ರಕರ್ತರಿಗೆ ಇಲ್ಲಿನ ಪತ್ರಿಕಾ ಭವನದಲ್ಲಿ ಆಯೋಜಿಸ ಲಾಗಿದ್ದ ವಾರ್ಷಿಕ ಮಹಾಸಭೆಯಲ್ಲಿ ಪ್ರಶಸ್ತಿ ಪ್ರದಾನ ಮಾಡಲಾಯಿತು.

ಸಂಘದ ತಾಲೂಕು ಅಧ್ಯಕ್ಷ ತೇಲಪಂಡ ಕವನ್ ಕಾರ್ಯಪ್ಪ ಅಧ್ಯಕ್ಷತೆಯಲ್ಲಿ ನಡೆದ ಕಾರ್ಯಕ್ರಮದಲ್ಲಿ ತಾಲೂಕಿನ ಐವರು ಪತ್ರಕರ್ತರಿಗೆ ಪ್ರಶಸ್ತಿ ವಿತರಿಸಲಾಯಿತು.

ಶನಿವಾರಸಂತೆ ಕಾರ್ಯನಿರತ ಪತ್ರಕರ್ತರ ಸಂಘದ ಅಧ್ಯಕ್ಷ ಹೆಚ್.ಆರ್. ಹರೀಶ್ ಕುಮಾರ್ ತಮ್ಮ ತಂದೆ ಹೆಚ್.ಎಸ್. ರಾಮೇಗೌಡ ಹೆಸರಿನಲ್ಲಿ ಸ್ಥಾಪಿಸಿದ ಅತ್ಯುತ್ತಮ ಗ್ರಾಮೀಣ ವರದಿ ಪ್ರಶಸ್ತಿಯನ್ನು ಸೋಮವಾರಪೇಟೆ ವಿಭಾಗದ ‘ಶಕ್ತಿ’ ವರದಿಗಾರ ವಿಜಯ್ ಹಾನಗಲ್ ಪಡೆದರು. ‘ಶಕ್ತಿ’ಯಲ್ಲಿ ಪ್ರಕಟವಾದ ‘ಮದ್ಯ ಮಾರಾಟ ಮುಕ್ತ ನೆಮ್ಮದಿಯ ತಾಣ ಶಾಂತಳ್ಳಿ’ ವರದಿಗೆ ಈ ಪ್ರಶಸ್ತಿ ಲಭಿಸಿದೆ.

ಕುಶಾಲನಗರದ ಶಕ್ತಿ ದಿನಪತ್ರಿಕೆ ವರದಿಗಾರ ಎಂ.ಎನ್. ಚಂದ್ರಮೋಹನ್ ತಮ್ಮ ತಂದೆ ತಾಯಿ ಎಂ.ನಾರಾಯಣ ಮತ್ತು ಎಂ.ಪದ್ಮಾವತಿ ಹೆಸರಿನಲ್ಲಿ ಸ್ಥಾಪಿಸಿರುವ ಅತ್ಯುತ್ತಮ ತನಿಖಾ ವರದಿ ಪ್ರಶಸ್ತಿಗೆ ಕೂಡಿಗೆಯ ‘ಶಕ್ತಿ’ ವರದಿಗಾರ ಕೆ.ಕೆ. ನಾಗರಾಜಶೆಟ್ಟಿ ಯವರು ಭಾಜನರಾಗಿದ್ದು, ‘ಸಿಬ್ಬಂದಿ ಕೊರತೆಯಿಂದ ನಲುಗುತ್ತಿರುವ ರೇಷ್ಮೆ ಇಲಾಖೆ’ ವರದಿಗಾಗಿ ಪ್ರಶಸ್ತಿ ಸ್ವೀಕರಿಸಿದರು.

ತಾಲೂಕು ಪತ್ರಕರ್ತರ ಸಂಘದ ಅಧ್ಯಕ್ಷರಾದ ತೇಲಪಂಡ ಕವನ್ ಕಾರ್ಯಪ್ಪ ತಮ್ಮ ತಂದೆ-ತಾಯಿ ತೇಲಪಂಡ ಶಾರದಾ ಮತ್ತು ಸೋಮಣ್ಣ ಹೆಸರಿನಲ್ಲಿ ಸ್ಥಾಪಿಸಿರುವ ಅತ್ಯುತ್ತಮ ಮಾನವೀಯ ಮೌಲ್ಯವುಳ್ಳ ವರದಿಗೆ ‘ನಾಗರಹೊಳೆ ಗದ್ದೆ ಹಾಡಿ ಬುಡಕಟ್ಟು ಜನಾಂಗದ ಗೋಳಿನ ಕಥೆ’ ಲೇಖನ ಆಯ್ಕೆಯಾಗಿದ್ದು, ಚೆಟ್ಟಳ್ಳಿಯ ಪತ್ರಕರ್ತ ಪುತ್ತರೀರ ಕರುಣ್ ಕಾಳಯ್ಯ ಅವರು ಪ್ರಶಸ್ತಿ ಸ್ವೀಕರಿಸಿದರು.

ಕೊಡಗು ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್ ಅಧ್ಯಕ್ಷ ಬಿ.ಎಸ್.ಲೋಕೇಶ್ ಸಾಗರ್ ತಮ್ಮ ತಂದೆ-ತಾಯಿ ಬಿ.ಕೆ.ಸುಬ್ಬಯ್ಯ - ಜಯಮ್ಮ ಹೆಸರಿನಲ್ಲಿ ಸ್ಥಾಪಿಸಿರುವ ಅರಣ್ಯ-ಪರಿಸರ ಮತ್ತು ವನ್ಯ ಜೀವಿ ವಿಭಾಗದ ಪ್ರಶಸ್ತಿಯನ್ನು ಸೋಮವಾರಪೇಟೆಯ ಪ್ರಜಾವಾಣಿ ವರದಿಗಾರ ಡಿ.ಪಿ. ಲೋಕೇಶ್ ಅವರು ‘ಕಾಡಿನಿಂದ ನಾಡಿನತ್ತ ಕಾಡಾನೆಗಳ ಹೆಜ್ಜೆ’ ವರದಿಗಾಗಿ ಪಡೆದರು.

ಪತ್ರಕರ್ತರ ಸಂಘದ ರಾಜ್ಯ ಸಮಿತಿ ನಿರ್ದೇಶಕ ಎಸ್.ಎ. ಮುರಳೀಧರ್ ತಮ್ಮ ಸಹೋದರ ದಿ.ಎಸ್.ಎ.ಗಣೇಶ್ ಹೆಸರಿನಲ್ಲಿ ಪ್ರಾರಂಭಿಸಿರುವ ಅತ್ಯುತ್ತಮ ಕ್ರೀಡಾ ಪ್ರಶಸ್ತಿಯನ್ನು ‘ಕಬಡ್ಡಿಯಲ್ಲಿ ರತನ್ ಮಿಂಚು’ ಎಂಬ ವರದಿಗಾಗಿ ಸೋಮವಾರಪೇಟೆಯ ವಿಜಯವಾಣಿ ವರದಿಗಾರ ಹಿರಿಕರ ರವಿಯವರಿಗೆ ಪ್ರದಾನ ಮಾಡಲಾಯಿತು.

ಕೊಡಗು ಜಿ.ಪಂ. ಉಪಾಧ್ಯಕ್ಷೆ ಲೋಕೇಶ್ವರಿ ಗೋಪಾಲ್, ಜಿಲ್ಲಾ ಪತ್ರಕರ್ತರ ಸಂಘದ ಅಧ್ಯಕ್ಷ ಅಜ್ಜಮಾಡ ರಮೇಶ್ ಕುಟ್ಟಪ್ಪ, ಖಜಾಂಚಿ ಸವಿತ ರೈ, ರಾಷ್ಟ್ರೀಯ ಮಂಡಳಿ ಸದಸ್ಯ ಲೋಕೇಶ್ ಸಾಗರ್, ರಾಜ್ಯ ಸಂಘದ ನಿರ್ದೇಶಕ ಎಸ್.ಎ. ಮುರಳೀಧರ್, ಹಿರಿಯ ಪತ್ರಕರ್ತ ಭಾರದ್ವಾಜ್ ಕೆ. ಆನಂದತೀರ್ಥ, ತಾಲೂಕು ಪತ್ರಕರ್ತರ ಸಂಘದ ಕಾರ್ಯದರ್ಶಿ ಬಿ.ಎ. ಭಾಸ್ಕರ್ ಅವರುಗಳು ಉಪಸ್ಥಿತರಿದ್ದು, ಪ್ರಶಸ್ತಿ ವಿತರಿಸಿದರು.