ನಾಪೋಕ್ಲು, ಜು. 15: ಇತ್ತೀಚೆಗೆ ಸುರಿಯುತ್ತಿರುವ ಧಾರಾಕಾರ ಮಳೆಯಿಂದ ಇಲ್ಲಿಗೆ ಸಮೀಪ ಬೇಂಗೂರು ಗ್ರಾಮದ ದೋಣಿಕಡು ಎಂಬಲ್ಲಿ ಗ್ರಾಮಸ್ಥರು ಸಂಕಷ್ಟಕ್ಕೆ ಸಿಲುಕಿದ್ದಾರೆ. ಎಮ್ಮೆಮಾಡು ಗ್ರಾಮ ಪಂಚಾಯಿತಿ ಹಾಗೂ ಬೇಂಗೂರು ಗ್ರಾಮ ಪಂಚಾಯಿತಿಗಳ ನಡುವೆ ಕಾವೇರಿ ನದಿ ಪ್ರವಾಹ ಏರಿದ್ದು, ಇಲ್ಲಿನ ಕೂಡಕಂಡಿ ಕುಟುಂಬಸ್ಥರು ಪರಂಬು ಪೈಸಾರಿಯ ಸುಮಾರು 60ಕ್ಕೂ ಅಧಿಕ ಕುಟುಂಬಸ್ಥರು ಸಂಕಷ್ಟಕ್ಕೆ ಸಿಲುಕಿದ್ದಾರೆ. ಎಮ್ಮೆಮಾಡು ಗ್ರಾಮ ಪಂಚಾಯಿತಿ ವ್ಯಾಪ್ತಿಯ ವಿವಿಧ ಕುಟುಂಬಗಳು ಕಾವೇರಿ ನದಿ ತಟದಲ್ಲಿ ವಾಸವಾಗಿದ್ದು, ಸಮೀಪದ ಚೇರಂಬಾಣೆಗೆ ಸಂಪರ್ಕ ಕಲ್ಪಿಸುವ ಬೇಂಗೂರು ಮೂಲಕ ಸಂಚಾರ ವ್ಯವಸ್ಥೆ ಕೈಗೊಂಡಿದ್ದರು. ವಿವಿಧ ಗ್ರಾಮಗಳಿಗೆ ಪಡಿಯಾಣಿ, ಎಮ್ಮೆಮಾಡು ಹಾಗೂ ಬೇಂಗೂರು ಗ್ರಾಮಗಳ ಕೂಲಿ ಕಾರ್ಮಿಕರು ಸಾರ್ವಜನಿಕರು ಸುತ್ತುಬಳಸಿ ಸಾಗುವ ಬದಲು ಮಳೆಗಾಲದಲ್ಲಿ ದೋಣಿಯ ಮೊರೆಹೋಗಿದ್ದು, ಇದೀಗ ದೋಣಿ ದುರಸ್ತಿಗೀಡಾಗಿದೆ. ಹಲವು ವರ್ಷಗಳಿಂದ ಈ ವ್ಯಾಪ್ತಿಯಲ್ಲಿ ದೋಣಿಯ ಬಳಕೆ ಆಗುತ್ತಿತ್ತು. ಕಾವೇರಿ ನದಿ ದಾಟಲು ಗ್ರಾಮಸ್ಥರು ದೋಣಿಯನ್ನು ಬಳಸುತ್ತಿದ್ದು, ಜಿಲ್ಲಾಡಳಿತದಿಂದ ಹಾಗೂ ಗ್ರಾಮ ಪಂಚಾಯಿತಿಯಿಂದ ಮಳೆಗಾಲದಲ್ಲಿ ಸಂಪರ್ಕಕ್ಕೆ ದೋಣಿಯ ವ್ಯವಸ್ಥೆ ಕೈಗೊಳ್ಳಲಾಗಿತ್ತು. ಬೇಂಗೂರು ಗ್ರಾಮ ಪಂಚಾಯಿತಿ ಈ ಹಿಂದೆ ದೋಣಿ ಚಾಲಿಸಲು ರೂ. 1500 ಮಾಸಿಕ ವೇತನವನ್ನು ನೀಡುತ್ತಿತ್ತು ಪ್ರತಿವರ್ಷ ಮಳೆಗಾಲದಲ್ಲಿ ವಿದ್ಯಾರ್ಥಿಗಳು ದೋಣಿಯಲ್ಲಿ ಸಾಗುತ್ತಿದ್ದರು. ಈ ವರ್ಷ ದೋಣಿ ಇಲ್ಲದೆ ಸಮಸ್ಯೆ ಎದುರಿಸುವಂತಾಗಿದೆ ಎನ್ನುತ್ತಾರೆ ದೋಣಿ ಚಾಲಕ ಕೂಡಕಂಡ ಪುಟ್ಟಪ್ಪ. ಕೂಡಕಂಡಿ ಹಾಗೂ ಪರಂಬು ಪೈಸಾರಿ ವ್ಯಾಪ್ತಿಯ ಸುಮಾರು 20ಕ್ಕೂ ಹೆಚ್ಚು ವಿದ್ಯಾರ್ಥಿಗಳು ಶಾಲಾಕಾಲೇಜಿಗೆ ತೆರಳದೆ ಉಳಿದಿದ್ದಾರೆ. ಸಂಪರ್ಕ ಕೊರತೆಯಿಂದಾಗಿ ಅನಾರೋಗ್ಯ ಪೀಡಿತರು ಸಮಸ್ಯೆ ಎದುರಿಸುವಂತಾಗಿದೆ. ಇದೀಗ ದೋಣಿ ಸಂಪೂರ್ಣ ದುರಸ್ತಿಗೊಳಗಾಗಿದೆ. ದುರಸ್ತಿಪಡಿಸುವಂತೆ ಗ್ರಾಮಸ್ಥರು ಆಗ್ರಹಿಸಿದ್ದರು. ಗ್ರಾಮ ಪಂಚಾಯಿತಿ ಹಾಗೂ ಜನಪ್ರತಿ ನಿಧಿಗಳ ಮೂಲಕ ಜೀರ್ಣಾವಸ್ಥೆ ಯಲ್ಲಿರುವ ದೋಣಿಯನ್ನು ಸರಿಪಡಿಸುವಂತೆ ಜಿಲ್ಲಾಡಳಿತಕ್ಕೆ ಮನವಿ ಸಲ್ಲಿಸಿದರೂ ಕ್ರಮಕೈಗೊಳ್ಳದ ಹಿನ್ನೆಲೆ ಜನಸಾಮಾನ್ಯರು ಪರದಾಡು ವಂತಾಗಿದೆ.
ಮಳೆಗಾಲದ ಆರಂಭಕ್ಕೂ ಮುನ್ನ ಜಿಲ್ಲಾಧಿಕಾರಿಗಳು ಸೂಕ್ತ ಕ್ರಮ ಕೈಗೊಳ್ಳುವಂತೆ ಸೂಚನೆ ನೀಡಿದ್ದರೂ ಯಾವದೇ ಕ್ರಮ ಕೈಗೊಳ್ಳದ ಅಧಿಕಾರಿಗಳ ವಿರುದ್ಧ ಗ್ರಾಮಸ್ಥರು ಆಕ್ರೋಶ ವ್ಯಕ್ತಪಡಿಸಿದ್ದಾರೆ.
- ದುಗ್ಗಳ ಸದಾನಂದ