ಮಡಿಕೇರಿ, ಜು. 15: ರಾಷ್ಟ್ರೀಯ ಕೃಷಿ ಮತ್ತು ಗ್ರಾಮೀಣ ಅಭಿವೃದ್ಧಿ ಬ್ಯಾಂಕ್ (ನಬಾರ್ಡ್) ನಿಂದ ಸಿದ್ಧಪಡಿಸಿದ ಪ್ರದೇಶ ಅಭಿವೃದ್ಧಿ ಯೋಜನೆಗಳನ್ನು ಇತ್ತೀಚೆಗೆ ನಗರದ ಲೀಡ್ ಬ್ಯಾಂಕ್ ಸಭಾಂಗಣದಲ್ಲಿ ನಡೆದ ಸಮಾರಂಭದಲ್ಲಿ ಜಿ.ಪಂ. ಸಿಇಒ ಪ್ರಶಾಂತ್ ಕುಮಾರ್ ಮಿಶ್ರ ಅವರು ಬಿಡುಗಡೆ ಮಾಡಿದರು.

ಈ ಯೋಜನೆಗಳು ಜಿಲ್ಲೆಯ ರೈತರ ಅಭಿವೃದ್ಧಿಗೆ ಮುಂದಿನ ಐದು ವರ್ಷಗಳ ಒಂದು ಮುನ್ನೋಟವಾಗಿದ್ದು, ಜಿಲ್ಲೆಯಲ್ಲಿ ವಿಫುಲ ಅವಕಾಶ ಇರುವ, ಜನರ ಬದುಕಿಗೆ ತೀರಾ ಅಗತ್ಯವಾದ ಹಾಗೂ ರೈತರ ಆರ್ಥಿಕ ಸ್ಥಿತಿಯನ್ನು ಸದೃಢಗೊಳಿಸಲು ಅನುಕೂಲ ಆಗುವ ಕೃಷಿ ಚಟುವಟಿಕೆಗಳಾದ ಹೈನುಗಾರಿಕೆ ಮತ್ತು ವಿವಿಧ ಪದ್ಧತಿಯ ತರಕಾರಿ ಬೆಳೆಗಳನ್ನು ಆಯ್ಕೆ ಮಾಡಿಕೊಳ್ಳಲಾಗಿದೆ.

ಈ ಪ್ರದೇಶ ಅಭಿವೃದ್ಧಿ ಯೋಜನೆಗಳ ಬಗ್ಗೆ ಮಾತನಾಡಿದ ನಬಾರ್ಡಿನ ಜಿಲ್ಲಾ ಅಭಿವೃದ್ಧಿಯ ಸಹಾಯಕ ಮಹಾ ಪ್ರಬಂಧಕ ಮುಂಡಂಡ ಸಿ. ನಾಣಯ್ಯ ಅವರು ಜಿಲ್ಲೆಯಲ್ಲಿ ಪ್ರತಿನಿತ್ಯ ಸುಮಾರು 55 ಸಾವಿರ ಲೀಟರ್ ಹಾಲಿನ ಬಳಕೆಯಾಗುತ್ತಿದ್ದು, ಜಿಲ್ಲಾ ವ್ಯಾಪ್ತಿಯಲ್ಲಿ ಉತ್ಪಾದನೆಯಾಗುತ್ತಿರುವ ಹಾಲಿನ ಪ್ರಮಾಣ ಕೇವಲ 15 ಸಾವಿರ ಲೀಟರ್ ಆಗಿದ್ದು, ಉಳಿದ ಹಾಲಿನ ಪೂರೈಕೆಗಾಗಿ ಪಕ್ಕದ ಜಿಲ್ಲೆಗಳನ್ನು ಮತ್ತು ರಾಜ್ಯಗಳನ್ನು ಅವಲಂಭಿಸಿದೆ. ಹಾಗಾಗಿ ಜಿಲ್ಲೆಯ ಆಯ್ದ ಪ್ರದೇಶಗಳಲ್ಲಿ ಹಾಲಿನ ಉತ್ಪಾದನೆಯನ್ನು ಪ್ರೋತ್ಸಾಹಿಸುವ, ಉತ್ಪಾದಿತ ಹಾಲಿನ ಸಂಗ್ರಹಣೆ, ಸಾಗಾಟ, ಸಂಸ್ಕರಣೆ ಮತ್ತು ಮಾರಾಟವನ್ನು ಜಿಲ್ಲೆಯ ರೈತರು ವೈಯಕ್ತಿಕ ಹಾಗೂ ಸಂಘಟಿತ ರೂಪದಲ್ಲಿ ವ್ಯವಸ್ಥಿತವಾಗಿ ಮಾಡಿದಲ್ಲಿ, ಖಂಡಿತವಾಗಿ ಜಿಲ್ಲೆಯ ಜನರಿಗೆ ಪರಿಶುದ್ಧವಾದ ಉತ್ತಮ ಪೋಷಕಾಂಶವನ್ನು ಹೊಂದಿರುವ ಹಾಲು ದೊರೆಯಲಿದೆ. ಜೊತೆಗೆ ರೈತರ ಆರ್ಥಿಕ ಸ್ಥಿತಿಯೂ ಉತ್ತಮವಾಗುವದು ಎಂಬ ಆಶಯ ವ್ಯಕ್ತಪಡಿಸಿದರು.

ಕೊಡಗು ಜಿಲ್ಲೆ ತರಕಾರಿ ಬೆಳೆಗೆ ಅತ್ಯುತ್ತಮ ಅವಕಾಶವನ್ನು ಹೊಂದಿದ್ದರೂ, ಜನರು ತಮ್ಮ ದೈನಂದಿನ ಅಗತ್ಯತೆಗೆ ಬೇರೆ ಕಡೆ ಅವಲಂಭಿತವಾಗಿದ್ದಾರೆ. ಆದ್ದರಿಂದ ಜಿಲ್ಲೆಯಲ್ಲಿ ಈಗಾಗಲೇ ಪಾಳುಬಿದ್ದಿರುವ ಜಮೀನುಗಳಲ್ಲಿ ಹಾಗೂ ಬೆಳೆ ಕಟಾವಿನ ನಂತರ ಲಭ್ಯವಾಗುವ ಪ್ರದೇಶಗಳಲ್ಲಿ ವಿವಿಧ ತರಕಾರಿ ಬೆಳೆಗಳನ್ನು ಪಾಲಿ ಹೌಸ್, ಪೆಂಡಾಲ್ ಅಥವಾ ತೆರೆದ ಪದ್ಧತಿಯಡಿಯಲ್ಲಿ ಬೆಳೆಸಲು ರೈತರು ಆಸಕ್ತಿ ತೋರಬೇಕು ಹಾಗೂ ಈ ನಿಟ್ಟಿನಲ್ಲಿ ಪ್ರಾಮಾಣಿಕ ಪ್ರಯತ್ನ ಮಾಡಬೇಕು ಎಂದರು.

ಕೃಷಿಯನ್ನು ಸಾವಯವ ಗೊಬ್ಬರಗಳನ್ನು ಬಳಸಿ ಮಾಡಿದರೆ, ರೈತರ ತರಕಾರಿ ಉತ್ಪನ್ನಗಳಿಗೆ ಉತ್ತಮ ಬೇಡಿಕೆ ಲಭಿಸುವದು ಮಾತ್ರವಲ್ಲ, ಆರ್ಥಿಕವಾಗಿ ಮುಂದುವರೆ ಯಲು ಮತ್ತು ಆರೋಗ್ಯಕ್ಕೂ ಉತ್ತಮ ಕೊಡುಗೆಯನ್ನು ನೀಡಲು ಸಹಕಾರಿಯಾಗುವದು ಎಂದು ತಿಳಿಸಿದರು. ಪಾಲಿಹೌಸ್ ಮತ್ತು ಪೆಂಡಾಲ್ ನಿರ್ಮಾಣ ಮಾಡಲು ರಾಷ್ಟ್ರೀಯ ತೋಟಗಾರಿಕಾ ಮಿಷನ್‍ನಿಂದ ಪ್ರೋತ್ಸಾಹ ಧನದ ಲಭ್ಯತೆ ಇದೆ ಎಂದು ಮುಂಡಂಡ ಸಿ. ನಾಣಯ್ಯ ಅವರು ಹೇಳಿದರು.

“ಹೈನುಗಾರಿಕೆ ಮತ್ತು ತರಕಾರಿ ಬೆಳೆಯನ್ನು ಮಿಶ್ರ ಕೃಷಿಯನ್ನಾಗಿ ಅಳವಡಿಸಿಕೊಂಡು ಜಿಲ್ಲೆಯ ಅಭಿವೃದ್ಧಿಗೆ ಶ್ರಮಿಸುವ ರೈತರಿಗೆ ಸ್ವ ಸಹಾಯ ಸಂಘಗಳಿಗೆ, ಜಂಟಿ ಭಾದ್ಯತಾ ಗುಂಪುಗಳಿಗೆ ಮತ್ತು ರೈತ ಕೂಟಗಳಿಗೆ ಸುಲಭ ಸಾಲ ಒದಗಿಸಿಕೊಡುವಂತಾಗಲು ಈಗಾಗಲೇ ವಿವಿಧ ಬ್ಯಾಂಕುಗಳ ವ್ಯವಸ್ಥಾಪಕರುಗಳನ್ನು ಕೋರಿಕೊಳ್ಳಲಾಗಿದ್ದು, ಈ ನಿಟ್ಟಿನಲ್ಲಿ ಹೈನುಗಾರಿಕೆಗೆ ರೂ. 5.77 ಕೋಟಿ ಹಾಗೂ ತರಕಾರಿ ಬೆಳೆಗೆ ರೂ. 5 ಕೋಟಿ ಕನಿಷ್ಟ ಸಾಲ ವಿತರಣೆಯ ಗುರಿಯನ್ನು ನಿಗದಿಪಡಿಸಲಾಗಿದೆ. ಈ ಅವಕಾಶವನ್ನು ಜಿಲ್ಲೆಯ ರೈತರು ಬಳಸಿಕೊಳ್ಳಬೇಕು. ಈ ಉದ್ದೇಶಕ್ಕಾಗಿ ಕೆಲವು ಬ್ಯಾಂಕುಗಳು ಮುಂದೆ ಬಂದಿವೆ ಎಂದು ತಿಳಿಸಿದರು.”

ಪ್ರದೇಶ ಅಭಿವೃದ್ಧಿ ಯೋಜನೆಗಳನ್ನು ಬಿಡುಗಡೆಗೊಳಿಸಿ ಮಾತನಾಡಿದ ಜಿ.ಪಂ. ಸಿಇಓ ಪ್ರಶಾಂತ್ ಕುಮಾರ್ ಮಿಶ್ರ ಅವರು, ರಾಷ್ಟ್ರೀಯ ಕೃಷಿ ಮತ್ತು ಗ್ರಾಮೀಣ ಅಭಿವೃದ್ಧಿ ಬ್ಯಾಂಕು (ನಬಾರ್ಡ್) ಹಲವು ಜನಪರ ಹಾಗೂ ರೈತ ಸ್ನೇಹಿ ಯೋಜನೆಗಳನ್ನು ಸಿದ್ಧಪಡಿಸಿ ದೇಶಾದ್ಯಂತ ಅನುಷ್ಠಾನಗೊಳಿಸುತ್ತಿದ್ದು, ಇದೀಗ ಸಿದ್ಧಪಡಿಸಿರುವ ಅಭಿವೃದ್ಧಿ ಯೋಜನೆಗಳು ಮತ್ತೊಂದು ಉತ್ತಮ ಹೆಜ್ಜೆಯಾಗಿದೆ.

ಇದು ಸಂಪೂರ್ಣವಾಗಿ ಅನುಷ್ಠಾನಗೊಳ್ಳಬೇಕಾದರೆ ಜಿಲ್ಲೆಯ ಎಲ್ಲಾ ಬ್ಯಾಂಕುಗಳು, ರೈತರುಗಳು, ಸಂಘ-ಸಂಸ್ಥೆಗಳು ಹಾಗೂ ಸಂಬಂಧಿತ ಇಲಾಖೆಗಳು ಕೈಜೋಡಿಸಬೇಕಾಗಿದೆ ಹಾಗೂ ಇದಕ್ಕಾಗಿ ಜಿಲ್ಲಾಡಳಿತ ತನ್ನ ಸಂಪೂರ್ಣ ಬೆಂಬಲ ಹಾಗೂ ಸಹಕಾರವನ್ನು ನೀಡಲು ಸಿದ್ಧವಿದೆ ಎಂದು ತಿಳಿಸಿದರು.

ಬ್ಯಾಂಕುಗಳು ತಮ್ಮ ನಿಯಮಗಳನ್ನು ಮೃದುಗೊಳಿಸಿ ಜಿಲ್ಲೆಯ ರೈತರಿಗೆ ಆರ್ಥಿಕ ಸಹಕಾರ ನೀಡಲು ಮುಕ್ತ ಮನಸ್ಸಿನಿಂದ ಮುಂದೆ ಬರಬೇಕು ಹಾಗೂ ಸಂಬಂಧಿತ ಇಲಾಖೆಗಳು ಈ ಯೋಜನೆಗಳನ್ನು ಆದ್ಯತೆಯನ್ನಾಗಿ ಪರಿಗಣಿಸಿ, ಇದರ ಅನುಷ್ಠಾನ ಹಾಗೂ ಅಭಿವೃದ್ಧಿಗೆ ಟೊಂಕ ಕಟ್ಟಿ ನಿಲ್ಲಬೇಕು ಎಂದು ಸಿಇಓ ಅವರು ಹೇಳಿದರು. ಈ ನಿಟ್ಟಿನಲ್ಲಿ ಶೀಘ್ರವೇ ಸಂಬಂಧಿತರನ್ನೊಳಗೊಂಡ ಸಭೆಯನ್ನು ಕರೆದು ರೂಪು ರೇಷೆಗಳನ್ನು ಸಿದ್ಧಪಡಿಸಲು ಕ್ರಮವಹಿಸುವದಾಗಿ ಭರವಸೆಯಿತ್ತರು.

ಕಾರ್ಪೊರೇಷನ್ ಬ್ಯಾಂಕಿನ ಮೈಸೂರು ವಲಯದ ಉಪಮಹಾ ಪ್ರಬಂಧಕ ಎಸ್.ಎನ್. ಗಣಪತಿ ಮಾತನಾಡಿ, ವಾರ್ಷಿಕ ಸಾಮಾಥ್ರ್ಯಭರಿತ ಸಾಲ ಯೋಜನೆಯ ಜೊತೆಯಲ್ಲಿ ಪ್ರತ್ಯೇಕವಾಗಿ ನಬಾರ್ಡಿನಿಂದ ಸಿದ್ಧಪಡಿಸಲಾದ ಪ್ರದೇಶ ಅಭಿವೃದ್ಧಿ ಯೋಜನೆಗಳು ಒಂದು ಮೈಲಿಗಲ್ಲು ಆಗಲಿದ್ದು, ದೇಶದ ಅಭಿವೃದ್ಧಿಗೆ ನಬಾರ್ಡಿನ ಕೊಡುಗೆ ನಿಜಕ್ಕೂ ಪ್ರಶಂಸನೀಯ ಮತ್ತು ಪ್ರಸಕ್ತ ಯೋಜನೆಗಳಿಂದ ಜಿಲ್ಲೆಯ ಜನತೆ ಕ್ಷೀರ ಉತ್ಪಾದನೆಯಲ್ಲಿ ಮತ್ತು ತರಕಾರಿ ಬೆಳೆಗಳನ್ನು ಅಭಿವೃದ್ಧಿಪಡಿಸುವಲ್ಲಿ ಕ್ರಾಂತಿ ಮಾಡುವಂತಾಗಬೇಕು ಎಂದರು.

ಜಿಲ್ಲಾ ಮಾರ್ಗದರ್ಶಿ ಬ್ಯಾಂಕಿನ ವ್ಯವಸ್ಥಾಪಕ ಬಂಗಾರು ಗುಪ್ತಾಜಿ ಮಾತನಾಡಿ, ಈ ಅಭಿವೃದ್ಧಿ ಯೋಜನೆಗಳಲ್ಲಿ ಗುರುತಿಸಲಾದ ಹೈನುಗಾರಿಕೆ ಮತ್ತು ತರಕಾರಿ ಬೆಳೆ ಅಭಿವೃದ್ಧಿ ಕೊಡಗು ಜಿಲ್ಲೆಗೆ ತೀರಾ ಪ್ರಸ್ತುತವಾಗಿದ್ದು, ಇದರಿಂದ ಖಂಡಿತವಾಗಿಯೂ ಜಿಲ್ಲೆಯ ಬಡ ರೈತರಿಗೆ ಬಹಳಷ್ಟು ಪ್ರಯೋಜನವಾಗಲಿದೆ ಹಾಗೂ ಇದರಿಂದ ರೈತರ ಜೀವನ ನಿರ್ವಹಣೆಗೆ ಹಾಗೂ ಆರ್ಥಿಕ ಸುಧಾರಣೆಗೆ ವಿಶೇಷ ವೇದಿಕೆಯ ನಿರ್ಮಾಣ ಆಗಲಿದೆ ಎಂದು ತಿಳಿಸಿದರು. ಈ ಎರಡೂ ಯೋಜನೆಗಳ ಅನುಷ್ಠಾನ ಮತ್ತು ಅಭಿವೃದ್ಧಿಗೆ ಜಿಲ್ಲೆಯ ಎಲ್ಲಾ ಬ್ಯಾಂಕುಗಳು ಖಂಡಿತವಾಗಿಯೂ ಬೆಂಬಲಿಸುತ್ತವೆ ಎಂಬ ಭರವಸೆಯ ನುಡಿಯನ್ನಾಡಿದರು.

ಕಾರ್ಪೊರೇಷನ್ ಬ್ಯಾಂಕಿನ ಕೂಡಿಗೆಯ ಸ್ವ ಉದ್ಯೋಗ ತರಬೇತಿ ಸಂಸ್ಥೆಯ ನಿರ್ದೇಶಕ ಡಾ. ಸುರೇಶ್ ಮಾತನಾಡಿ, ಜಿಲ್ಲೆಯಲ್ಲಿ ಹೈನುಗಾರಿಕೆ ಮತ್ತು ತರಕಾರಿ ಬೆಳೆಗಳಿಗೆ ಬಹಳಷ್ಟು ಅವಕಾಶಗಳಿದ್ದು, ಇಂತಹ ಚಟುವಟಿಕೆಗಳನ್ನು ಪ್ರೋತ್ಸಾಹಿಸಲು ತಮ್ಮ ಸಂಸ್ಥೆ ಸದಾ ಸಿದ್ಧವಿದೆ ಹಾಗೂ ಈ ನಿಟ್ಟಿನಲ್ಲಿ ರೈತರಿಗೆ, ಅಭಿವೃದ್ಧಿ ಸಂಘಟನೆಗಳ ಸದಸ್ಯರುಗಳಿಗೆ, ಉಚಿತ ತರಬೇತಿಗಳನ್ನು ಕೊಡಲು ಸಂಸ್ಥೆ ಬದ್ಧವಾಗಿದೆ ಎಂದು ತಿಳಿಸಿದರು.

ಕಾರ್ಯಕ್ರಮದಲ್ಲಿ ಜಿಲ್ಲೆಯ ಎಲ್ಲಾ ಬ್ಯಾಂಕುಗಳ ಹಿರಿಯ ಅಧಿಕಾರಿಗಳು, ಶಾಖಾ ವ್ಯವಸ್ಥಾಪಕರುಗಳು, ವಿವಿಧ ಇಲಾಖೆಗಳ ಅಧಿಕಾರಿಗಳು ಮತ್ತು ಸಂಘ-ಸಂಸ್ಥೆಗಳ ಪ್ರತಿನಿಧಿಗಳು ಭಾಗವಹಿಸಿದ್ದರು.