ಮಡಿಕೇರಿ, ಜು. 15: ಹೌದು ಕಳೆದ ಜೂನ್ 23 ರಂದು ಕೂಡಿಗೆ ಸೈನಿಕ ಶಾಲೆಯ ವಿದ್ಯಾರ್ಥಿ, ಒಂಬತ್ತನೆಯ ತರಗತಿಯ ಎನ್.ಪಿ. ಚಿಂಗಪ್ಪ (14) ಅಸಹಜ ಸಾವಿಗೀಡಾಗಿದ್ದು, ಚಿರನಿದ್ದೆಯೊಂದಿಗೆ ಚಿತೆಯೇರಿದ್ದಾಗಿದೆ. ಈತನ ನಿಗೂಡ ಸಾವಿನ ಬೆನ್ನಲ್ಲೇ ನಿವೃತ್ತ ಸೈನಿಕರೂ ಹಾಗೂ ಅದೇ ಶಾಲೆಯಲ್ಲಿ ಹಾಕಿ ಕೋಚ್ ಆಗಿದ್ದ ಮೃತನ ತಂದೆ ಪೂವಯ್ಯ ಕೊಲೆ ಶಂಕೆ ವ್ಯಕ್ತಪಡಿಸಿ ದೂರು ಸಲ್ಲಿಸಿದ್ದಾರೆ.ಕುಶಾಲನಗರ ಪೊಲೀಸ್ ಠಾಣೆಯಲ್ಲಿ ಪೊಲೀಸ್ ಕಾಯ್ದೆ 302ರ ಅನ್ವಯ ಪ್ರಕರಣವೂ ದಾಖಲಾಗಿತ್ತು. ಅಲ್ಲದೆ ಸೈನಿಕ ಶಾಲೆಯ ಬಚ್ಚಲು ಕೋಣೆಯಲ್ಲಿ ಕೊನೆಯುಸಿರೆಳೆದಿದ್ದ ನೆನ್ನಲಾದ ಚಿಂಗಪ್ಪನನ್ನು ಕೂಡಿಗೆ ಪ್ರಾಥಮಿಕ ಆರೋಗ್ಯ ಕೇಂದ್ರಕ್ಕೆ ಸಾಗಿಸಿ ಬಳಿಕ ಮಡಿಕೇರಿ ಜಿಲ್ಲಾಸ್ಪತ್ರೆಗೆ ತಂದು ಮರುದಿನ ಮರಣೋತ್ತರ ಪರೀಕ್ಷೆ ನಡೆಸಿ, ಮೃತನ ಕುಟುಂಬದ ವಶಕ್ಕೆ ಶವ ಒಪ್ಪಿಸಲಾಗಿತ್ತು. ಚಿಂಗಪ್ಪ ಸಾವಿಗೆ ತೀವ್ರ ಆಕ್ರೋಶದೊಂದಿಗೆ ಅಂತ್ಯಸಂಸ್ಕಾರ ನಡೆಸಲಾಗಿದೆ.ಸಂಶಯದ ಹುತ್ತ: ಈ ನಡುವೆ ಚಿಂಗಪ್ಪ ಕೊನೆಯುಸಿರೆಳೆದ ದಿನ ಅದೇ ಶಾಲೆಯಲ್ಲಿ

(ಮೊದಲ ಪುಟದಿಂದ) ಮಕ್ಕಳಿಗೆ ಹಾಕಿ ತರಬೇತಿ ನೀಡುತ್ತಿದ್ದ ಮೃತನ ತಂದೆ ಪೂವಯ್ಯ ಹಾಗೂ ಬಂಧುಗಳು ಸಾಕಷ್ಟು ಸಂಶಯಗಳನ್ನು ವ್ಯಕ್ತಪಡಿಸಿ ‘ಶಕ್ತಿ’ಯೊಂದಿಗೆ ನೋವು ತೋಡಿಕೊಂಡಿದ್ದಾರೆ. ಅವರುಗಳ ಪ್ರಕಾರ ಶಿಕ್ಷಕರೊಬ್ಬರ ಹಲ್ಲೆಯಿಂದ ಚಿಂಗಪ್ಪ ಮಾರ್ಚಿತನಾಗಿ ಸಾವನ್ನಪ್ಪಿರುವ ಆರೋಪವಿದೆ. ಅಲ್ಲದೆ ವಿದ್ಯಾರ್ಥಿಯ ಕುರಿತು ಅಂದು ಕರ್ತವ್ಯ ನಿರತ ಸೈನಿಕ ಶಾಲೆಯವರು ನಡೆದುಕೊಂಡಿರುವ ರೀತಿ ಬಗ್ಗೆ ದುಃಖ ವ್ಯಕ್ತಪಡಿಸಿರುತ್ತಾರೆ.

ಪೂವಯ್ಯ ಅಳಲು: ಚಿಂಗಪ್ಪ ತಂದೆ ಪೂವಯ್ಯ ಹೇಳುವ ಪ್ರಕಾರ, ತಾ. 23.6.2018 ರಂದು ಬೆಳಿಗ್ಗೆ ಎಂದಿನಂತೆ ವಿದ್ಯಾರ್ಥಿಗಳಿಗೆ ಹಾಕಿ ತರಬೇತಿ ನೀಡಿದ್ದು, ತಂಡದಲ್ಲಿದ್ದ ಮಗನು ಕೂಡ ಮೈದಾನದಿಂದ ತರಬೇತಿ ಮುಗಿಸಿ ಹಿಂತಿರುವಾಗ ತಂದೆಯನ್ನು ಅಪ್ಪಿಕೊಂಡು ಮುತ್ತಿಕ್ಕಿದ್ದಾನೆ. ಈ ವೇಳೆ ಪೂವಯ್ಯ ಮಗನಿಗೆ ಬುದ್ಧಿ ಹೇಳಿ ಇಲ್ಲಿ ಹೀಗೆಲ್ಲ ಮಾಡಬೇಡ, ಎಲ್ಲ ಮಕ್ಕಳಂತೆ ನೀನು ಇರಬೇಕು ಎಂದು ತಲೆ ಸವರಿ ಕಳುಹಿಸಿದ್ದಾರೆ. ವಿಧಿಯಾಟದಂತೆ ಅದುವೇ ತಂದೆ-ಮಗನ ಅಂತಿಮ ಆಲಿಂಗನವಾದೀತು ಎಂದು ಯಾರೂ ಊಹಿಸಿರಲಿಲ್ಲ.

ಮೊಬೈಲ್‍ಗೆ ಕರೆ: ಅಂದು ಅಪರಾಹ್ನ ಕೂಡ ವಿದ್ಯಾರ್ಥಿಗಳಿಗೆ ತರಬೇತಿ ನೀಡಿ ಸಂಜೆ ಆಗಷ್ಟೇ 5.30ರ ಸುಮಾರಿಗೆ ಪೂವಯ್ಯ ಕಾಫಿಗೆ ತೆರಳಿದ್ದಾರೆ. ಕ್ಯಾಂಟೀನ್‍ವೊಂದರಲ್ಲಿ ಕಾಫಿ ಪಡೆದು ಕುಡಿಯಬೇಕು ಎನ್ನುವಷ್ಟರಲ್ಲಿ ಸೈನಿಕ ಶಾಲಾ ಶಿಕ್ಷಕರೊಬ್ಬರು ಕರೆ ಮಾಡಿ, ‘ಚಿಂಗಪ್ಪ ಕಾಣುತ್ತಿಲ್ಲ; ನೀವು ಜತೆಯಲ್ಲಿ ಕರೆದೊಯ್ದಿದ್ದೀರಾ’ ಎಂದು ಪ್ರಶ್ನಿಸಿದ್ದಾರೆ. ಮರುಕ್ಷಣ ತಮ್ಮ ಬೈಕ್‍ನಲ್ಲಿ ಒಂದೆರಡು ನಿಮಿಷ ಅಂತರದಲ್ಲಿ ಪೂವಯ್ಯ ಶಾಲೆಗೆ ತಲಪಿದ್ದಾರೆ.

ಫೋನ್ ಮಾಡಲು ಸಲಹೆ: ಶಾಲಾ ಆವರಣದಲ್ಲಿ ಸಂಬಂಧಿಸಿದ ಶಿಕ್ಷಕರು ‘ನಿಮ್ಮ ಮಗ ಮನೆಗೆ ಅಥವಾ ನೆಂಟರಿಷ್ಟರ ಮನೆಗೆ ಹೋಗಿರಬೇಕು.. ನೀವು ಫೋನ್ ಮಾಡಿ ಖಚಿತಪಡಿಸಿಕೊಳ್ಳಿ’ ಎಂದಿದ್ದಾರೆ. ಮಾತು ಮುಂದುವರಿಸಿ, ಶಾಲೆಯೊಳಗೆ ಎಲ್ಲೆಡೆ ಹುಡುಕಿದ್ದು, ಮಧ್ಯಾಹ್ನದಿಂದಲೇ ನಿಮ್ಮ ಮಗ ಕಾಣಿಸುತ್ತಿಲ್ಲ ಎಂದು ಹೇಳಿದ್ದಾರೆ.

ನದಿ ಬಳಿ ಹುಡುಕಾಟ: ಶಾಲೆಯೊಳಗೆ ಎಲ್ಲಿಯೂ ಚಿಂಗಪ್ಪ ಕಾಣುತ್ತಿಲ್ಲ ಎಂಬ ಮಾತಿನಿಂದ ದಿಕ್ಕು ದೋಚದಂತಾದ ತಂದೆ ಪೂವಯ್ಯ ಹಾಗೂ ಇತರರು ಆವರಣದಿಂದ ಹೊರ ಬಂದು ಪಕ್ಕದ ನದಿ ತಟದಲ್ಲಿ ಎಲ್ಲಾದರೂ ಹೆಜ್ಜೆ ಗುರುತು ಇದೆಯಾ ಎಂದು ಖಾತರಿಪಡಿಸಿಕೊಳ್ಳಲು ಮುಂದಾಗಿದ್ದಾರೆ.

ವ್ಯಾನ್‍ನಲ್ಲಿ ಸಾಗಾಟ: ಈ ಅಂತರದಲ್ಲಿ ಶಾಲಾ ವಾಹನದೊಂದಿಗೆ ವಿದ್ಯಾರ್ಥಿಯ ಶವವನ್ನು ಕೂಡಿಗೆ ಆರೋಗ್ಯ ಕೇಂದ್ರಕ್ಕೆ ಸಾಗಿಸಿರುವದಾಗಿದ್ದು, ಮತ್ತೆ ಕರೆ ಮಾಡಿ ಮಗ ಶೌಚಾಲಯ ಕೋಣೆಯಲ್ಲಿ ಸಿಕ್ಕಿದ್ದು ಬಾಗಿಲು ಒಡೆದು ಆಸ್ಪತ್ರೆಗೆ ಸಾಗಿಸಲಾಗಿದೆ ಎಂದು ತಿಳಿಸಲಾಗಿದೆ. ಆಘಾತಗೊಂಡ ಪೂವಯ್ಯ ಕ್ಷಣ ಮಾತ್ರದಲ್ಲಿ ಅತ್ತ ಧಾವಿಸಿ ನೋಡಲಾಗಿ ಚಿಂಗಪ್ಪ ಚಿರನಿದ್ದೆಗೆ ಜಾರಿ ಎಷ್ಟೋ ಗಂಟೆಗಳು ಕಳೆದು ಹೋಗಿರುವ ಅಂಶ ಬೆಳಕಿಗೆ ಬಂದಿದೆ.

ಮತ್ತೆ ಮಡಿಕೇರಿಗೆ: ಆಸ್ಪತ್ರೆಗೆ ತೆರಳುವಷ್ಟರಲ್ಲಿ ಮೃತನ ತಂದೆಗೆ ಕೈಸನ್ನೆಯಿಂದ ವೈದ್ಯರು ಸಾವಿನ ಸುಳಿವು ನೀಡಿದ್ದು, ಮರಣೋತ್ತರ ಪರೀಕ್ಷೆಗಾಗಿ ರಾತ್ರಿ ತಂದು ಮಡಿಕೇರಿಯ ಶವಗಾರದಲ್ಲಿ ಚಿಂಗಪ್ಪನ ದೇಹವನ್ನು ಇರಿಸಲಾಗಿದೆ. ಇನ್ನೊಂದೆಡೆ ಪೊಲೀಸರು ಕುಶಾಲನಗರ ಠಾಣೆಯಲ್ಲಿ ರಾತ್ರಿ 10.30ರಿಂದ 1.30ರ ತನಕ ಕುಳ್ಳಿರಿಸಿಕೊಂಡು ಪ್ರಕರಣ ದಾಖಲಿಸದೆ, ಎಲ್ಲೆಡೆಯಿಂದ ಬಂದ ನೆಂಟರಿಷ್ಟರು, ಜನಪ್ರತಿನಿಧಿಗಳ ಆಕ್ರೋಶ ಕಂಡು ಆ ಬಳಿಕ ದೂರು ಪಡೆದಿದ್ದಾಗಿಯೂ ಪೂವಯ್ಯ ನೋವಿನಿಂದ ನುಡಿಯುತ್ತಾರೆ.

ಜೂನ್ 24 ರಂದು ಹಗಲು ಮರಣೋತ್ತರ ಪರೀಕ್ಷೆ ನಡೆಸಿ, ಶವ ಹಿಂತಿರುಗಿಸಿದ್ದು, ಶವದ ಪರೀಕ್ಷೆ ನಡೆಸಿರುವ ವೈದ್ಯರ ಪ್ರಕಾರ ಮೃತನ ಹೊಟ್ಟೆಯಲ್ಲಿ ಯಾವದೇ ವಿಷಕಾರಕ ಅಂಶ, ಶರೀರದಲ್ಲಿ ಗಾಯಗಳು ಗೋಚರಿಸಿರುವದಿಲ್ಲ ವೆಂದು ಹೇಳಲಾಗುತ್ತಿದೆ.

ತಾ. 28 ರಂದು ಕರೆ: ತಾ. 28.6.2018 ರಂದು ಕೂಡಿಗೆ ಆಸ್ಪತ್ರೆಗೆ ಬರುವಂತೆ ಶಾಸಕ ಅಪ್ಪಚ್ಚು ರಂಜನ್ ಕರೆಯ ಮೇರೆಗೆ, ತಾವು ಕುಟುಂಬದೊಂದಿಗೆ ತೆರಳಿದ್ದು, ಈ ಸಂದರ್ಭ ತಮಗೆ ಮಗನ ಸಾವಿನ ಸಂಬಂಧ ಅಲ್ಲಿ ಸೈನಿಕ ಶಾಲೆಯ ಮುಖ್ಯಸ್ಥರು, ಪೊಲೀಸ್ ತನಿಖಾ ತಂಡ, ಶಿಕ್ಷಕರು ಘಟನೆಯ ಸ್ಥಳ ಪರಿಶೀಲಿಸಿದ ಬಗ್ಗೆ ಶಾಸಕರೊಂದಿಗೆ ಮಾತುಕತೆ ನಡೆಸಿದ್ದಾರೆ.

ವರದಿ ಬಂದಿಲ್ಲ: ಮೊದಲು ಕರೆ ಮಾಡಿದಾಗ ಮಗನ ಸಾವಿನ ಮರಣೋತ್ತರ ಪರೀಕ್ಷಾ ವರದಿ ಬಂದಿರುವದಾಗಿ ತಿಳಿಸಿದ್ದು, ಅಲ್ಲಿಗೆ ತೆರಳಿದಾಗ ವರದಿ ಬಂದಿಲ್ಲವೆಂದು, ಪ್ರಕರಣವನ್ನು ಸೌಹಾದರ್Àಯುತ ರೀತಿ ಬಗೆಹರಿಸಿಕೊಳ್ಳಲು ಮಾತುಕತೆಗೆ ಕರೆದಿದ್ದಾಗಿ ಪೀಠಿಕೆ ಹಾಕಿದರೆನ್ನಲಾಗಿದೆ.

ಪೋಷಕರ ಪಟ್ಟು: ಈ ವೇಳೆ ತಮ್ಮ ಪಟ್ಟು ಸಡಿಲಿಸದ ಚಿಂಗಪ್ಪ ಪೋಷಕರು ಮತ್ತು ಬಂಧುವರ್ಗ, ವಿದ್ಯಾರ್ಥಿ ಮೃತಪಟ್ಟಿರುವ ಸ್ಥಳ ಹಾಗೂ ಶಾಲಾ ವಠಾರದ ಸಿಸಿ ಕ್ಯಾಮರಾ ದೃಶ್ಯವನ್ನು ತೋರಿಸಲು ಪಟ್ಟು ಹಿಡಿದಿದ್ದಾರೆ. ಅಲ್ಲದೆ ತಮ್ಮ ಮಗ ಉತ್ತಮ ನಡತೆಯೊಂದಿಗೆ, ಕ್ರಿಯಾಶೀಲ ವಿದ್ಯಾರ್ಥಿಯಾಗಿದ್ದು, ಶಿಕ್ಷಕರೊಬ್ಬರ ಹಲ್ಲೆಯಿಂದ ಆತ ಕೆಳಗೆ ಮೂರ್ಚೆ ತಪ್ಪಿ ಬಿದ್ದು ಕೊನೆಯುಸಿರೆಳೆದಿರುವದಾಗಿ ಶಂಕೆ ವ್ಯಕ್ತಪಡಿಸಿದ್ದಾರೆ.

ಮೌನಕ್ಕೆ ಜಾರಿದರು: ಇವರುಗಳ ನಿಲುವಿನಿಂದ ಶಾಸಕರ ಸಹಿತ ಶಾಲಾ ಆಡಳಿತ ವರ್ಗ, ಪೊಲೀಸ್ ತನಿಖಾ ತಂಡದವರು ಮೌನಕ್ಕೆ ಜಾರುವದರೊಂದಿಗೆ ಮರಣೋತ್ತರ ಪರೀಕ್ಷೆಯ ಪ್ರಯೋಗಾಲಯ ವರದಿ ಬರಲಿ, ನೋಡೋಣ ಎಂದು ಹೇಳಿ ಹೋಗಿದ್ದು, ಇದುವರೆಗೆ ಯಾರೊಬ್ಬರಿಂದಲೂ, ಏನೊಂದೂ ಪ್ರತಿಕ್ರಿಯೆ ಇಲ್ಲವೆಂದು ನೋವು ವ್ಯಕ್ತಪಡಿಸಿದ್ದಾರೆ. ಅಲ್ಲದೆ, ಮುಗ್ಧ ವಿದ್ಯಾರ್ಥಿಯ ಸಾವಿಗೆ ಓರ್ವ ಮಾಜಿ ಸೈನಿಕ ಹಾಗೂ ತಂದೆಯಾಗಿ ನ್ಯಾಯ ಅಪೇಕ್ಷಿಸುತ್ತಿರುವದಾಗಿ ಪೂವಯ್ಯ ದುಃಖಪಡುತ್ತಿದ್ದಾರೆ.