ಸೋಮವಾರಪೇಟೆ,ಜು.15: ತಾಲೂಕಿನಾದ್ಯಂತ ಮಳೆಯೊಂದಿಗೆ ಬಿರುಗಾಳಿ ಬೀಸುತ್ತಿದ್ದು, ಭಾರೀ ಗಾಳಿಗೆ ಜನ ತತ್ತರಿಸಿದ್ದಾರೆ. ಹಲವೆಡೆ ರಸ್ತೆಗಳಿಗೆ ಅಡ್ಡಲಾಗಿ ಮರಗಳು ಉರುಳಿದ್ದು, ಶಾಂತಳ್ಳಿ ಹೋಬಳಿಯ ಅಭಿಮಠ ಬಾಚಳ್ಳಿಯಲ್ಲಿ ಭಾರೀ ಮಳೆಯಿಂದಾಗಿ ರಸ್ತೆ ನೀರಿನಲ್ಲಿ ಮುಳುಗಿದೆ.
ಭಾರೀ ಗಾಳಿ ಮಳೆಗೆ ಪಟ್ಟಣ ಸೇರಿದಂತೆ ಗ್ರಾಮೀಣ ಭಾಗಗಳಲ್ಲಿ ಹೆಚ್ಚಿನ ಹಾನಿಯಾಗಿದೆ. ಹಲವು ಮನೆಗಳು ಜಖಂಗೊಂಡಿದ್ದು, ವಿದ್ಯುತ್ ಮಾರ್ಗಗಳ ಮೇಲೆ ಮರಗಳು ಬಿದ್ದಿರುವದರಿಂದ ಪಟ್ಟಣ ಸೇರಿದಂತೆ ಗ್ರಾಮೀಣ ಭಾಗಗಳಲ್ಲಿ ವಿದ್ಯುತ್ ಸಂಪರ್ಕ ಶನಿವಾರ ಸಂಜೆಯಿಂದಲೇ ಕಡಿತಗೊಂಡಿತ್ತು. ಗ್ರಾಮೀಣ ಪ್ರದೇಶದ ಮನೆಗಳು ಅತೀ ಶೀತದಿಂದ ಕುಸಿಯುತ್ತಿದ್ದರೆ, ಪಟ್ಟಣದಲ್ಲಿರುವ ಶಾಸಕರ ಕಚೇರಿಯ ಮೇಲೆ ಹಾಕಲಾಗಿದ್ದ ಶೀಟ್ಗಳು ಭಾರೀ ಗಾಳಿಗೆ ಹಾರಿ ಹೋಗಿವೆ.
ಪಟ್ಟಣದಿಂದ ಮಡಿಕೇರಿಗೆ ತೆರಳುವ ರಾಜ್ಯ ಹೆದ್ದಾರಿಯ ಮೇಲೆ ಹಲವು ಮರಗಳು ಉರುಳಿವೆ. ಕಾಜೂರು ಜಂಕ್ಷನ್ ಬಳಿ ಟಾಟಾ ಕಾಫಿ ಸಂಸ್ಥೆಗೆ ಸೇರಿದ ಮರವೊಂದು ಮುರಿದು ರಸ್ತೆಯಲ್ಲಿ ಸಂಚರಿಸುತ್ತಿದ್ದ ಮಾರುತಿ ವ್ಯಾನ್ನ ಮೇಲೆ ಉರುಳಿದ್ದು, ಭಾರೀ ಅನಾಹುತ ತಪ್ಪಿದೆ.
ವ್ಯಾನ್ನಲ್ಲಿದ್ದ ಬಿ.ಎ. ಮಧುಸೂದನ್, ಇಂದುಮತಿ ಹಾಗೂ ಜಯಣ್ಣ ಅವರುಗಳು ಸಣ್ಣ ಪುಟ್ಟ ಗಾಯಗಳೊಂದಿಗೆ ಪಾರಾಗಿದ್ದಾರೆ. ಕುಂಬೂರು ಗ್ರಾಮದ ಹೆದ್ದಾರಿಯಲ್ಲಿ ಬೃಹತ್ ಗಾತ್ರದ ಮರವೊಂದು ರಸ್ತೆಗೆ ಉರುಳಿ ಮೂರ್ನಾಲ್ಕು ಗಂಟೆಗಳ ಕಾಲ ರಸ್ತೆ ಬಂದ್ ಆಗಿತ್ತು. ಮರ ಬಿದ್ದ ಸಂದರ್ಭ ವಿದ್ಯುತ್ ಟ್ರಾನ್ಸ್ಫಾರ್ಮರ್ ಸೇರಿದಂತೆ ಹಲವು ವಿದ್ಯುತ್ ಕಂಬಗಳು ನೆಲಕ್ಕುರುಳಿವೆ. ಕ್ಷೇತ್ರದ ಶಾಸಕರಾದ ಎಂ.ಪಿ. ಅಪ್ಪಚ್ಚು ರಂಜನ್ ಅವರು ಸ್ಥಳದಲ್ಲಿದ್ದು, ಮರ ತೆರವುಗೊಳಿಸಲು ಸಹಕರಿಸಿದ್ದಾರೆ.
ಬೇಳೂರು ಗ್ರಾಮ ಪಂಚಾಯಿತಿ ವ್ಯಾಪ್ತಿಯ ಕುಸುಬೂರು ಗ್ರಾಮದ ಗಣಪತಿ ದೇವಾಲಯದ ಬಳಿ ಬೃಹತ್ ಮರವೊಂದು ರಸ್ತೆಗೆ ಅಡ್ಡ ಬಿದ್ದ ಪರಿಣಾಮ ಐಗೂರು ಗ್ರಾಮ ಪಂಚಾಯಿತಿ ವ್ಯಾಪ್ತಿಗೆ ವಿದ್ಯುತ್ ಸರಬರಾಜು ಕಲ್ಪಿಸುವ 11ಕೆ.ವಿ. ವಿದ್ಯುತ್ ಕಂಬಗಳು ನೆಲಕ್ಕುರುಳಿ ವಿದ್ಯುತ್ ಲೈನ್ ಸಂಪರ್ಕ ಕಡಿತಗೊಂಡಿದೆ. ಇದರೊಂದಿಗೆ ಕಾರೆಕೊಪ್ಪ ಗ್ರಾಮದಲ್ಲಿ ಇನೋವಾ ಕಾರಿನ ಮೇಲೆ ಮರವೊಂದು ಉರುಳಿದ್ದು ವಾಹನದೊಳಗೆ ಇದ್ದವರು ಪ್ರಾಣಾಪಾಯದಿಂದ ಪಾರಾಗಿದ್ದಾರೆ. ಕರ್ಕಳ್ಳಿ ಗ್ರಾಮದ ಜರ್ಮಿ ಎಂಬವರ ಮನೆಯ ಮೇಲೆ ಶನಿವಾರ ಮಧ್ಯರಾತ್ರಿ ಮರವೊಂದು ಉರುಳಿ ಬಿದ್ದಿದ್ದು, ಮನೆಯವರು ಅಪಾಯದಿಂದ ಪಾರಾಗಿದ್ದಾರೆ. ಶಾಂತಳ್ಳಿ ಗ್ರಾಮದ ಜೀಪ್ ಶೆಡ್ ಮೇಲೆ ಮರ ಉರುಳಿ ಹಾನಿಯಾಗಿದೆ.
ಯಡವಾರೆ ಗ್ರಾಮದಲ್ಲಿ ಹೆಚ್ಚು ಹಾನಿಯಾಗಿದ್ದು ಮಲ್ಲಿಗೆ ಎಂಬವರ ವಾಸದ ಮನೆಯ ಮೇಲೆ ಮರವೊಂದು ಬಿದ್ದಿದ್ದು, ಮನೆ ಸಂಪೂರ್ಣ ಹಾನಿಯಾಗಿದೆ. ಮಲ್ಲಿಗೆಯವರಿಗೆ ಪೆಟ್ಟಾಗಿದ್ದು, ಜಿಲ್ಲಾ ಸರ್ಕಾರಿ ಆಸ್ಪತ್ರೆಯಲ್ಲಿ ಚಿಕಿತ್ಸೆಗೊಳಗಾಗಿದ್ದಾರೆ.
ಇದೇ ಗ್ರಾಮದ ಲಕ್ಷ್ಮಪ್ಪರವರ ಮನೆಯ ಮೇಲೆ ಮರ ಉರುಳಿದ್ದು, ಮನೆಗೆ ಹಾನಿಯಾಗಿದೆ. ಕಾಶಿರವರ ಮನೆಯ ಮೇಲೆ ಮರ ಉರುಳಿ ನಷ್ಟವಾಗಿದೆ. ಗೋಪಾಲ್ರವರ ಮನೆಯ ಮೇಲೆ ಮರ ಉರುಳಿ ಹಾನಿಯಾಗಿದೆ. ಸ್ಥಳಕ್ಕೆ ಪಂಚಾಯಿತಿ ಅಧ್ಯಕ್ಷರಾದ ಚಂಗಪ್ಪ, ಸದಸ್ಯ ಕೆ.ಪಿ. ದಿನೇಶ್ ಪಂಚಾಯಿತಿ ಅಭಿವೃದ್ದಿ ಅಧಿಕಾರಿ ಮತ್ತಿತರರು ಭೇಟಿ ನೀಡಿ ಪಡಿಶೀಲಿಸಿದ್ದಾರೆ.
ಭಾರಿ ಗಾಳಿಗೆ ಚೌಡ್ಲು ಗ್ರಾಮದ ರಾಮಯ್ಯ ಎಂಬವರ ಮನೆಯ 10 ಶೀಟುಗಳು ಹಾರಿ ಬಿದ್ದಿದ್ದು ನಷ್ಟವಾಗಿದೆ. ಯಡೂರು ಗ್ರಾಮದ ಸತೀಶ್ ಎಂಬವರ ಮನೆಯ 15 ಶೀಟುಗಳಿಗೆ ಹಾನಿಯಾಗಿದೆ. ಹಾನಗಲ್ಲು ಗ್ರಾಮದ ರಮೇಶ್ ಎಂಬವರ ಶೆಡ್ಮೇಲೆ ಮರಬಿದ್ದು ಜಖಂಗೊಂಡಿದೆ. ಹಾನಗಲ್ಲು ಶೆಟ್ಟಳ್ಳಿ ಗ್ರಾಮದ ವಜನಾಕ್ಷಿ ಎಂಬವರ ಮನೆಯ 15 ಶೀಟುಗಳಿಗೆ ಹಾನಿಯಾಗಿದ್ದರೆ, ಅಂಬ್ರೂಸ್ ಸಿಕ್ವೇರ ಎಂಬವರ ಮನೆಯ ಎರಡು ಶೀಟ್ಗಳಿಗೆ ಹಾನಿಯಾಗಿದೆ.
ಇದರೊಂದಿಗೆ ಶಾಂತಳ್ಳಿ ಗ್ರಾಮದ ಕೆ.ಪಿ. ಗೋಪಾಲಕೃಷ್ಣ ಎಂಬವರ ಮನೆಯ 10 ಶೀಟುಗಳು ಹಾನಿಯಾಗಿವೆ. ತಲ್ತರೆಶೆಟ್ಟಳ್ಳಿ ಗ್ರಾಮದ ದೊಡ್ಡಯ್ಯ ಎಂಬವರ ಮನೆಯ ಮೇಲೆ ಮರ ಬಿದ್ದು ಹಾನಿಯಾಗಿದೆ. ಇದೇ ಗ್ರಾಮದ ಚಂಗಪ್ಪ ಎಂಬವರ ವಾಸದ ಮನೆಯ ಮೇಲೆ ಮರ ಬಿದ್ದು 5 ಶೀಟ್ಗಳಿಗೆ ಹಾನಿಯಾಗಿರುವ ಕುರಿತು ವರದಿಯಾಗಿದೆ.
ಇಂದು ಬೆಳಿಗ್ಗೆ ಮಡಿಕೇರಿಯಿಂದ ಸೋಮವಾರಪೇಟೆಗೆ ಆಗಮಿಸುತ್ತಿದ್ದ ಸರ್ಕಾರಿ ಬಸ್ ಕುಂಬೂರು ಸಮೀಪ ರಸ್ತೆ ಬದಿಯ ಚರಂಡಿಗೆ ಇಳಿದಿದ್ದು, ಅದೃಷ್ಟವಶಾತ್ ಹೆಚ್ಚಿನ ಅನಾಹುತ ತಪ್ಪಿದೆ.
ಗರಗಂದೂರು ಬಿ ಗ್ರಾಮದ ರುಕ್ಮಿಣಿ ಈರಪ್ಪ ಎಂಬವರ ಮನೆಯ ಮೇಲೆ ಸಿಲ್ವರ್ ಮರ ಬಿದ್ದಿದ್ದು, ಅದೃಷ್ಟವಶಾತ್ ಹೆಚ್ಚಿನ ಹಾನಿ ಸಂಭವಿಸಿಲ್ಲ. ಬೇಳೂರು ಗ್ರಾಮದ ಸುದರ್ಶನ್ ಎಂಬವರ ಮನೆಯ ಮೇಲೂ ಮರ ಬಿದ್ದು, ಹಾನಿ ಸಂಭವಿಸಿದೆ.
ಕುಶಾಲನಗರದಿಂದ ಸೋಮವಾರಪೇಟೆಗೆ ವಿದ್ಯುತ್ ಸಂಪರ್ಕ ಕಲ್ಪಿಸುವ ಪ್ರಮುಖ ಮಾರ್ಗವಾದ 33 ಕೆ.ವಿ. ಮಾರ್ಗದ 11 ಕಡೆಗಳಲ್ಲಿ ಮರಗಳು ಉರುಳಿ ಬಿದ್ದಿದ್ದು, ಇಲಾಖಾ ಸಿಬ್ಬಂದಿಗಳು ಮರಗಳನ್ನು ತೆರವು ಗೊಳಿಸಲು ಹರಸಾಹಸ ಪಡುತ್ತಿದ್ದಾರೆ. ಇದರಿಂದಾಗಿ ಕಳೆದ 24 ಗಂಟೆಗಳ ಕಾಲ ಸೋಮವಾರಪೇಟೆ ಕತ್ತಲೆಯಲ್ಲೇ ಮುಳುಗಬೇಕಾಯಿತು.
ಇಂದು ಬೆಳಗ್ಗಿನಿಂದ ಮಳೆಯ ಪ್ರಮಾಣ ಕೊಂಚ ತಗ್ಗಿದಂತೆ ಕಂಡು ಬಂದರೂ ಭಾರೀ ಗಾಳಿಯಿಂದಾಗಿ ಅಪಾಯಗಳು ಸಂಭವಿಸುತ್ತಲೇ ಇವೆ. ವಿದ್ಯುತ್ ಕಂಬಗಳು, ತಂತಿ, ಟ್ರಾನ್ಸ್ ಫಾರ್ಮರ್ಗಳನ್ನು ಸಮರ್ಪಕ ಗೊಳಿಸಲು ಲೈನ್ಮೆನ್ಗಳು ಹೆಣಗಾಡುತ್ತಿದ್ದಾರೆ.