ಮಡಿಕೇರಿ, ಜು. 15 : ವಿಪರೀತ ಗಾಳಿ - ಮಳೆಯ ನಡುವೆ ತಾ. 19ರಂದು ಗುರುವಾರ ರಾಜ್ಯ ಮುಖ್ಯಮಂತ್ರಿ ಹೆಚ್.ಡಿ. ಕುಮಾರಸ್ವಾಮಿ ಅವರು ಕೊಡಗು ಜಿಲ್ಲೆಗೆ ಭೇಟಿ ನೀಡಲಿರುವ ಹಿನ್ನೆಲೆ, ಇಂದು ಕರ್ನಾಟಕ ದಕ್ಷಿಣ ವಲಯ ಐಜಿಪಿ ಸೌಮೇಂದ್ರ ಮುಖರ್ಜಿ ಅವರು ಇಲ್ಲಿಗೆ ಆಗಮಿಸಿದ್ದರು.ತಲಕಾವೇರಿ - ಭಾಗಮಂಡಲ ಕ್ಷೇತ್ರಕ್ಕೆ ಮುಖ್ಯಮಂತ್ರಿ ಕುಮಾರಸ್ವಾಮಿ ಅವರು ತೆರಳಿ ಅಂದು ಪೂಜೆ ಸಲ್ಲಿಸಲಿದ್ದಾರೆ ಎಂಬ ಹಿನ್ನೆಲೆಯಲ್ಲಿ ಐಜಿಪಿ ಅಲ್ಲಿನ ಪರಿಸ್ಥಿತಿಯ ಅವಲೋಕನ ನಡೆಸಿದರು.ಸಂಗಮ ಕ್ಷೇತ್ರದೊಂದಿಗೆ ಒಂದು ವೇಳೆ ತಾ. 19ರಂದು ಮಡಿಕೇರಿ - ಭಾಗಮಂಡಲ ರಸ್ತೆ ಜಲಾವೃತ ಗೊಂಡಿದ್ದರೆ, ಅನುಸರಿಸಬೇಕಾಗ ಮುಂಜಾಗ್ರತಾ ಅವಶ್ಯಕತೆಗಳ ಕುರಿತಾಗಿ ಐಜಿಪಿ ಜಿಲ್ಲಾ ಪೊಲೀಸ್ ತಂಡ ಹಾಗೂ ಇತರ ಇಲಾಖೆಗಳೊಂದಿಗೆ ಸಮಾಲೋಚಿಸಿದ್ದಾರೆ.
ಅಲ್ಲದೆ, ಮಡಿಕೇರಿಯಿಂದ ಭಾಗಮಂಡಲಕ್ಕೆ ತೆರಳುವ ರಸ್ತೆ ಮಾರ್ಗದ ಸ್ಥಿತಿಗತಿ, ಅಲ್ಲಿನ ಜಲಾವೃತಗೊಂಡಿರುವ ಮಾರ್ಗದಿಂದ ಕ್ಷೇತ್ರ ದರ್ಶನಕ್ಕೆ ಅನುವು ಮಾಡಿಕೊಡುವದು ಅಗತ್ಯವೆನಿಸಿದರೆ ದೋಣಿ ಬಳಸಲು ನಿರ್ವಹಿಸಬೇಕಾದ ಮಾರ್ಗೋಪಾಯ, ಮುಂದುವರಿದು ತಲಕಾವೇರಿ ಕ್ಷೇತ್ರ ದರ್ಶನ ಕೈಗೊಂಡು ಹಿಂತಿರುಗಿ ಬಂದು ಭಾಗಮಂಡಲದಿಂದ ಮಡಿಕೇರಿಗೆ ಆಗಮಿಸಲು ಮುಖ್ಯಮಂತ್ರಿಗಳ ಪ್ರವಾಸ ಸಂದರ್ಭ ತೆಗೆದುಕೊಳ್ಳಬೇಕಾದ ಕ್ರಮಗಳ ಬಗ್ಗೆ ಚರ್ಚಿಸಲಾಯಿತು.
ಇಂದು ಭಾಗಮಂಡಲದಲ್ಲಿ ಈ ಸಂಬಂಧ ಸಾಕಷ್ಟು ಮುಂದಾಲೋಚನೆ ಯೊಂದಿಗೆ, ಸಮಾಲೋಚಿಸಿದ ಐಜಿಪಿ ಜಿಲ್ಲೆಯ ಪ್ರಬಾರ ಪೊಲೀಸ್ ಅಧೀಕ್ಷಕ ಧರ್ಮೇಂದ್ರ ಕುಮಾರ್ ಮೀನ, ಉಪ ಅಧೀಕ್ಷಕ ಕೆ.ಎಸ್. ಸುಂದರರಾಜ್, ವೃತ್ತ ನಿರೀಕ್ಷಕ ಪ್ರದೀಪ್ಕುಮಾರ್ ಹಾಗೂ ಭಾಗಮಂಡಲ ಠಾಣೆಯ ಪೊಲೀಸರೊಂದಿಗೆ ನಿರ್ದಿಷ್ಟ ಸೂಚನೆಗಳನ್ನು ನೀಡಿದರು.