ಮಡಿಕೇರಿ, ಜು. 15: ನಗರದ ರಾಜರಾಜೇಶ್ವರಿ ನಗರದಲ್ಲಿ ಆಶ್ರಯ ಯೋಜನೆಯಡಿ ಮನೆಗಳನ್ನು ನಿರ್ಮಿಸಿ ಫಲಾನುಭವಿಗಳಿಗೆ ನೀಡಿ ದಶಕವೇ ಕಳೆದಿದ್ದರೂ, ಮೂಲಭೂತ ಸೌಕರ್ಯವಿಲ್ಲದೆ ಸಮಸ್ಯೆಗಳನ್ನು ಎದುರಿಸಬೇಕಾಗಿದೆ ಎಂದು ಜೆಡಿಎಸ್ ಸಂಘಟನಾ ಕಾರ್ಯದರ್ಶಿ ಬಿ.ಎಂ. ಧರ್ಮಪ್ಪ ಆರೋಪಿಸಿದ್ದಾರೆ.
ಈ ಬಗ್ಗೆ ‘ಶಕ್ತಿ’ಯೊಂದಿಗೆ ಅಸಮಾಧಾನ ತೋಡಿಕೊಂಡಿರುವ ಅವರು, ವಿಪರೀತ ಗಾಳಿ-ಮಳೆಯಿಂದಾಗಿ ಇಲ್ಲಿನ ನಿವಾಸಿಗಳು ರಸ್ತೆ, ಕುಡಿಯುವ ನೀರು, ವಿದ್ಯುತ್ ಸಮಸ್ಯೆ ಎದುರಿಸುವಂತಾಗಿದೆ ಎಂದು ವಿವರಿಸಿದ್ದಾರೆ.
ನಗರಸಭೆಯಿಂದ ಸಾಲು ಸಾಲು ಮನೆಗಳನ್ನು ನಿರ್ಮಿಸಿದ್ದು, ಹೆಚ್ಚಿನವರು ದುಡಿಯುವ ವರ್ಗ ವಾಸ ಮಾಡುವದರೊಂದಿಗೆ ತಮ್ಮ ತಮ್ಮ ವಾಹನಗಳ ನಿಲುಗಡೆಗೂ ಸಮಸ್ಯೆಯಾಗಿದೆ ಎಂದು ಬೊಟ್ಟು ಮಾಡಿದರು. ಅಲ್ಲದೆ ಈ ಭಾಗದಲ್ಲಿ ಒಂದು ಅಂಗನವಾಡಿ ಕಟ್ಟಡವಿದ್ದು, ಅನಾವಶ್ಯಕ ಮತ್ತೊಂದು ಕಟ್ಟಡ ನಿರ್ಮಿಸಿ ಹಣ ವ್ಯಯ ಮಾಡಲಾಗಿದೆ ಎಂದು ಟೀಕಿಸಿದರು.