ಶನಿವಾರಸಂತೆ, ಜು. 15: ಇಂದು ಆಧುನಿಕತೆಯ ಭರಾಟೆಯಲ್ಲಿ ಪ್ಲಾಸ್ಟಿಕ್ ಬಳಕೆ ಹೆಚ್ಚಾಗಿದ್ದು, ಪರಿಸರದ ಮೇಲೆ ದುಷ್ಪರಿಣಾಮ ಬೀರುತ್ತಿದೆ ಎಂದು ಸ್ವಚ್ಛ ಭಾರತ್ ಮಿಷನ್ ಜಿಲ್ಲಾ ಸಂಯೋಜಕ ಪೆಮ್ಮಯ್ಯ ಅಭಿಪ್ರಾಯಪಟ್ಟರು.

ಪಟ್ಟಣದ ತ್ಯಾಗರಾಜ ಕಾಲೋನಿಯ ಸಮುದಾಯ ಭವನದಲ್ಲಿ ಗ್ರಾಮ ಪಂಚಾಯಿತಿ ವತಿಯಿಂದ ನಡೆದ ಪ್ಲಾಸ್ಟಿಕ್ ನಿಷೇಧ ಕುರಿತು ವರ್ತಕರಿಗೆ ಅರಿವು ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು. ಹಿಂದೆ ಬಟ್ಟೆ ಕೈಚೀಲಗಳ ಬಳಕೆಯಾಗುತ್ತಿದ್ದು, ಪರಿಸರ ಸ್ವಚ್ಛವಾಗಿರುತ್ತಿತ್ತು. ಇಂದಿನ ಪ್ಲಾಸ್ಟಿಕ್‍ನ ಅತಿಯಾದ ಬಳಕೆ ಕ್ಯಾನ್ಸರ್ ಇತ್ಯಾದಿ ಕಾಯಿಲೆಗಳಿಗೆ ಆಹ್ವಾನ ನೀಡುತ್ತಿದೆ. ಪ್ಲಾಸ್ಟಿಕ್ ತ್ಯಾಜ್ಯಕ್ಕೆ ಬೆಂಕಿ ಹಚ್ಚುವದರಿಂದ ಅದರ ಹೊಗೆ ಕ್ಯಾನ್ಸರ್‍ಗೆ ಕಾರಣವಾಗುತ್ತಿದೆ.

ಪ್ಲಾಸ್ಟಿಕ್ ತಟ್ಟೆ-ಲೋಟಗಳಲ್ಲಿ ಬಿಸಿ ಪದಾರ್ಥಗಳ ಸೇವೆ ನಿಷಿದ್ಧ, ಆಯುಸ್ಸು, ಆರೋಗ್ಯ ದೃಷ್ಠಿಯಿಂದ ಬಳಕೆಯನ್ನು ಸ್ಥಗಿತಗೊಳಿಸಬೇಕು ಎಂದರು. ವರ್ತಕರು ಪ್ಲಾಸ್ಟಿಕ್ ನಿಷೇಧದ ಬಗ್ಗೆ ಚಿಂತನೆ ನಡೆಸಬೇಕು. ಬಳಕೆ ಮಾಡುವ ವರ್ತಕರಿಗೆ ಮೊದಲಿಗೆ ದಂಡ ನಂತರ ಕಾನೂನು ಕ್ರಮ ಕೈಗೊಳ್ಳಲಾಗುವದು ಎಂದು ಪೆಮ್ಮಯ್ಯ ಎಚ್ಚರಿಸಿದರು.

ಜಿಲ್ಲಾ ಪಂಚಾಯಿತಿ ಸದಸ್ಯೆ ಸರೋಜಮ್ಮ ಮಾತನಾಡಿ, ಕಾರ್ಯಕ್ರಮ ಯಶಸ್ವಿಯಾಗ ಬೇಕಾದರೆ ಪ್ಲಾಸ್ಟಿಕ್ ಮೂಲವನ್ನೇ ತಡೆಗಟ್ಟಬೇಕು. ಹಾಲು ಇತ್ಯಾದಿ ನಿತ್ಯ ಬಳಕೆಯ ವಸ್ತುಗಳು ಪ್ಲಾಸ್ಟಿಕ್ ಕವರ್‍ನಲ್ಲೇ ಬರುತ್ತಿದ್ದು, ಉತ್ಪಾದನಾ ಘಟಕದಲ್ಲೇ ಹಾಗೂ ಸರ್ಕಾರದ ಮಟ್ಟದಲ್ಲೇ ಮೊದಲಿಗೆ ನಿಷೇಧ ಕಾರ್ಯ ನಡೆಯಬೇಕು ಎಂದರು.

ಪಂಚಾಯಿತಿ ಸದಸ್ಯರು ಹಾಗೂ ವರ್ತಕರ ಕುರಿತು ಅವರು ಜಿಲ್ಲಾ ಸಂಚಾಲಕರೊಂದಿಗೆ ಆಕ್ಷೇಪ ವ್ಯಕ್ತಪಡಿಸಿದರು. ದುಂಡಳ್ಳಿ ಗ್ರಾಮ ಪಂಚಾಯಿತಿ ಅಧ್ಯಕ್ಷ ಸಿ.ಜೆ. ಗಿರೀಶ್ ಮಾತನಾಡಿದರು. ವರ್ತಕರಾದ ರವಿಕುಮಾರ್ ಪ್ರತಾಪ್, ಮೋಹನ್, ನವೀನ್, ಅಶ್ರಫ್, ದಿವಾಕರ್, ಚಂದ್ರಶೇಖರ್ ಚರ್ಚೆಯಲ್ಲಿ ಪಾಲ್ಗೊಂಡು ಮಾತನಾಡಿದರು.

ಕಾರ್ಯಕ್ರಮದಲ್ಲಿ ರೋಟರಿ ಕ್ಲಬ್ ವತಿಯಿಂದ ‘ಪರಿಸರ ಸಂರಕ್ಷಣೆ ಎಲ್ಲರ ಹೊಣೆಗಾರಿಕೆ. ಪ್ಲಾಸ್ಟಿಕ್ ತ್ಯಜಿಸಲು 9 ಕಾರಣಗಳಿದ್ದು ಅನುಸರಿಸಬೇಕು’ ಎಂಬ ಘೋಷಣಾ ಫಲಕವನ್ನು ಬಿಡುಗಡೆ ಗೊಳಿಸಲಾಯಿತು.

ಅಧ್ಯಕ್ಷತೆ ವಹಿಸಿದ್ದ ಪಂಚಾಯಿತಿ ಅಧ್ಯಕ್ಷ ಮಹಮ್ಮದ್ ಗೌಸ್ ಮಾತನಾಡಿ, ಇದು ಸರ್ಕಾರದ ಕಾರ್ಯಕ್ರಮವಾಗಿದ್ದು, ಅಧಿಕಾರಿಗಳು ಆದೇಶ ಪಾಲಿಸಿದ್ದಾರೆ. ಸ್ವಚ್ಛ ಭಾರತ್ ಮಿಷನ್ ಕನಸು ನನಸಾಗಲಿ. ಪ್ರಚಾರ, ಎಚ್ಚರಿಕೆ, ದಂಡ ವಿಧಿಸಿದರೂ ಪ್ಲಾಸ್ಟಿಕ್ ನಿಷೇಧ ಕಾರ್ಯಕ್ರಮ ಯಶಸ್ವಿಯಾಗಲಿಲ್ಲ. ವರ್ತಕರೊಂದಿಗೆ ಗ್ರಾಹಕರು ಹಾಗೂ ಸಾರ್ವಜನಿಕರೂ ಸಹಕಾರ ನೀಡಬೇಕು ಎಂದರು.

ರೋಟರಿ ಕ್ಲಬ್ ಅಧ್ಯಕ್ಷ ವಸಂತ್ ಕುಮಾರ್, ಪದಾಧಿಕಾರಿಗಳಾದ ವಿ.ಡಿ. ಮೋಹನ್ ಕುಮಾರ್, ಟಿ.ಆರ್. ಪರುಷೋತ್ತಮ್, ಪಂಚಾಯಿತಿ ಸದಸ್ಯರಾದ ಉಷಾ, ಹೇಮಾವತಿ, ಹರೀಶ್, ಪಿಡಿಓಗಳಾದ ಧನಂಜಯ್, ವೇಣುಗೋಪಾಲ್, ಕಾರ್ಯದರ್ಶಿ ತಮ್ಮಯ್ಯಾಚಾರ್ ಹಾಗೂ ಸಿಬ್ಬಂದಿ ಉಪಸ್ಥಿತರಿದ್ದರು.