ಸಿದ್ದಾಪುರ, ಜು. 16: ಸಿದ್ದಾಪುರ ಸಮೀಪದ ಗುಹ್ಯ ಗ್ರಾಮದಲ್ಲಿ ಹಾಗೂ ಕಕ್ಕಟ್ಟುಕಾಡು, ಪಲ್ಲಕೆರೆ ಭಾಗದಲ್ಲಿ ಬೀಡುಬಿಟ್ಟಿದ್ದ ಕಾಡಾನೆಗಳ ಹಿಂಡನ್ನು ಅರಣ್ಯ ಇಲಾಖಾಧಿಕಾರಿಗಳು ಹಾಗೂ ಸಿಬ್ಬಂದಿ ಸೇರಿ ಕಾಡಿಗೆ ಅಟ್ಟಿದರು. ಸಿದ್ದಾಪುರದ ಗುಹ್ಯ ಗ್ರಾಮದ ಕಾಫಿ ತೋಟಗಳಲ್ಲಿ, ಇತ್ತೀಚೆಗೆ ಕಾಡಾನೆಗಳ ಹಿಂಡು ಬೀಡುಬಿಟ್ಟಿದ್ದು, ಶಾಲಾ ಆವರಣದಲ್ಲಿ ಕಾಣಿಸಿಕೊಂಡು ಆತಂಕ ಸೃಷ್ಟಿಸಿತ್ತು. ಇದಲ್ಲದೆ ಗುಹ್ಯ ಗ್ರಾಮದ ಕಾಫಿ ತೋಟಗಳಲ್ಲಿ ದಾಂಧಲೆ ನಡೆಸುತ್ತಿತ್ತು.

ಈ ಹಿನ್ನೆಲೆಯಲ್ಲಿ ಸೋಮವಾರದಂದು ವೀರಾಜಪೇಟೆಯ ಡಿ.ಸಿ.ಎಫ್. ಮರಿಯ ಕ್ರಿಸ್ತರಾಜ್ ಅವರ ಮಾರ್ಗದರ್ಶನದಲ್ಲಿ ಎ.ಸಿ.ಎಫ್. ರೋಹಿಣಿ, ಆರ್.ಎಫ್.ಓ. ಗೋಪಾಲ್, ಉಪವಲಯ ಅರಣ್ಯಾಧಿಕಾರಿ ದೇವಯ್ಯ ನೇತೃತ್ವದಲ್ಲಿ 12 ಮಂದಿ ಸಿಬ್ಬಂದಿ ಹಾಗೂ ಆರ್‍ಆರ್‍ಟಿ ತಂಡದ ಸಿಬ್ಬಂದಿಗಳು ಸೇರಿ ಗುಹ್ಯ, ಕಕ್ಕಟ್ಟು ಕಾಡುವಿನಲ್ಲಿ ಕಾರ್ಯಾಚರಣೆ ನಡೆಸಿ ಪಟಾಕಿ ಸಿಡಿಸಿ ಕಾಡಿಗೆ ಅಟ್ಟಿದರು. ಸುರಿಯುವ ಮಳೆಯನ್ನು ಲೆಕ್ಕಿಸದ ಸಿಬ್ಬಂದಿಗಳು ಶ್ರಮಪಟ್ಟು ಆನೆಗಳನ್ನು ಓಡಿಸಿದರು. ಈ ಸಂದರ್ಭ 12 ಕಾಡಾನೆಗಳು ಕಂಡು ಬಂದಿದ್ದು, ಈ ಪೈಕಿ 2 ಒಂಟಿ ಸಲಗ, 2 ಮರಿಯಾನೆಗಳಿದ್ದವು ಎಂದು ತಿಳಿದು ಬಂದಿದೆ. ಕಾಡಾನೆಗಳನ್ನು ಕಾಡಿಗೆ ಅಟ್ಟುವಾಗ ಒಂದು ಕಾಡಾನೆಯು ತೋಟದಿಂದ ತೆರಳದೆ ಹಿಂತಿರುಗಿ ಬರುತ್ತಿತ್ತು ಎನ್ನಲಾಗಿದೆ. ಕೊಂಡಂಗೇರಿಯ ಗ್ರಾಮ ಪಂಚಾಯಿತಿ ಸದಸ್ಯ ಲೋಕೇಶ್ ಅವರು ಅರಣ್ಯ ಇಲಾಖಾಧಿಕಾರಿಗಳಿಗೆ ದೂರು ನೀಡಿದ ಮೇರೆಗೆ ಅರಣ್ಯ ಇಲಾಖಾಧಿಕಾರಿಗಳು, ಸಿಬ್ಬಂದಿಗಳು ಕಾರ್ಯಾಚರಣೆ ನಡೆಸಿದಾಗ 10ಕ್ಕೂ ಅಧಿಕ ಕಾಡಾನೆಗಳು ಕಂಡುಬಂದಿವೆ. ಆಹಾರ ಅರಸಿಕೊಂಡು ತೋಟದೊಳಗೆ ಕಾಡಾನೆಗಳು ಬರುತ್ತಿದ್ದು, ಕಾರ್ಮಿಕರು ಕೆಲಸಕ್ಕೆ ತೆರಳಲು ಭಯಭೀತರಾಗಿದ್ದಾರೆ.

-ವಾಸು