ಸಿದ್ದಾಪುರ, ಜು. 16: ಮನುಷ್ಯ ಮಾನವೀಯತೆಯನ್ನು ಮೈಗೂಡಿಸಿಕೊಂಡು ಕಷ್ಟದಲ್ಲಿ ಇರುವವರಿಗೆ ಅಭಯ ಹಸ್ತ ಚಾಚುವಂತಾಗಬೇಕು ಎಂದು ವೀರಾಜಪೇಟೆ ಸಂತ ಅಂತೋಣಿ ದೇವಾಲಯದ ಧರ್ಮ ಗುರು ಫಾ. ಮಧುಲೈ ಮುತ್ತು ಕರೆ ನೀಡಿದರು. ಅಮ್ಮತ್ತಿ ಕ್ರಿಶ್ಚಿಯನ್ ವೆಲ್ಫೇರ್ ಅಸೋಸಿಯೇಷನ್ ವತಿಯಿಂದ ಹಮ್ಮಿಕೊಂಡಿದ್ದ ಸ್ಪಂದನ 2018 ಕಾರ್ಯಕ್ರಮ ಉದ್ಘಾಟಿಸಿ ಅವರು ಮಾತನಾಡಿದರು.

ಮಾನವೀಯತೆ ದೃಷ್ಟಿಯಿಂದ ಅಪಘಾತವೊಂದರಲ್ಲಿ ಕಾಲು ಕಳೆದುಕೊಂಡಿದ್ದ ಗ್ರಾಮದ ಇಬ್ಬರು ಬಡ ವರ್ಗದ ವ್ಯಕ್ತಿಗಳಿಗೆ ಕೃತಕ ಕಾಲು ನೀಡಿ ಅವರ ಬದುಕಿಗೆ ಸ್ಪಂದಿಸಿದ ಸಂಘಟನೆಯ ಕಾರ್ಯಕ್ಕೆ ಶ್ಲಾಘನೆ ವ್ಯಕ್ತಪಡಿಸಿದರು.

ಮುಖ್ಯ ಅತಿಥಿಯಾಗಿ ಪಾಲ್ಗೊಂಡು ಮಾತನಾಡಿದ ಅರಮೇರಿ ಕಳಂಚೇರಿ ಮಠದ ಶ್ರೀ ಶಾಂತ ಮಲ್ಲಿಕಾರ್ಜುನ ಸ್ವಾಮೀಜಿ, ಸಮಾಜದ ಪರಿವರ್ತನೆ ಮಾಡಲು ಯುವ ಶಕ್ತಿಯಿಂದ ಸಾಧÀ್ಯ. ಬಾಹ್ಯ ಶ್ರೀಮಂತಿಕೆಗಿಂತ ಹೃದಯ ಶ್ರೀಮಂತಿಕೆ ಶಾಶ್ವತವಾಗಿರುತ್ತದೆ ಎಂದರು. ಕ್ರ್ರಿಶ್ಚಿಯನ್ ವೆಲ್ಫೇರ್ ಅಸೋಸಿಯೇಷನ್ ಅಧ್ಯಕ್ಷ ಅಂತೋಣಿ ಮಾತನಾಡಿ, ತಮ್ಮ ಸಂಘದಲ್ಲಿ 21 ಮಂದಿ ಸದಸ್ಯರಿದ್ದು, ಸಂಘಟನೆಯು ಸಮಾಜ ಸೇವೆಯಲ್ಲಿ ತೊಡಗಿಸಿಕೊಂಡಿದೆ. ಸಂಘದ ಸದಸ್ಯರು ರಕ್ತ ದಾನ ಮಾಡುವ ಮೂಲಕ ಬಡವರು ಮತ್ತು ಸಂಕಷ್ಟದಲ್ಲಿ ಇರುವ ವ್ಯಕ್ತಿಗಳ ಸಮಸ್ಯೆಗಳಿಗೆ ಸ್ಪಂದಿಸುತ್ತಿದ್ದಾರೆ. ಇದೀಗ ರೂ. 2.50 ಲಕ್ಷ ವೆಚ್ಚದಲ್ಲಿ ಅಪಘಾತದಲ್ಲಿ ಕಾಲು ಕಳೆದು ಕೊಂಡ ಅಮ್ಮತ್ತಿ ಗ್ರಾಮಸ್ಥರಾದ ಜೋಸೆಫ್ ಹಾಗೂ ಅಶ್ರಫ್ ಎಂಬವರಿಗೆ ಕೃತಕ ಕಾಲು ಒದಗಿಸಿದ್ದೇವೆ ಎಂದರು. ವೀರಾಜಪೇಟೆ ವೃತ್ತ ನಿರೀಕ್ಷಕ ಕುಮಾರ್ ಆರಾಧ್ಯ, ವೀರಾಜಪೇಟೆ ಗ್ರಾಮಾಂತರ ಠಾಣಾಧಿಕಾರಿ ಸುರೇಶ್ ಬೋಪಣ್ಣ ಅವರು ರಸ್ತೆ ಸುರಕ್ಷತೆಯ ಬಗ್ಗೆ ಮಾಹಿತಿ ನೀಡಿದರು. ಕಾರ್ಯಕ್ರಮದಲ್ಲಿ ಅಮ್ಮತ್ತಿ ಮಸೀದಿಯ ಖತೀಬ್ ರಫೀಕ್ ಮಿಸ್ಬಾಹಿ, ಪ್ರಾಂಶುಪಾಲ ಫಾ. ಐಸಕ್, ಅಮ್ಮತ್ತಿ ಕಾರ್ಮಾಡು ಗ್ರಾಪಂ ಅಧ್ಯಕ್ಷೆ ರೋನಾ ಭೀಮಯ್ಯ, ಸದಸ್ಯರುಗಳಾದ ಮುಕ್ಕಾಟ್ಟಿರ ಸಂತೋಷ್, ಹಂಸ, ಗ್ರಾಮಸ್ಥರಾದ ಜೋಣಿ ರೊಸಾರಿಯೋ, ಆಂಟನಿ ಮತ್ತು ಇತರರು ಹಾಜರಿದ್ದರು. ಕೃತಕ ಕಾಲು ಪಡೆದು ಕೊಂಡ ಜೋಸೆಫ್ ಹಾಗೂ ಅಶ್ರಫ್ ಕೃತಕ ಕಾಲು ಧರಿಸಿ ಸಂಘಟನೆಗೆ ಅಭಿನಂದನೆ ಸಲ್ಲಿಸಿದರು. ಕಾರ್ಯದರ್ಶಿ ಜೋಣಿ ಸ್ವಾಗತಿಸಿ ವಂದಿಸಿದರು.