ಮಡಿಕೇರಿ, ಜು. 16: ಭಾಗಮಂಡಲದ ಕಾವೇರಿ ಪ.ಪೂ. ಕಾಲೇಜನ್ನು ಆದಿಚುಂಚನಗಿರಿ ಮಹಾ ಸಂಸ್ಥಾನದ ಸುಪರ್ದಿಗೆ ವಹಿಸುವ ವಿಚಾರಕ್ಕೆ ಸಂಬಂಧಿಸಿದಂತೆ ಉಂಟಾದ ಅಸಮಾಧಾನ ಭುಗಿಲೆದ್ದು, ಈರ್ವರು ವಕೀಲನೋರ್ವನ ಮೇಲೆ ಹಲ್ಲೆ ನಡೆಸಿದ್ದು, ಘಟನೆಯನ್ನು ಖಂಡಿಸಿ ಆರೋಪಿಗಳನ್ನು ಬಂಧಿಸುವಂತೆ ಆಗ್ರಹಿಸಿ ವಕೀಲರು ಕಲಾಪ ಬಹಿಷ್ಕಾರ ಮಾಡಿದ್ದಾರೆ.

ಕಾವೇರಿ ಪ.ಪೂ. ಕಾಲೇಜು ಮುಚ್ಚುವ ಹಂತದಲ್ಲಿದ್ದು, ಇದನ್ನು ಉಳಿಸಿಕೊಳ್ಳುವ ಸಲುವಾಗಿ ಆದಿಚುಂಚನಗಿರಿ ಮಹಾ ಸಂಸ್ಥಾನದ ಸುಪರ್ದಿಗೆ ವಹಿಸುವಂತೆ ಇತ್ತೀಚೆಗೆ ನಡೆದ ಮಹಾಸಭೆಯಲ್ಲಿ ತೀರ್ಮಾನ ಕೈಗೊಳ್ಳಲಾಗಿತ್ತು. ಒಟ್ಟು 16 ಎಕರೆ ಜಾಗವಿದ್ದು, ಎಲ್ಲ ಜಾಗವನ್ನು ವಹಿಸುವ ಬದಲಿಗೆ ಹಳೆ ವಿದ್ಯಾರ್ಥಿ ಸಂಘ ರಚನೆ ಮಾಡಿ 2 ಎಕರೆ ಜಾಗವನ್ನು ಉಳಿಸಿಕೊಂಡು ಹಿಂದಿನ ಅಸ್ತಿತ್ವ ಉಳಿಸಿಕೊಳ್ಳುವ ಬಗ್ಗೆ ಸಂಕಷ್ಟದಲ್ಲಿರುವವರಿಗೆ ಸ್ಪಂದಿಸುವ ವಿಚಾರವನ್ನು ಕೆಲವರು ಪ್ರಸ್ತಾಪಿಸಿದ್ದರು. ಅದರಂತೆ ಕೆಲವರು ಸೇರಿಕೊಂಡು ವ್ಯಾಟ್ಸಪ್ ಗ್ರೂಪ್ ರಚನೆ ಮಾಡಿ ಚರ್ಚೆಯಲ್ಲಿ ತೊಡಗಿದ್ದರು. ಇವರಲ್ಲಿ ವಕೀಲ ಭಾನುಪ್ರಕಾಶ್ ಕೂಡ ಇದ್ದಾರೆ. ಚರ್ಚೆ ವೇಳೆ ಕಾಲೇಜು ಹಸ್ತಾಂತರಿಸುವ ಪ್ರಕ್ರಿಯೆಗೆ ಮುಂದಾಗಿ ಮಾತುಕತೆ ನಡೆಸಿದ ಕೆಲವರು ಅಸಮಾಧಾನಿತರಾಗಿದ್ದರು.

ವಿದ್ಯಾರ್ಥಿ ಸಂಘಕ್ಕೆ ವಿರೋಧ ವ್ಯಕ್ತಪಡಿಸಿದರು

ಇದೇ ವಿಚಾರವಾಗಿ ಅಸಮಾಧಾನ ಭುಗಿಲೆದ್ದು, ನಿನ್ನೆ ಭಾನುಪ್ರಕಾಶ್ ಪತ್ನಿಯೊಂದಿಗೆ ಮಾರುಕಟ್ಟೆ ಬಳಿ ಮಾಂಸ ತರಲೆಂದು ತೆರಳಿದ್ದ ಸಂದರ್ಭ ಕುಯ್ಯಮುಡಿ ರಂಜು ಹಾಗೂ ಲವ ಅವರುಗಳು ಅಡ್ಡಗಟ್ಟಿ ಹಲ್ಲೆ ಮಾಡಿದ್ದಾರೆ. ಈ ಸಂಬಂಧ ಭಾಗಮಂಡಲ ಠಾಣೆಯಲ್ಲಿ ದೂರು ನೀಡಿರುವದಾಗಿ ಭಾನುಪ್ರಕಾಶ್ ತಿಳಿಸಿದ್ದಾರೆ.

ಖಂಡನೆ : ಭಾನುಪ್ರಕಾಶ್ ಅವರ ಮೇಲೆ ಭಾಗಮಂಡಲದಲ್ಲಿ ಕ್ಷುಲ್ಲಕ ಕಾರಣಕ್ಕಾಗಿ ಕಿಡಿಗೇಡಿಗಳು ಮಾರಣಾಂತಿಕ ಹಲ್ಲೆ ಮಾಡಿದ್ದಾರೆ.

ಇಂದು ಮಡಿಕೇರಿ ವಕೀಲರ ಸಂಘ ತುರ್ತು ಸಭೆ ನಡೆಸಿ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿಗಳಿಗೆ ಕಿಡಿಗೇಡಿಗಳನ್ನು ಕೂಡಲೇ ಬಂಧಿಸಬೇಕೆಂದು ಪುಕಾರು ಅರ್ಜಿ ಸಲ್ಲಿಸಿದೆ. ಕೋರ್ಟ್ ಕಲಾಪÀಗಳಿಗೆ ಭಾಗವಹಿಸದೇ ಸಾಂಕೇತಿಕವಾಗಿ ಹಲ್ಲೆಗೊಳಗಾದ ಭಾನುಪ್ರಕಾಶ್‍ಗೆ ವಕೀಲರ ಸಂಘದಿಂದ ಒಗ್ಗಟ್ಟಿನ ಬೆಂಬಲವನ್ನು ಸೂಚಿಸಿದೆ. ಇದೇ ರೀತಿ ಕೊಡಗಿನಾದ್ಯಂತ ವೀರಾಜಪೇಟೆ, ಸೋಮವಾರಪೇಟೆ, ಪೊನ್ನಂಪೇಟೆ ಹಾಗೂ ಕುಶಾಲನಗರ ವಕೀಲರ ಸಂಘದವರು ಕಲಾಪಗಳಿಗೆ ಭಾಗವಹಿಸದೇ ಬೆಂಬಲ ಸೂಚಿಸಿದ್ದಾರೆ. ವಕೀಲರ ಸಂಘದ ಅಧ್ಯಕ್ಷ ಕೆ.ಎಸ್. ಕವನ್, ಕಾರ್ಯದರ್ಶಿ ಡಿ.ಜಿ. ಕಿಶೋರ್, ಉಪಾಧ್ಯಕ್ಷ ಪಿ.ಯು. ಪ್ರೀತಂ, ಖಜಾಂಚಿ ಬಿ.ಸಿ. ದೇವಿ ಪ್ರಸಾದ ಹಾಗೂ ಉಪ ಕಾರ್ಯದರ್ಶಿ ಗಳಾದ ಡಿ.ಎಂ. ಕೇಶವ ಹಾಗೂ ನಿರ್ದೇಶಕರುಗಳಾದ ಎಂ.ಸಿ. ಜ್ಯೋತಿ ಶಂಕರ್, ಎಂ.ಕೆ. ಅರುಣ್‍ಕುಮಾರ್, ಪಿ.ಆರ್. ಚಂದನ್, ಡಿ.ಕೆ. ರಾಜೇಶ್, ಎ.ಜಿ. ಮುದ್ದಯ್ಯ ಮತ್ತು ಪಿ.ಬಿ. ದಿವ್ಯ,ಜೆ. ಜೆನಿತಾ ಇಮ್ಯಾಕುಲೇಟ್ ಹಾಗೂ ವಕೀಲರ ಸಂಘದ ಸದಸ್ಯರು ಹಾಜರಿದ್ದರು.

ಕುಶಾಲನಗರ : ವಕೀಲರ ಮೇಲಿನ ಹಲ್ಲೆ ಪ್ರಕರಣ ಖಂಡಿಸಿ ಕುಶಾಲನಗರ ವಕೀಲರ ಸಂಘದ ಪದಾಧಿಕಾರಿಗಳು ನ್ಯಾಯಾಲಯ ಕಲಾಪವನ್ನು ಬಹಿಷ್ಕಾರ ಮಾಡಿದ್ದಾರೆ. ಭಾಗಮಂಡಲದ ವಕೀಲ ಭಾನುಪ್ರಕಾಶ್ ಎಂಬವರ ಮೇಲೆ ಹಲ್ಲೆ ನಡೆಸಿದ ಆರೋಪಿಗಳ ವಿರುದ್ಧ ಸೂಕ್ತ ಕಾನೂನು ಕ್ರಮಕೈಗೊಳ್ಳುವಂತೆ ಆಗ್ರಹಿಸಿ ವಕೀಲರ ಸಂಘದ ಪದಾಧಿಕಾರಿಗಳು ಕೋರ್ಟ್ ಕಲಾಪ ಬಹಿಷ್ಕರಿಸಿದರು. ಈ ಸಂದರ್ಭ ಸಂಘದ ಕಾರ್ಯದರ್ಶಿ ಕೆ.ಬಿ.ಮೋಹನ್, ನಿರ್ದೇಶಕರಾದ ಸಂತೋಷ್, ನಾಗೇಂದ್ರ, ಶಿವಮೂರ್ತಿ, ನಂದಕುಮಾರ್, ನವೀನ್, ರಾಘವೇಂದ್ರ, ತುಳಸಿ ಇದ್ದರು.