ಚೆಟ್ಟಳ್ಳಿ, ಜು. 16: ಸೋಮವಾರ ಸಂಜೆ ಚೆಟ್ಟಳ್ಳಿ ಮುಖ್ಯ ರಸ್ತೆಯ ಮಧ್ಯೆ ಇಬ್ಬರು ಹೊರ ರಾಜ್ಯದ ಕೂಲಿ ಕಾರ್ಮಿಕರು ಮಾತನಾಡುತ್ತಿದ್ದ ಸಂದರ್ಭ ಚೆಟ್ಟಳ್ಳಿ ಪೊಲೀಸ್ ಠಾಣೆಯ ಸಿಬ್ಬಂದಿ ಪ್ರಕಾಶ್ ಎಂಬವರು ಸಮವಸ್ತ್ರ ಧರಿಸದೆ ಬಂದು ಮದ್ಯ ಸೇವಿಸಿದ್ದಾರೆ ಎಂಬ ಊಹೆಯ ಮೇಲೆ ಕಾರ್ಮಿಕರ ಮೇಲೆ ಲಾಠಿ ಪ್ರಯೋಗ ನಡೆಸಿದ ಘಟನೆ ನಡೆದಿದೆ.

ವಾಲ್ನೂರು ತ್ಯಾಗತ್ತೂರು ಜಿಲ್ಲಾ ಪಂಚಾಯಿತಿ ಕ್ಷೇತ್ರದ ಸದಸ್ಯೆ ಸುನಿತಾ ಮಂಜುನಾಥ್ ಅವರು ಮಧ್ಯೆ ಪ್ರವೇಶಿಸಿ ಕಾರ್ಮಿಕರನ್ನು ಚಿಕಿತ್ಸೆಗಾಗಿ ಆಸ್ಪತ್ರೆಗೆ ದಾಖಲಿಸಿದರು. ಸುನಿತಾ ಮಂಜುನಾಥ್ ಅವರ ಮಾನವೀಯತೆಯನ್ನು ಚೆಟ್ಟಳ್ಳಿ ಗ್ರಾಮಸ್ಥರು ಶ್ಲಾಘಿಸಿದ್ದಾರೆ.

ವರಿಷ್ಠಾಧಿಕಾರಿಗಳಿಗೆ ದೂರು

ಪ್ರಕಾಶ್ ಎಂಬ ಚೆಟ್ಟಳ್ಳಿ ಠಾಣಾ ಪೊಲೀಸ್ ಸಿಬ್ಬಂದಿ ಸಮವಸ್ತ್ರ ಧರಿಸದೆ ಸಾರ್ವಜನಿಕರಿಗೆ ಕಿರುಕುಳ ನೀಡುತ್ತಿದ್ದಾರೆ ಎಂದು ಚೆಟ್ಟಳ್ಳಿ ಸುತ್ತಮುತ್ತಲಿನ ಸಾರ್ವಜನಿಕರು ದೂರಿದ್ದಾರೆ. ಗೂಂಡಾವರ್ತನೆ ತೋರುತ್ತಿದ್ದಾರೆ. ಮಧ್ಯ ಸೇವಿಸಿದ್ದಾರೆ ಎಂಬ ಸುಳ್ಳು ಕಾರಣ ಹೇಳಿ ಅಮಾಯಕ ಕೂಲಿ ಕಾರ್ಮಿಕರ ಮೇಲೆ ಹಲ್ಲೆ ನಡೆಸುತ್ತಿದ್ದಾರೆ. ಇವರನ್ನು ವರ್ಗಾಯಿಸಬೇಕಾಗಿ ಜಿಲ್ಲಾ ವರಿಷ್ಠಾಧಿಕಾರಿಗಳಿಗೆ ದೂರು ನೀಡುವದಾಗಿ ಸಾರ್ವಜನಿಕರು ತಿಳಿಸಿದ್ದಾರೆ.

-ಇಸ್ಮಾಯಿಲ್ ಕಂಡಕೆರೆ.