ಟಿ ಜನತೆ ಕಂಗಾಲು ಟಿ ನೆಲಕಚ್ಚಿದ ವೃಕ್ಷಗಳು * ಎಲ್ಲೆಡೆ ಜಲಾವೃತ ಮಡಿಕೇರಿ, ಜು. 16: ಪ್ರಸಕ್ತ ಮುಂಗಾರುವಿನ ಗಾಳಿ-ಮಳೆಯಿಂದ ಕೊಡಗಿನ ಜನತೆ ನರಕಯಾತನೆ ಅನುಭವಿಸುತ್ತಿದ್ದು, ಹೆಜ್ಜೆ ಹೆಜ್ಜೆಗೂ ಧರೆಗುರುಳಿರುವ ಬೃಹತ್ ಮರಗಳು, ಜಲಾವೃತಗೊಂಡಿರುವ ದೃಶ್ಯದಿಂದ ಕಂಗಾಲಾಗಿ ಹೋಗಿದ್ದಾರೆ. ಮಳೆಯ ತೀವ್ರತೆಗೆ ಸಾಕ್ಷಿಯೆಂಬಂತೆ ಇಲ್ಲಿನ ಓಂಕಾರೇಶ್ವರ ಕೆರೆ, ಕೋಟೆ ಆವರಣದಲ್ಲಿ ಹತ್ತಾರು ದಿನಗಳಿಂದ ಜಲಾವೃತಗೊಂಡಿರುವ ಚಿತ್ರಣ, ಅಬ್ಬಿ, ಮಲ್ಲಳ್ಳಿ, ಚೇಲಾವರ, ಇರ್ಪುವಿನಂತಹ ಇನ್ನು ಹತ್ತಾರು ಜಲಧಾರೆಗಳು ಗೋಚರಿಸತೊಡಗಿವೆ. ಇಂತಹ ಹೊಳೆ-ತೊರೆಗಳನ್ನು ಮೈದುಂಬಿ ಕೊಂಡು ಭೋರ್ಗರೆಯುತ್ತಾ ಕೃಷ್ಣರಾಜ ಸಾಗರದತ್ತ ಧುಮ್ಮಿಕ್ಕಿ ಹರಿಯುತ್ತಿರುವ ಹಾರಂಗಿ ಮತ್ತು ಕಾವೇರಿ, ಲಕ್ಷ್ಮಣತೀರ್ಥ ನದಿಗಳ ಪ್ರವಾಹವು ಜಿಲ್ಲೆಯಲ್ಲಿ ಕಂಡರಿಯದಂತೆ ಸುರಿಯುತ್ತಿರುವ ಮಳೆಗೆ ಸಾಕ್ಷಿಯಂತಿವೆ. ಒಟ್ಟಿನಲ್ಲಿ ಜೂನ್ ಮಧ್ಯ ಭಾಗದಲ್ಲಿಯೇ ಸಾಕಷ್ಟು ಅನಾಹುತ ಸೃಷ್ಟಿಸಿದ ಮೃಗಾಶಿರ ಮಳೆಯ ಬೆನ್ನಲ್ಲೇ, ಜುಲೈ ಮೊದಲವಾರದಿಂದ ಧಾರಾಕಾರ ಸುರಿಯುತ್ತಿರುವ ಪುನರ್ವಸು ಮಳೆಯೊಂದಿಗೆ ನಾಲ್ಕೈದು ದಿನಗಳಿಂದ ಬೀಸುತ್ತಿರುವ ಭೀಕರ ಗಾಳಿಯ ತೀವ್ರತೆ ಮಡಿಕೇರಿ ತಾಲೂಕು ಮತ್ತು ಪುಷ್ಟಗಿರಿ ತಪ್ಪಲಿನ ಗ್ರಾಮೀಣ ಜನತೆಯ ಕಂಗೆಡಿಸಿದೆ.ಮಡಿಕೇರಿ ನಗರ ಸಹಿತ ತಲಕಾವೇರಿ-ಭಾಗಮಂಡಲ, ಶಾಂತಳ್ಳಿ, ನಾಪೋಕ್ಲು, ಚೆಯ್ಯಂಡಾಣೆ, ಶ್ರೀಮಂಗಲ, ಹುದಿಕೇರಿ, ಬಿರುನಾಣಿ, ಕುಟ್ಟ ವ್ಯಾಪ್ತಿಯ ಜನತೆಯ ಬದುಕನ್ನು ಗಾಳಿ-ಮಳೆಯ

(ಮೊದಲ ಪುಟದಿಂದ) ತೀವ್ರತೆ ಹೈರಾಣಾಗಿಸಿಬಿಟ್ಟಿದೆ. ಜಿಲ್ಲೆಯ ಬಹುತೇಕ ರಸ್ತೆಗಳಲ್ಲಿ ಬೃಹತ್ ವೃಕ್ಷಗಳು ನೆಲಕಚ್ಚಿರುವ ಪರಿಣಾಮ, ಅಲ್ಲಲ್ಲಿ ಸಾಲುಗಟ್ಟಲೆ ವಿದ್ಯುತ್ ಕಂಬಗಳು ನೆಲಕಚ್ಚಿವೆ. ಗಾಳಿಬೀಡು, ಗರ್ವಾಲೆ, ಶಾಂತಳ್ಳಿ, ಬೆಟ್ಟದಳ್ಳಿ, ಕುಂಬೂರು, ಬಜೆಗುಂಡಿ, ಕಿರುಗಂದೂರು, ಬಿಳಿಗೇರಿ, ಮಕ್ಕಂದೂರು, ಕೆದಕಲ್ ಮುಂತಾದ ಗ್ರಾ.ಪಂ. ವ್ಯಾಪ್ತಿಯಲ್ಲಿ ಅನೇಕ ಮನೆಗಳು, ದನದ ಕೊಟ್ಟಿಗೆಗಳು ಸೇರಿದಂತೆ ಸಾರ್ವಜನಿಕ ಆಸ್ತಿಪಾಸ್ತಿ ನೆಲಕಚ್ಚಿರುವ ಮರಗಳು ಹಾಗೂ ಧರೆಗುರುಳಿರುವ ವಿದ್ಯುತ್ ಕಂಬಗಳಿಂದ ಹಾನಿಗೊಂಡಿವೆ.

ವಿದ್ಯುತ್ ಕಲ್ಪಿಸಲು ಹರ ಸಾಹಸ

ಸೋಮವಾರಪೇಟೆ: ಸೋಮವಾರಪೇಟೆ ವಿಭಾಗದಲ್ಲಿ ಭಾರೀ ಗಾಳಿಯೊಂದಿಗೆ ಮಳೆಯಾದ ಹಿನ್ನೆಲೆ ಅಲ್ಲಲ್ಲಿ ಹಾನಿ ಸಂಭವಿಸಿದೆ. ಹಲವಷ್ಟು ಕಡೆಗಳಲ್ಲಿ ಮರಗಳು ವಿದ್ಯುತ್ ತಂತಿಗಳ ಮೇಲೆ ಬಿದ್ದಿರುವದರಿಂದ ತೆರವು ಕಾರ್ಯಾಚರಣೆ ಸಮರೋಪಾದಿಯಲ್ಲಿ ನಡೆಯುತ್ತಿದೆ.

ಸೋಮವಾರಪೇಟೆ ಪಟ್ಟಣ ವ್ಯಾಪ್ತಿಗೆ ವಿದ್ಯುತ್ ಸಂಪರ್ಕ ಕಲ್ಪಿಸುವ ಪ್ರಮುಖ ಕುಶಾಲನಗರ-ಸೋಮವಾರಪೇಟೆ 33 ಕೆ.ವಿ. ಮಾರ್ಗದಲ್ಲಿ 15ಕ್ಕೂ ಅಧಿಕ ಮರಗಳು ಉರುಳಿದ್ದು, ಎರಡು ದಿನಗಳ ಕಾಲ ಪಟ್ಟಣ ಕತ್ತಲೆಯಲ್ಲಿ ಮುಳುಗಿತ್ತು.

ಶಾಂತಳ್ಳಿ, ತೋಳೂರುಶೆಟ್ಟಳ್ಳಿ, ಕೂತಿ, ಹರಗ, ಬೆಟ್ಟದಳ್ಳಿ ಭಾಗಕ್ಕೆ ಕಳೆದ 5 ದಿನಗಳಿಂದ ವಿದ್ಯುತ್ ಸ್ಥಗಿತಗೊಂಡಿದ್ದು, ಇಲಾಖೆಯ ಸಿಬ್ಬಂದಿಗಳು ವಿದ್ಯುತ್ ದುರಸ್ತಿಪಡಿಸಲು ಹರಸಾಹಸ ಪಡುತ್ತಿದ್ದಾರೆ.

ಮಡಿಕೇರಿ-ಸೋಮವಾರಪೇಟೆ ನಡುವೆ ಮತ್ತು ಮಡಿಕೇರಿ-ಕುಶಾಲನಗರ ಹಾಗೂ ಮಂಗಳೂರು ಮಾರ್ಗದ ಸಂಪಾಜೆ ಗಡಿ ತನಕ ಎಣಿಕೆಗೆ ನಿಲುಕದಷ್ಟು ಮರಗಳು, ವಿದ್ಯುತ್ ಕಂಬಗಳು, ಭೂಕುಸಿತದ ದೃಶ್ಯ ಗೋಚರಿಸಲಿದೆ. ಮೂರ್ನಾಡು-ಭಾಗಮಂಡಲ ಮಾರ್ಗಗಳಲ್ಲಿ ಕೂಡ ಇಂತಹ ಪರಿಸ್ಥಿತಿ ಎದುರಾಗಿದೆ.

ಪ್ರವಾಹ ಇಳಿಕೆ: ಭಾಗಮಂಡಲದಲ್ಲಿ ಇಂದು ಸ್ವಲ್ಪಮಟ್ಟಿಗೆ ಪ್ರವಾಹ ಇಳಿಮುಖ ಕಂಡಿದೆ. ಅಯ್ಯಂಗೇರಿ ಮಾರ್ಗ ಹಾಗೂ ಮಡಿಕೇರಿಯತ್ತ ವಾಹನ ಸಂಚಾರವಿದೆ. ಮೂರ್ನಾಡು-ನಾಪೋಕ್ಲುವಿನ ಬೊಳಿಬಾಣೆಯ ರಸ್ತೆ ಮುಳುಗಡೆ ನೀರು ಇಳಿಮುಖವಾಗಿದೆ. ದಕ್ಷಿಣ ಕೊಡಗಿನ ನಿಟ್ಟೂರು, ಬಾಳೆಲೆ ವ್ಯಾಪ್ತಿಯಲ್ಲಿ ಪ್ರವಾಹ ಕಡಿಮೆಯಾಗಿದ್ದು, ಲಕ್ಷ್ಮಣತೀರ್ಥ ಹೊಳೆಯಿಂದ ಮುಳುಗಡೆಯಾಗಿದ್ದ ಗದ್ದೆ ಬಯಲಿನಲ್ಲಿ ಸುಧಾರಣೆ ಕಂಡುಬಂದಿದೆ.

ಅಪಾರ ನಷ್ಟ: ಸಾರ್ವಜನಿಕ ಆಸ್ತಿಪಾಸ್ತಿ ಹಾನಿಗೊಂಡಿರುವ ಬಗ್ಗೆ ಮಾಹಿತಿ ಲಭಿಸಿರುವಂತೆ ಕಿಕ್ಕರಳ್ಳಿ ಗ್ರಾಮದ ಅಜ್ಜಮಕ್ಕಡ ಉತ್ತಯ್ಯ ಎಂಬವರ ಮನೆಗೆ ಹಾನಿಯಾಗಿದೆ.

ಶಿರಂಗಾಲ ಗ್ರಾಮದ ಹೆಚ್.ಪಿ. ಹರೀಶ್ ಎಂಬವರ ವಾಸದ ಮನೆಯ ಗೋಡೆ ಕುಸಿದು, ಹರೀಶ್ ಗಾಯಗೊಂಡು ಜಿಲ್ಲಾಸ್ಪತ್ರೆಗೆ ದಾಖಲಿಸಲಾಗಿದೆ. ಮುಳ್ಳೂರು ಗ್ರಾಮದ ಗಣಪತಿ ಅವರ ಮನೆಯ ಮೇಲೆ ಮರ ಬಿದ್ದ ಪರಿಣಾಮ ಮನೆಯೊಳಗಿದ್ದ ಮೀನಾಕ್ಷಿ ಎಂಬವರಿಗೆ ಗಂಭೀರ ಗಾಯಗಳಾಗಿದ್ದು, ಹೆಚ್ಚಿನ ಚಿಕಿತ್ಸೆಗಾಗಿ ಮೈಸೂರಿಗೆ ಸಾಗಿಸಲಾಗಿದೆ.

ಯಡೂರು ಗ್ರಾಮದಲ್ಲಿ ಬರೆ ಕುಸಿದ ಪರಿಣಾಮ ಡಿ.ಎಂ. ಪುಪ್ಪಯ್ಯ, ಸಿ.ಎಚ್. ಬಸವರಾಜು, ವೈ.ಎಂ. ನಾಗರಾಜು, ಸಿ.ಎಸ್. ವೆಂಕಟೇಶ್, ಡಿ.ಪಿ. ಸತೀಶ್, ವೈ.ಎಂ. ಈರಪ್ಪರವರಿಗೆ ಸೇರಿದ ಗದ್ದೆಗಳು ನೀರು ಪಾಲಾಗಿದೆ. ಇವರುಗಳ ಗದ್ದೆಯಲ್ಲಿ ಬೆಳೆದಿದ್ದ ಶುಂಠಿ, ಮೆಣಸು, ನಾಟಿ ಮಾಡಿದ ಗದ್ದೆ ಹಾಗೂ ನಾಟಿ ಸಸಿಮಡಿಗಳು ನೀರು ಪಾಲಾಗಿದ್ದು, ಅಪಾರ ಪ್ರಮಾಣದ ನಷ್ಟವಾಗಿದೆ. ಸ್ಥಳಕ್ಕೆ ಗ್ರಾಮ ಲೆಕ್ಕಿಗರಾದ ಹೇಮಾವತಿ ಹಾಗೂ ಸಿಬ್ಬಂದಿ ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ.

ಯಡೂರು ಗ್ರಾಮದ ಅನ್ನಪೂರ್ಣೇಶ್ವರಿ, ಯಡವಾರೆಯ ಮೊಣ್ಣಪ್ಪ, ತಣ್ಣೀರುಹಳ್ಳದ ಬೋಜ, ಬಿ.ಟಿ. ಕಟ್ಟೆಯ ಪುಟ್ಟರಾಜು, ತೋಳೂರು ಶೆಟ್ಟಳ್ಳಿಯ ಬಿ.ಎನ್. ಗೀತಾ, ಬಿಳಿಗೇರಿಯ ಸುಂದರಮ್ಮ ಅವರುಗಳ ಮನೆಗೆ ಹಾನಿಯಾಗಿದೆ.

ಚೇರಂಬಾಣೆ ವ್ಯಾಪ್ತಿಯ ದೋಣಿಕಡುವಿನಲ್ಲಿ ಜಲಪ್ರವಾಹದಿಂದ ಬದಲಿ ವ್ಯವಸ್ಥೆಯಿಲ್ಲದೆ ಅಲ್ಲಿನ ಗ್ರಾಮಸ್ಥರು ಪರಿತಪಿಸುತ್ತಿದ್ದಾರೆ. ಚೇಲಾವರ ಗ್ರಾಮದ ಪಿ.ಪಿ. ಗಣಪತಿ ಎಂಬವರ ಮನೆ ಮೇಲೆ ಮರ ಬಿದ್ದು, ನಷ್ಟ ಸಂಭವಿಸಿದೆ. ನಾಪೋಕ್ಲುವಿನ ಸಮುದಾಯ ಭವನ ಮಳೆಯಿಂದ ಮರ ಬಿದ್ದು ಹಾನಿ ಸಂಭವಿಸಿದೆ.

ಕತ್ತಲೆ ನಡುವೆ ಬದುಕು: ಮಡಿಕೇರಿ ನಗರದ ವಿದ್ಯಾನಗರ, ಚಾಮುಂಡೇಶ್ವರಿ ನಗರ, ವಿವಿಧ ಬಡಾವಣೆಗಳು ಸೇರಿದಂತೆ ಕೊಡಗಿನ ಬಹುತೇಕ ಪಟ್ಟಣಗಳಲ್ಲಿ ವಿದ್ಯುತ್ ಕಣ್ಣಾಮುಚ್ಚಾಲೆ ಆಡುವಂತಹ ಸ್ಥಿತಿ ಎದುರಾಗಿದೆ. ಗ್ರಾಮೀಣ ಪ್ರದೇಶಗಳಲ್ಲಿ ಅನೇಕ ದಿನಗಳಿಂದ ವಿದ್ಯುತ್ ಸಮಸ್ಯೆ ತಲೆದೋರಿದೆ. ಗಾಳಿ ಮಳೆಯ ನಡುವೆ ಪ್ರಾಣದ ಹಂಗು ತೊರೆದು ಚೆಸ್ಕಾಂ ಸಿಬ್ಬಂದಿ ಕಾರ್ಯನಿರ್ವಹಿಸುತ್ತಿದ್ದರೂ, ಗಾಳಿಯ ತೀವ್ರತೆಯಿಂದ ಪದೇ ಪದೇ ಅನಾಹುತಗಳನ್ನು ಎದುರಿಸುವಂತಾಗಿದೆ.

ಒಟ್ಟಿನಲ್ಲಿ ಕಳೆದ ಆರೆಂಟು ದಿನಗಳಿಂದ ಜನತೆ ನರಕಯಾತನೆಯ ಬದುಕು ಅನುಭವಿಸುತ್ತಿದ್ದರೆ, ಚೆಸ್ಕಾಂ ಸಿಬ್ಬಂದಿ ಪರಿಸ್ಥಿತಿ ಎದುರಿಸುವಲ್ಲಿ ಹೈರಾಣಾಗಿದ್ದಾರೆ. ಜಿಲ್ಲಾಡಳಿತ, ಪೊಲೀಸ್ ಇಲಾಖೆ ಸಾಕಷ್ಟು ಮುಂಜಾಗ್ರತಾ ಕ್ರಮಗಳನ್ನು ಕೈಗೊಂಡಿದ್ದರೂ, ಪ್ರಾಕೃತಿಕ ವಿಕೋಪವನ್ನು ಯಾರೂ ನಿರೀಕ್ಷಿಸಲು ಸಾಧ್ಯವಿಲ್ಲದ ಸನ್ನಿವೇಶ ಒಂದು ರೀತಿಯ ಸವಾಲಾಗಿ ಗೋಚರಿಸತೊಡಗಿದೆ.

ಪರಿಣಾಮ ಜನ ಜೀವನದೊಂದಿಗೆ ಜಾನುವಾರುಗಳ ಸಹಿತ ಜೀವ ಸಂಕುಲ ಚಳಿಗಾಳಿಯ ತೀವ್ರತೆ ಮತ್ತು ಎಡೆಬಿಡದೆ ಸುರಿದ ಮಳೆಯಿಂದ ಕಂಗೆಟ್ಟಿರುವದು ದಿಟವೆನಿಸತೊಡಗಿದೆ.

85 ಕಂಬಗಳು ಹಾನಿ

ಗೋಣಿಕೊಪ್ಪ ವರದಿ: ದಕ್ಷಿಣ ಕೊಡಗಿನಲ್ಲಿ 85 ವಿದ್ಯುತ್ ಕಂಬಗಳು ಮುರಿದು ಬಿದ್ದಿದ್ದು, ಶ್ರೀಮಂಗಲ ವ್ಯಾಪ್ತಿಯಲ್ಲಿ 3 ದಿನಗಳಿಂದ ವಿದ್ಯುತ್ ಕಡಿತಗೊಂಡು ಗ್ರಾಮಸ್ಥರಿಗೆ ತೊಂದರೆಯಾಗಿದೆ.

ಬಿರುನಾಣಿ, ಕುಟ್ಟ, ಶ್ರೀಮಂಗಲ ವ್ಯಾಪ್ತಿಯಲ್ಲಿ ಹೆಚ್ಚು ನಷ್ಟ ಸಂಭವಿಸಿದೆ. ಮೂರು ದಿನದಿಂದ ವಿದ್ಯುತ್ ಇಲ್ಲದೆ ಜನರು ಸಂಕಷ್ಟಕ್ಕೆ ಸಿಲುಕಿದ್ದಾರೆ. ದಾರಿಯಲ್ಲಿ ಮುರಿದು ಬಿದ್ದಿರುವ ಕಂಬಗಳು ಸಾಮಾನ್ಯವಾಗಿದೆ. ಗಾಳಿ ಹೆಚ್ಚಾಗಿರುವದರಿಂದ ಸಿಬ್ಬಂದಿ ಕೆಲಸ ನಿರ್ವಹಿಸಲು ಕೂಡ ಭಯದ ವಾತಾವರಣವಿದೆ. ಮರ, ಮರದ ರೆಂಬೆಗಳು ಮುರಿದು ಬೀಳುತ್ತಿರುವದು ಹೆಚ್ಚು ಆತಂಕಕ್ಕೆ ಕಾರಣವಾಗಿದೆ.

ಬಿರುನಾಣಿ, ಕೇಂಬುಕೊಲ್ಲಿ ಭಾಗದಲ್ಲಿ ಹೆಚ್ಚು ನಷ್ಟ ಸಂಭವಿಸಿದೆ. ಗೋಣಿಕೊಪ್ಪ, ಶ್ರೀಮಂಗಲ, ಬಾಳೆಲೆ ಉಪಕೇಂದ್ರ ವ್ಯಾಪ್ತಿಯಲ್ಲಿ 85 ಕಂಬಗಳು ಮುರಿದಿದ್ದು, 4 ಟ್ರಾನ್ಸ್‍ಫಾರ್ಮರ್ ಕೆಟ್ಟಿದೆ. ಮಾಯಮುಡಿಯಲ್ಲಿನ ಟ್ರಾನ್ಸ್‍ಫಾರ್ಮರ್ ಕೆಟ್ಟಿರುವದರಿಂದ ಮತ್ತೊಂದು ಟ್ರಾನ್ಸ್‍ಫಾರ್ಮರ್ ಮೂಲಕ ವಿದ್ಯುತ್ ಸರಬರಾಜು ಮಾಡುತ್ತಿದ್ದು, ಹೆಚ್ಚು ಬಳಕೆದಾರರು ಇರುವದರಿಂದ ತಡ ರಾತ್ರಿ ಮಾತ್ರ ವಿದ್ಯುತ್ ಲಭಿಸುವಂತಾಗಿದೆ.

ಮರದ ರೆಂಬೆಗಳು ಹೆಚ್ಚಾಗಿ ಮುರಿದು ಬಿದ್ದಿರುವದರಿಂದ ಲೈನ್‍ಮನ್‍ಗಳಿಗೆ ಹೆಚ್ಚು ಕೆಲಸವಾಗಿದೆ. ಸಮರ್ಪಕವಾಗಿ ವಿದ್ಯುತ್ ಕಲ್ಪಿಸಲು ಆಗುತ್ತಿಲ್ಲ.

ಮಳೆಯ ಪ್ರಮಾಣ ಕಡಿಮೆಯಾದಂತೆ ಕಂಬಗಳ ಬದಲಿ ವ್ಯವಸ್ಥೆ ಮಾಡಲಾಗುವದು ಎಂದು ಸೆಸ್ಕ್ ಎಇಇ ಅಂಕಯ್ಯ ತಿಳಿಸಿದ್ದಾರೆ.

ಪೊನ್ನಂಪೇಟೆ: ಪೊನ್ನಂಪೇಟೆ ಹೋಬಳಿ ಭದ್ರಗೊಳ ಗ್ರಾಮದ ನಿವಾಸಿ ಮೀನಾಕ್ಷಿ ಅವರ ವಾಸದ ಮನೆಯು ಮಳೆಗೆ ಮೇಲ್ಛಾವಣಿ ಭಾಗಶ: ಹಾನಿಯಾಗಿದ್ದು, ಅಂದಾಜು 8 ಸಾವಿರ ರೂಪಾಯಿ ನಷ್ಟವಾಗಿದೆ.

ಭದ್ರಗೊಳ ಗ್ರಾಮದ ಮುತ್ತ ಅವರ ವಾಸದ ಮನೆಯ ಮೇಲ್ಛಾವಣಿ ಭಾಗಶಃ ಹಾನಿಯಾಗಿದ್ದು, ಅಂದಾಜು 6 ಸಾವಿರ ರೂಪಾಯಿ ನಷ್ಟವಾಗಿದೆ. ಸ್ಥಳಕ್ಕೆ ಪೊನ್ನಂಪೇಟೆ ಉಪ ತಹಶೀಲ್ದಾರ್ ರಾಧಾಕೃಷ್ಣ ಭೇಟಿ ನೀಡಿ ಪರಿಶೀಲನೆ ನಡೆಸಿದರು.

ಹಾರಿಹೋದ ಛಾವಣಿ...

ಮಳೆ ಹಾಗೂ ಗಾಳಿಯ ತೀವ್ರತೆಗೆ ಮಡಿಕೇರಿಯಲ್ಲಿ ಕಟ್ಟಡವೊಂದರ ಮೇಲ್ಛಾವಣಿ ಹಾರಿ ಹೋಗಿ ಆತಂಕ ಸೃಷ್ಟಿಸಿದ ಘಟನೆ ಇಂದು ಎದುರಾಯಿತು. ರೇಸ್ ಕೋರ್ಸ್ ರಸ್ತೆಯ ನೂತನ ಖಾಸಗಿ ಬಸ್ ನಿಲ್ದಾಣ ಬದಿ ಇರುವ ತುಂತಜೆ ಸೋಮಯ್ಯ ಎಂಬವರಿಗೆ ಸೇರಿದ ಕಟ್ಟಡದ ಮೇಲೆ ನೀರು ಸೋರಿಕೆಯಾಗದಂತೆ ತಗಡಿನ ಶೀಟು ಹಾಕಲಾಗಿತ್ತು. ಇಂದು ಮಧ್ಯಾಹ್ನ ವೇಳೆ ಸುರಿದ ಮಳೆ-ಗಾಳಿಯ ರಭಸಕ್ಕೆ ಶೀಟ್ ಹಾಕಿದ ಕಂಬಗಳ ಸಹಿತ ಕಿತ್ತು ಬಂದು ಎದುರಿಗೆ ಹಾದು ಹೋಗಿದ್ದ ವಿದ್ಯುತ್ ತಂತಿಯ ಮೇಲೆ ಬಿದ್ದಿದೆ. ವಿದ್ಯುತ್ ತಂತಿ ತುಂಡಾಗಿ ಕೆಳಗೆ ಬಿದ್ದಿದ್ದರೆ ಭಾರೀ ಅನಾಹುತ ಸಂಭವಿಸುವ ಸಾಧ್ಯತೆಯಿತ್ತು. ನಂತರ ಸಂಚಾರಿ ಪೊಲೀಸರು ಎರಡೂ ಬದಿಯಿಂದಲೂ ರಸ್ತೆ ಬಂದ್ ಮಾಡಿ ಕ್ರೇನ್ ಸಹಾಯದಿಂದ ಶೀಟ್‍ಗಳನ್ನು ತೆರವುಗೊಳಿಸಲಾಯಿತು.

ಶಾಸಕ ರಂಜನ್ ಭೇಟಿ

ಸೋಮವಾರಪೇಟೆ: ಭಾರೀ ಮಳೆ ಗಾಳಿಗೆ ತತ್ತರಿಸಿರುವ ತಾಲೂಕಿನ ಹಲವೆಡೆಗಳಲ್ಲಿ ಅಪಾರ ಪ್ರಮಾಣದ ಆಸ್ತಿಪಾಸ್ತಿ ಹಾನಿ ಸಂಭವಿಸಿದ್ದು, ಮಳೆಹಾನಿ ಪೀಡಿತ ಪ್ರದೇಶಗಳಿಗೆ ಮಡಿಕೇರಿ ವಿಧಾನಸಭಾ ಕ್ಷೇತ್ರದ ಶಾಸಕ ಎಂ.ಪಿ. ಅಪ್ಪಚ್ಚು ರಂಜನ್ ಭೇಟಿ ನೀಡಿ ಪರಿಶೀಲಿಸಿದರು.

ತಾಲೂಕಿನಾದ್ಯಂತ ಮರಗಳು ಉರುಳಿಬಿದ್ದು ಹಲವಷ್ಟು ಮನೆಗಳಿಗೆ ಹಾನಿಯಾಗಿದ್ದು, ಬಡ ಮಂದಿ ಸಂಕಷ್ಟಕ್ಕೆ ಒಳಗಾಗಿದ್ದಾರೆ. ಸ್ಥಳ ಪರಿಶೀಲನೆ ನಡೆಸುವ ಗ್ರಾಮ ಲೆಕ್ಕಿಗರು ಮತ್ತು ಲೋಕೋಪಯೋಗಿ ಇಲಾಖಾ ಅಭಿಯಂತರರು ಸರ್ಕಾರಕ್ಕೆ ವಸ್ತುನಿಷ್ಠ ವರದಿ ನೀಡಬೇಕೆಂದು ಅಪ್ಪಚ್ಚು ರಂಜನ್ ಸೂಚಿಸಿದ್ದಾರೆ.

ಇಂದು ಬೆಳಿಗ್ಗೆ ಕುಂಬೂರು, ಐಗೂರು, ಕಾಜೂರು, ಹಾನಗಲ್ಲು ಬಾಣೆ, ಹಾನಗಲ್ಲು ಶೆಟ್ಟಳ್ಳಿ ಭಾಗದಲ್ಲಿ ಹಾನಿಯಾಗಿರುವ ಮನೆಗಳಿಗೆ ಭೇಟಿ ನೀಡಿ ಪರಿಶೀಲಿಸಿದರು. ಹಾನಗಲ್ಲು ಶೆಟ್ಟಳ್ಳಿ ಗ್ರಾಮದಲ್ಲಿ ಮನೆಯ ಛಾವಣಿ ಸಂಪೂರ್ಣ ಜಖಂಗೊಂಡಿರುವ ವನಜಾಕ್ಷಿ ಮನೆ ಪರಿಶೀಲಿಸಿದರು.

ಹಾನಗಲ್ಲು ಬಾಣೆಯಲ್ಲಿ ಅತೀ ಶೀತದಿಂದ ಕುಸಿಯುವ ಸ್ಥಿತಿಗೆ ತಲಪಿರುವ ರಮೇಶ್, ಮನುಕುಮಾರ್ ಮನೆಗೆ ಭೇಟಿ ನೀಡಿ ಪರಿಶೀಲಿಸಿದ ಶಾಸಕರು, ವಸತಿ ಯೋಜನೆಯಡಿ ನೂತನ ಮನೆ ಮಂಜೂರಾತಿ ಮಾಡಲು ಕ್ರಮ ಕೈಗೊಳ್ಳುವಂತೆ ಗ್ರಾ.ಪಂ. ಅಭಿವೃದ್ಧಿ ಅಧಿಕಾರಿಗೆ ನಿರ್ದೇಶನ ನೀಡಿದರು.

ಮಡಿಕೇರಿ ಕ್ಷೇತ್ರದಾದ್ಯಂತ ಭಾರೀ ಮಳೆಗೆ ಅಪಾರ ಪ್ರಮಾಣದ ಹಾನಿ ಸಂಭವಿಸಿದ್ದು, ಪರಿಹಾರ ಕಾರ್ಯಗಳನ್ನು ಕೈಗೊಳ್ಳಲಾಗುತ್ತಿದೆ. ಎಲ್ಲಾ ಸರ್ಕಾರಿ ಇಲಾಖೆಗಳ ತಾಲೂಕು ಮಟ್ಟದ ಅಧಿಕಾರಿಗಳು ಕೇಂದ್ರ ಸ್ಥಾನದಲ್ಲಿರುವಂತೆ ಸೂಚನೆ ನೀಡಲಾಗಿದೆ. ಲೋಕೋಪಯೋಗಿ ಇಲಾಖೆ ಹಾಗೂ ವಿದ್ಯುತ್ ಇಲಾಖೆಗೆ ಸಂಬಂಧಿಸಿದಂತೆ ಭಾರೀ ನಷ್ಟವಾಗಿದೆ. ಮಳೆಹಾನಿ ಪರಿಹಾರ ನಿಧಿ ಸೇರಿದಂತೆ ವಿಶೇಷ ಅನುದಾನ ಒದಗಿಸಲು ಸರ್ಕಾರ ಮುಂದಾಗಬೇಕಿದೆ ಎಂದು ರಂಜನ್ ಅಭಿಪ್ರಾಯಿಸಿದರು.

ಮಳೆಯಿಂದ ಹಾನಿಗೊಳಗಾದ ಮನೆ, ರಸ್ತೆಗಳನ್ನು ತುರ್ತು ಗಮನ ಹರಿಸಿ ದುರಸ್ತಿಪಡಿಸಬೇಕಾಗಿದೆ. ಈ ನಿಟ್ಟಿನಲ್ಲಿ ವಿಶೇಷ ಅನುದಾನಕ್ಕಾಗಿ ಸರ್ಕಾರದ ಗಮನ ಸೆಳೆಯಲಾಗುವದು ಎಂದು ಶಾಸಕರು ತಿಳಿಸಿದರು.

ಶಾಸಕ ಕೆ.ಜಿ. ಬೋಪಯ್ಯ ಭೇಟಿ

*ಗೋಣಿಕೊಪ್ಪಲು: ಮಳೆಯ ತೀವ್ರತೆಯಿಂದ ಮನೆಯ ಗೋಡೆಗಳು ಹಾಗೂ ಅಡಿಪಾಯಗಳು ಜಲದಿಂದ ಶಿಥಿಲಗೊಂಡು ಬೀಳುವ ಹಂತದಲ್ಲಿರುವ ಹುದಿಕೇರಿ ಗ್ರಾಮ ನಿವಾಸಿ ಬೊಳ್ಳಜೀರ ಬೋಪಯ್ಯ ಎಂಬವರ ಹಾನಿಗೊಳಗಾದ ಮನೆಯನ್ನು ಶಾಸಕ ಕೆ.ಜಿ. ಬೋಪಯ್ಯ ಪರಿಶೀಲಿಸಿ ಪರಿಹಾರ ಒದಗಿಸಿ ಕೊಡುವ ಭರವಸೆ ನೀಡಿದರು.

ಕಳೆದ ಎರಡು ತಿಂಗಳಿಂದ ಸುರಿಯುತ್ತಿರುವ ಮಳೆಗೆ ಮನೆಯ ಗೋಡೆಗಳು ಶೀತದಿಂದ ಬಿರುಕುಬಿಟ್ಟಿದೆ ವಾಸಿಸಲು ಸಾಧ್ಯವಾಗದ ಸ್ಥಿತಿ ಉಂಟಾಗಿದೆ. ತಾ.ಪಂ. ಮಾಜಿ ಉಪಾಧ್ಯಕ್ಷೆ ತಿತೀರಾ ಊರ್ಮಿಳಾ, ಶಾಸಕರಿಗೆ ಪರಿಹಾರ ಕಲ್ಪಿಸಿಕೊಡಬೇಕೆಂದು ಮನವಿ ಮಾಡಿದರು ಮನವಿಗೆ ಸ್ಪಂದಿಸಿ ಸ್ಥಳಕ್ಕೆ ಬೇಟಿ ನೀಡಿದ ಶಾಸಕರು ಕಂದಾಯ ಇಲಾಖೆ ಅಧಿಕಾರಿಗಳಿಗೆ ಪರಿಹಾರ ಒದಗಿಸಿಕೊಡಲು ಕ್ರಮಕೈಗೊಳ್ಳ್ಳುವಂತೆ ಸೂಚಿಸಿದರು.

ಈ ಸಂದರ್ಭ ತಾ.ಪಂ. ಉಪಾಧ್ಯಕ್ಷ ನೆಲ್ಲಿರ ಚಲನ್ ಕುಮಾರ್, ಬಿ.ಜೆ.ಪಿ. ಮಂಡಳ ಅಧ್ಯಕ್ಷ ಅರುಣ್ ಬೀಮಯ್ಯ,

ಐದನೇ ಪುಟದಿಂದ ಮುದ್ದಿಯಾಡ ಮಂಜು, ಶ್ಯಾಮ್, ಮಲ್ಲಂಡ ಮಧು ದೇವಯ್ಯ, ಹುದಿಕೇರಿ ಕಂದಾಯ ಪರಿವೀಕ್ಷಕ ನಿಶಾನ್, ಲೆಕ್ಕಾಧಿಕಾರಿ ಶರೀಫ್ ಹಾಜರಿದ್ದರು.

ವೀರಾಜಪೇಟೆ: ಮುಂದುವರೆದ ಮಳೆ

ವೀರಾಜಪೇಟೆ: ವೀರಾಜಪೇಟೆ ವಿಭಾಗಕ್ಕೆ ನಿನ್ನೆ ದಿನ ಬೆಳಗ್ಗಿನಿಂದ ಇಂದಿನ ಬೆಳಗ್ಗಿನ 8 ಗಂಟೆಯ ತನಕ 1.8 ಇಂಚು ಮಳೆ ಸುರಿದಿದೆ. ಬೆಳಿಗ್ಗೆ ಮಂದಗತಿಯಲ್ಲಿ ಮಳೆ ಸುರಿಯುತ್ತಿದ್ದರೂ ಸಂಜೆ ನಂತರ ಮಳೆ ಚುರುಕುಗೊಂಡಿತು.

ನಿನ್ನೆ ರಾತ್ರಿ ಸುರಿದ ಮಳೆಗೆ ಬಾಳೆಲೆ ಗ್ರಾಮದ ಉಮೇಶ್ ಎಂಬವರ ಮನೆ ಮೇಲೆ ಮರ ಬಿದ್ದು ಜಖಂಗೊಂಡಿರುವದಾಗಿ ತಾಲೂಕು ಕಚೇರಿಯ ಪರಿಹಾರ ವಿಭಾಗಕ್ಕೆ ದೂರು ಬಂದಿದೆ. ವೀರಾಜಪೇಟೆ ವಿಭಾಗದಲ್ಲಿ ಇಂದು ಬೆಳಗ್ಗಿನಿಂದ ಮೋಡ ಕವಿದ ವಾತಾವರಣವಿದ್ದು ಸಾಧಾರಣ ಮಳೆ ಸುರಿಯುತ್ತಿದೆ.

ಶ್ರೀಮಂಗಲ: ಮುಂದುವರೆದ ಗಾಳಿ-ಮಳೆ : ಶ್ರೀಮಂಗಲ: ದಕ್ಷಿಣ ಕೊಡಗಿನಾದ್ಯಂತ ಮುಂಗಾರುಮಳೆ ಅಬ್ಬರ ಮುಂದುವರೆದಿದ್ದು, ಪಶ್ಚಿಮ ಘಟ್ಟ ವ್ಯಾಪ್ತಿಯಲ್ಲಿ ಧಾರಾಕಾರ ಮಳೆ ಹಾಗೂ ಗಾಳಿ ಬೀಸುತ್ತಿದ್ದು ಗ್ರಾಮೀಣ ಭಾಗದಲ್ಲಿ ವಿದ್ಯುತ್ ಕಡಿತ ಉಂಟಾಗಿದೆ.

ಲಕ್ಷ್ಮಣತೀರ್ಥ ಉಗಮ ಸ್ಥಳ ಬ್ರಹ್ಮಗಿರಿ ತಪ್ಪಲು ಪ್ರದೇಶದಲ್ಲಿ ಧಾರಾಕಾರ ಮಳೆಯಾಗುತ್ತಿದ್ದು, ಈ ನದಿ ತುಂಬಿ ಹರಿಯುತ್ತಿದೆ. ಈ ನದಿ ಹರಿಯುವ ತಗ್ಗು ಪ್ರದೇಶಗಳಲ್ಲಿ ಭತ್ತದ ಗದ್ದೆ ಬಹುತೇಕ ಜಲಾವೃತವಾಗಿದೆ. ಬಲ್ಯಮುಂಡೂರು, ನಾಲ್ಕೇರಿ, ಕಾನೂರು, ಕೊಟ್ಟಗೇರಿ, ನಿಟ್ಟೂರು, ಮಲ್ಲೂರು ವ್ಯಾಪ್ತಿಯಲ್ಲಿ ಭತ್ತದ ಗದ್ದೆಗಳು ಜಲಾವೃತವಾಗಿದೆ. ಬಾಳೆಲೆ-ಮಲ್ಲೂರು ಸೇತುವೆ ಮೇಲೆ ಲಕ್ಷ್ಮಣತೀರ್ಥ ನದಿ ತುಂಬಿ ಹರಿಯುತ್ತಿದೆ.

ಬಿರುನಾಣಿ, ಶ್ರೀಮಂಗಲ, ಹುದಿಕೇರಿ, ನಿಟ್ಟೂರು ಗ್ರಾ.ಪಂ ವ್ಯಾಪ್ತಿಯಲ್ಲಿ ವಿದ್ಯುತ್ ಕಡಿತ ಮುಂದುವರೆದಿದೆ. ತೀವ್ರ ಗಾಳಿ ಮಳೆಗೆ ಗ್ರಾಮೀಣ ಭಾಗದಲ್ಲಿ ಮರ ಬಿದ್ದು ವಿದ್ಯುತ್ ಕಂಬಗಳು ಬಿದ್ದಿರುವದರಿಂದ ವಿದ್ಯುತ್ ವ್ಯತ್ಯಯ ಉಂಟಾಗಿದೆ.ಜಿಲ್ಲೆಯಲ್ಲಿ ಮಳೆ

ಮಡಿಕೆÉೀರಿ: ಕಳೆದ 24 ಗಂಟೆಗಳಲ್ಲಿ ಕೊಡಗು ಜಿಲ್ಲೆಯಾದ್ಯಂತ ಸರಾಸರಿ 2.93 ಇಂಚು ಮಳೆಯಾಗಿದೆ. ಜನವರಿಯಿಂದ ಇದುವರೆಗೆ 83.79 ಇಂಚು ಮಳೆ ಸುರಿದಿದೆ. ಕಳೆದ ವರ್ಷ ಇದೇ ಅವಧಿಗೆ 34.25 ಇಂಚು ಮಾತ್ರ ದಾಖಲಾಗಿತ್ತು.

ಮಡಿಕೇರಿ ತಾಲೂಕಿಗೆ ಹಿಂದಿನ 24 ಗಂಟೆಗಳಲ್ಲಿ 4.59 ಇಂಚು ಮಳೆಯೊಂದಿಗೆ, ಇದುವರೆಗೆ ಸರಾಸರಿ 115.52 ಇಂಚು ದಾಖಲಾಗಿದೆ. ಕಳೆದ ವರ್ಷ ಇದೇ ಅವಧಿಗೆ ಕೇವಲ 47.37 ಇಂಚು ದಾಖಲಾಗಿತ್ತು.

ವೀರಾಜಪೇಟೆ ತಾಲೂಕಿಗೆ ಕಳೆದ 24 ಗಂಟೆಗಳಲ್ಲಿ 1.65 ಇಂಚು ಹಾಗೂ ವರ್ಷಾರಂಭದಿಂದ ಇಂದಿನ ತನಕ 70.45 ಇಂಚು ಸರಾಸರಿ ಮಳೆಯಾಗಿದೆ. ಕಳೆದ ಸಾಲಿನಲ್ಲಿ 29.67 ಇಂಚು ಮಳೆಯಾಗಿತ್ತು.

ಸೋಮವಾರಪೇಟೆ ತಾಲೂಕಿಗೆ ಕಳೆದ 24 ಗಂಟೆಗಳಲ್ಲಿ 2.56 ಇಂಚು ಮಳೆಯಾಗಿದ್ದು, ಪ್ರಸಕ್ತ ಜನವರಿಯಿಂದ ಇಂದಿನ ತನಕ 65.40 ಇಂಚು ಮಳೆ ಸುರಿದಿದೆ. ಕಳೆದ ವರ್ಷ ಇದೇ ಅವಧಿಗೆ 16.57 ಇಂಚು ದಾಖಲಾಗಿತ್ತು. ಕಳೆದ 24 ಗಂಟೆಗಳಲ್ಲಿ ನಾಪೋಕ್ಲು 2.79, ಸಂಪಾಜೆ 3.65, ಭಾಗಮಂಡಲ 3.45, ವೀರಾಜಪೇಟೆ 1.3, ಹುದಿಕೇರಿ 2.71, ಶ್ರೀಮಂಗಲ 2.79, ಪೊನ್ನಂಪೇಟೆ 1.26, ಅಮ್ಮತ್ತಿ 1.02, ಬಾಳೆಲೆ 0.82 ಇಂಚು ಮಳೆ ದಾಖಲಾಗಿತ್ತು.

ಸೋಮವಾರಪೇಟೆ ತಾಲೂಕಿನ ಶಾಂತಳ್ಳಿಗೆ 6.81 ಇಂಚು, ಸೋಮವಾರಪೇಟೆ 3.12, ಕೊಡ್ಲಿಪೇಟೆ 1.11, ಶನಿವಾರಸಂತೆ 1.67, ಕುಶಾಲನಗರ 0.27, ಸುಂಟಿಕೊಪ್ಪ 2.37 ಇಂಚು ಮಳೆಯಾಗಿದೆ.

ಹಾರಂಗಿ ಜಲಾಶಯ

ಹಾರಂಗಿ ಜಲಾಶಯದಲ್ಲಿ 2859 ಗರಿಷ್ಠ ಅಡಿಗಳಿಗಿಂತ 2857 ಅಡಿ ನೀರಿನ ಮಟ್ಟದೊಂದಿಗೆ, 13029 ಕ್ಯೂಸೆಕ್ಸ್ ಜಲಾಶಯಕ್ಕೆ ಬರುತ್ತಿದೆ. ಜಲಾಶಯದಿಂದ 4335 ಕ್ಯೂಸೆಕ್ಸ್ ನದಿಗೆ ಹಾಗೂ 750 ಕ್ಯೂಸೆಕ್ಸ್ ನಾಲೆಗೆ ಬಿಡಲಾಗುತ್ತಿದೆ. ಕಳೆದ ವರ್ಷ ಇಂದಿಗೆ ಜಲಾಶಯ ನೀರಿನ ಮಟ್ಟ 2837.94 ಅಡಿಗಳಿದ್ದು, ಪ್ರಸಕ್ತ 19.06 ಅಡಿಗಳಷ್ಟು ಅಧಿಕ ನೀರು ಸಂಗ್ರಹಗೊಂಡಿದೆ.