ಕೂಡಿಗೆ, ಜು. 16: ಕೂಡುಮಂಗಳೂರು ಗ್ರಾಮ ಪಂಚಾಯಿತಿ ವ್ಯಾಪ್ತಿಯ ಕೂಡಿಗೆಯ ಕೃಷಿ ಕ್ಷೇತ್ರದ ಆವರಣದಲ್ಲಿರುವ ರೇಷ್ಮೆ ಕೃಷಿ ಕ್ಷೇತ್ರದ ಆವರಣದಲ್ಲಿ 16 ಎಕರೆ ಪ್ರದೇಶದಲ್ಲಿ ನಡೆಯುತ್ತಿರುವ ಉಗ್ರಾಣದ ಕಾಮಗಾರಿಯು ತೀರಾ ಕಳಪೆಯಾಗಿದೆ.

ಕಾಮಗಾರಿ ಪ್ರಾರಂಭವಾದ ಸಂದರ್ಭ ಕಳಪೆ ಕಾಮಗಾರಿ ವಿಷಯವನ್ನು ಸ್ಥಳೀಯ ಜಿಲ್ಲಾ ಪಂಚಾಯಿತಿ, ತಾ.ಪಂ ಸದಸ್ಯರ ಮತ್ತು ಶಾಸಕರ ಗಮನಕ್ಕೆ ತಂದ ಸಂದರ್ಭ ಈ ಕ್ಷೇತ್ರಕ್ಕೆ 2017ರ ಫೆಬ್ರವರಿ 28 ರಂದು ದಿಢೀರ್ ಭೇಟಿ ನೀಡಿದ್ದ ಶಾಸಕ ಅಪ್ಪಚ್ಚುರಂಜನ್ ನಿರ್ಮಾಣ ಹಂತದಲ್ಲಿರುವ 12 ಕೋಟಿ ಕಾಮಗಾರಿಯ ಉಗ್ರಾಣ ಘಟಕದ ಕೆಲಸವನ್ನು ವೀಕ್ಷಿಸಿ ಆಶ್ಚರ್ಯ ವ್ಯಕ್ತಪಡಿಸಿದರು.

ಕ್ಷೇತ್ರದ ಶಾಸಕನಾಗಿರುವ ನನ್ನ ಗಮನಕ್ಕೂ ಬಾರದೆ, ಯಾವದೇ ರೀತಿಯ ಶಂಕುಸ್ಥಾಪನೆಗಳಾಗದೆ ಈ 12 ಕೋಟಿ ಕಾಮಗಾರಿಯು ನಡೆಯುತ್ತಿದೆ. ಕಾಮಗಾರಿ ನಡೆಯುವ ಸಂದರ್ಭ ಯಾವದೇ ರೀತಿಯ ನಕ್ಷೆಯೂ ಇಲ್ಲದೆ, ಅದಕ್ಕೆ ಸಂಬಂಧಪಟ್ಟ ಗುಣಮಟ್ಟ ಪರೀಕ್ಷಿಸುವ ಅಧಿಕಾರಿಯೂ ಸ್ಥಳದಲ್ಲಿ ಇಲ್ಲದೆ ಮನಬಂದಂತೆ ಕಲ್ಲುಪುಡಿ ಯನ್ನು ಸಿಮೆಂಟ್‍ನೊಂದಿಗೆ ಸೇರಿಸಿ ಕಟ್ಟಡ ನಿರ್ಮಾಣವಾಗುತ್ತಿರುವ ಬಗ್ಗೆ ಆಕ್ರೋಶ ವ್ಯಕ್ತಪಡಿಸಿದ್ದರು. ಕರ್ನಾಟಕ ರಾಜ್ಯ ಆಹಾರ ಉಗ್ರಾಣ ನಿಗಮ ದವರು ರಾಜ್ಯಮಟ್ಟದಲ್ಲಿ ಟೆಂಡರ್ ಕರೆದು ನೀಡಿರುವುದೇನೋ ಸರಿ, ಆದರೂ ಜಿಲ್ಲೆಯ ಜನಪ್ರತಿನಿಧಿಗಳ ಹಾಗೂ ಉಸ್ತುವಾರಿ ಸಚಿವರ ಗಮನಕ್ಕೆ ಬಂದಿದೆಯೋ ಇಲ್ಲವೋ ಎಂಬ ಅನುಮಾನವು ಬಂದಿದೆ ಎಂದು ಶಾಸಕರು ಹೇಳಿದ್ದರು.

ಪ್ರಸ್ತುತ 2018ರ ವರ್ಷದಲ್ಲಿ ಉಗ್ರಾಣದ ಮೇಲ್ಛಾವಣಿ ಕಾಮಗಾರಿ ನಡೆಯುತ್ತಿದ್ದು, ಆ ಕಾಮಗಾರಿಯೂ ಕೂಡಾ ಕಳಪೆಯಾಗಿದ್ದು, ಈ ವಿಚಾರವಾಗಿ ಸುದ್ದಿಗಾರರು ಶಾಸಕರನ್ನು ದೂರವಾಣಿ ಮೂಲಕ ಸಂಪರ್ಕಿಸಿದಾಗ, ಕೂಡಿಗೆಯಲ್ಲಿ ನಡೆಯುತ್ತಿರುವ 12 ಕೋಟಿ ರೂ ಕಾಮಗಾರಿ ಬಗ್ಗೆ ಸಂಬಂಧಪಟ್ಟಂತೆ ಸೂಕ್ತ ಮಾಹಿತಿಯನ್ನು ಜಿಲ್ಲಾ ಅಥವಾ ರಾಜ್ಯ ಮಟ್ಟದ ಅಧಿಕಾರಿಗಳು ಒದಗಿಸುವಂತೆ ಸೂಚಿಸಲಾಗಿದ್ದರೂ ಸಹ ಒಂದೂವರೆ ವರ್ಷ ಕಳೆದರೂ ಕಾಮಗಾರಿಯ ನಕ್ಷೆಯನ್ನಾಗಲೀ ಪೂರ್ಣ ಮಾಹಿತಿಯನ್ನು ಒದಗಿಸಿಲ್ಲ. ಈ ಕಾಮಗಾರಿಯೂ ರಾಜ್ಯ ಮತ್ತು ಕೇಂದ್ರದ ಪಡಿತರ ವಸ್ತುಗಳು, ರಾಸಾಯನಿಕ ಗೊಬ್ಬರಗಳ ದಾಸ್ತಾನು ಇಡಲು ರಾಜ್ಯ ಸರ್ಕಾರವು ಎಲ್ಲಾ ಜಿಲ್ಲೆಗಳಿಗೆ ಬೃಹತ್ ಗೋದಾಮು ನಿರ್ಮಾಣ ಮಾಡಲು ಹಣ ಬಿಡುಗಡೆ ಮಾಡಿದೆ. ಅದರಂತೆ ತಮ್ಮ ಜಿಲ್ಲೆಯಲ್ಲಿ ನಡೆಯುತ್ತಿದ್ದರೂ, ಈ ಕಾಮಗಾರಿಯ ಸಂಪೂರ್ಣ ವಿವರ ನನ್ನ ಗಮನಕ್ಕೆ ಬಂದಿಲ್ಲ ಎಂದು ಪ್ರತಿಕ್ರಿಯೆ ನೀಡಿದರು.

-ಕೆ.ಕೆ.ನಾಗರಾಜಶೆಟ್ಟಿ.