*ಗೋಣಿಕೊಪ್ಪ, ಜು. 16: ಕಾಂಗ್ರೆಸ್, ಜೆ.ಡಿ.ಎಸ್ ಮೈತ್ರಿ ಸರ್ಕಾರ ಕೊಡಗನ್ನು ಕಡೆಗಣಿಸುತ್ತಿದೆ. ಕಳೆದ ಎರಡು ತಿಂಗಳಿಂದ ಸುರಿಯುತ್ತಿರುವ ಮಳೆಯಿಂದ ಅಪಾರ ನಷ್ಟ ಸಂಭವಿಸಿದೆ. ಕೊಡಗಿನಲ್ಲಿ ಸುರಿದ ಮಳೆಯಿಂದ ಕೆ.ಆರ್.ಎಸ್. ತುಂಬಿದೆ ಮೈಸೂರು, ಮಂಡ್ಯ, ಬೆಂಗಳೂರು ಸೇರಿದಂತೆ ತಮಿಳುನಾಡಿಗೂ ನೀರು ಹರಿದಿದೆ ಆದರೆ ಕೊಡಗಿನಲ್ಲಿ ಆಗಿರುವ ಅಪಾರ ಹಾನಿಗೆ ಪರಿಹಾರಕ್ಕೆ ಜಿಲ್ಲೆಗೆ ವಿಶೇಷ ಅನುದಾನ ಸರ್ಕಾರ ನೀಡದೆ ನಿರ್ಲಕ್ಷ್ಯ ತೋರಲಾಗುತ್ತಿದೆ ಎಂದು ಶಾಸಕ ಕೆ.ಜಿ.ಬೋಪಯ್ಯ ಆರೋಪಿಸಿದ್ದಾರೆ.ಕಾನೂರು ಕೃಷಿ ಪತ್ತಿನ ಸಹಕಾರ ಸಂಘ ಸಭಾಂಗಣದಲ್ಲಿ ನಡೆದ ಕಾನೂರು ಬಿ.ಜೆ.ಪಿ. ಸ್ಥಾನೀಯ ಸಮಿತಿ ಆಯೋಜಿಸಿದ್ದ ವಿಜಯೋತ್ಸವ ಹಾಗೂ ಅಭಿನಂದನಾ ಸಮಾರಂಭ ದಲ್ಲಿ ಅವರು ಮಾತನಾಡಿದರು. ಮಳೆಯಿಂದ ಜಿಲ್ಲೆಯಲ್ಲಿ 132 ಮನೆಗಳಿಗೆ ಹಾನಿ ಉಂಟಾಗಿದೆ 14 ಮನೆಗಳು ಸಂಪೂರ್ಣ ನಾಶವಾಗಿದೆ ರಸ್ತೆ ಕೃಷಿ ಗದ್ದೆಗಳು ಕಾಫಿ ತೋಟಗಳಿಗೂ ನಷ್ಟ ಉಂಟಾಗಿದೆ. ಆದರೆ ಕೇವಲ 14 ಲಕ್ಷ ಪರಿಹಾರವನ್ನು ಕಂದಾಯ ಇಲಾಖೆ ನೀಡಿದೆ. ಸರ್ಕಾರ ಹೆಚ್ಚಿನ ಅನುದಾನ ನೀಡುವ ಮೂಲಕ ಸಮಸ್ಯೆ ಪರಿಹಾರಕ್ಕೆ ಕ್ರಮ ಕೈಗೊಳ್ಳಬೇಕು. ತಾ. 19ರಂದು ಮುಖ್ಯಮಂತ್ರಿಗಳು ಜಿಲ್ಲಾ ಪ್ರವಾಸ ಕೈಗೊಳ್ಳಲಿದ್ದಾರೆ. ಈ ಸಂದರ್ಭ ಮಳೆ ಹಾನಿಯಿಂದ ಉಂಟಾದ ನಷ್ಟಕ್ಕೆ ವಿಶೇಷ ಅನುದಾನ ಮತ್ತು ಜಿಲ್ಲೆಯ ಅಭಿವೃದ್ಧಿಗೆ ಹೆಚ್ಚಿನ ಅನುದಾನ ನೀಡುವಂತೆ ಘೋಷಿಸಬೇಕು ಎಂದು ಒತ್ತಾಯಿಸಿದರು.

ಕಾರ್ಯಕರ್ತರ ಒಗ್ಗಟ್ಟಿನ ದುಡಿಮೆ ಪಕ್ಷ ನಿಷ್ಟೆಯಿಂದ ಈ ಬಾರಿಯು ಜಿಲ್ಲೆಯ ಎರಡು ಕೇತ್ರದಲ್ಲಿಯೂ ನಿರೀಕ್ಷೆಗೂ ಮೀರಿ ಬಿಜೆಪಿ ಜಯ ಸಾಧಿಸಿದೆ. ಆದರೆ ಅಲ್ಪ ಅಂತರದಿಂದ ಅಧಿಕಾರ ಪಡೆಯಲು ವಂಚಿತರಾಗಿದ್ದೇವೆ ಎಂದರು. ಜನ ಇಟ್ಟ ವಿಶ್ವಾಸವನ್ನು ಉಳಿಸಿಕೊಂಡು ಕ್ಷೇತ್ರದ ಅಭಿವೃದ್ಧಿಗೆ ಸ್ಪಂದಿಸುತ್ತಾ ಇಲ್ಲಿನ ಸಮಸ್ಯೆಗಳನ್ನು ಪರಿಹರಿಸಲು ಕ್ರಮ ಕೈಗೊಳ್ಳುತ್ತೇನೆ ಎಂದು ಭರವಸೆ ನೀಡಿದರು.

ವಿಧಾನಸಭಾ ಚುನಾವಣೆಗೆ ದುಡಿದಂತೆ ಕಾರ್ಯಕರ್ತರು ಮುಂದೆ ನಡೆಯುವ ಸಹಕಾರ ಸಂಘ ಮತ್ತು ಲೋಕಸಭಾ ಚುನಾವಣೆಯಲ್ಲೂ ತಮ್ಮ ಪಕ್ಷ ನಿಷ್ಟೆಯನ್ನು ತೋರಬೇಕು ಎಂದು ಮನವಿ ಮಾಡಿದರು

ತಾಲೂಕು ಬಿ.ಜೆ.ಪಿ. ಮಂಡಳ ಅಧ್ಯಕ್ಷ ಅರುಣ್ ಭೀಮಯ್ಯ ಮಾತನಾಡಿ, ಏಳು ಬೀಳುಗಳ ನಡುವೆ ವಿರೋಧಿಗಳ ಅಪಪ್ರಚಾರಗಳ ನಡುವೆಯೂ ನಿರೀಕ್ಷೆಗೂ ಮೀರಿ ಜಯ ಸಾಧಿಸಿದ್ದು, ಇದಕ್ಕೆ ಕಾರ್ಯಕರ್ತರ ಪಕ್ಷ ನಿಷ್ಠೆಯೇ ಕಾರಣ ಎಂದರು.

ಜಿಲ್ಲಾ ಮಹಿಳಾ ಮೋರ್ಚಾ ಅಧ್ಯಕ್ಷೆ ಯಮುನಾ ಚಂಗಪ್ಪ ಮಾತನಾಡಿ, ಹಲವು ಅಭಿವೃದ್ಧಿ ಕಾರ್ಯಗಳಿಗೆ ಸ್ಪಂದಿಸಿ ಸಮಸ್ಯೆಗಳಿಗೆ ಪರಿಹಾರ ಒದಗಿಸಿದ ಪರಿಣಾಮವೇ ಈ ಬಾರಿಯು ವಿರೋಧಿಗಳ ಅಪಪ್ರಚಾರದ ನಡುವೆ ಗೆಲುವು ಸಾಧಿಸಲು ಸಾಧ್ಯವಾಗಿದೆ ಎಂದು ಹೇಳಿದರು.

ತಾಲೂಕು ಫೆಡರೇಷನ್ ನಿರ್ದೇಶಕ ಮಚ್ಚಮಾಡ ಕಂದಾ ಭೀಮಯ್ಯ ಪ್ರಾಸ್ತವಿಕವಾಗಿ ಮಾತನಾಡಿದರು ತಾ.ಪಂ. ಸದಸ್ಯ ಪ್ರಕಾಶ್ ಆರ್.ಎಂ.ಸಿ. ಸದಸ್ಯ ಮಾಚಂಗಡ ಸುಜಾ, ಬಿ.ಜೆ.ಪಿ. ತಾಲೂಕು ಪ್ರಧಾನ ಕಾರ್ಯದರ್ಶಿ ಲಾಲಾ ಭೀಮಯ್ಯ, ಕಾನೂನು ಸಾನ್ಯ ಸಮಿತಿ ಅಧ್ಯಕ್ಷ ಮಾಚಿಮಾಡ ಮಾಚು ಭರತ್, ಮುದ್ದಿಯಾಡÀ ಮಂಜು, ಮಲ್ಲಂಡ ಮಧು ದೇವಯ್ಯ ಮತ್ತು ಕಾರ್ಯಕರ್ತರು ಉಪಸ್ಥಿತರಿದ್ದರು. ಗ್ರಾ.ಪಂ. ಸದಸ್ಯೆ ಶಿಲ್ಪ, ಪ್ರಾರ್ಥಿಸಿ, ಅಳಮೆಂಗಡ ವಿವೇಕ್ ವಂದಿಸಿದರು, ಇದಕ್ಕೂ ಮೊದಲು ಕಾರ್ಯಕರ್ತರು ಕಾನೂರು ಪಟ್ಟಣದ ಮುಖ್ಯ ಬೀದಿಯಲ್ಲಿ ಮೆರವಣಿಗೆ ನಡೆಸಿದರು.

ಚಿತ್ರ ವರದಿ : ಎನ್.ಎನ್. ದಿನೇಶ್