ಸೋಮವಾರಪೇಟೆ, ಜು. 16: ಭಾರತಕ್ಕೆ ಸ್ವಾತಂತ್ರ್ಯ ಲಭಿಸಿ 75 ವರ್ಷಗಳಾಗುವ ಸಂದರ್ಭಕ್ಕೆ ದೇಶದಲ್ಲಿ ಪ್ರತಿಯೊಬ್ಬರಿಗೂ ಸೂರು ಕಲ್ಪಿಸುವ ಮಹತ್ವಾಕಾಂಕ್ಷೆಯ ಯೋಜನೆ ಮೋದಿ ನೇತೃತ್ವದ ಕೇಂದ್ರ ಸರ್ಕಾರಕ್ಕಿದ್ದು, ಇದಕ್ಕಾಗಿಯೇ ‘ಹೌಸಿಂಗ್ ಫಾರ್ ಆಲ್’ ಅಥವಾ ಪ್ರಧಾನ ಮಂತ್ರಿ ಆವಾಸ್ ಯೋಜನೆಯಡಿ ಪ್ರತಿಯೊಬ್ಬರಿಗೂ ಮನೆ ನಿರ್ಮಾಣಕ್ಕೆ ಅನುದಾನ ಕಲ್ಪಿಸುತ್ತಿದೆ ಎಂದು ಸಂಸದ ಪ್ರತಾಪ್ ಸಿಂಹ ತಿಳಿಸಿದರು.

ಸ್ವಾತಂತ್ರ್ಯದ ವಜ್ರ ಮಹೋತ್ಸವದ ಸಂದರ್ಭ ಯಾವೊಬ್ಬ ಭಾರತೀಯನೂ ತನಗೊಂದು ಮನೆ ಇಲ್ಲ ಎಂಬಂತಹ ಪರಿಸ್ಥಿತಿಯಲ್ಲಿರಬಾರದು. 2022ರ ಹೊತ್ತಿಗೆ ಪ್ರತಿಯೋರ್ವರಿಗೂ ಸೂರು ಒದಗಿಸುವ ಯೋಜನೆಯನ್ನು ಮೋದಿ ಸರ್ಕಾರ ಜಾರಿಗೆ ತಂದಿದೆ. ಇದರಲ್ಲಿ ಪ್ರತಿಯೋರ್ವ ಫಲಾನುಭವಿಗೂ 1.50 ಲಕ್ಷವನ್ನು ಕೇಂದ್ರ ಸರ್ಕಾರ ನೀಡಲಿದೆ. ಜತೆಗೆ ರಾಜ್ಯ ಸರ್ಕಾರ 1.20 ಲಕ್ಷ ಭರಿಸಲಿದ್ದು, 2.70 ಲಕ್ಷ ಅನುದಾನ ಲಭಿಸಲಿದೆ ಎಂದರು.

ಪರಿಶಿಷ್ಟ ಜಾತಿ ಮತ್ತು ಪರಿಶಿಷ್ಟ ವರ್ಗದವರಿಗೆ ರಾಜ್ಯ ಸರ್ಕಾರ 2ಲಕ್ಷ ನೀಡಲಿದ್ದು, ಈ ವರ್ಗದವರಿಗೆ 3.50 ಲಕ್ಷ ಅನುದಾನ ಸಿಗಲಿದೆ. ಕೇಂದ್ರ ಸರ್ಕಾರದ ಈ ಯೋಜನೆಯನ್ನು ಫಲಾನುಭವಿಗಳು ಸದುಪಯೋಗ ಪಡಿಸಿಕೊಳ್ಳಬೇಕು ಎಂದು ಸಂಸದ ಪ್ರತಾಪ್ ಸಿಂಹ ಮನವಿ ಮಾಡಿದರು.