ಸೋಮವಾರಪೇಟೆ, ಜು. 16: ಭಾರೀ ಮಳೆ ಗಾಳಿಗೆ ಕೊಡಗು ತತ್ತರಿಸುತ್ತಿದೆ. ಕಾವೇರಿ ಕಣಿವೆಯ ಜನ ನರಕಯಾತನೆ ಅನುಭವಿಸುತ್ತಿದ್ದರೂ ಬೆಂಗಳೂರು ಸೇರಿದಂತೆ ಇತರ ಜಿಲ್ಲೆಗಳಿಗೆ ನೀರು ಕೊಡುತ್ತಿದ್ದಾರೆ. ಬೆಂಗಳೂರು ಉಸಿರಾಡುತ್ತಿರುವದೇ ಕೊಡಗಿನಿಂದ. ಈ ಹಿನ್ನೆಲೆ ಮುಖ್ಯಮಂತ್ರಿ ಕುಮಾರಸ್ವಾಮಿ ಅವರು ಕೊಡಗಿಗೆ ಶಾಶ್ವತ ಪರಿಹಾರ ನಿಧಿ ಒದಗಿಸಲು ಮುಂದಾಗಬೇಕು, ಈ ಬಗ್ಗೆ ತಾನು ಮುಖ್ಯಮಂತ್ರಿಗೆ ಮನವಿ ಮಾಡುತ್ತೇನೆ ಎಂದು ಸಂಸದ ಪ್ರತಾಪ್ ಸಿಂಹ ಹೇಳಿದರು.
ಇಲ್ಲಿನ ಪಟ್ಟಣ ಪಂಚಾಯಿತಿ ಎಸ್‍ಎಫ್‍ಸಿ ಯೋಜನೆಯಡಿ ನೂತನವಾಗಿ ನಿರ್ಮಿಸಲಾಗಿರುವ ರೂ. 1.98 ಕೋಟಿ ವೆಚ್ಚದ ಪಂಚಾಯಿತಿ ಕಚೇರಿ ಕಟ್ಟಡ ಉದ್ಘಾಟನಾ ಸಮಾರಂಭದಲ್ಲಿ ಭಾಗವಹಿಸಿ ಅವರು ಮಾತನಾಡಿದರು.
ಕೊಡಗಿನ ಹಿತಕ್ಕೆ ಧಕ್ಕೆಯಾಗುವ ತಲಚೇರಿ ರೈಲ್ವೇ ಮಾರ್ಗವನ್ನು ವಿರೋಧಿಸಿ ಮುಖ್ಯಮಂತ್ರಿಗಳಿಗೆ ಈಗಾಗಲೇ ಮನವಿ ಸಲ್ಲಿಸಿದ್ದು, ಕೊಡಗಿನ ಮಂದಿಯ ಭಾವನೆಗಳಿಗೆ ವಿರೋಧವಾಗಿರುವ ಈ ಯೋಜನೆಯ ಅನುಷ್ಠಾನಕ್ಕೆ ಅನುಮತಿ ನೀಡಬಾರದು ಎಂದು ಒತ್ತಾಯಿಸಿದ್ದೇನೆ. ಇದರೊಂದಿಗೆ ಕೊಡಗಿನ ಸಮಸ್ಯೆಗಳ ಬಗ್ಗೆಯೂ ಮುಖ್ಯಮಂತ್ರಿಯ ಗಮನ ಸೆಳೆದಿದ್ದು, ಕುಮಾರಸ್ವಾಮಿ ಅವರು ತಲಕಾವೇರಿಗೆ ಆಗಮಿಸುವ ಸಂದರ್ಭ ಜಿಲ್ಲೆಗೆ ವಿಶೇಷ ಪ್ಯಾಕೇಜ್ ಘೋಷಿಸಲಿ ಎಂದು ಸಂಸದರು ನುಡಿದರು.
ಕೊಡಗಿನ ಕುಶಾಲನಗರದವರೆಗೆ ರೈಲ್ವೇ ಸಂಪರ್ಕ ಕಲ್ಪಿಸಲು ಈಗಾಗಲೇ 667 ಕೋಟಿ ವೆಚ್ಚದ ಯೋಜನೆಗೆ ಅನುಮೋದನೆ ದೊರೆತಿದೆ. ಕರ್ನಾಟಕ ರಾಜ್ಯ ಸರ್ಕಾರ ಭೂಸ್ವಾಧೀನ ಪ್ರಕ್ರಿಯೆ ನಡೆಸಿದ ತಕ್ಷಣ ಕಾಮಗಾರಿ ಪ್ರಾರಂಭವಾಗಲಿದೆ. 2020ರ ವೇಳೆಗೆ 7 ಸಾವಿರ ಕೋಟಿ ವೆಚ್ಚದಲ್ಲಿ ಮೈಸೂರು-ಬೆಂಗಳೂರು 10 ಪಥ ರಸ್ತೆ ನಿರ್ಮಾಣವಾಗಲಿದೆ. ಇದರೊಂದಿಗೆ ನೂತನ ರೈಲ್ವೇ ಮಾರ್ಗ ಅನುಷ್ಠಾನಗೊಳ್ಳಲಿದೆ. ಕೇಂದ್ರ ಸರ್ಕಾರದ ಐಪಿಡಿಎಸ್ ಯೋಜನೆಯಡಿ ವಿದ್ಯುತ್ ಕಂಬ, ಟ್ರಾನ್ಸ್‍ಫಾರ್ಮರ್, ತಂತಿಗಳ ದುರಸ್ತಿ, ನೂತನ ಮಾರ್ಗಕ್ಕಾಗಿ ಈಗಾಗಲೇ ಸೋಮವಾರಪೇಟೆಗೆ 9.35 ಕೋಟಿ, ಕುಶಾಲನಗರಕ್ಕೆ 4.84 ಕೋಟಿ, ಗ್ರಾಮೀಣ ಭಾಗದ ವಿದ್ಯುತ್ ಸಮಸ್ಯೆ ನಿವಾರಿಸಲು ಡಿ.ಡಿ.ಯು.ಜಿ.ಜೆ.ವೈ. ಯೋಜನೆಯಡಿ 2.57 ಕೋಟಿ ಅನುದಾನ ಬಿಡುಗಡೆ ಮಾಡಲಾಗಿದೆ ಎಂದು ಮಾಹಿತಿ ಒದಗಿಸಿದರು.
ಭಾಗಮಂಡಲ-ಮಡಿಕೇರಿಯ 53 ಕಿ.ಮೀ. ಅಂತರದ ರಸ್ತೆಯನ್ನು ರಾಷ್ಟ್ರೀಯ ಹೆದ್ದಾರಿಯನ್ನಾಗಿ ಮಾರ್ಪಡಿಸಲು ಯೋಜನೆ ರೂಪಿಸಲಾಗಿದೆ. ಚನ್ನರಾಯಪಟ್ಟಣ-ಶನಿವಾರಸಂತೆ-ಸೋಮವಾರಪೇಟೆ-ಮಡಿಕೇರಿ ರಸ್ತೆಯನ್ನು ಉನ್ನತೀಕರಣ ಗೊಳಿಸಲು ಕೇಂದ್ರ ಸರ್ಕಾರ ಮುಂದಾಗಿದೆ ಎಂದು ಪ್ರತಾಪ್ ಸಿಂಹ ನುಡಿದರು.
ಕಾರ್ಯಕ್ರಮದಲ್ಲಿ ಮುಖ್ಯ ಅತಿಥಿಯಾಗಿದ್ದ ವಿಧಾನ ಪರಿಷತ್ ಸದಸ್ಯ ಸುನಿಲ್ ಸುಬ್ರಮಣಿ ಮಾತನಾಡಿ, ಪಟ್ಟಣ ಪಂಚಾಯಿತಿಯ ಎಲ್ಲಾ ಕಾರ್ಯಗಳು ಒಂದೇ ಸೂರಿನಡಿ ನಡೆಯಬೇಕೆಂಬ ಉದ್ದೇಶದಿಂದ ನೂತನ ಕಟ್ಟಡ ನಿರ್ಮಾಣವಾಗಿದ್ದು, ಸಾರ್ವಜನಿಕರಿಗೆ ಹೆಚ್ಚಿನ ಅನುಕೂಲ ಕಲ್ಪಿಸಿದಂತಾಗಿದೆ ಎಂದರು.
ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದ ಶಾಸಕ ಎಂ.ಪಿ. ಅಪ್ಪಚ್ಚು ರಂಜನ್ ಮಾತನಾಡಿ, ಈ ಹಿಂದೆ ರಾಜ್ಯದಲ್ಲಿ ನಮ್ಮ ಸರ್ಕಾರ ಅಧಿಕಾರದಲ್ಲಿದ್ದ ಸಂದರ್ಭ ಎಲ್ಲಾ ಪ.ಪಂ.ಗಳಿಗೆ ನಗರೋತ್ಥಾನ ಯೋಜನೆಯಡಿ ವಾರ್ಷಿಕ 5 ಕೋಟಿ ಅನುದಾನ ನೀಡಿದ್ದೆವು. ಕಳೆದ ಸಾಲಿನ ಸರ್ಕಾರ ಕೇವಲ 2 ಕೋಟಿ ನೀಡಿದೆ ಎಂದರು.
ಬಸ್ ನಿಲ್ದಾಣ, ವಾಣಿಜ್ಯ ಮಳಿಗೆ, ಕಾಂಕ್ರೀಟ್ ರಸ್ತೆಗಳನ್ನು ಪ.ಪಂ. ವ್ಯಾಪ್ತಿಯಲ್ಲಿ ಕೈಗೊಳ್ಳಲಾಗಿದೆ. ಹಾರಂಗಿ ಮತ್ತು ದುದ್ದುಗಲ್ಲಿನಿಂದ ಪಟ್ಟಣಕ್ಕೆ ಕುಡಿಯುವ ನೀರಿನ ಸೌಲಭ್ಯ ಒದಗಿಸಲಾಗಿದೆ. ಈಗಿರುವ ಮಾರುಕಟ್ಟೆ ಪ್ರದೇಶದಲ್ಲಿ ನೂತನವಾಗಿ ವಾಹನ ನಿಲುಗಡೆಗೆ ವ್ಯವಸ್ಥೆ, ಮೇಲ್ಭಾಗದಲ್ಲಿ ಮಾರುಕಟ್ಟೆ ನಿರ್ಮಿಸಲು 5 ಕೋಟಿ ವೆಚ್ಚದ ಯೋಜನೆ ಸಿದ್ದಪಡಿಸಿ ಸರ್ಕಾರಕ್ಕೆ ಪ್ರಸ್ತಾವನೆ ಸಲ್ಲಿಸಲಾಗಿದೆ ಎಂದರು.
ಸಂಸದ ಪ್ರತಾಪ್ ಸಿಂಹ ಅವರ ಮುತುವರ್ಜಿಯಿಂದಾಗಿ ಕೇಂದ್ರದ ಮೋದಿ ಸರ್ಕಾರದಿಂದ ಜಿಲ್ಲೆಯ ವಿದ್ಯುತ್ ಸಮಸ್ಯೆಗಳ ನಿವಾರಣೆಗೆ 60 ಕೋಟಿ ಅನುದಾನ ಬಂದಿದೆ. ಇದರಿಂದಾಗಿ ಕುಗ್ರಾಮಗಳಿಗೂ ವಿದ್ಯುತ್ ಸಂಪರ್ಕ ಲಭ್ಯವಾಗಿದೆ ಎಂದರು.
ಜಿ.ಪಂ. ಮಾಜೀ ಅಧ್ಯಕ್ಷೆ ಕೆ.ಪಿ. ಚಂದ್ರಕಲಾ ಮಾತನಾಡಿ, ಸೋಮವಾರಪೇಟೆ ಇನ್ನಷ್ಟು ಅಭಿವೃದ್ಧಿ ಸಾಧಿಸಬೇಕಿದೆ. ಎಲ್ಲರೂ ಒಟ್ಟಾಗಿ ಅಭಿವೃದ್ಧಿಗಾಗಿ ದುಡಿಯಬೇಕಿದೆ. ಕುಶಾಲನಗರದವರೆಗೆ ರೈಲ್ವೇ ಸಂಪರ್ಕ ಕೊಡಿಸಲು ಸಂಸದ ಪ್ರತಾಪ್ ಸಿಂಹ ಮುಂದಾಗಬೇಕಿತ್ತು. ಅಪ್ಪಚ್ಚು ರಂಜನ್ ಅವರು ಇನ್ನಷ್ಟು ಅಭಿವೃದ್ಧಿಗೆ ಒತ್ತು ನೀಡಬೇಕು ಎಂದರು.
ಪ್ರಾಸ್ತಾವಿಕವಾಗಿ ಮಾತನಾಡಿದ ಪ.ಪಂ. ಅಧ್ಯಕ್ಷೆ ವಿಜಯಲಕ್ಷ್ಮೀ ಸುರೇಶ್, ಹಿಂದಿನ ಹಾಗೂ ಪ್ರಸ್ತುತದ ಆಡಳಿತ ಮಂಡಳಿ ಸದಸ್ಯರು, ಶಾಸಕ ಅಪ್ಪಚ್ಚು ರಂಜನ್, ಹಿಂದಿನ ಸರ್ಕಾರದ ಪೌರಾಡಳಿತ ಸಚಿವ ಈಶ್ವರ್ ಖಂಡ್ರೆ, ಜಿಲ್ಲಾಧಿಕಾರಿಯಾಗಿದ್ದ ಮೀರ್ ಅನೀಸ್ ಅಹ್ಮದ್ ಅವರುಗಳ ಸಹಕಾರದಿಂದ ನೂತನ ಕಟ್ಟಡ ನಿರ್ಮಿಸಲು ಸಾಧ್ಯವಾಗಿದೆ. ಸೋಮವಾರಪೇಟೆ ಪಟ್ಟಣ ಪಂಚಾಯಿತಿ ವ್ಯಾಪ್ತಿಯಲ್ಲಿ ರಸ್ತೆ, ಕುಡಿಯುವ ನೀರು, ವಿದ್ಯುತ್ ದೀಪ, ತ್ಯಾಜ್ಯ ವಿಲೇವಾರಿಗೆ ಹೆಚ್ಚಿನ ಒತ್ತು ನೀಡಲಾಗಿದೆ ಎಂದರು.