ಕುಶಾಲನಗರ, ಜು. 16: ಕುಶಾಲನಗರ ಸರಕಾರಿ ಇಂಜಿನಿಯರಿಂಗ್ ಕಾಲೇಜಿನ ವಾರ್ಷಿಕ ಎನ್.ಎಸ್.ಎಸ್. ಶಿಬಿರ ಗುಡ್ಡೆಹೊಸೂರು ಸರಕಾರಿ ಹಿರಿಯ ಪ್ರಾಥಮಿಕ ಶಾಲಾ ಆವರಣದಲ್ಲಿ ಹಮ್ಮಿಕೊಳ್ಳಲಾಗಿದೆ.
ತಾ. 9 ರಿಂದ ಪ್ರಾರಂಭಗೊಂಡ ಶಿಬಿರದಲ್ಲಿ ಶಿಬಿರಾರ್ಥಿಗಳಿಂದ ಗುಡ್ಡೆಹೊಸೂರು ವ್ಯಾಪ್ತಿಯ ರಸ್ತೆ ಮತ್ತು ಶಾಲೆಯ ಆವರಣ ಸ್ವಚ್ಛಗೊಳಿಸುವದು, ಪ್ಲಾಸ್ಟಿಕ್ ನಿರ್ಮೂಲನೆ ಹಾಗೂ ಪರಿಸರ ಸಂರಕ್ಷಣೆ ಬಗ್ಗೆ ಜನರಿಗೆ ಅರಿವು ಮೂಡಿಸುವ ಕಾರ್ಯಾಗಾರ, ಕಾನೂನು ಅರಿವು ಕಾರ್ಯಕ್ರಮ, ಸಾಮಾಜಿಕ ಪಿಡುಗುಗಳ ಕುರಿತು ಕಿರು ನಾಟಕ, ಬಸವನಹಳ್ಳಿ ಗಿರಿಜನ ಹಾಡಿ ವ್ಯಾಪ್ತಿಯಲ್ಲಿ ಸ್ವಚ್ಛತೆ ಬಗ್ಗೆ ಅರಿವು ಮೂಡಿಸುವದು ಸೇರಿದಂತೆ ಶಿಬಿರದ ದೈನಂದಿನ ಚಟುವಟಿಕೆಗಳು ನಡೆಯುತ್ತಿವೆ.
ಕಾಲೇಜಿನ ಪ್ರಾಂಶುಪಾಲರು ಹಾಗೂ ಶಿಬಿರ ನಿರ್ದೇಶಕ ಡಾ. ವೆಂಕಟೇಶ್ ಬೆಮ್ಮತ್ತಿ ಅವರ ನಿರ್ದೇಶನದೊಂದಿಗೆ ಕಾರ್ಯಕ್ರಮ ಅಧಿಕಾರಿ ಹಾಗೂ ದೈಹಿಕ ಶಿಕ್ಷಣ ವಿಭಾಗದ ಸಹಾಯಕ ನಿರ್ದೇಶಕ ಪ್ರಸಾದ್ ಸಾಲ್ಯನ್ ನೇತೃತ್ವದಲ್ಲಿ ಶಿಬಿರ ನಡೆಯುತ್ತಿದ್ದು, ತಾ. 15 ರ ತನಕ ಹಲವು ಸೇವಾ ಕಾರ್ಯಕ್ರಮಗಳು ಜರುಗಲಿವೆ ಎಂದು ಕಾಲೇಜಿನ ಸಹಾಯಕ ಆಡಳಿತಾಧಿಕಾರಿ ಜಿ.ಸಿ. ಲಿಂಗರಾಜು ತಿಳಿಸಿದ್ದಾರೆ.
ದೈನಂದಿನ ಚಟುವಟಿಕೆ ಯೊಂದಿಗೆ ಉಪನ್ಯಾಸ ಕಾರ್ಯಕ್ರಮ ನಡೆಯುತ್ತಿದ್ದು, ಸದೃಢ ಸಮಾಜ ಕಟ್ಟುವಲ್ಲಿ ಸುದ್ದಿ ಮಾಧ್ಯಮಗಳ ಪಾತ್ರ ವಿಷಯದ ಬಗ್ಗೆ ಕಾವೇರಿ ನದಿ ಸ್ವಚ್ಛತಾ ಆಂದೋಲನ ಸಂಚಾಲಕ ಎಂ.ಎನ್. ಚಂದ್ರಮೋಹನ್ ಶಿಬಿರಾರ್ಥಿಗಳಿಗೆ ಮಾಹಿತಿ ಒದಗಿಸಿದರು. ಪರಿಸರ ಸಂರಕ್ಷಣೆ ಬಗ್ಗೆ ಶಿಕ್ಷಕರು ಹಾಗೂ ಪರಿಸರ ಪ್ರೇಮಿ ಟಿ.ಜಿ. ಪ್ರೇಮ್ಕುಮಾರ್ ಉಪನ್ಯಾಸ ನೀಡಿದರು.
ಗುಡ್ಡೆಹೊಸೂರು ಬಳಿಯಿಂದ ಬೊಳ್ಳೂರು ರಸ್ತೆ ಸ್ವಚ್ಛತಾ ಕಾರ್ಯ ಜೊತೆಗೆ ಗುಂಡಿ ಮುಚ್ಚುವ ಕೆಲಸ ಶಿಬಿರಾರ್ಥಿಗಳಿಂದ ನಡೆಯಿತು. ಶಾಲಾ ಆವರಣದಲ್ಲಿ ಗಿಡ ನೆಡುವ ಕಾರ್ಯಕ್ರಮದೊಂದಿಗೆ ಇಂಜಿನಿಯರಿಂಗ್ ಕಾಲೇಜಿನ ಹೊರ ಆವರಣ ಸ್ವಚ್ಛಗೊಳಿಸುವದರೊಂದಿಗೆ ಕಾಲೇಜು ಆವರಣದಲ್ಲಿ ಗಿಡಗಳನ್ನು ನೆಡುವ ಕಾರ್ಯಕ್ರಮ ನಡೆಯಿತು. ಗುಡ್ಡೆಹೊಸೂರು ಗ್ರಾ.ಪಂ. ವತಿಯಿಂದ ಸ್ವಚ್ಛತಾ ಕಾರ್ಯಕ್ರಮ ಸಂದರ್ಭ ಟ್ರ್ಯಾಕ್ಟರ್ ಮತ್ತಿತರ ಸೌಲಭ್ಯಗಳನ್ನು ಕಲ್ಪಿಸಿದ್ದರು. ಪಂಚಾಯಿತಿ ಸಿಬ್ಬಂದಿಗಳು ಸ್ವಚ್ಛತಾ ಕಾರ್ಯಕ್ರಮದಲ್ಲಿ ತೊಡಗಿಸಿಕೊಂಡರು.
ಸಹ ಶಿಬಿರಾಧಿಕಾರಿಗಳಾದ ಎ.ಎಂ. ಹರ್ಷ, ಡಾ. ಎಂ.ಎಸ್. ಸುರೇಶ್, ಡಾ. ಲಕ್ಷ್ಮಿ ದೇವಪ್ಪ, ಶಿಬಿರದ ಸಲಹಾ ಸಮಿತಿ ಸದಸ್ಯರು ಶಿಬಿರದಲ್ಲಿ ಪಾಲ್ಗೊಂಡಿದ್ದಾರೆ.