ನಾಪೋಕ್ಲು, ಜು. 16: ಮರಂದೋಡ ಗ್ರಾಮದಲ್ಲಿ ಹಲವು ವರ್ಷಗಳಿಂದ ಯಾವದೇ ಜನಪರ ಅಭಿವೃದ್ಧಿ ಕಾರ್ಯಗಳು ನಡೆದಿಲ್ಲ ಎಂಬ ಜೆಡಿಎಸ್ ಜಿಲ್ಲಾಧ್ಯಕ್ಷ ಮೇರಿಯಂಡ ಸಂಕೇತ್ ಪೂವಯ್ಯ ಅವರ ಹೇಳಿಕೆ ಖಂಡನೀಯ ಎಂದು ಗ್ರಾಮಸ್ಥರು ಆಕ್ರೋಶ ವ್ಯಕ್ತಪಡಿಸಿದರು.

ಸಮೀಪದ ಮರಂದೋಡ ಗ್ರಾಮದ ಪೂಮ ಬಾಣೆಯಲ್ಲಿ ನಡೆದ ಸಭೆಯಲ್ಲಿ ಮಾತನಾಡಿದ ಗ್ರಾಮಸ್ಥರು ಸಂಕೇತ್ ಪೂವಯ್ಯನವರ ಹೇಳಿಕೆಯಿಂದ ಗ್ರಾಮದ ಅಭಿವೃದ್ಧಿಗೆ ದುಡಿದವರಿಗೆ ಬೇಸರವಾಗಿದೆ ಎಂದರು. ದಶಕಗಳ ಹಿಂದೆ ನಿಡುಮಂಡ ಕುಟುಂಬಸ್ಥರು ಇಲ್ಲಿನ ಸಹಕಾರ ಸಂಘಕ್ಕೆ ಜಮೀನನ್ನು ದಾನವಾಗಿ ಕೊಟ್ಟಿದ್ದು, ಗ್ರಾಮಸ್ಥರು ಸಹಕಾರ ಸಂಘ ನಿರ್ಮಿಸಿ ಅದರ ಪ್ರಯೋಜನ ಪಡೆಯುತ್ತಿದ್ದಾರೆ. ಗ್ರಾಮದ ಶಾಲೆಗಾಗಿ 1958ರಲ್ಲಿ ಚಂಡೀರ ಕುಟುಂಬಸ್ಥರು ಮೂರು ಏಕರೆ ಜಮೀನನ್ನು ಉದಾರವಾಗಿ ನೀಡಿದ್ದು, ಹಲವರು ಶಿಕ್ಷಣ ಪಡೆದಿರುತ್ತಾರೆ. ಪಂಚಾಯಿತಿ ವ್ಯವಸ್ಥೆ ಜಾರಿಗೆ ಬಂದ ಬಳಿಕ ಗ್ರಾಮದ ಅಭಿವೃದ್ಧಿ ಕುರಿತು ಹಲವು ಸಭೆಗಳು ನಡೆದಿದ್ದರೂ. ಒಂದೇ ಒಂದು ಸಭೆಯಲ್ಲಿ ಸಂಕೇತ್ ಪೂವಯ್ಯ ಭಾಗಿಯಾಗಿಲ್ಲ. ಗ್ರಾಮದ ಹಲವು ರಸ್ತೆಗಳು ಅಭಿವೃದ್ಧಿಯಾಗಿವೆ.

ಗ್ರಾಮಕ್ಕೆ ಕುಡಿಯುವ ನೀರಿಗಾಗಿ ಒಂಬತ್ತು ಕಿ.ಮೀ. ದೂರದ ಪಾತಿ ಹೊಳೆಯಿಂದ ನೈಸರ್ಗಿಕ ನೀರು ಪೂರೈಕೆಗೆ ವ್ಯವಸ್ಥೆ ಕಲ್ಪಿಸಲಾಗಿದೆ. ಗ್ರಾಮದ ನಲ್ವತ್ತು ಜನರು ಅಂಗವಿಕಲ ವೇತನ ವಿಧವಾವೇತನ, ಸಂಧ್ಯಾಸುರಕ್ಷಾ ವೇತನ, ಸೇರಿದಂತೆ ಇನ್ನಿತರ ಹಲವು ಫಲಾನುಭವಿಗಳು ಗ್ರಾಮದಲ್ಲಿದ್ದಾರೆ. ಗ್ರಾಮದಲ್ಲಿರುವ ಕೇಕುಮಾನಿ ಭಗವತಿ ದೇವಾಲಯವು ಅಭಿವೃದ್ಧಿಯನ್ನು ಹೊಂದಿದೆ. ಹೀಗೆ ಹತ್ತುಹಲವು ವ್ಯವಸ್ಥೆಗಳೊಂದಿಗೆ ಗ್ರಾಮಾಭಿವೃದ್ಧಿ ಯಾಗುತ್ತಿದ್ದು, ಸಂಕೇತ್‍ಪೂವಯ್ಯ ಗೊಂದಲದ ಹೇಳಿಕೆ ನೀಡಿದ್ದಾರೆ ಎಂದು ಗ್ರಾಮಸ್ಥರು ಅರೋಪಿಸಿದರು. ಸಭೆಯಲ್ಲಿ ಮಡಿಕೇರಿ ತಾಲೂಕು ಬಿಜೆಪಿ ಉಪಾಧ್ಯಕ್ಷ ಸಿ.ಎಂ. ಜಗದೀಶ್, ಬಿಜೆಪಿ ಬೂತ್ ಅಧ್ಯಕ್ಷ ಎಂ.ಎಂ. ಚಿಟ್ಟಿಯಪ್ಪ, ಕಕ್ಕಬ್ಬೆ ಗ್ರಾಮ ಪಂಚಾಯಿತಿ ಸದಸ್ಯ ಎಂ.ಎ. ರಮೇಶ್, ಬಿಜೆಪಿ ಕಾರ್ಯದರ್ಶಿ ಬಿ.ಎಂ. ಮಾದಪ್ಪ, ಎಂ.ಎನ್. ನರೇಂದ್ರ, ಹಾಗೂ ಗ್ರಾಮಸ್ಥರು ಉಪಸ್ಥಿತರಿದ್ದರು.