ಕುಶಾಲನಗರ, ಜು 16: ಕುಶಾಲನಗರ ವ್ಯಾಪ್ತಿಯಲ್ಲಿ ನದಿಗೆ ಅಡ್ಡಲಾಗಿ ನಿರ್ಮಿಸಿರುವ ತೂಗು ಸೇತುವೆಗಳ ನಿರ್ವಹಣಾ ಕಾರ್ಯ ನಡೆಯದಿರುವ ಹಿನ್ನೆಲೆ ಅಪಾಯದ ಸಾಧ್ಯತೆಯ ಭೀತಿ ಎದುರಾಗಿದೆ. ಕಳೆದ ಕೆಲವು ವರ್ಷಗಳ ಹಿಂದೆ ಕಣಿವೆ ರಾಮಲಿಂಗೇಶ್ವರ ದೇವಾಲಯದ ಬಳಿ ನಿರ್ಮಿಸಿರುವ ತೂಗು ಸೇತುವೆಯ ನಿರ್ವಹಣೆ ಇದುವರೆಗೆ ಆಗಿರುವದಿಲ್ಲ ಎಂದು ಸ್ಥಳೀಯರು ಪತ್ರಿಕೆಯೊಂದಿಗೆ ದೂರಿದ್ದಾರೆ. ಸೇತುವೆ ನಿರ್ಮಾಣಗೊಂಡು 7 ವರ್ಷಕ್ಕೂ ಅಧಿಕ ಅವಧಿ ಪೂರ್ಣಗೊಂಡಿದ್ದು ಸೇತುವೆಯ ಕಬ್ಬಿಣದ ರಾಡ್‍ಗಳು ಶಿಥಿಲಗೊಳ್ಳುವ ಸಾಧ್ಯತೆಯಿದ್ದು ಇವುಗಳ ಮರು ಅಳವಡಿಕೆಯೊಂದಿಗೆ ಕೆಲವು ತುಕ್ಕು ಹಿಡಿದ ಭಾಗಗಳ ಮರುಜೋಡಣೆ ಆಗಬೇಕಾಗಿದೆ.
ಸೇತುವೆ ಮೇಲೆ ಮಕ್ಕಳು, ವೃದ್ದರು, ಮಹಿಳೆಯರು ಸೇರಿದಂತೆ ದಿನನಿತ್ಯ ಸಾವಿರಾರು ನಾಗರೀಕರು ಓಡಾಡುತ್ತಿದ್ದಾರೆ. ಕಳೆದ 1 ವಾರದಿಂದ ನಿರಂತರ ಮಳೆ ಸುರಿದ ಹಿನ್ನೆಲೆ ಕಾವೇರಿ ನದಿ ತುಂಬಿ ಹರಿಯುತ್ತಿದೆ. ಸೇತುವೆಯ ಎರಡೂ ಭಾಗಗಳಲ್ಲಿ ಮಣ್ಣು ಕುಸಿತ ಮತ್ತಿತರ ಅನಾಹುತಗಳು ಸಂಭವಿಸುವ ಭೀತಿ ಉಂಟಾಗಿದೆ. ಈ ಬಗ್ಗೆ ತುರ್ತು ಗಮನಹರಿಸದಿದ್ದಲ್ಲಿ ಭಾರೀ ಅನಾಹುತ ಎದುರಾಗುವ ಸಾಧ್ಯತೆ ಅಧಿಕವಾಗಿದೆ ಎಂದು ಸ್ಥಳೀಯ ನಾಗರಿಕರು ಶಕ್ತಿಯೊಂದಿಗೆ ತಮ್ಮ ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ.
ಮಲೆನಾಡು ಅಭಿವೃದ್ಧಿ ಮಂಡಳಿ ಮೂಲಕ ನಿರ್ಮಾಣಗೊಂಡಿರುವ ಸೇತುವೆಗಳನ್ನು ಇದುವರೆಗೆ ಸ್ಥಳೀಯ ಆಡಳಿತಗಳಿಗೆ ಹಸ್ತಾಂತರ ಮಾಡದಿರುವದು ಈ ಆವಾಂತರಕ್ಕೆ ಕಾರಣವಾಗಿದೆ. ಗ್ರಾಮೀಣ ಭಾಗಗಳ ಸಂಪರ್ಕ ಸೇತುವಾದ ತೂಗು ಸೇತುವೆ ಜನರಿಗೆ ಬಹಳ ಸಹಕಾರಿಯಾಗಿದ್ದು ಇನ್ನೊಂದೆಡೆ ಪ್ರವಾಸಿಗರಿಗೆ ಕೂಡ ಇದು ಮುದ ನೀಡುತ್ತಿದೆ. ಪ್ರವಾಸಿಗರ ಒತ್ತಡದಿಂದ ತೂಗುಸೇತುವೆ ಶಿಥಿಲಗೊಳ್ಳುತ್ತಿದ್ದು, ಇದರ ನಿರ್ವಹಣೆ ಕಾಲಕಾಲಕ್ಕೆ ನಡೆಯಬೇಕಾಗಿದೆ ಎನ್ನುತ್ತಾರೆ ಕಣಿವೆ ರಾಮಲಿಂಗೇಶ್ವರ ದೇವಾಲಯದ ನಿರ್ದೇಶಕ ಇ.ಎಸ್.ಗಣೇಶ್.
ಈ ಸೇತುವೆ ಹೆಬ್ಬಾಲೆ ಗ್ರಾ.ಪಂ. ವ್ಯಾಪ್ತಿಗೆ ಒಳಪಟ್ಟಿದ್ದು ಸಂಬಂಧಿಸಿದ ಮಂಡಳಿ ತಮಗೆ ಸೇತುವೆಯನ್ನು ಹಸ್ತಾಂತರ ಮಾಡದ ಹಿನ್ನೆಲೆ ನಿರ್ವಹಣೆ ಕೆಲಸ ಮಾಡಲು ಅಸಾಧ್ಯವಾಗಿದೆ ಎಂದು ಪಂಚಾಯಿತಿ ಸದಸ್ಯ ವೆಂಕಟೇಶ್ ಪ್ರತಿಕ್ರಿಯೆ ವ್ಯಕ್ತಪಡಿಸಿದ್ದಾರೆ. ಕೂಡಲೆ ಜಿಲ್ಲಾಡಳಿತ ತೂಗು ಸೇತುವೆಯ ನಿರ್ವಹಣೆಯ ಬಗ್ಗೆ ಕ್ರಮಕೈಗೊಂಡು ಸಂಭಾವ್ಯ ಅಪಾಯವನ್ನು ತಪ್ಪಿಸುವಲ್ಲಿ ಮುಂದಾಗಬೇಕಾಗಿದೆ ಎನ್ನುತ್ತಾರೆ ಸ್ಥಳೀಯರು.
ಕುಶಾಲನಗರ ಸಮೀಪದ ಕಾವೇರಿ ನಿಸರ್ಗಧಾಮ ಮತ್ತು ಗುಡ್ಡೆಹೊಸೂರು ಬಳಿಯ ತೆಪ್ಪದಕಂಡಿ ಬಳಿ ಕೂಡ ಕಾವೇರಿ ನದಿಗೆ ಅಡ್ಡಲಾಗಿ ತೂಗುಸೇತುವೆ ನಿರ್ಮಾಣಗೊಂಡಿದ್ದು ಇವುಗಳ ನಿರ್ವಹಣೆಗೆ ಜಿಲ್ಲಾಡಳಿತ ಕಾರ್ಯಯೋಜನೆ ರೂಪಿಸುವದರೊಂದಿಗೆ ಸೇತುವೆಯ ನಿರ್ವಹಣೆಗೆ ಕಾಯಕಲ್ಪ ಕಲ್ಪಿಸಬೇಕಾಗಿದೆ.