ವೀರಾಜಪೇಟೆ, ಜು. 16: ವೀರಾಜಪೇಟೆ ಬಳಿಯ ಮಗ್ಗುಲ ಗ್ರಾಮದಲ್ಲಿ ನಾಗರ ಹೊಳೆಯ ರಾಷ್ಟೀಯ ಉದ್ಯಾನವನದಿಂದ ಬಂದಿರುವ ನಾಲ್ಕು ಕಾಡಾನೆಗಳು ತೋಟದಲ್ಲಿ ದಾಂಧಲೆ ನಡೆಸಿವೆ. ಇದರಿಂದ ಮಗ್ಗುಲದ ಸಿ.ಬಿದ್ದಪ್ಪ ಎಂಬವರ ಬಾಳೆ ತೋಟ ಸಂಪೂರ್ಣವಾಗಿ ನಾಶಗೊಂಡಿದೆ.

ಮಗ್ಗುಲ ಗ್ರಾಮದ ನಾಟಿ ಗದ್ದೆಗೂ ನುಗ್ಗಿದ ಕಾಡಾನೆಗಳ ಹಿಂಡು ನಾಟಿಗಾಗಿ ನೆಟ್ಟ ಭತ್ತದ ಸಸಿ ಮಡಿಗಳನ್ನು ತುಳಿದು ನಾಶ ಮಾಡಿವೆ. ಭಾರೀ ಮಳೆಯ ಕಾರಣ ಈ ವಿಭಾಗದಲ್ಲಿ ನಾಟಿಗೆ ಅಡಚಣೆಯಾಗಿದ್ದು, ಗದ್ದೆಯಲ್ಲಿಯೇ ಸಸಿ ಮಡಿಗಳನ್ನು ಬಿಡಲಾಗಿತ್ತು.

ಮಗ್ಗುಲದ ಸುತ್ತ ಮುತ್ತಲಿನ ಕಾಫಿ ತೋಟಕ್ಕೂ ನುಗ್ಗಿರುವ ಕಾಡಾನೆಗಳು ತೋಟದಲ್ಲಿ ತೆಂಗಿನ ಮರಗಳು, ಕಾಫಿ ಗಿಡಗಳನ್ನು ನಾಶಗೊಳಿಸಿವೆ. ಅರಣ್ಯ ಇಲಾಖೆ ಕಾಡಾನೆ ಧಾಳಿಗೆ ಮೊದಲೇ ಕಾಡಾನೆಗಳು ತೋಟಕ್ಕೆ ಬಾರದಂತೆ ತಡೆಯಬೇಕು. ಕಾಡಾನೆ ಧಾಳಿಯಾಗಿ ಬೆಳೆಗಾರರ ಗಿಡಗಳು ನಾಶಗೊಂಡ ನಂತರ ಇಲಾಖೆಯ ಸಿಬ್ಬಂದಿಗಳು ಬಂದು ಬೆಳೆಗಾರರಿಗೆ ಏನೂ ಪ್ರಯೋಜನವಾಗುವದಿಲ್ಲವಾದರೂ ಗ್ರಾಮಸ್ಥರು ಧಾಳಿಯಿಂದ ನಷ್ಟಕ್ಕೊಳಪಟ್ಟವರು ಅರಣ್ಯ ಇಲಾಖೆಗೆ ದೂರು ನೀಡಿರುವದಾಗಿ ಬಿದ್ದಪ್ಪ ಮಾಧ್ಯಮದವರಿಗೆ ತಿಳಿಸಿದ್ದಾರೆ.