ಸೋಮವಾರಪೇಟೆ, ಜು. 16: ಕೊಡಗಿಗೆ ರೈಲು ಸಂಪರ್ಕ ಕಲ್ಪಿಸುವ ಬಗ್ಗೆ ಸಂಸದ ಪ್ರತಾಪ್ ಸಿಂಹ, ಕಾಂಗ್ರೆಸ್ ಮುಖಂಡರಾದ ಕೆ.ಪಿ. ಚಂದ್ರಕಲಾ, ಶಾಸಕ ಅಪ್ಪಚ್ಚು ರಂಜನ್ ನಡುವೆ ಚರ್ಚೆಯ ಜುಗಲ್ಬಂದಿ ನಡೆಯಿತು.
ಪ.ಪಂ. ನೂತನ ಸಭಾಂಗಣದಲ್ಲಿ ನಡೆದ ಕಾರ್ಯಕ್ರಮದಲ್ಲಿ ಮಾತನಾಡಿದ ಕೆ.ಪಿ. ಚಂದ್ರಕಲಾ ಅವರು, ಸಂಸದ ಪ್ರತಾಪ್ ಸಿಂಹ ಅವರನ್ನು ಹೊಗಳುತ್ತಲೇ ಕಾಲೆಳೆದರು. ಕುಶಾಲನಗರದವರೆಗೆ ರೈಲು ತರಬೇಕಿತ್ತು. 4 ವರ್ಷವಾದರೂ ಕೆಲಸ ಆಗಿಲ್ಲ. ನಿಮ್ಮ ಅವಧಿ ಮುಗಿಯುವದರೊಳಗೆ ರೈಲ್ವೇ ಯೋಜನೆ ಅನುಷ್ಠಾನಗೊಳಿಸಿ. ಕೊಡಗಿಗೆ ರೈಲು ಬೇಡ ಎಂದು ಕೆಲವರು ಹೇಳುತ್ತಿರುವದು ಸರಿಯಲ್ಲ. ರೈಲ್ವೇ ಯೋಜನೆ ಬಂದರೆ ಕೊಡಗು ಇನ್ನಷ್ಟು ಅಭಿವೃದ್ಧಿಗೆ ತೆರೆದುಕೊಳ್ಳಲಿದೆ. ಎಲ್ಲದಕ್ಕೂ ತಡೆಯೊಡ್ಡುವದು ಸರಿಯಲ್ಲ. ಕೊಡಗಿಗೆ ರೈಲು ಬಂದರೆ ಅಂತಹ ಸಮಸ್ಯೆಯೇನಿಲ್ಲ ಎಂದರು.
ಈ ಸಂದರ್ಭ ಮಧ್ಯೆ ಪ್ರವೇಶಿಸಿದ ಸಂಸದ ಪ್ರತಾಪ್ ಸಿಂಹ, ಕೇಂದ್ರ ಸರ್ಕಾರ ಕುಶಾಲನಗರದವರೆಗೆ ರೈಲ್ವೇ ಸಂಪರ್ಕ ನೀಡಲು ಸಿದ್ದವಿದೆ. ಆದರೆ ಕಳೆದ ಸಾಲಿನಲ್ಲಿದ್ದ ನಿಮ್ಮದೇ ಪಕ್ಷದ ರಾಜ್ಯ ಸರ್ಕಾರ ಇದ್ದು, ಭೂ ಸ್ವಾಧೀನ ಪ್ರಕ್ರಿಯೆ ನಡೆಸಿಲ್ಲ. ಈಗಿನ ಸರ್ಕಾರದಲ್ಲಾದರೂ ಭೂ ಸ್ವಾಧೀನ ಪ್ರಕ್ರಿಯೆ ನಡೆಸಿ, ರೈಲು ತರುತ್ತೇವೆ ಎಂದರು.
ಮಾಜೀ ಸಚಿವ ವಿಶ್ವನಾಥ್, ಸದಾನಂದಗೌಡ ಅವರುಗಳೂ ಸಹ ರೈಲಿನ ಬಗ್ಗೆ ಮಾತನಾಡಿದರೇ ಹೊರತು, ಕ್ರಿಯಾಶೀಲರಾಗಿಲ್ಲ ಎಂದು ಚಂದ್ರಕಲಾ ದೂರಿದರು.
ಇದೇ ವಿಷಯವನ್ನು ಶಾಸಕ ಅಪ್ಪಚ್ಚು ರಂಜನ್ ಅವರೂ ಸಹ ತಮ್ಮ ಭಾಷಣದಲ್ಲಿ ಪ್ರಸ್ತಾಪಿಸಿ, ಪರೋಕ್ಷವಾಗಿ ಚಂದ್ರಕಲಾ ಅವರಿಗೆ ಸವಾಲು ಹಾಕಿದರು. ಹಿಂದೆ ನಿಮ್ಮದೇ ಪಕ್ಷದ ಮುನಿಯಪ್ಪ ಅವರು ರೈಲ್ವೇ ಯೋಜನೆಗೆ ಭೂಮಿಪೂಜೆ ನೆರವೇರಿಸಿದ ನಂತರ, ಯಾಕೆ ಇತ್ತ ತಲೆಹಾಕಿಲ್ಲ ಎಂದು ಪ್ರಶ್ನಿಸಿದರು.
ಇತ್ತ ಮಾತು ಮುಂದುವರೆಸಿದ ಚಂದ್ರಕಲಾ, ಸೋಮವಾರಪೇಟೆ ಇನ್ನಷ್ಟು ಅಭಿವೃದ್ಧಿಯಾಗಬೇಕು. ಶಾಸಕರು ಈ ಬಾರಿ ಕೆಲಸ ಮಾಡಲೇ ಬೇಕು. ಇಲ್ಲಾಂದ್ರೆ ನಾವು ಬಿಡಲ್ಲ. ನಾವೆಲ್ಲರೂ ಸೇರಿ ಅಭಿವೃದ್ಧಿ ಮಾಡುವ. ಜೀವಿಜಯ ಅವರನ್ನೂ ಸೇರಿಸಿಕೊಂಡು ಸೋಮವಾರ ಪೇಟೆಗೆ ಹೆಚ್ಚಿನ ಕೆಲಸ ಮಾಡುವ ಎಂದರು.