ಕೂಡಿಗೆ, ಜು. 16: ಬೆಂಗಳೂರಿನ ರಾಜಾನಕುಂಟೆಯ ಸಾಯಿ ವಿದ್ಯಾ ತಾಂತ್ರಿಕ ಮಹಾವಿದ್ಯಾಲಯದ ಟೀಂ ದಶಮುಖ ತಂಡದ 10 ವಿದ್ಯಾರ್ಥಿಗಳು ಸಮೀಪದ ಮುಳ್ಳುಸೋಗೆ ಗ್ರಾಮ ಪಂಚಾಯಿತಿ ವ್ಯಾಪ್ತಿಯ ಸಾರ್ವಜನಿಕ ಸ್ಥಳಗಳನ್ನು ಸ್ವಚ್ಚ ಮಾಡುವ ಕಾರ್ಯದಲ್ಲಿ ತೊಡಗಿದ್ದಾರೆ.
ರಾಜಾನಕುಂಟೆಯ ಸಾಯಿ ವಿದ್ಯಾ ತಾಂತ್ರಿಕ ಮಹಾವಿದ್ಯಾಲಯದ ಪ್ರಾಂಶುಪಾಲರಾದ ಡಾ.ಹೆಚ್.ಎಸ್.ರಮೇಶ್, ವಿದ್ಯಾಸಂಸ್ಥೆಯ ರಾಷ್ಟ್ರೀಯ ಸೇವಾ ಯೋಜನೆಯ ನಿರ್ವಾಹಕರಾದ ಡಾ. ಹೆಚ್.ಟಿ. ಹರೀಶ್ ಅವರ ಮಾರ್ಗದರ್ಶನದಲ್ಲಿ 10 ವಿದ್ಯಾರ್ಥಿಗಳ ತಂಡವು ಮುಳ್ಳುಸೋಗೆ ಗ್ರಾಮ ಪಂಚಾಯಿತಿಯ ಪಕ್ಕದಲ್ಲಿರುವ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಯ ಆವರಣ, ಅಂಬೇಡ್ಕರ್ ಬಡಾವಣೆಯ ರಸ್ತೆಗಳನ್ನು ಸ್ವಚ್ಛಗೊಳಿಸಿದರು. ಇದರ ಜೊತೆಗೆ ತ್ಯಾಜ್ಯ ಸಂಗ್ರಹಣೆ, ತ್ಯಾಜ್ಯ ವಿಲೇವಾರಿಯ ಬಗ್ಗೆ ಜನರಿಗೆ ಮಾಹಿತಿ ನೀಡಿ, ಅರಿವು ಮೂಡಿಸಿದರು.
ಈ ವಿದ್ಯಾರ್ಥಿಗಳು ನಾಲ್ಕು ದಿನಗಳ ಕಾಲ ಇದೇ ರೀತಿ ಶ್ರಮದಾನ ಮಾಡಲಿದ್ದಾರೆ. ಈ ಸಂದರ್ಭ ಮುಳ್ಳುಸೋಗೆ ಗ್ರಾಮ ಪಂಚಾಯಿತಿ ಆಡಳಿತ ಮಂಡಳಿ ಮತ್ತು ಪಂಚಾಯಿತಿ ಅಭಿವೃದ್ಧಿ ಅಧಿಕಾರಿ ರಾಜಶೇಖರ್ ಇದ್ದರು.