ಸುಂಟಿಕೊಪ್ಪ, ಜು. 16: ಮಹಿಳೆಯರು ತಮ್ಮಲ್ಲಿ ವೈಚಾರಿಕ ಚಿಂತನೆ ಬೆಳೆಸಿಕೊಳ್ಳುವ ಮೂಲಕ ಕಂದಾಚಾರ, ಮೌಢ್ಯಗಳಂತಹ ಸಾಮಾಜಿಕ ಅನಿಷ್ಠ ಪದ್ಧತಿಗಳ ವಿರುದ್ಧ ಧ್ವನಿ ಎತ್ತಿ ಹೋರಾಟ ನಡೆಸುವ ಮೂಲಕ ಸ್ವಾಸ್ಥ್ಯ ಸಮಾಜ ನಿರ್ಮಾಣಕ್ಕೆ ತಮ್ಮನ್ನು ತೊಡಗಿಸಿಕೊಳ್ಳಬೇಕು ಎಂದು ಸುಂಟಿಕೊಪ್ಪ ಸರ್ಕಾರಿ ಪ್ರೌಢಶಾಲೆಯ ವಿಜ್ಞಾನ ಶಿಕ್ಷಕರೂ ಆದ ಇಕೋ ಕ್ಲಬ್‍ನ ಸಂಚಾಲಕ ಟಿ.ಜಿ. ಪ್ರೇಮಕುಮಾರ್ ಹೇಳಿದರು.

ಸುಂಟಿಕೊಪ್ಪದಲ್ಲಿ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆಯ ಸುಂಟಿಕೊಪ್ಪ ವಲಯದ ಗದ್ದೆಹಳ್ಳ ಒಕ್ಕೂಟದ ವತಿಯಿಂದ ಮಂಜುನಾಥಯ್ಯ ಮೀನಾಕ್ಷಮ್ಮ ಕಲ್ಯಾಣ ಮಂದಿರದಲ್ಲಿ ಏರ್ಪಡಿಸಿದ್ದ ಯೋಜನೆಯ ಮಹಿಳಾ ಸಂಘಟನೆಗಳ ವಾರ್ಷಿಕ ಸಭೆಯಲ್ಲಿ ‘ಮಹಿಳೆ ಮತ್ತು ಪರಿಸರ’ ಕುರಿತು ಉಪನ್ಯಾಸ ನೀಡಿದರು. ಗ್ರಾಮಾಭಿವೃದ್ಧಿ ಸಂಘದ ಚಟುವಟಿಕೆಗಳು ಮಹಿಳೆಯರಲ್ಲಿ ಆರ್ಥಿಕ ಸಬಲೀಕರಣದೊಂದಿಗೆ ಅವರಲ್ಲಿ ನಾಯಕತ್ವ ಗುಣ ಬೆಳೆಸುವ ಮೂಲಕ ಸಾಮಾಜಿಕ ಸೇವೆಯಲ್ಲಿ ತೊಡಗಿಸಿಕೊಳ್ಳಲು ಸಹಕಾರಿಯಾಗಿವೆ ಎಂದರು.

ಪ್ರಾಸ್ತಾವಿಕವಾಗಿ ಮಾತನಾಡಿದ ಯೋಜನೆಯ ಮೇಲ್ವಿಚಾರಕಿ ಕಾಂತಿಕಾಮಣಿ, ಗ್ರಾಮಾಭಿವೃದ್ಧಿ ಯೋಜನೆ ವತಿಯಿಂದ ಪರಿಸರದಲ್ಲಿ ಗಿಡ ನೆಡುವದು ಸೇರಿದಂತೆ ಪರಿಸರ ಸ್ವಚ್ಛತಾ ಕಾರ್ಯಕ್ಕೆ ಆದ್ಯತೆ ನೀಡಲಾಗುತ್ತಿದೆ ಎಂದರು. ಯೋಜನೆಯ ಸೇವಾ ಪ್ರತಿನಿಧಿ ಜ್ಯೋತಿ ಲಕ್ಷ್ಮಿ ಅಧ್ಯಕ್ಷತೆ ವಹಿಸಿದ್ದರು. ಪದಾಧಿಕಾರಿಗಳಾದ ಸಬೀನಾ, ಲೀಲಾವತಿ, ದಿವ್ಯ ಇದ್ದರು. ಗೀತಾ ವಿಶ್ವನಾಥ್ ಸ್ವಾಗತಿಸಿ, ಲೀಲಾ ವಂದಿಸಿದರು. ಯೋಜನೆ ವತಿಯಿಂದ ಕೈಗೊಳ್ಳಬೇಕಾದ ಕಾರ್ಯಯೋಜನೆಗಳ ಕುರಿತು ಸಮಾಲೋಚನೆ ನಡೆಸಲಾಯಿತು.ಪರಿಸರ ಪ್ರತಿಜ್ಞಾ ವಿಧಿ ಸ್ವೀಕಾರ: ನಂತರ ಮಹಿಳೆಯರು ತಾವು ತಮ್ಮನ್ನು ಪರಿಸರ ಸಂರಕ್ಷಣೆಯಲ್ಲಿ ತೊಡಗಿಸಿಕೊಳ್ಳುವದಾಗಿ ಪರಿಸರ ಪ್ರತಿಜ್ಞಾ ವಿಧಿ ಸ್ವೀಕರಿಸಿದರು. ಶಿಕ್ಷಕ ಟಿ.ಜಿ.ಪ್ರೇಮಕುಮಾರ್ ಪರಿಸರ ಪ್ರತಿಜ್ಞಾ ವಿಧಿ ಬೋಧಿಸಿದರು.