ಮಡಿಕೇರಿ, ಜು. 16: ಹಾರಂಗಿ ಜಲಾಶಯ ಭರ್ತಿಗೊಂಡು ಹುದುಗೂರು ಮಾರ್ಗದ ಸೇತುವೆ ಮುಳುಗಡೆ ಅಂಚಿನಲ್ಲಿ ಇರುವ ಬಗ್ಗೆ ಇಂದು ವಿಧಾನಪರಿಷತ್ ಸದಸ್ಯ ಎಂ.ಪಿ. ಸುನಿಲ್ ಸುಬ್ರಮಣಿ ಹಾಗೂ ಸಂಸದ ಪ್ರತಾಪ್ ಸಿಂಹ ಖುದ್ದು ಭೇಟಿ ನೀಡಿ ಪರಿಶೀಲಿಸಿದರು. ಈ ಸಂದರ್ಭ ಅಲ್ಲಿನ ಪ್ರಬಾರ ಕಾರ್ಯಪಾಲಕ ಅಭಿಯಂತರ ಧರ್ಮರಾಜ್ ಅವರೊಂದಿಗೆ ಸಮಾಲೋಚನೆ ನಡೆಸಿದರು.
ಪ್ರಸಕ್ತ ವರ್ಷದಲ್ಲಿ ಕೊಡಗಿನಲ್ಲಿ ವಿಪರೀತ ಮಳೆಯೊಂದಿಗೆ ಜಲಾಶಯ ಬೇಗನೆ ಭರ್ತಿಗೊಂಡಿರುವ ಬಗ್ಗೆ ಜನನಾಯಕರು ಅಧಿಕಾರಿಯಿಂದ ಮಾಹಿತಿ ಪಡೆದುಕೊಂಡರು. ಅಲ್ಲದೆ, ಹುದುಗೂರು ಸಂಪರ್ಕ ರಸ್ತೆಯ ಕೆಳ ಸೇತುವೆ ಮೂಲಕ ಸಾರ್ವಜನಿಕರು, ಪ್ರವಾಸಿಗರು ತೆರಳುವ ಸಂದರ್ಭ ಹೆಚ್ಚಿನ ನಿಗಾವಹಿಸುವಂತೆ ಸಲಹೆ ನೀಡಿದರು.
ಈ ವೇಳೆ ‘ಶಕ್ತಿ’ಯೊಂದಿಗೆ ಮಾತನಾಡಿದ ಜನಪ್ರತಿನಿಧಿಗಳಿಬ್ಬರು ತಾ.19ರಂದು ಮುಖ್ಯಮಂತ್ರಿ ಕುಮಾರಸ್ವಾಮಿ ಅವರ ಕೊಡಗು ಭೇಟಿ ಸಂದರ್ಭ ಕೊಡಗು ಜಿಲ್ಲೆಯಲ್ಲಿ ಮಳೆ ಹಾನಿಯಿಂದ ಎದುರಾಗಿರುವ ಪರಿಸ್ಥಿತಿ ಬಗ್ಗೆ ಗಮನ ಸೆಳೆದು ವಿಶೇಷ ಪ್ಯಾಕೇಜ್ ಮೂಲಕ ನೆರವು ಕಲ್ಪಿಸುವಂತೆ ಬೇಡಿಕೆ ಸಲ್ಲಿಸುವದಾಗಿ ನುಡಿದರು. ಬಿಜೆಪಿ ಕ್ಷೇತ್ರ ಸಮಿತಿ ಅಧ್ಯಕ್ಷ ಎಂ.ಎನ್. ಕುಮಾರಪ್ಪ ಹಾಗೂ ಇತರರು ಹಾಜರಿದ್ದರು.