ಗೋಣಿಕೊಪ್ಪ ವರದಿ, ಜು. 17: ದೇವಮಚ್ಚಿ ಸರ್ಕಾರಿ ಪ್ರಾಥಮಿಕ ಶಾಲಾ ಕಟ್ಟಡ ಉದ್ಘಾಟನಾ ಕಾರ್ಯಕ್ರಮವನ್ನು ಶಾಸಕರ ಮುಂದಾಳತ್ವದಲ್ಲಿ ಬಿಜೆಪಿ ಕಾರ್ಯಕ್ರಮವಾಗಿ ಬಳಸಿಕೊಂಡ ಕಾರಣ ನಾವು ಕಾರ್ಯಕ್ರಮವನ್ನು ಬಹಿಷ್ಕರಿಸಿ ಬರುವಂತಾಯಿತು ಎಂದು ಜಿಲ್ಲಾ ಪಂಚಾಯ್ತಿ ಸದಸ್ಯೆ ಪಿ. ಆರ್. ಪಂಕಜ ಹೇಳಿದರು. ಕಾರ್ಯಕ್ರಮದಲ್ಲಿ ನಮ್ಮನ್ನು ಕಡೆಗಣಿಸಿ ಬಿಜೆಪಿ ಪಕ್ಷದವರೇ ಜನಪ್ರತಿನಿಧಿಗಳಂತೆ ಪಾಲ್ಗೊಂಡರು. ಇಂತಹ ಕೀಳು ಮಟ್ಟದ ರಾಜಕೀಯ ಮಾಡಿದ ಕಾರಣ ಕಾರ್ಯಕ್ರಮವನ್ನು ಬಹಿಷ್ಕರಿಸಿ ಬರಲಾಯಿತು ಎಂದು ಸುದ್ದಿಗೋಷ್ಠಿಯಲ್ಲಿ ಆರೋಪಿಸಿದರು.

ಈ ಶಾಲೆ ಕುಸಿಯುವ ಹಂತದಲ್ಲಿದ್ದಾಗ ನಾನೇ ಉಸ್ತುವಾರಿ ಸಚಿವರ ಮೂಲಕ 15 ಲಕ್ಷ ಅನುದಾನ ತಂದು ಕಟ್ಟಡ ನಿರ್ಮಾಣವಾಗಿದೆ. ಶಾಸಕರ ಕ್ಷೇತ್ರವಾಗಿದ್ದರೂ ಇತ್ತ ಗಮನ ಹರಿಸಿರಲಿಲ್ಲ. ಈಗ ಉದ್ಘಾಟನೆಗೆ ರಾಜಕೀಯ ಮಾಡುತ್ತಿರುವದು ಎಷ್ಟು ಸರಿ ಎಂದು ಪ್ರಶ್ನಿಸಿದರು.

ತಾ. ಪಂ. ಸದಸ್ಯೆ ಆಶಾ ಜೇಮ್ಸ್ ಮಾತನಾಡಿ, ಬಿಇಒ ಲೋಕೇಶ್ ಕೂಡ ಈ ಬಗ್ಗೆ ತಮ್ಮ ಕರ್ತವ್ಯ ನಿಭಾಯಿಸಲಿಲ್ಲ. ನಮ್ಮನ್ನು ಸುಮ್ಮನೆ ಸತಾಯಿಸಿದರು. ಶಾಲೆ ಎಸ್‍ಡಿಎಂಸಿ ಸದಸ್ಯರನ್ನು ಬೆಳಿಗ್ಗೆ 11 ಗಂಟೆಯಿಂದ ಕೂರಿಸಿಕೊಂಡು ಸತಾಯಿಸಲಾಗಿದೆ. ಶಾಸಕ ಕೆ. ಜಿ. ಬೋಪಯ್ಯ ಗ್ರಾಮದಲ್ಲಿ ನಾವು ಜನಪ್ರತಿನಿಧಿಗಳು ಇದ್ದರೂ ಕೂಡ ಸಣ್ಣ ಮಟ್ಟದ ಬೀದಿ ದೀಪ ಉದ್ಘಾಟನೆಗೂ ಬರುವ ಮೂಲಕ ನಮ್ಮನ್ನು ಸರ್ಕಾರದ ಕಾರ್ಯಕ್ರಮದಿಂದ ದೂರ ಇರುವಂತೆ ಮಾಡುತ್ತಿದ್ದಾರೆ ಎಂದು ಆರೋಪಿಸಿದರು.