ಜೆಡಿಎಸ್ ಸಭೆಯಲ್ಲಿ ಅಧ್ಯಕ್ಷ ಸಂಕೇತ್ ಪೂವಯ್ಯ
ಮಡಿಕೇರಿ, ಜು.17: ಜೆಡಿಎಸ್‍ನಲ್ಲಿ ನಿಷ್ಕ್ರಿಯರಾಗಿರುವ ಕೆಲವು ಮಂದಿ ಜೆಡಿಎಸ್‍ನ ಸಮಾಜ ಮುಖಿ ಕೆಲಸಗಳ ಬಗ್ಗೆ ಟೀಕೆ ಮಾಡುತ್ತಿದ್ದು, ಇದಕ್ಕೆ ಕಾರ್ಯಕರ್ತರು ತಲೆಕೆಡಿಸಿಕೊಳ್ಳುವ ಅಗತ್ಯವಿಲ್ಲ ಎಂದು ಜೆಡಿಎಸ್ ಜಿಲ್ಲಾಧ್ಯಕ್ಷ ಸಂಕೇತ್ ಪೂವಯ್ಯ ಹೇಳಿದರು.
ನಗರದ ಕೊಹಿನೂರು ರಸ್ತೆಯ ಚೇಂಬರ್ ಆಫ್ ಕಾಮರ್ಸ್ ಸಭಾಂಗಣ ದಲ್ಲಿ ಮುಖ್ಯಮಂತ್ರಿ ಕುಮಾರಸ್ವಾಮಿ ಜಿಲ್ಲೆಗೆ ಬೇಟಿ ನೀಡುತ್ತಿರುವ ಹಿನ್ನೆಲೆಯಲ್ಲಿ ಕರೆಯಲಾಗಿದ್ದ ಪಕ್ಷದ ಸಭೆಯಲ್ಲಿ ಅವರು ಅಧ್ಯಕ್ಷತೆ ವಹಿಸಿ ಮಾತನಾಡಿದರು. ಜಿಲ್ಲಾ ಜೆಡಿಎಸ್ ಜನಪರ ಕೆಲಸಗಳಿಗೆ ಸದಾ ಒತ್ತು ನೀಡಲಿದೆ ಹೊರತಾಗಿ ಚುನಾವಣಾ ಕೇಂದ್ರೀಕೃತ ರಾಜಕಾರಣ ಮಾಡುವದಿಲ್ಲ. ಮುಖ್ಯಮಂತ್ರಿ ಕುಮಾರಸ್ವಾಮಿಯವರಿಗೆ ಈಗಾಗಲೇ ಜಿಲ್ಲೆ ಸಮಸ್ಯೆಗಳ ಬಗ್ಗೆ ಮನವರಿಕೆ ಮಾಡಿಕೊಡಲಾಗಿದ್ದು, ಜಿಲ್ಲೆಗೆ ಆಗಮಿಸಿದ ಸಂದರ್ಭದಲ್ಲೂ ಮತ್ತೊಮ್ಮೆ ಕೊಡಗಿನ ಸಮಸ್ಯೆಗಳ ಬಗ್ಗೆ ಪಸ್ತಾಪಿಸಿ ಪರಿಹಾರ ಕಂಡುಕೊಳ್ಳುವ ನಿಟ್ಟಿನಲ್ಲಿ ಜೆಡಿಎಸ್ ಕಾರ್ಯಕರ್ತರು ಹಾಗೂ ಮುಖಂಡರ ಕಾರ್ಯಪ್ರವೃತ ರಾಗುವದಾಗಿ ಅವರು ನುಡಿದರು.
ಪ್ರಚಾರ ಸಮಿತಿ ಅಧ್ಯಕ್ಷ ಕೆ.ಎಂ. ಗಣೇಶ್ ಮಾತನಾಡಿ, ಮುಂಬರುವ ಲೋಕಸಭೆ, ನಗರಸಭೆ, ಪಟ್ಟಣ ಪಂಚಾಯಿತಿ ಚುನಾವಣೆಗಳಲ್ಲಿ ಜೆಡಿಎಸ್ ಕಾರ್ಯಕರ್ತರು ಪಕ್ಷವನ್ನು ಅಧಿಕಾರಕ್ಕೆ ತರುವ ನಿಟ್ಟಿನಲ್ಲಿ ಒಟ್ಟಾಗಿ ಕೆಲಸ ಮಾಡಬೇಕೆಂದು ಅಭಿಪ್ರಾಯ ವ್ಯಕ್ತಪಡಿಸಿದರು.
ರಾಜ್ಯ ಸಮಿತಿ ಪ್ರಮುಖ ಷರೀಫ್ ಮಾತನಾಡಿ, ಜನರ ಕೋರಿಕೆಗಳನ್ನು ಮುಖ್ಯಮಂತ್ರಿಯವರಿಗೆ ತಲಪಿಸುವ ಕೆಲಸವನ್ನು ಜೆಡಿಎಸ್ ಕಾರ್ಯಕರ್ತರು ಮಾಡಬೇಕೆಂದರು.
ವೀರಾಜಪೇಟೆ ನಗರ ಜೆಡಿಎಸ್ ಅಧ್ಯಕ್ಷ ಮತೀನ್ ಮಾತನಾಡಿ, ಪಕ್ಷದ ಬಗ್ಗೆ ನಾಯಕರ ಕುರಿತು ಅಪಪ್ರಚಾರ ಮಾಡುವವರ ವಿರುದ್ಧ ಪಕ್ಷ ಶಿಸ್ತು ಕ್ರಮ ಕೈಗೊಳ್ಳುವಂತಾಗಬೇಕೆಂದರು.
ಪ್ರಮುಖರಾದ ಆದಿಲ್ ಪಾಷಾ ಹಾಗೂ ಇಸಾಕ್ ಮಾತನಾಡಿ ಕುಮಾರಸ್ವಾಮಿಯವರಿಗೆ ಬಲ ತುಂಬುವ ಕೆಲಸವನ್ನು ಜೆಡಿಎಸ್ ಕಾರ್ಯಕರ್ತರು ಮಾಡಬೇಕು. ವಿಧಾನಸಭಾ ಚುನಾವಣೆ ಸೋಲಿನ ಬಗ್ಗೆ ಆತ್ಮವಲೋಕನ ಮಾಡಿಕೊಂಡು ಮುಂದಿನ ಚುನಾವಣೆಗಳನ್ನು ಎದುರಿಸಲು ಸನ್ನದ್ಧರಾಗಬೇಕು ಎಂದು ನುಡಿದರು. ಬಿಎಸ್‍ಪಿ ಜಿಲ್ಲಾಧ್ಯಕ್ಷ ಮೋಹನ್ ಮೌರ್ಯ ಮಾತನಾಡಿ ವಿಧಾನಸಭಾ ಚುನಾವಣೆಯಲ್ಲಿ ಅತಿಯಾದ ಆತ್ಮವಿಶ್ವಾಸ ಜೆಡಿಎಸ್ ಸೋಲಿಗೆ ಕಾರಣವಾಯಿತು. ಮುಂದೆ ಎಲ್ಲಾ ಕಾರ್ಯಕರ್ತರು ತಳಮಟ್ಟದಿಂದ ಪಕ್ಷಕ್ಕಾಗಿ ದುಡಿಯು ವಂತಾಗಬೇಕು ಎಂದು ನುಡಿದರು. ಪಕ್ಷದ ಮುಖಂಡರಾದ ಪಾಣತ್ತಲೆ ವಿಶ್ವನಾಥ್, ಜಯಮ್ಮ, ಧರ್ಮಪ್ಪ, ಮಂಜುನಾಥ್, ಅಮ್ಮಂಡ ವಿವೇಕ್, ಹೆಚ್.ಟಿ. ವಸಂತ, ತಿರುಮಲ ಸೋನಾ, ಲೀಲಾ ಶೇಷಮ್ಮ, ರವಿಕಿರಣ್ ಸೇರಿದಂತೆ ಹಲವಾರು ಮುಖಂಡರು, ಕಾರ್ಯಕರ್ತರು ಸಭೆಯಲ್ಲಿ ಪಾಲ್ಗೊಂಡಿದ್ದರು.