ಶ್ರೀಮಂಗಲ, ಜು. 17: ದ. ಕೊಡಗಿನ ಪಶ್ಚಿಮ ಘಟ್ಟ ಪ್ರದೇಶದಲ್ಲಿ ಗಾಳಿ ಸಹಿತ ಮಳೆ ಧಾರಾಕಾರವಾಗಿ ಮುಂದುವರೆದಿದ್ದು, ಘಟ್ಟ ಪ್ರದೇಶ ಹೊರತಾದ ಜಾಗದಲ್ಲಿ ಮಂಗಳವಾರ ಮಳೆಯ ಅಬ್ಬರ ತಗ್ಗಿದೆ. ಬಿರುನಾಣಿ, ಶ್ರೀಮಂಗಲ, ಟಿ. ಶೆಟ್ಟಿಗೇರಿ, ಹುದಿಕೇರಿ, ಮತ್ತು ಬಿ.ಶೆಟ್ಟಿಗೇರಿ ಗ್ರಾ.ಪಂ. ವ್ಯಾಪ್ತಿಯ ಹಲವು ಗ್ರಾಮಗಳು ಪಶ್ಚಿಮ ಘಟ್ಟ ಪ್ರದೇಶದ ತಪ್ಪಲಿನಲ್ಲಿದ್ದು, ಈ ವ್ಯಾಪ್ತಿಗೆ ಸೋಮವಾರ ರಾತ್ರಿ ಹಾಗೂ ಮಂಗಳವಾರ ಸಹ ಧಾರಾಕಾರ ಮಳೆ ಸುರಿಯುತ್ತಿದೆ. ಈ ಪ್ರದೇಶದಿಂದ 20 ಕಿ.ಮೀ ದೂರದ ಪ್ರದೇಶದವಾದ ಪೊನ್ನಂಪೇಟೆ, ಗೋಣಿಕೊಪ್ಪ, ಇತ್ಯಾದಿ ಪ್ರದೇಶಗಳಲ್ಲಿ ಮಳೆ ಬಹುತೇಕ ಮಂಗಳವಾರ ಬಿಡುವು ನೀಡಿತ್ತು. ಆದರೆ, ಇದೇ ವೇಳೆಯಲ್ಲಿ ಪಶ್ಚಿಮ ಘಟ್ಟದ ತಪ್ಪಲಿನ ಪ್ರದೇಶಗಳಲ್ಲಿ ದಾರಾಕಾರ ಮಳೆ ಮುಂದುವರೆದಿರುವದು ಪ್ರಕೃತಿಯ ವಿಸ್ಮಯವನ್ನು ತೋರಿಸುವಂತಿದೆ.
ದ.ಕೊಡಗಿನ ಘಟ್ಟ ಪ್ರದೇಶಗಳಲ್ಲಿ ಅತಿ ಹೆಚ್ಚು ಮಳೆಯಾಗಿದ್ದು, ಇದುವರೆಗೆ ಬಿರುನಾಣಿಗೆ 143.45 ಇಂಚು ಮಳೆಯಾಗಿದ್ದು, ಕಳೆದ ವರ್ಷ ಇದೇ ಅವಧಿಗೆ 131 ಇಂಚು ಮಳೆಯಾಗಿತ್ತು. ಕಳೆದ ವರ್ಷ ಒಟ್ಟು 165 ಇಂಚು ಮಳೆಯಾಗಿತ್ತು. ಜೂನ್ ತಿಂಗಳೊಂದರಲ್ಲಿಯೇ ಈ ವ್ಯಾಪ್ತಿಗೆ ಅತ್ಯಧಿಕ ಮಳೆಯಾಗಿದ್ದು, 65 ಇಂಚಿಗೂ ಅಧಿಕ ಮಳೆಯಾಗಿದೆ. ಅಲ್ಲದೆ, ಜುಲೈ ತಿಂಗಳಲ್ಲಿ ಇದುವರೆಗೆ 62 ಇಂಚು ಮಳೆಯಾಗಿದೆ. ಈ ವ್ಯಾಪ್ತಿಯಲ್ಲಿ ನಿರಂತರ ಮಳೆಯಿಂದ ಅರೆÀಬಿಕಾ ಹಾಗೂ ರೋಬೆಸ್ಟಾ ಕಾಫಿಗಳು ಕೊಳೆರೋಗಕ್ಕೆ ತುತ್ತಾಗಿ ಅಪಾರ ಪ್ರಮಾಣದಲ್ಲಿ ನಷ್ಟವಾಗಿದ್ದು, ಇನ್ನೊಂದೆಡೆ ಅಡಿಕೆ ಹಾಗೂ ಕರಿಮೆಣಸು ಫಸಲು ಸಹ ನಷ್ಟವಾಗಿದೆ.
ಬಿರುನಾಣಿಯ ಪ್ರಗತಿ ಪರ ರೈತ ಕರ್ತಮಾಡ ನರೇಂದ್ರ ಅವರು ತೀವ್ರ ಮಳೆಯಿಂದ ಭಾರೀ ಪ್ರಮಾಣದಲ್ಲಿ ಈ ವ್ಯಾಪ್ತಿಯಲ್ಲಿ ನಷ್ಟವಾಗಿದ್ದು, ಈ ಭಾಗದ ಸಾರ್ವಜನಿಕ ಆಸ್ತಿ ಪಾಸ್ತಿಗಳಿಗಿಂತ ಬೆಳೆಗಾರರು ಹಾಗೂ ರೈತರಿಗೆ ಮಳೆಯ ನೇರ ದುಷ್ಪರಿಣಾಮ ಬೀರಿದೆ. ಇದರಿಂದ ಈ ಭಾಗದ ರೈತ ಸಮುದಾಯದ ಬದುಕು ಅತಂತ್ರವಾಗಿದೆ. ಸರಕಾರ ಸೂಕ್ತ ನೆರವು ನೀಡಬೇಕೆಂದು ಒತ್ತಾಯಿಸಿದ್ದಾರೆ.
ತೀವ್ರ ಮಳೆಯಿಂದ ಈ ವ್ಯಾಪ್ತಿಯಲ್ಲಿ ವಿದ್ಯುತ್ ಕಡಿತ ಮುಂದುವರೆದಿದ್ದು, ಈ ವ್ಯಾಪ್ತಿಯ ಜನರು ಕಾರ್ಗತ್ತಲಿನಲ್ಲಿ ದಿನ ಕಳೆಯುವಂತಾಗಿದೆ.
ಕಳಪೆ ರಸ್ತೆ - ಬಾಳೆ ನೆಟ್ಟು ಪ್ರತಿಭಟನೆ
ಮೂರ್ನಾಡು, ಜು. 17: ಬಲಮುರಿ-ವಾಟೆಕಾಡು ಮಾರ್ಗವಾಗಿ ಹೊದ್ದೂರು ಸಾಗುವ ರಸ್ತೆ ಮರುಡಾಮರೀಕರಣ ಹಾಗೂ ಸಿಮೆಂಟ್ ರಸ್ತೆ ಕಾಮಗಾರಿ ನಡೆದು ಮೂರು ತಿಂಗಳಲ್ಲಿ ರಸ್ತೆ ಗುಂಡಿಗಳಾಗಿ ಮರುಕಳಿಸಿದ್ದು, ಕಳಪೆ ಕಾಮಗಾರಿ ನಡೆಸಲಾಗಿದೆ ಎಂದು ಗ್ರಾಮಸ್ಥರು ಆರೋಪಿಸಿ ಗುಂಡಿಗಳಲ್ಲಿ ಬಾಳೆಗಿಡ ನೆಟ್ಟು ಆಕ್ರೋಶ ವ್ಯಕ್ತಪಡಿಸಿದರು.
ಬಲಮುರಿಯಿಂದ ಹೊದ್ದೂರು ಸಂಪರ್ಕ ಕಲ್ಪಿಸುವ ರಸ್ತೆ ಕಳೆದ ಮೇ ತಿಂಗಳಿನಲ್ಲಿ ಜಿಲ್ಲಾ ಪಂಚಾಯಿತಿ ಅನುದಾನದಲ್ಲಿ ಹಾಗೂ ಎಸ್‍ಸಿ-ಎಸ್‍ಟಿ ಅನುದಾನದಲ್ಲಿ 1 ಕಿ.ಮೀ. ಮರುಡಾಮರೀಕರಣ ಹಾಗೂ 60 ಮೀ. ಸಿಮೆಂಟ್ ರಸ್ತೆ ಕಾಮಗಾರಿ ನಡೆಸಲಾಯಿತು. ಮರುಡಾಮರೀಕರಣ ಹಾಗೂ ಸಿಮೆಂಟ್ ರಸ್ತೆ ತೀರಾ ಕಳಪೆ ಮಟ್ಟದಲ್ಲಿ ನಡೆಸಿದ್ದು, ಕೇವಲ ಮೂರು ತಿಂಗಳಲ್ಲಿ ಮರುಡಾಮರೀಕರಣಗೊಂಡ ರಸ್ತೆ ಗುಂಡಿಗಳಾಗಿ ಪರಿವರ್ತನೆಗೊಂಡಿದೆ. ಸಿಮೆಂಟ್ ರಸ್ತೆಯ ಮೇಲ್ಪದರಗಳು ಗುಂಡಿ ಬೀಳುತ್ತಿವೆ. ಮೂರ್ನಾಡು-ಬಲಮುರಿ ರಸ್ತೆ ಮಳೆಗಾಲದಲ್ಲಿ ಹೊಳೆ ತೋಡು ಬಳಿ ನೀರು ತುಂಬಿಕೊಂಡು ಸಂಪರ್ಕ ಕಡಿತಗೊಳ್ಳುವದರಿಂದ ಬಲಮುರಿ, ಪಾರಾಣೆಗೆ ಸಾಗಲು ಇದೇ ರಸ್ತೆ ಉಪಯೋಗವಾಗುತ್ತದೆ.
ಪಾಲೇಮಾಡು ಹಾಗೂ ವಾಟೆಕಾಡು ಗ್ರಾಮಸ್ಥರು ಮಂಗಳವಾರ ಗುಂಡಿ ಬಿದ್ದ ರಸ್ತೆಯಲ್ಲಿ ಬಾಳೆ ಗಿಡ ನೆಟ್ಟು ಆಕ್ರೋಶ ವ್ಯಕ್ತಪಡಿಸಿದರು. ಗುತ್ತಿಗೆದಾರರು ಕಳಪೆ ಕಾಮಗಾರಿ ನಡೆಸಿದ್ದಾರೆ. ಮೂರು ತಿಂಗಳಲ್ಲಿ ರಸ್ತೆ ಕಿತ್ತು ಹೋಗಿದೆ. ಗುತ್ತಿಗೆದಾರರನ್ನು ಕಪ್ಪು ಪಟ್ಟಿಗೆ ಸೇರಿಸಬೇಕು. ಕಾಮಗಾರಿಯನ್ನು ಪರಿಶೀಲನೆ ನಡೆಸಿ ಗುತ್ತಿಗೆದಾರರಿಗೆ ಹಣ ಬಿಡುಗಡೆಗೊಳಿಸಬೇಕು ಹಾಗೂ ರಸ್ತೆ ಉತ್ತಮ ಗುಣಮಟ್ಟದಲ್ಲಿ ಮರುಡಾಮರೀಕರಣ ಆಗಬೇಕು ಎಂದು ಬಹುಜನ ಕಾರ್ಮಿಕ ಸಂಘದ ಅಧ್ಯಕ್ಷ ಮೊಣ್ಣಪ್ಪ ಆರೋಪಿಸಿದರು.
ಕಾಡಾನೆ ಧಾಳಿ-ಬೆಳೆ ನಷ್ಟ
ಮಡಿಕೇರಿ, ಜು. 17: ಸೋಮವಾರಪೇಟೆ ತಾಲೂಕು ಯಡವನಾಡು ಗ್ರಾಮದ ಡಿ.ಎಂ. ಲಿಂಗರಾಜು ಎಂಬವರ ಕಾಫಿ ತೋಟಕ್ಕೆ ಕಾಡಾನೆ ಧಾಳಿ ಮಾಡಿ ಬೆಳೆಗಳನ್ನು ನಾಶಗೊಳಿಸಿದ್ದು, ಈ ಕುರಿತು ಸೋಮವಾರಪೇಟೆ ಅರಣ್ಯಾಧಿಕಾರಿಯವರಿಗೆ ಮನವಿ ನೀಡಲಾಗಿದೆ. ಕಾಡಾನೆ ತಡೆಗೆ ಸೋಲಾರ್ ಬೇಲಿ ಅಳವಡಿಸುವಂತೆ ಅವರು ಆಗ್ರಹಿಸಿದ್ದಾರೆ.
ಕಾರು ಚಾಲಕರ ಸಂಘದಲ್ಲಿ ಅವ್ಯವಹಾರ-ಕ್ರಮಕ್ಕೆ ಆಗ್ರಹ
ಕುಶಾಲನಗರ, ಜು. 17: ಕಾರು ಮಾಲೀಕರು ಚಾಲಕರ ವಿವಿಧೋದ್ದೇಶ ಸಹಕಾರ ಸಂಘದಲ್ಲಿ ನಡೆದ ಅವ್ಯವಹಾರ ಬಗ್ಗೆ ಉನ್ನತ ಮಟ್ಟದ ತನಿಖೆ ನಡೆಸಿ ತಪ್ಪಿತಸ್ಥರ ಮೇಲೆ ಕಾನೂನು ಕ್ರಮ ಕೈಗೊಳ್ಳು ವಂತೆ ಸಂಘದ ಮಾಜಿ ಅಧ್ಯಕ್ಷ ಮನು ನಂಜುಂಡ ಒತ್ತಾಯಿಸಿದ್ದಾರೆ. ಈ ಬಗ್ಗೆ ಸಂಘದ ಸದಸ್ಯರ ತುರ್ತು ಸಭೆಯಲ್ಲಿ ಚರ್ಚೆ ನಡೆದು ಅಂದಾಜು 1 ಕೋಟಿ ರೂಪಾಯಿಗಳಿಗೂ ಮಿಕ್ಕಿ ಸಂಘದ ಹಣ ದುರುಪಯೋಗ ವಾಗಿದ್ದು, ಪ್ರಕರಣಕ್ಕೆ ಸಂಬಂಧಿಸಿ ದಂತೆ ಸಂಘದ ಅಧ್ಯಕ್ಷರು ಮತ್ತು ವ್ಯವಸ್ಥಾಪಕರು, ಸಿಬ್ಬಂದಿಗಳ ಮೇಲೆ ಕ್ರಮ ಕೈಗೊಳ್ಳಬೇಕು. ಪ್ರಕರಣದ ಬಗ್ಗೆ ಸಮಗ್ರ ತನಿಖೆ ಮಾಡಿ ಸಂಘದ ಸದಸ್ಯರಿಗೆ, ಗ್ರಾಹಕರಿಗೆ ನ್ಯಾಯ ಒದಗಿಸಬೇಕೆಂದು ಆಗ್ರಹಿಸಿದ್ದಾರೆ.
ಸ್ಥಳೀಯ ಖಾಸಗಿ ಹೊಟೇಲ್ ಸಭಾಂಗಣದಲ್ಲಿ ನಡೆದ ತುರ್ತು ಸಭೆಯಲ್ಲಿ ಸದಸ್ಯರುಗಳು ಸಂಘದ ಅಧ್ಯಕ್ಷ ಹೆಚ್.ಎನ್. ರಾಮಚಂದ್ರ ಅವರನ್ನು ತರಾಟೆಗೆ ತೆಗೆದುಕೊಂಡ ಘಟನೆಯೂ ನಡೆಯಿತು. ಈ ಸಂದರ್ಭ ಸಭೆಯಲ್ಲಿ ಹಾಜರಿದ್ದ ಸಂಘದ ವ್ಯವಸ್ಥಾಪಕ ರೋಹಿತ್ ಎಂಬಾತ ಅಧ್ಯಕ್ಷರ ಅನುಮತಿ ಮೇರೆಗೆ ತಾನು ಹಣಕಾಸು ವ್ಯವಹಾರ ಮಾಡಿರುವದಾಗಿ ಸಭೆಯಲ್ಲಿ ತಿಳಿಸಿದ್ದು, ಇಡೀ ಅವ್ಯವಹಾರಕ್ಕೆ ಅಧ್ಯಕ್ಷರು ಶಾಮೀಲಾಗಿದ್ದಾರೆ ಎಂದು ತಿಳಿಸಿದ್ದಾರೆ.
ತಮ್ಮ ಮನೆ, ಮಾರಾಟ ಮಾಡಿ ಸಂಘದ ಹಣ ಸಂದಾಯ ಮಾಡುವದಾಗಿ ಸದಸ್ಯರಿಗೆ ಭರವಸೆ ನೀಡಲಾಯಿತು. ಸಭೆಯ ಸಂದರ್ಭ ಸದಸ್ಯರ ಆಕ್ರೋಶ ಮಿತಿಮೀರಿದ ಹಿನ್ನೆಲೆ ಪೊಲೀಸ್ ಮಧ್ಯ ಪ್ರವೇಶಿಸಿದ ದೃಶ್ಯವೂ ಕಂಡುಬಂತು.
ಕಾರು ಮಾಲೀಕರ ಮತ್ತು ಚಾಲಕರ ಸಂಘದಲ್ಲಿ ನಡೆದ ಅವ್ಯವಹಾರದ ಹಿನ್ನೆಲೆ ಸಹಕಾರ ಸಂಘಗಳ ಕಾಯ್ದೆ ಕಲಂ 63(4) ಮತ್ತು (5) ರಂತೆ ಸಂಘದ ಸದಸ್ಯರಿಗೆ ನೋಟಿಸ್ ಜಾರಿ ಮಾಡಿದ್ದು, ತಾ. 19 ರಂದು ಎಲ್ಲ ಸದಸ್ಯರು ಸಂಘದ ಕಚೇರಿಯಲ್ಲಿ ಹಾಜರಾಗುವಂತೆ ಸಹಕಾರ ಸಂಘಗಳ ಬೆಂಗಳೂರಿನ ಸನ್ನದು ಲೆಕ್ಕ ಪರಿಶೋಧಕ ಎಂ.ಎಂ. ಈಶ ಲಿಖಿತ ಸೂಚನೆ ನೀಡಿದ್ದಾರೆ.
ಸಂಘದಿಂದ ಸಾಲ ಹೊಂದಿ ರುವ ಬಗ್ಗೆ ದೃಢೀಕರಣ ನೀಡುವ ಕುರಿತು ಸದಸ್ಯರಿಗೆ ಕೋರಲಾಗಿದೆ. ಸದಸ್ಯರ ಸಾಲ ಹೊರಬಾಕಿ ಇರುವ ಬಗ್ಗೆ ಮಾಹಿತಿ ನೀಡಲು ಸಂಘದ ಕಚೇರಿಯಲ್ಲಿ ತಾ. 19 ರಂದು ಬೆಳಿಗ್ಗೆ 11 ಗಂಟೆಗೆ ಹಾಜರಾಗಿ ದೃಢೀಕರಣ ನೀಡುವಂತೆ ನೋಟಿಸ್‍ನಲ್ಲಿ ತಿಳಿಸಿದ್ದು, ಒಂದುವೇಳೆ ಅಂದು ಸದಸ್ಯರು ಹಾಜರಾಗದಿದ್ದಲ್ಲಿ ಸಂಘದಲ್ಲಿರುವ ದಾಖಲೆಗಳ ಪ್ರಕಾರ ಸಾಲ ಬಾಕಿಗೆ ತಮ್ಮ ಸಮ್ಮತಿ ಇರುವದಾಗಿ ಪರಿಗಣಿಸುವದಾಗಿ ನೋಟಿಸ್‍ನಲ್ಲಿ ತಿಳಿಸಲಾಗಿದೆ.
ಇಂದು ಜೆ.ಡಿ.ಎಸ್. ಸಭೆ
ಮಡಿಕೇರಿ, ಜು. 17: ಮುಖ್ಯಮಂತ್ರಿ ಹೆಚ್.ಡಿ. ಕುಮಾರಸ್ವಾಮಿ ಅವರು ತಾ. 19 ಮತ್ತು 20 ರಂದು ಕೊಡಗು ಜಿಲ್ಲೆಗೆ ಭೇಟಿ ನೀಡುತ್ತಿರುವ ಹಿನ್ನೆಲೆ ಜಾತ್ಯತೀತ ಜನತಾದಳದ ಜಿಲ್ಲಾ ಮುಖಂಡರಾದ ಕಾರ್ಮಾಡು ಸುಬ್ಬಣ್ಣ ಅವರ ನೇತೃತ್ವದಲ್ಲಿ ಪದಾಧಿಕಾರಿಗಳು ಹಾಗೂ ಕಾರ್ಯಕರ್ತರ ಸಭೆ ಮಡಿಕೇರಿಯ ಲಯನ್ಸ್ ಕ್ಲಬ್ ಸಭಾಂಗಣದಲ್ಲಿ ತಾ. 18 ರಂದು (ಇಂದು) ಮಧ್ಯಾಹ್ನ 3 ಗಂಟೆಗೆ ನಡೆಯಲಿದೆ ಎಂದು ಜೆಡಿಎಸ್ ಜಿಲ್ಲಾ ವಕ್ತಾರ ಪಿ.ಎಸ್. ಭರತ್ ಕುಮಾರ್ ತಿಳಿಸಿದ್ದಾರೆ.
ಚೇರಂಬಾಣೆಯಲ್ಲಿ ಬೆಳೆಗಾರರ ಪ್ರತಿಭಟನೆ
ಭಾಗಮಂಡಲ, ಜು. 17: ಚೇರಂಬಾಣೆಯಲ್ಲಿ ಬೇಂಗೂರು, ಬಾಡಗ, ಕೊಟ್ಟೂರು, ಕೊಳಗದಾಳು ಹಾಗೂ ಕೋಪಟ್ಟಿ ಗ್ರಾಮಸ್ಥರಿಂದ ರಸ್ತೆ ತಡೆಯನ್ನು ನಡೆಸಲಾಯಿತು. ಸತತವಾಗಿ ಸುರಿಯುತ್ತಿರುವ ಮಳೆಯಿಂದಾಗಿ ಕಾಫಿ, ಕರಿಮೆಣಸು ಹೆಚ್ಚಾಗಿದ್ದು, ಕಳೆದ ಐದು ದಿನಗಳಿಂದ ವಿದ್ಯುಚ್ಛಕ್ತಿ ಸಂಪರ್ಕ ಕಡಿತಗೊಂಡಿರುವದನ್ನು ಆಯಾ ಇಲಾಖೆಗಳ ಗಮನ ಸೆಳೆಯುವ ನಿಟ್ಟಿನಲ್ಲಿ ಬೆಳೆಗಾರರಿಂದ ರಸ್ತೆ ತಡೆ ನಡೆಸಲಾಯಿತು.
ಈ ಪ್ರದೇಶಗಳನ್ನು ಅತಿವೃಷ್ಟಿ ಪೀಡಿತ ಪ್ರದೇಶವೆಂದು ಘೋಷಿಸಿ ಸಂಬಂಧಪಟ್ಟವರಿಂದ ಪರಿಹಾರ ಹಾಗೂ ಸರ್ವೆ ಕಾರ್ಯ ನಡೆಸುವಂತೆ ಈ ಸಂದರ್ಭ ಒತ್ತಾಯಿಸಲಾಯಿತು.
ಕಾಫಿ ಮಂಡಳಿ, ವಿದ್ಯುಚ್ಛಕ್ತಿ ಮಂಡಳಿ ಹಾಗೂ ಜಿಲ್ಲಾಡಳಿತದ ವಿರುದ್ಧ ಸಾಂಕೇತಿಕವಾಗಿ ಪ್ರತಿಭಟಿಸಿ ನಡೆಸಲಾಯಿತು. ಮುಂದಿನ ಕ್ರಮ ತುರ್ತಾಗಿ ತೆಗೆದುಕೊಳ್ಳದಿದ್ದ ಪಕ್ಷದಲ್ಲಿ ಮುಂದಿನ ದಿನಗಳಲ್ಲಿ ತೀವ್ರ ಸ್ವರೂಪದ ಚಳವಳಿ ನಡೆಸುವದಾಗಿ ಎಚ್ಚರಿಸಲಾಯಿತು.
ವೀರಾಜಪೇಟೆ ವಿಭಾಗಕ್ಕೆ ಮುಂದುವರೆದ ಮಳೆ
ವೀರಾಜಪೇಟೆ, ಜು. 17: ವೀರಾಜಪೇಟೆ ವಿಭಾಗದಲ್ಲಿ ನಿರಂತರ ಭಾರೀ ಮಳೆ ಮುಂದುವರೆದಿದ್ದು ರಾತ್ರಿ ಮಳೆಗೆ ನೆಹರೂನಗರ ನೀರಿನ ಟ್ಯಾಂಕ್ ಬಳಿ ಭೂಕುಸಿತ ಉಂಟಾಗಿದ್ದರೆ, ಪಕ್ಕದ ಮನೆಯೊಂದು ಜಖಂಗೊಂಡಿದೆ. ವೀರಾಜಪೇಟೆ ಸಿದ್ದಾಪುರ ರಸ್ತೆಯಿಂದ ದಂತ ವೈದ್ಯಕೀಯ ಕಾಲೇಜಿಗೆ ತೆರಳುವ ರಸ್ತೆಯ ಪಕ್ಕದಲ್ಲಿಯೂ ಮನೆ ಜಖಂಗೊಂಡಿದೆ.
ನೆಹರೂನಗರದಲ್ಲಿ ಶಿವಮ್ಮ ಎಂಬ ವೃದ್ಧ ವಿಧವೆ ಮನೆಯ ಒಂದು ಭಾಗದ ಗೋಡೆ ಕುಸಿತಗೊಂಡು ಇತರ ಗೋಡೆಗಳು ಬಿರುಕುಗೊಂಡಿದ್ದು ನೆಲಸಮಗೊಳ್ಳುವ ಹಂತದಲ್ಲಿದೆ. ಇದರ ಮೇಲಿನ ಅಶೋಕ್ ಎಂಬವರ ಮನೆಯ ಹಿಂಬದಿಯ ಭೂಕುಸಿಯುತ್ತಿದ್ದು ಮಳೆ ಮುಂದುವರೆದರೆ ಮನೆಯು ಜಖಂಗೊಳ್ಳುವ ಸಾಧ್ಯತೆ ಇದೆ. ಶಿವಮ್ಮ ಅವರ ಮನೆ ನೆಲಸಮಗೊಳ್ಳಲಿರುವದರಿಂದ ಅಲ್ಲಿ ವಾಸಿಸುವ ಕುಟುಂಬದವರು ತಕ್ಷಣ ಸ್ಥಳಾಂತರಗೊಳ್ಳುವಂತೆ ಮುಖ್ಯಾಧಿಕಾರಿ ಹೇಮ್‍ಕುಮಾರ್ ಕುಟುಂಬದವರಿಗೆ ಎಚ್ಚರಿಕೆ ನೀಡಿದ್ದಾರೆ. ನೆಹರೂನಗರದ ಸುತ್ತಮುತ್ತಲಿನಲ್ಲಿಯೂ ನಿನ್ನೆ ದಿನ ರಾತ್ರಿ ಸುರಿದ ಮಳೆಗೆ ಅನೇಕ ಸ್ಥಳಗಳಲ್ಲಿಯೂ ಬೆಟ್ಟದ ತಪ್ಪಲಲ್ಲಿ ಬರೆ ಜರುಗಿದ ದೂರುಗಳು ಬಂದಿದ್ದು, ಪರಿಹಾರಕ್ಕಾಗಿ ದೂರುಗಳನ್ನು ಪ.ಪಂ.ಯಿಂದ ತಾಲೂಕು ಕಚೇರಿಯ ಪರಿಹಾರ ವಿಭಾಗಕ್ಕೆ ಕಳುಹಿಸಲಾಗಿದೆ.
ವೀರಾಜಪೇಟೆ ಪಟ್ಟಣ ಪಂಚಾಯಿತಿಯ ಎನ್.ಪಿ. ಹೇಮ್‍ಕುಮಾರ್, ಜನತಾದಳದ ವೀರಾಜಪೇಟೆ ವಿಧಾನಸಭಾ ಕ್ಷೇತ್ರದ ಅಧ್ಯಕ್ಷ ಹಾಗೂ ಪಂಚಾಯಿತಿ ಸದಸ್ಯ ಎಸ್.ಎಚ್.ಮತೀನ್, ಮಹಮ್ಮದ್ ರಾಫಿ, ಸಮಾಜ ಸೇವಕರುಗಳಾದ ಎಂ.ಡಿ. ಸಲೀಂ, ಕೆ.ಎ. ಜುಬೇರ್ ಭೇಟಿ ನೀಡಿ ಪರಿಶೀಲಿಸಿದರು.
ವೀರಾಜಪೇಟೆ ತಾಲೂಕು ತಹಶೀಲ್ದಾರ್ ಅವರಿಗೆ ನೆಹರೂನಗರದಲ್ಲಿ ಮನೆ ಜಖಂಗೊಂಡ ಶಿವಮ್ಮ ದೂರು ಸಲ್ಲಿಸಿದ ಮೇರೆ ಇಂದು ಸಂಜೆ ಕಂದಾಯ ಸಿಬ್ಬಂದಿಗಳು ಸ್ಥಳಕ್ಕೆ ತೆರಳಿ ಮಹಜರು ನಡೆಸಿದರು.
ನಾಟಿ ಪುನರಾರಂಭ: ಭಾನುವಾರ ರಾತ್ರಿ, ಸೋಮವಾರ ಹಗಲು ಬಿದ್ದ ಮಳೆಗೆ ಇಲ್ಲಿನ ಆರ್ಜಿ ಗ್ರಾಮ, ಪೆರುಂಬಾಡಿ, ಬಾಳುಗೋಡು, ಬಿಟ್ಟಂಗಾಲ, ವಿ.ಬಾಡಗ ಸೇರಿದಂತೆ ವಿವಿಧೆಡೆಗಳಲ್ಲಿ ನಾಟಿ ಕೆಲಸ ಸ್ಥಗಿತಗೊಳಿಸಲಾಗಿತ್ತು. ಇಂದು ಬೆಳಗ್ಗಿನಿಂದಲೇ ಮಳೆ ಕಡಿಮೆಯಾಗಿ ಜಲಾವೃತಗೊಂಡ ಗದ್ದೆಯಲ್ಲಿ ನೀರು ಇಳಿಮುಖಗೊಳ್ಳುತ್ತಿರುವದನ್ನು ಆಧರಿಸಿ ಇಂದು ನಾಟಿ ಕೆಲಸ ಮುಂದುವರೆಸಲಾಗಿದೆ. ಈ ವಿಭಾಗದಲ್ಲಿ ನಾಟಿ ವಿಳಂಬವಾದಷ್ಟು ಭತ್ತದ ಸಸಿ ಮಡಿಗಳು ಕೊಳೆಯುವ ಸಾಧ್ಯತೆ ಅಧಿಕವಾಗಿದೆ.
Whಚಿಣs ಂಠಿಠಿ ಸುದ್ದಿ
ಗೋಡೆ ಕುಸಿತ: ಬಿ. ಶೆಟ್ಟಿಗೇರಿಯಲ್ಲಿ ಬೊಳ್ಳಣಮಾಡ ಎಂ. ಸರಸು ಎಂಬವರ ಮನೆಯ ಗೋಟೆ ಕುಸಿದು ನಷ್ಟ ಸಂಭವಿಸಿದೆ. ಇಲ್ಲಿನ ಕುರುಡುಪೊಳೆಗೆ 108 ಇಂಚು ಮಳೆಯಾಗಿದೆ.
- ತರುಣ್ ತಮ್ಮಯ್ಯ, ಕಾಳೇಂಗಇದು ಯಾರ ವಾಹನ: ಮಡಿಕೇರಿಯ ಓಂಕಾರೇಶ್ವರ ದೇವಾಲಯ ರಸ್ತೆಯಲ್ಲಿ ಕಳೆದ ಹಲವು ತಿಂಗಳಿನಿಂದ ಈ ವಾಹನ ರಸ್ತೆ ಬದಿ ನಿಂತಿದ್ದು, ಬಹುತೇಕರಿಗೆ ಸಮಸ್ಯೆಯಾಗುತ್ತಿದೆ.
-ಬಾಲಕೃಷ್ಣ ರೈ ಬಿ.ಎ., ಅಧ್ಯಕ್ಷರು, ಕೆದಕಲ್ ಪಂಚಾಯಿತಿ