ಸೋಮವಾರಪೇಟೆ, ಜು.17: ಎಲ್ಲೆಲ್ಲೂ ಮುರಿದು ಬಿದ್ದಿರುವ ವಿದ್ಯುತ್ ಕಂಬಗಳು, ರಸ್ತೆಯ ಪಕ್ಕದಲ್ಲಿ ಹೊಳೆಯಂತೆ ಹರಿಯುವ ಮಳೆ ನೀರು, ಲೆಕ್ಕಕ್ಕೆ ಸಿಗದಷ್ಟು ಧರಾಶಾಹಿಯಾಗಿರುವ ಮರಗಳು, ಉದುರುತ್ತಿರುವ ಕಾಫಿ ಫಸಲು, ಬಂಪರ್ ಫಸಲಿನ ನಿರೀಕ್ಷೆಯಲ್ಲಿದ್ದ ಕರಿಮೆಣಸಿಗೆ ಆವರಿಸಿದ ರೋಗ, ಬರೆ ಕುಸಿತದಿಂದ ಹೊಳೆಗೆ ಮಣ್ಣು ನುಗ್ಗಿ ಜಲಾವೃತಗೊಂಡಿರುವ ಗದ್ದೆಗಳು, ಈಗಾಗಲೇ ನಾಟಿಕಾರ್ಯ ಮಾಡಿರುವ ಗದ್ದೆಗಳಲ್ಲಿ ಕೊಳೆಯುತ್ತಿರುವ ಪೈರು, ವಿದ್ಯುತ್ ಇಲ್ಲದೇ ಕಳೆದ 25 ದಿನಗಳು, ಭಾರೀ ಮಳೆಗೆ ಕುಸಿದ ಮನೆಗಳು, ಗಾಳಿಗೆ ಹಾರಿದ ಮನೆಯ ಶೀಟ್‍ಗಳು, ಒಟ್ಟಾರೆ ಎಲ್ಲೆಲ್ಲೂ ನೀರು ನೀರು..,!

ಇದು ಸದ್ಯದ ಸೋಮವಾರಪೇಟೆಯ ಪರಿಸ್ಥಿತಿ. ಕಳೆದ 3 ದಶಕಗಳ ಹಿಂದಿನ ಪರಿಸ್ಥಿತಿಯನ್ನು ನೆನಪಿಸುವಂತೆ ಮಾಡಿರುವ ಪ್ರಸಕ್ತ ಸಾಲಿನ ಮಳೆ, ತಾಲೂಕಿನಾದ್ಯಂತ ಉಂಟು ಮಾಡಿರುವ ಸಂಕಷ್ಟ ಅಷ್ಟಿಷ್ಟಲ್ಲ. ಹಲವಷ್ಟು ಮನೆಗಳು ಈಗಾಗಲೇ ನೆಲಸಮಗೊಂಡಿದ್ದರೆ, ರಸ್ತೆಯ ಸ್ಥಿತಿ ದೇವರಿಗೇ ಪ್ರೀತಿ ಎಂಬಂತಾಗಿದೆ. ಮನೆಯಿಂದ ಹೊರಬರಲೂ ಸಹ ಹಿಂದೇಟು ಹಾಕುವ ಪರಿಸ್ಥಿತಿಯಲ್ಲಿ ಗ್ರಾಮೀಣ ಭಾಗದ ಜನರಿದ್ದು, ಶಾಸಕ ಎಂ.ಪಿ. ಅಪ್ಪಚ್ಚು ರಂಜನ್ ಅವರು ಭಾರೀ ಮಳೆ ಗಾಳಿಯ ನಡುವೆಯೂ ಕ್ಷೇತ್ರ ಸುತ್ತುತ್ತಿದ್ದಾರೆ.

ಪುಷ್ಪಗಿರಿ ಬೆಟ್ಟಶ್ರೇಣಿ ಪ್ರದೇಶಕ್ಕೆ ಒತ್ತಿಕೊಂಡಂತಿರುವ ಮೂವತ್ತೊಕ್ಲು, ಸೂರ್ಲಬ್ಬಿ, ಗರ್ವಾಲೆ, ಮಂಕ್ಯ, ಶಿರಂಗಳ್ಳಿ, ಕಿಕ್ಕರಳ್ಳಿ, ಶಾಂತಳ್ಳಿ, ಬೆಟ್ಟದಳ್ಳಿ, ಬೆಟ್ಟದಕೊಪ್ಪ, ಕೂತಿ, ತೋಳೂರುಶೆಟ್ಟಳ್ಳಿ ಭಾಗದಲ್ಲಿ ಮಳೆಯಿಂದ ಹಾನಿಗೀಡಾಗಿರುವ ಪ್ರದೇಶಕ್ಕೆ ಇಂದು ತೆರಳಿದ ಶಾಸಕ ಎಂ.ಪಿ. ಅಪ್ಪಚ್ಚು ರಂಜನ್ ಸಹಿತ ಇತರ ಜನಪ್ರತಿನಿಧಿಗಳಿಗೆ, ಪ್ರಸಕ್ತ ಸಾಲಿನ ಮಳೆ ತಂದ ಸಂಕಷ್ಟದ ದಿಗ್ದರ್ಶನವಾಗಿದೆ.

ಈ ಭಾಗದವರು ಇನ್ನೆಷ್ಟು ತಡೆದುಕೊಳ್ಳಬೇಕು? ಎಂಬ ಪ್ರಶ್ನೆ ಪರಿಸ್ಥಿತಿಯನ್ನು ಅವಲೋಕಿಸಿದರೆ ತನ್ನಿಂತಾನೇ ವ್ಯಕ್ತಗೊಳ್ಳುತ್ತದೆ. ಮೂವತ್ತೊಕ್ಲುವಿನಿಂದ ಹಿಡಿದು ತೋಳೂರುಶೆಟ್ಟಳ್ಳಿ ವರೆಗೆ ಪರಿಶೀಲನೆ ನಡೆಸಿದ ಶಾಸಕ ರಂಜನ್ ಅವರಿಗೆ ವಾಸ್ತವ ಚಿತ್ರಣದ ಗಂಭೀರತೆ ಅರಿವಾಗಿದ್ದು, ಸಂತ್ರಸ್ಥರಿಗೆ ಸಾಂತ್ವನ ಹೇಳಿ, ಸರ್ಕಾರದಿಂದ ಅಗತ್ಯ ಕ್ರಮದ ಭರವಸೆ ನೀಡಿದ್ದಾರೆ.

1000 ಕೋಟಿ ವಿಶೇಷ ಪ್ಯಾಕೇಜ್‍ಗೆ ಆಗ್ರಹ: ಕೊಡಗಿನ ಪರಿಸ್ಥಿತಿ ಹಿಂದೆಂದಿಗಿಂತಲೂ ಭೀಕರವಾಗಿದೆ. 80ರ ದಶಕವನ್ನು ನೆಪಿಸುವ ಮಹಾಮಳೆಗೆ ಜನಜೀವನ ಅತಂತ್ರವಾಗಿದೆ. ಪರಿಹಾರ ಕಾರ್ಯ ಕೈಗೊಳ್ಳಲು ಏನಿಲ್ಲವೆಂದರೂ 1 ಸಾವಿರ ಕೋಟಿ ಬೇಕಾಗುತ್ತದೆ. ಈ ಹಿನ್ನೆಲೆ ರಾಜ್ಯ ಸರ್ಕಾರ ಕೊಡಗಿನ ಸಮಸ್ಯೆಗಳಿಗೆ ತಕ್ಷಣ ಸ್ಪಂದಿಸಬೇಕಿದೆ. ತುರ್ತು ಪರಿಹಾರ ಕಾರ್ಯ ಕೈಗೊಳ್ಳಲು ಸರ್ಕಾರ 1 ಸಾವಿರ ಕೋಟಿ ವಿಶೇಷ ಅನುದಾನ ಒದಗಿಸಬೇಕು. ಈ ನಿಟ್ಟಿನಲ್ಲಿ ಮುಖ್ಯಮಂತ್ರಿಗಳನ್ನು ಒತ್ತಾಯಿಸುವದಾಗಿ ರಂಜನ್ ಅಭಿಪ್ರಾಯಿಸಿದ್ದಾರೆ.

ಸಂಕಷ್ಟದ ದಿಗ್ದರ್ಶನ: ಜಿಲ್ಲಾ ಪಂಚಾಯಿತಿ ಉಪಾಧ್ಯಕ್ಷೆ ಲೋಕೇಶ್ವರಿ ಗೋಪಾಲ್ ಹಾಗೂ ತಾಲೂಕು ಪಂಚಾಯಿತಿ ಉಪಾಧ್ಯಕ್ಷ ಎಂ.ಬಿ. ಅಭಿಮನ್ಯುಕುಮಾರ್ ಅವರೊಂದಿಗೆ ಇಂದು ಪುಷ್ಪಗಿರಿ ಬೆಟ್ಟಶ್ರೇಣಿ ಪ್ರದೇಶದಲ್ಲಿ ಪರಿಶೀಲನೆ ನಡೆಸಿದ ಶಾಸಕರಿಗೆ ಜನತೆ ಎದುರಿಸುತ್ತಿರುವ ಸಂಕಷ್ಟದ ದಿಗ್ದರ್ಶನವಾಗಿದೆ.

ಮೂವತ್ತೊಕ್ಲು ಗ್ರಾಮಕ್ಕೆ ತೆರಳುವ ರಸ್ತೆಯಲ್ಲಿ ಹತ್ತಾರು ಮರಗಳು ಉರುಳಿಬಿದ್ದಿದ್ದು, ವಿದ್ಯುತ್ ಕಂಬಗಳು ತುಂಡಾಗಿ ರಸ್ತೆ ಬದಿಯಲ್ಲಿ, ಕಾಫಿ ತೋಟದೊಳಗೆ ಬಿದ್ದಿವೆ. ಈ ಭಾಗಕ್ಕೆ ಕಳೆದ 20 ದಿನಗಳಿಂದ ವಿದ್ಯುತ್ ಸಂಪರ್ಕ ಕಡಿತಗೊಂಡಿದ್ದು, ಪರಿಹಾರ ಕಾರ್ಯ ಕೈಗೊಳ್ಳಲು ಇನ್ನೂ 10 ದಿನಗಳು ಬೇಕಾಗಬಹುದು ಎಂದು ಅಂದಾಜಿಸಲಾಗಿದೆ.

ಶಾಸಕರು ಮೂವತ್ತೊಕ್ಲು ಗ್ರಾಮಕ್ಕೆ ತೆರಳಿದ ಸಂದರ್ಭ ಗ್ರಾಮಸ್ಥರಾದ ಕಾರ್ಯಪ್ಪ, ಧನು, ಗಣೇಶ್, ಬಿದ್ದಪ್ಪ, ಉತ್ತಪ್ಪ, ಪೊನ್ನಪ್ಪ, ಪ್ರತು ಸೇರಿದಂತೆ ಇತರರು ಸಂಕಷ್ಟದ ಸನ್ನಿವೇಶದ ಬಗ್ಗೆ ಮಾಹಿತಿ ಒದಗಿಸಿದರು. ಎಂ.ಡಿ. ಕಾರ್ಯಪ್ಪ ಅವರ ಮನೆಯ ಛಾವಣಿ ಭಾರೀ ಗಾಳಿಗೆ ಹಾರಿ ಹೋಗಿದ್ದು, ಸಂಗೀತ ಮತ್ತು ಗಂಗೆ ಅವರುಗಳ ಮನೆ ಬರೆಕುಸಿತದಿಂದ ಅಪಾಯಕಾರಿ ಸ್ಥಿತಿಗೆ ತಲುಪಿರುವದನ್ನು ರಂಜನ್ ಪರಿಶೀಲಿಸಿದರು.

ರಸ್ತೆಯ ಬದಿಯಲ್ಲಿ ಚರಂಡಿ ನಿರ್ಮಿಸಲು ತಕ್ಷಣ ಕ್ರಮ ಕೈಗೊಳ್ಳಬೇಕು. ಗಂಗೆ ಅವರ ಮನೆಯ ಕೆಳಭಾಗದಲ್ಲಿ ರೂ. 1.50 ಲಕ್ಷ ವೆಚ್ಚದಲ್ಲಿ ತಡೆಗೋಡೆ ನಿರ್ಮಿಸಬೇಕು. ಪ್ರತಿ ಮನೆಗಳಿಗೂ ಪೈಪ್ ನೀಡಿ ಮನೆಯ ನೀರನ್ನು ಚರಂಡಿಗೆ ಹರಿಸುವ ವ್ಯವಸ್ಥೆ ಕಲ್ಪಿಸಬೇಕು ಎಂದು ಸ್ಥಳದಲ್ಲಿದ್ದ ಪಂಚಾಯಿತಿ ಅಭಿವೃದ್ಧಿ ಅಧಿಕಾರಿ ಪರಮೇಶ್ ಅವರಿಗೆ ಸೂಚಿಸಿದರು.

ಶಿರಂಗಳ್ಳಿ-ಗರ್ವಾಲೆ-ಸೂರ್ಲಬ್ಬಿ-ಶಾಂತಳ್ಳಿ ಸಂಪರ್ಕಿಸುವ ಮುಖ್ಯ ರಸ್ತೆಯಲ್ಲಿ ಭಾರೀ ಪ್ರಮಾಣದ ಬರೆ ಕುಸಿತ ಸಂಭವಿಸಿದ್ದು, ರಸ್ತೆಯಲ್ಲಿ ವಾಹನಗಳ ಓಡಾಟಕ್ಕೆ ತೊಡಕಾಗಿದೆ. ಇದರೊಂದಿಗೆ ಬರೆಕುಸಿತದಿಂದ ಹೊಳೆಗೆ ಮಣ್ಣು ತುಂಬಿದ್ದು, ಪಕ್ಕದ ಗದ್ದೆಗಳಿಗೆ ಹೊಳೆ ನೀರು ನುಗ್ಗಿ ಭಾರೀ ಪ್ರಮಾಣದ ನಷ್ಟ ಸಂಭವಿಸಿರುವ ಸನ್ನಿವೇಶವನ್ನು ಖುದ್ದು ವೀಕ್ಷಿಸಿದ ರಂಜನ್, ತಕ್ಷಣ ಜೆಸಿಬಿ ಯಂತ್ರದಿಂದ ರಸ್ತೆಯ ಮೇಲಿರುವ ಮಣ್ಣನ್ನು ತೆರವುಗೊಳಿಸಿ ವಾಹನ ಸಂಚಾರಕ್ಕೆ ಅನುವು ಮಾಡಿಕೊಡಬೇಕು ಎಂದು ಸ್ಥಳದಲ್ಲಿದ್ದ ಲೋಕೋಪಯೋಗಿ ಅಭಿಯಂತರ ಪೀಟರ್ ಅವರಿಗೆ ನಿರ್ದೇಶನ ನೀಡಿದರು.

ಈ ಭಾಗದ ಸಂಕಷ್ಟದ ಪರಿಸ್ಥಿತಿಯನ್ನು ಗರ್ವಾಲೆ ಗ್ರಾ.ಪಂ. ಅಧ್ಯಕ್ಷ ಸುಭಾಷ್, ಉಪಾಧ್ಯಕ್ಷ ಪಳಂಗಪ್ಪ, ಸ್ಥಳೀಯರಾದ ಮಾಚಯ್ಯ, ಅಪ್ಪಾಜಿ, ಈರಪ್ಪ, ಅಯ್ಯಪ್ಪ, ಕಾರ್ಯಪ್ಪ ಅವರುಗಳು ಶಾಸಕರ ಗಮನಕ್ಕೆ ತಂದರು. ಇದರೊಂದಿಗೆ ಗರ್ವಾಲೆ ಗ್ರಾ.ಪಂ. ಕಟ್ಟಡದ ಹೆಂಚುಗಳು ಹಾರಿಹೋಗಿರುವದನ್ನು ಪರಿಶೀಲಿಸಿದ ಶಾಸಕರು, ಈ ಭಾಗದಲ್ಲಿ ಉಂಟಾಗಿರುವ ಹಾನಿ ಪ್ರಕರಣಗಳ ಸಮಗ್ರ ವರದಿಯನ್ನು ತಕ್ಷಣ ನೀಡುವಂತೆ ಕಂದಾಯ ಇಲಾಖಾಧಿಕಾರಿ ಉಮೇಶ್ ಅವರಿಗೆ ಸೂಚಿಸಿದರು.

ಸಂತ್ರಸ್ಥರಿಗೆ ಸರ್ಕಾರದಿಂದ ಗರಿಷ್ಠ ಪ್ರಮಾಣದ ಪರಿಹಾರ ಒದಗಿಸುವಂತಾಗಬೇಕು. ಕಂದಾಯ ಇಲಾಖಾಧಿಕಾರಿಗಳು ವಾಸ್ತವತೆಯನ್ನು ಅರಿತುಕೊಂಡು ಮಾನವೀಯ ನೆಲೆಗಟ್ಟಿನಲ್ಲೂ ಹೆಚ್ಚಿನ ಪ್ರಮಾಣದ ಪರಿಹಾರಕ್ಕೆ ಶಿಫಾರಸ್ಸು ಮಾಡಬೇಕು. ಲೋಕೋಪಯೋಗಿ ಇಲಾಖಾ ಅಭಿಯಂತರರೂ ಸಹ ಈ ಬಗ್ಗೆ ಗಮನಹರಿಸಬೇಕು ಎಂದು ರಂಜನ್ ನುಡಿದರು.

ವಿದ್ಯುತ್ ಇಲ್ಲದೇ 25 ದಿನಗಳು ಕಳೆದಿದ್ದು, ಮೊಬೈಲ್ ಸಂಪರ್ಕ ಸಂಪೂರ್ಣ ಸ್ಥಗಿತಗೊಂಡಿದೆ. ಹರಗದಲ್ಲಿರುವ ಮೊಬೈಲ್ ಟವರ್ ಸರಿಯಾಗಿ ಕೆಲಸ ಮಾಡುತ್ತಿಲ್ಲ. ಜನರೇಟರ್ ಇದ್ದರೂ ಸಹ ಅದನ್ನು ಬಳಸಿಕೊಳ್ಳುತ್ತಿಲ್ಲ ಎಂದು ಸ್ಥಳೀಯರು ಶಾಸಕರೊಂದಿಗೆ ದೂರಿದರು.

ಗರ್ವಾಲೆ ಗ್ರಾ.ಪಂ. ವ್ಯಾಪ್ತಿಯಲ್ಲಿ ಉತ್ತಯ್ಯ ಮತ್ತು ರತಿ ಎಂಬವರ ಮನೆಗೆ ಹಾನಿಯಾಗಿದ್ದು, ತಕ್ಷಣ ಪರಿಹಾರ ಒದಗಿಸಲು ಕ್ರಮ ಕೈಗೊಳ್ಳುವಂತೆ ಮನವಿ ಮಾಡಿದರು.

ಸೂರ್ಲಬ್ಬಿಯಲ್ಲಿರುವ ಪ್ರಾಥಮಿಕ ಆರೋಗ್ಯ ಕೇಂದ್ರಕ್ಕೆ ಭೇಟಿ ನೀಡಿದ ಶಾಸಕರು, ಆಸ್ಪತ್ರೆಯ ವ್ಯವಸ್ಥೆಯನ್ನು ಪರಿಶೀಲಿಸಿದರು. ಇಲ್ಲಿಗೆ ವೈದ್ಯರು ಬರಲು ಹಿಂದೇಟು ಹಾಕುತ್ತಿರುವ ಬಗ್ಗೆ ಸ್ಥಳೀಯರು ಶಾಸಕರ ಗಮನ ಸೆಳೆದರು. ಈ ಬಗ್ಗೆ ಜಿ.ಪಂ. ಉಪಾಧ್ಯಕ್ಷೆ ಲೋಕೇಶ್ವರಿ ಗೋಪಾಲ್ ಹಾಗೂ ತಾ.ಪಂ. ಉಪಾಧ್ಯಕ್ಷ ಅಭಿಮನ್ಯುಕುಮಾರ್ ಅವರೊಂದಿಗೆ ಮಾತುಕತೆ ನಡೆಸಿದ ಶಾಸಕರು, ವೈದ್ಯರ ನಿಯೋಜನೆಗೆ ಕ್ರಮ ವಹಿಸಲಾಗುವದು ಎಂದರು.

ಗ್ರಾಮದ ಉತ್ತಯ್ಯ, ತಿಮ್ಮಯ್ಯ, ಲಕ್ಷ್ಮಣ, ಗೌರಮ್ಮ, ಮುತ್ತಣ್ಣ, ನಾಣಿಯಪ್ಪ ಅವರುಗಳು ಸೂರ್ಲಬ್ಬಿ ಭಾಗದ ಸಮಸ್ಯೆಗಳನ್ನು ಶಾಸಕರ ಎದುರು ತೆರೆದಿಟ್ಟರು. ನಂತರ ಬೆಟ್ಟದಳ್ಳಿ ಗ್ರಾ.ಪಂ. ವ್ಯಾಪ್ತಿಗೆ ಭೇಟಿ ನೀಡಿದ ಶಾಸಕರು ಗ್ರಾ.ಪಂ. ಅಧ್ಯಕ್ಷೆ ಪವಿತ್ರ ಹಾಗೂ ಪಿಡಿಓ ತಿಮ್ಮಯ್ಯ ಸೇರಿದಂತೆ ಸದಸ್ಯರು ಹಾಗೂ ಗ್ರಾಮಸ್ಥರಿಂದ ಅಹವಾಲು ಆಲಿಸಿದರು.

ಬೆಟ್ಟದಳ್ಳಿ ಗ್ರಾಮದ ದಿನೇಶ್, ಬಿ.ಎಂ.ರಾಜು ಅವರುಗಳ ಮನೆಯ ಒಂದು ಪಾಶ್ರ್ವ ಸಂಪೂರ್ಣ ಕುಸಿತಗೊಂಡು ಹಾನಿಯಾಗಿರುವದನ್ನು ಶಾಸಕ ರಂಜನ್ ವೀಕ್ಷಿಸಿದರು. ಗ್ರಾಮದ ನೇತ್ರಾವತಿ, ಶಿವಣ್ಣ, ಬಿ.ಜೆ. ಪಾಪಯ್ಯ, ಗುಣವತಿ, ಗುರಪ್ಪ ಸೇರಿದಂತೆ ಇತರರಿಗೆ ಸೇರಿದ ನಾಟಿ ಮಾಡಿದ ಗದ್ದೆ ಸಂಪೂರ್ಣ ಹಾನಿಯಾಗಿದ್ದು, ಪರಿಹಾರ ಒದಗಿಸುವಂತೆ ಶಾಸಕರಿಗೆ ಮನವಿ ಸಲ್ಲಿಸಿದರು.

ಬೇಕನಳ್ಳಿ ಗ್ರಾಮದ ಹೊಳೆ ತುಂಬಿ ಹರಿಯುತ್ತಿದ್ದು, ಅತ್ತಲಿನ ಸಂಪರ್ಕ ಕಡಿತಗೊಂಡಿದೆ. ಆ ಭಾಗದಲ್ಲಿರುವ ಗದ್ದೆ, ಮನೆಗಳಿಗೆ ತೆರಳಲು ಅಸಾಧ್ಯವಾಗಿದ್ದು, ಸೇತುವೆ ನಿರ್ಮಿಸಲು ಕ್ರಮ ಕೈಗೊಳ್ಳುವಂತೆ ಗ್ರಾಮಸ್ಥರು ಶಾಸಕರಿಗೆ ಮನವಿ ಮಾಡಿದರು. ಕುಡಿಗಾಣದಲ್ಲಿ ಗದ್ದೆಗೆ ನೀರು ನುಗ್ಗಿ ಸಮುದ್ರದಂತಾಗಿದೆ. ಹರಗ ಗೋವಿನಮನೆಯಲ್ಲಿ ಬರೆ ಕುಸಿದು ಹೊಳೆ ನೀರು ಗದ್ದೆಗೆ ನುಗ್ಗಿದೆ. ಕುಂದಳ್ಳಿಯ ಹೊಸಗದ್ದೆಯಲ್ಲೂ ಇದೇ ಪರಿಸ್ಥಿತಿ ನಿರ್ಮಾಣವಾಗಿದೆ. ಪರಿಹಾರಕ್ಕಾಗಿ ಅರ್ಜಿ ಸಲ್ಲಿಸಲು ಮುಂದಾದರೆ, ಅರ್ಜಿ ಪಡೆಯುವಂತೆ ಸರ್ಕಾರದಿಂದ ಆದೇಶ ಬಂದಿಲ್ಲ ಎಂದು ಕಂದಾಯ ಇಲಾಖೆಯ ಅಧಿಕಾರಿಗಳು ಹೇಳುತ್ತಿದ್ದಾರೆ ಎಂದು ಕುಂದಳ್ಳಿ ದಿನೇಶ್ ಅವರು ದೂರಿದರು.

ಈ ಬಗ್ಗೆ ಕಂದಾಯ ಇಲಾಖಾಧಿಕಾರಿಗಳೊಂದಿಗೆ ಚರ್ಚಿಸುತ್ತೇನೆ. ಕೃಷಿ, ತೋಟಗಾರಿಕೆಗೆ ಸಂಬಂಧಿಸಿದ ಅರ್ಜಿಗಳಿದ್ದರೆ ಸಲ್ಲಿಸುವಂತೆ ಶಾಸಕರು ತಿಳಿಸಿದರು. ಈ ಸಂದರ್ಭ ಗ್ರಾ.ಪಂ. ಸದಸ್ಯರಾದ ಯೋಗೇಶ್, ಮಾಚಯ್ಯ, ಶಿವಣ್ಣ ಸೇರಿದಂತೆ ಇತರರು ಉಪಸ್ಥಿತರಿದ್ದರು.

ಶಾಂತಳ್ಳಿ ಗ್ರಾ.ಪಂ. ಅಭಿವೃದ್ಧಿ ಅಧಿಕಾರಿ ತಿಂಗಳಿನಿಂದ ಕಚೇರಿಗೆ ಆಗಮಿಸಿಲ್ಲ. ಸಾರ್ವಜನಿಕರ ಕೆಲಸ ಕಾರ್ಯಗಳಿಗೆ ತೀವ್ರ ಹಿನ್ನಡೆಯಾಗಿದ್ದು, ಈ ಬಗ್ಗೆ ಕ್ರಮ ಕೈಗೊಳ್ಳಬೇಕೆಂದು ಸಾರ್ವಜನಿಕರು, ರಂಜನ್, ಲೋಕೇಶ್ವರಿ ಗೋಪಾಲ್ ಮತ್ತು ಅಭಿಮನ್ಯುಕುಮಾರ್ ಅವರನ್ನು ಒತ್ತಾಯಿಸಿದರು.

ತೋಳೂರುಶೆಟ್ಟಳ್ಳಿಯ ಭಾಗ್ಯ, ಗೀತಾ, ಕೂತಿ ಗ್ರಾಮದ ಶಾಂತಪ್ಪ, ವಿನಯ್ ಹೆಚ್.ಎಂ., ಸಿ.ಕೆ. ತಮ್ಮಣ್ಣ, ಶಂಕರಪ್ಪ, ನಿಂಗಪ್ಪ, ಅರುಣ್‍ಕುಮಾರ್,ನಿಂಗಪ್ಪ ಪೂಜಾರಿ, ಶಾರದ ಅವರುಗಳ ಮನೆ ಹಾಗೂ ಕೊಟ್ಟಿಗೆ, ಚಿಕ್ಕತೋಳೂರು ಸರ್ಕಾರಿ ಪ್ರಾಥಮಿಕ ಶಾಲಾ ಕಟ್ಟಡ, ತೋಳೂರುಶೆಟ್ಟಳ್ಳಿ ಸ.ಮಾ.ಪ್ರಾ. ಶಾಲೆ ಮೇಲ್ಛಾವಣಿ, ಯಡದಂಟೆ ಬಸ್ ತಂಗುದಾಣ ಮೇಲ್ಛಾವಣಿ ಮಳೆಯಿಂದ ಹಾನಿಗೊಳಗಾಗಿರುವ ಬಗ್ಗೆ ಗ್ರಾಮಸ್ಥರು ಶಾಸಕರಿಗೆ ಮನವಿ ಸಲ್ಲಿಸಿದರು.

ತೋಳೂರುಶೆಟ್ಟಳ್ಳಿಯಲ್ಲಿ ಶಾರದ ಅವರ ಮನೆ ಸಂಪೂರ್ಣ ನೆಲಸಮಗೊಂಡಿದ್ದು, ಗರಿಷ್ಠ ಪ್ರಮಾಣದ ಪರಿಹಾರ ಒದಗಿಸಲಾಗುವದು. ಇದರೊಂದಿಗೆ ಸರ್ಕಾರದ ಆಶ್ರಯ ಯೋಜನೆಯಡಿಯಲ್ಲೂ ನೂತನ ಮನೆ ನಿರ್ಮಿಸಿಕೊಡಲಾಗುವದು. ಕೊಡಗಿನಲ್ಲಿ ಭಾರೀ ಪ್ರಮಾಣದ ನಷ್ಟಗಳು ಸಂಭವಿಸಿದ್ದು, ಸರ್ಕಾರ ತಕ್ಷಣ 1 ಸಾವಿರ ಕೋಟಿ ಅನುದಾನ ಒದಗಿಸಬೇಕು. ಈ ನಿಟ್ಟಿನಲ್ಲಿ ಸರ್ಕಾರವನ್ನು ಒತ್ತಾಯಿಸಲಾಗುವದು ಎಂದು ಶಾಸಕ ಅಪ್ಪಚ್ಚು ರಂಜನ್ ತಿಳಿಸಿದರು.

ಈ ಸಂದರ್ಭ ತೋಳೂರುಶೆಟ್ಟಳ್ಳಿ ಗ್ರಾ.ಪಂ. ಸದಸ್ಯ ರಜಿತ್‍ಕುಮಾರ್, ಪ್ರಮುಖರಾದ ಕೆ.ಕೆ. ಸುಧಾಕರ್, ಉಮೇಶ್, ಚಂದ್ರಶೇಖರ್, ಶಶಿ, ಪಳಂಗಪ್ಪ, ಶಿವಣ್ಣ ಸೇರಿದಂತೆ ಇತರರು ಉಪಸ್ಥಿತರಿದ್ದರು.

- ವಿಜಯ್