ಮಡಿಕೇರಿ, ಜು. 18: ಕರ್ನಾಟಕ ರಾಜ್ಯದ ಮುಖ್ಯಮಂತ್ರಿ ಹೆಚ್.ಡಿ. ಕುಮಾರಸ್ವಾಮಿ ಅವರು ತಾ.19ರಂದು (ಇಂದು) ಜಿಲ್ಲೆಗೆ ಆಗಮಿಸುವದ ರೊಂದಿಗೆ, ಇತರ ಸಚಿವರು, ಶಾಸಕರುಗಳು ಈ ವೇಳೆ ಕೊಡಗಿಗೆ ಭೇಟಿ ನೀಡುವವರಿದ್ದಾರೆ. ಮುಖ್ಯಮಂತ್ರಿ ಸಹಿತ ಜನಪ್ರತಿ ನಿಧಿಗಳನ್ನು ಬರಮಾಡಿಕೊಳ್ಳಲು ಜಿಲ್ಲಾ ಆಡಳಿತ ಬಿರುಸಿನ ತಯಾರಿ ಮಾಡಿಕೊಂಡಿದೆ. ಜಿಲ್ಲಾಧಿಕಾರಿ ಪಿ.ಐ. ಶ್ರೀವಿದ್ಯಾ, ಜಿ.ಪಂ. ಮುಖ್ಯ ಕಾರ್ಯನಿರ್ವಹಣಾಧಿಕಾರಿ ಪ್ರಶಾಂತ್ ಕುಮಾರ್ ಮಿಶ್ರಾ, ಚಾಮರಾಜನಗರ ಎಸ್ಪಿ ಧರ್ಮೇಂದ್ರಕುಮಾರ್ ಮೀನ, ಡಿವೈಎಸ್ಪಿ ಸುಂದರರಾಜ್ ಅವರುಗಳೊಂದಿಗೆ ಮುಂಜಾಗ್ರತಾ ಕ್ರಮಗಳ ಕುರಿತು ಸುಧೀರ್ಘ ಸಮಾಲೋಚನೆ ನಡೆಸಿದರು.ಗುರುವಾರ ಮಧ್ಯಾಹ್ನದ ಬಳಿಕ ಹಾರಂಗಿಗೆ ಆಗಮಿಸಲಿರುವ ಮುಖ್ಯಮಂತ್ರಿಗಳು ಇತರ ಸಚಿವರು, ಶಾಸಕರುಗಳೊಂದಿಗೆ ಜಲಾಶಯಕ್ಕೆ ಬಾಗಿನ ಅರ್ಪಿಸಲಿರುವ ಮೇರೆಗೆ ಜಲಾಶಯದಲ್ಲಿ ಪೂರ್ವ ಸಿದ್ಧತೆ ಮಾಡಿಕೊಳ್ಳುವಂತೆ ನೀರಾವರಿ ವಿಭಾಗದ ಅಧಿಕಾರಿಗಳಿಗೆ ಸೂಚಿಸಲಾಗಿದೆ.
ಸಂಜೆ ಜಿಲ್ಲಾ ಕೇಂದ್ರಕ್ಕೆ ಇತರ ಸಚಿವರುಗಳೊಂದಿಗೆ ಆಗಮಿಸಲಿರುವ ಮುಖ್ಯಮಂತ್ರಿಗಳು, ಜಿಲ್ಲಾಧಿಕಾರಿ ಕಚೇರಿ ಸಭಾಂಗಣದಲ್ಲಿ ಉನ್ನತ ಮಟ್ಟದ ಸಭೆ ನಡೆಸಲಿದ್ದು, ಈ ಸಂಬಂಧ ಸಾಕಷ್ಟು ಪೂರ್ವ ತಯಾರಿ ಮಾಡಿ ಕೊಳ್ಳಲಾಗಿದೆ.
(ಮೊದಲ ಪುಟದಿಂದ) ಸಭಾಂಗಣದೊಳಗೆ ವಿವಿಧ ಇಲಾಖೆಗಳ ಪ್ರಗತಿ ನೋಟ ಹಾಗೂ ಸರಕಾರಿ ಕಾರ್ಯಕ್ರಮಗಳ ಅನುಷ್ಠಾನ ಸಂಬಂಧ ಸಮಗ್ರ ಮಾಹಿತಿ ಪಡೆಯಲು ಟಿ.ವಿ. ಪರದೆಯೊಂದಿಗೆ ಎಲ್ಲಾ ಪೂರ್ವ ಸಿದ್ಧತೆ ಕಲ್ಪಿಸಲಾಗಿದೆ.
ಪ್ರವಾಸಿ ಬಸ್ ಉದ್ಘಾಟನೆ: ಕರ್ನಾಟಕ ಪ್ರವಾಸೋದÀÀ್ಯಮ ಇಲಾಖೆಯಿಂದ ಜಿಲ್ಲೆಯ ಪ್ರವಾಸಿ ತಾಣಗಳ ದರ್ಶನಕ್ಕಾಗಿ ಎರಡು ಮಿನಿ ಬಸ್ ಹಾಗೂ ಮತ್ತೊಂದು ಹೆಚ್ಚುವರಿ ಬಸ್ ವ್ಯವಸ್ಥೆ ಕೂಡ ಜಾರಿಗೊಳ್ಳಲಿದ್ದು, ನೂತನ ಬಸ್‍ಗಳನ್ನು ಪ್ರವಾಸೋದ್ಯಮ ಸಚಿವರೊಡಗೂಡಿ ಮುಖ್ಯಮಂತ್ರಿ ಕುಮಾರಸ್ವಾಮಿ ಉದ್ಘಾಟಿಸಲಿದ್ದಾರೆ ಎಂದು ‘ಶಕ್ತಿ’ಗೆ ಮೂಲವೊಂದರಿಂದ ಗೊತ್ತಾಗಿದೆ.
ಸಚಿವರ ಉಪಸ್ಥಿತಿ: ಜಿಲ್ಲಾಡಳಿತಕ್ಕೆ ಲಭಿಸಿರುವ ಅಧಿಕೃತ ಮಾಹಿತಿ ಪ್ರಕಾರ ಮುಖ್ಯಮಂತ್ರಿಗಳ ಆಗಮನದೊಂದಿಗೆ ಲೋಕೋಪಯೋಗಿ ಸಚಿವ ಹೆಚ್.ಡಿ. ರೇವಣ್ಣ, ರಾಜ್ಯ ಬೃಹತ್ ನೀರಾವರಿ ಮತ್ತು ವೈದ್ಯಕೀಯ ಶಿಕ್ಷಣ ಸಚಿವ ಡಿ.ಕೆ. ಶಿವಕುಮಾರ್, ಪ್ರವಾಸೋದ್ಯಮ ಮತ್ತು ರೇಷ್ಮೆ ಖಾತೆ ಸಚಿವ ಸಾ.ರಾ. ಮಹೇಶ್, ಸಣ್ಣ ನೀರಾವರಿ ಸಚಿವ ಸಿ.ಎಸ್. ಪುಟ್ಟರಾಜ್ ಅವರುಗಳು ಉಪಸ್ಥಿತರಿರುವದಾಗಿ ಮಾಹಿತಿ ಲಭಿಸಿದೆ.
ಅಲ್ಲದೆ, ಕೊಡಗು- ಮೈಸೂರು ಸಂಸದರು ಸೇರಿದಂತೆ ಜಿಲ್ಲೆಯ ಶಾಸಕರು, ವಿಧಾನ ಪರಿಷತ್ ಸದಸ್ಯರುಗಳೊಂದಿಗೆ, ಜಿಲ್ಲೆಯ ಗಡಿ ತಾಲೂಕುಗಳ ಶಾಸಕರು ಭಾಗವಹಿಸಲಿದ್ದಾರೆ ಎಂದು ಕರ್ನಾಟಕ ಜಲಸಂಪನ್ಮೂಲ ಇಲಾಖೆಯ ಆಮಂತ್ರಣದಲ್ಲಿ ತಿಳಿಸಲಾಗಿದೆ. ಈ ಆಮಂತ್ರಣ ಪ್ರಕಾರ ಮಾಜೀ ಪ್ರಧಾನಿ ಹೆಚ್.ಡಿ. ದೇವೇಗೌಡ ಅವರು ಕೂಡ ಹಾರಂಗಿಗೆ ಬಾಗಿನ ಅರ್ಪಿಸುವ ಕಾರ್ಯಕ್ರಮದಲ್ಲಿ ಪಾಲ್ಗೊಳ್ಳಲಿದ್ದಾರೆ ಎಂದು ಹೆಸರಿಸಲಾಗಿದೆ.
ಮಾಹಿತಿ ಅಲಭ್ಯ: ಮಾಜೀ ಪ್ರಧಾನಿ ಹಾಗೂ ರಾಜ್ಯ ಉಪಮುಖ್ಯಮಂತ್ರಿಗಳ ಆಗಮನ ಕುರಿತು ಯಾವದೇ ಮಾಹಿತಿ ಇಲ್ಲವೆಂದು ಜಿಲ್ಲಾ ಆಡಳಿತದ ಮೂಲಗಳು ಖಚಿತಪಡಿಸಿವೆ.
ಸಮಗ್ರ ವರದಿ: ಜಿಲ್ಲೆಯ ಸುಮಾರು 32 ಇಲಾಖೆಗಳಿಗೆ ಸಂಬಂಧಿಸಿದಂತೆ ಪ್ರಗತಿಯ ಸಮಗ್ರ ವರದಿಯೊಂದಿಗೆ, ಪ್ರಸಕ್ತ ಪ್ರಾಕೃತಿಕ ವಿಕೋಪದಿಂದ ನಷ್ಟ ಸಂಭವಿಸಿರುವ ಬಗ್ಗೆ ಮುಖ್ಯಮಂತ್ರಿಗಳಿಗೆ ಕೊಡಗಿನ ಬೇಕು - ಬೇಡಿಕೆಗಳ ಪಟ್ಟಿಯನ್ನು ಈ ವೇಳೆ ಸಲ್ಲಿಸಲು ಜಿಲ್ಲಾಡಳಿತ ಸಿದ್ಧತೆ ಮಾಡಿಕೊಂಡಿದೆ.
ಪೂಜಾ ತಯಾರಿ: ಜಿಲ್ಲಾ ಕೇಂದ್ರದಲ್ಲಿ ಸಂಜೆ ಬಳಿಕ ಸಭೆಯೊಂದಿಗೆ, ಮಡಿಕೇರಿ ಹೊರವಲಯದ ರೆಸಾರ್ಟ್ ವೊಂದರಲ್ಲಿ ಮುಖ್ಯಮಂತ್ರಿ ಸಹಿತ ಇತರರು ತಂಗುವ ಮಾಹಿತಿ ಲಭಿಸಿದೆ. ತಾ. 20ರಂದು (ನಾಳೆ) ಬೆಳಗ್ಗಿನ ಜಾವ ಭಾಗಮಂಡಲ ಹಾಗೂ ತಲಕಾವೇರಿಗೆ ಭೇಟಿ ನೀಡಿ ಪೂಜೆ ಸಲ್ಲಿಸಲಿದ್ದು, ಈ ಸಂಬಂಧ ಕೂಡ ಜಿಲ್ಲಾಡಳಿತ ಪೂರ್ವ ತಯಾರಿ ಮಾಡಿಕೊಂಡಿದೆ ಎಂದು ವಿಶ್ವಸನೀಯ ಮೂಲಗಳು ತಿಳಿಸಿವೆ.