ಕುಶಾಲನಗರ, ಜು. 18: ಕಾವೇರಿ ತಾಲೂಕು ರಚನೆಗೆ ಆಗ್ರಹಿಸಿ ಮನವಿ ಸಲ್ಲಿಸುವ ಮೂಲಕ ಮುಖ್ಯಮಂತ್ರಿ ಕುಮಾರಸ್ವಾಮಿ ಅವರ ಗಮನ ಸೆಳೆಯಲು ಕಾವೇರಿ ತಾಲೂಕು ಹೋರಾಟ ಕೇಂದ್ರ ಸಮಿತಿ ನಿರ್ಧರಿಸಿದೆ. ಸ್ಥಳೀಯ ಖಾಸಗಿ ಹೋಟೆಲ್ ಸಭಾಂಗಣದಲ್ಲಿ ಕೇಂದ್ರ ಸಮಿತಿ ಸಂಚಾಲಕ ವಿ.ಪಿ.ಶಶಿಧರ್ ಅವರ ನೇತೃತ್ವದಲ್ಲಿ ನಡೆದ ಸಭೆಯಲ್ಲಿ ಈ ಬಗ್ಗೆ ಚರ್ಚೆ ನಡೆಯಿತು. ವಿವಿಧ ಸರಕಾರಗಳ ಅವಧಿಯಲ್ಲಿ ಹಲವು ಮಜಲುಗಳು ಹೋರಾಟ ಕೈಗೊಂಡರೂ ಕೂಡ ಪ್ರತ್ಯೇಕ ತಾಲೂಕು ರಚನೆ ಕನಸು ಈಡೇರಿಲ್ಲದ ಬಗ್ಗೆ ಪ್ರಮುಖರು ಸಭೆಯಲ್ಲಿ ಬೇಸರ ವ್ಯಕ್ತಪಡಿಸಿದರು. ಜಿಲ್ಲೆಗೆ ಆಗಮಿಸುತ್ತಿರುವ ಮುಖ್ಯಮಂತ್ರಿ ಕುಮಾರಸ್ವಾಮಿ ಅವರನ್ನು ಹಾರಂಗಿಯಲ್ಲಿ ಭೇಟಿಯಾಗಿ ಮನವಿ ಸಲ್ಲಿಸುವ ಬಗ್ಗೆ ಸಭೆಯಲ್ಲಿ ತೀರ್ಮಾನ ಕೈಗೊಳ್ಳಲಾಯಿತು.

ಮನವಿ ಸಲ್ಲಿಸುವ ಸಂದರ್ಭ ಕೇಂದ್ರ ಸಮಿತಿ ಪ್ರಮುಖರು, ಸ್ಥಾನೀಯ ಸಮಿತಿಗಳ ಅಧ್ಯಕ್ಷರು, ಪದಾಧಿಕಾರಿಗಳು ಹೆಚ್ಚಿನ ಸಂಖ್ಯೆಯಲ್ಲಿ ಪಾಲ್ಗೊಳ್ಳಲಿದ್ದು, ಜಿ.ಪಂ., ತಾ.ಪಂ, ಪ.ಪಂ., ಗ್ರಾ.ಪಂ. ಚುನಾಯಿತ ಜನಪ್ರತಿನಿಧಿಗಳು, ವಿಧಾನ ಪರಿಷತ್ ಸದಸ್ಯರು ಪಾಲ್ಗೊಳ್ಳುವರು ಎಂದು ಶಶಿಧರ್ ಸಭೆಯ ನಂತರ ಮಾಹಿತಿ ನೀಡಿದ್ದಾರೆ.

ಸಭೆಯಲ್ಲಿ ಸಮಿತಿ ಪ್ರಮುಖರಾದ ಆರ್.ಕೆ. ನಾಗೇಂದ್ರಬಾಬು, ಶಶಿಕಾಂತ್ ರೈ, ರೋಸ್ ಮೇರಿ, ನಾಗರತ್ನ, ಸೆಬಾಸ್ಟಿನ್, ಎಂ.ಕೆ.ದಿನೇಶ್, ಎಸ್.ಕೆ.ಸತೀಶ್, ಜೋಸೆಫ್ ವಿಕ್ಟರ್ ಸೋನ್ಸ್, ಶಾಂತಕುಮಾರ್, ರಮೇಶ್, ಗಣೇಶ್, ಪೂವಯ್ಯ ಮತ್ತಿತರರು ಇದ್ದರು.ಪೊನ್ನಂಪೇಟೆ, ಜು. 18: ಕೊಡಗಿನಲ್ಲಿ ಕಾಡಾನೆ ಮತ್ತು ಹುಲಿಗಳ ಹಾವಳಿಯಿಂದ ಜನತೆ ತತ್ತರಿಸಿದ್ದ ಸಂಕಷ್ಟದ ಸಂದರ್ಭದಲ್ಲೆ ಇದೀಗ ಎದುರಾಗಿರುವ ಅತಿವೃಷ್ಠಿ ಜಿಲ್ಲೆಯ ಜನರನ್ನು ಮತ್ತಷ್ಟು ಕೂಪಕ್ಕೆ ತಳ್ಳಿದಂತಾಗಿದೆ. ಅದ್ದರಿಂದ ಜನರ ತಾಳ್ಮೆಯ ಮಿತಿ ಮೀರುವ ಮುನ್ನ ಸರಕಾರ ಎಚ್ಚೆತ್ತುಕೊಂಡು ಕೊಡಗಿನ ಜನರ ಸಂಕಷ್ಟ ಪರಿಹಾರಕ್ಕಾಗಿ ವಿಶೇಷ ಯೋಜನೆಯೊಂದನ್ನು ರೂಪಿಸಬೇಕು ಎಂದು ಜಿ.ಪಂ. ಸದಸ್ಯ ಬಿ.ಎನ್. ಪ್ರಥ್ಯು ಸರಕಾರವನ್ನು ಆಗ್ರಹಿಸಿದ್ದಾರೆ.

ಕಳೆದ 3 ವರ್ಷಗಳಿಂದ ಬರಗಾಲದ ಛಾಯೆಯಲ್ಲಿ ತತ್ತರಿಸಿದ್ದ ವೀರಾಜಪೇಟೆ ರೈತರು ಇದೀಗ ಅತಿವೃಷ್ಠಿಯಿಂದಾಗಿ ಕಂಗೆಟ್ಟಿದ್ದಾರೆ. ಇದೀಗ ದ. ಕೊಡಗಿನ ಜನತೆಗೆ ನಿಜವಾಗಿಯೂ ಅಭದ್ರತೆ ಕಾಡುತ್ತಿದೆ ಎಂದು ಹೇಳಿರುವ ಬಿ.ಎನ್. ಪ್ರಥ್ಯು, ತಾಲೂಕಿನ ಅರಣ್ಯದಂಚಿನಲ್ಲಿರುವ ಗಿರಿಜನರನ್ನು ಇದೀಗ ಹಂತ ಹಂತವಾಗಿ ಒಕ್ಕಲೆಬ್ಬಿಸಲಾಗುತ್ತದೆ. ಗಿರಿಜನರ ನಂತರದ ಸರದಿ ಇಲ್ಲಿನ ಅಮಾಯಕ ಸಣ್ಣ ಬೆಳೆಗಾರರದ್ದು ಎಂಬ ಪರಿಸ್ಥಿತಿ ನಿರ್ಮಾಣಗೊಂಡಿದೆ ಎಂದು ಅವರು ಹೇಳಿಕೆಯಲ್ಲಿ ಮಾರ್ಮಿಕವಾಗಿ ತಿಳಿಸಿದ್ದಾರೆ.

ಕಳೆದ 3 ವರ್ಷದಲ್ಲಿ ಬರ ಪರಿಹಾರ ಯೋಜನೆಯಡಿ ಸರಕಾರ ಘೋಷಿಸಿರುವ ಯಾವದೇ ಪರಿಹಾರ ಹಣ ಕೊಡಗಿಗೆ ಬಂದಿಲ್ಲ. ಜಿ.ಪಂ. ಸದಸ್ಯರ ವಾರ್ಷಿಕ ಅನುದಾನವನ್ನು ರೂ. 11 ಲಕ್ಷಕ್ಕೆ ಮಿತಿಗೊಳಿಸಲಾಗಿದೆ. ಈ ಮೊತ್ತದಲ್ಲಿ ಕ್ಷೇತ್ರದಲ್ಲಿ ಯಾವ ರೀತಿಯ ಅಭಿವೃದ್ಧಿ ಕೆಲಸ ಮಾಡಲು ಸಾಧ್ಯ ಎಂದು ಪ್ರಶ್ನಿಸಿದ್ದಾರೆ.

ಕೊಡಗಿಗೆ ವಿಶೇಷ ಪ್ಯಾಕೇಜ್‍ವೊಂದನ್ನು ಸರಕಾರ ರೂಪಿಸಬೇಕು. ಹಿಂದಿನ ಸರಕಾರ ಘೋಷಿಸುತ್ತಿದ್ದಂತೆ ಜಿಲ್ಲೆಯ ರಸ್ತೆ ಅಭಿವೃದ್ಧಿಗಾಗಿ ವಿಶೇಷ ಅನುದಾನ ಒದಗಿಸಬೇಕು ಎಂದು ಒತ್ತಾಯಿಸಿದ್ದಾರೆ.