ಮಡಿಕೇರಿ, ಜು.18 : ಕೊಡಗು ಜಿಲ್ಲೆಯಾದ್ಯಂತ ಇಂದು ಗಾಳಿ ಹಾಗೂ ಮಳೆ ಸ್ವಲ್ಪ ಇಳಿಮುಖಗೊಂಡಿದ್ದರೂ, ಅಲ್ಲಲ್ಲಿ ಹಾನಿ ಸಂಭವಿಸಿದೆ. ಗಾಳಿ ಮಳೆಯಿಂದ ಅಲ್ಲಲ್ಲಿ ಮನೆಗಳಿಗೆ ಹಾನಿ, ಭೂ ಕುಸಿತ, ನೆಲಕಚ್ಚಿರುವ ಮರಗಳು ಮತ್ತು ವಿದ್ಯುತ್ ಕಂಬಗಳಿಂದ ಸಮಸ್ಯೆ ಮುಂದುವರಿದಿದೆ.ಭಾಗಮಂಡಲ ವರದಿ : ತಲಕಾವೇರಿ ವ್ಯಾಪ್ತಿಯಲ್ಲಿ ಕಳೆದ 24 ಗಂಟೆಗಳಲ್ಲಿ 6.08 ಇಂಚು ಮಳೆಯಾಗಿದ್ದು, ಇಂದು ಹಗಲು ಭಾಗಮಂಡಲ ಸಂಗಮ ಕ್ಷೇತ್ರದಲ್ಲಿ ಪ್ರವಾಹ ಇಳಿಮುಖಗೊಂಡು ಮಡಿಕೇರಿ ಹಾಗೂ ನಾಪೋಕ್ಲು ಮಾರ್ಗದಲ್ಲಿ ಸಂಚಾರ ವ್ಯವಸ್ಥೆ ಸುಗಮಗೊಂಡಿತ್ತು. ಭಾಗಮಂಡಲ ವ್ಯಾಪ್ತಿಯಲ್ಲಿ 2.95 ಇಂಚು ಮಳೆಯಾಗಿತ್ತು.

ಕಳೆದ 24 ಗಂಟೆಗಳಲ್ಲಿ ಜಿಲ್ಲೆಯಾದ್ಯಂತ ಸರಾಸರಿ 1.45 ಇಂಚು ಮಳೆಯಾಗಿದ್ದು, ಇದುವರೆಗೆ ಒಟ್ಟು 88.81 ಇಂಚು ಮಳೆ ದಾಖಲಾಗಿದೆ. ಕಳೆದ ವರ್ಷ ಇದೇ ಅವಧಿಗೆ 36.01 ಇಂಚು ಮಾತ್ರ ಮಳೆಯಾಗಿತ್ತು.

ಮಡಿಕೇರಿ ತಾಲೂಕಿನಲ್ಲಿ ಕಳೆದ 24 ಗಂಟೆಗಳಲ್ಲಿ 1.80 ಇಂಚು ಮಳೆಯಾಗಿದ್ದು, ವರ್ಷಾರಂಭದಿಂದ ಇದುವರೆಗೆ 121.66 ಇಂಚು ಮಳೆಯಾಗಿದೆ. ಕಳೆ ಸಾಲಿನಲ್ಲಿ ಈ ಅವಧಿಗೆ 49.29 ಇಂಚು ಮಳೆ ದಾಖಲಾಗಿದ್ದು, ಪ್ರಸಕ್ತ ಅವಧಿಗೆ 73.37 ಇಂಚು ಅಧಿಕ ಮಳೆಯಾಗಿದೆ.

ವೀರಾಜಪೇಟೆ ತಾಲೂಕಿಗೆ ಹಿಂದಿನ 24 ಗಂಟೆಗಳಲ್ಲಿ ಸರಾಸರಿ 1.10 ಇಂಚು ಮಳೆಯಾಗಿದೆ. ವರ್ಷಾರಂಭದಿಂದ ಇದುವರೆಗೆ 72.75 ಇಂಚು ಮಳೆಯಾಗಿದ್ದು, ಕಳೆದ ವರ್ಷ ಇದೇ ಅವಧಿಗೆ 31.27 ಇಂಚು ಮಳೆಯೊಂದಿಗೆ ಈ ಸಾಲಿನಲ್ಲಿ 42.48 ಇಂಚು ಅಧಿಕ ಮಳೆಯಾಗಿದೆ.

ಸೋಮವಾರಪೇಟೆ ತಾಲೂಕಿಗೆ ಹಿಂದಿನ 24 ಗಂಟೆಗಳಲ್ಲಿ 1.45 ಇಂಚು ಸರಾಸರಿ ಮಳೆಯಾಗಿದೆ. ವರ್ಷಾರಂಭದಿಂದ ಇಂದಿನ ತನಕ 68.76 ಇಂಚು ಮಳೆಯಾದರೆ, ಕಳೆದ ಸಾಲಿನಲ್ಲಿ 27.47 ಇಂಚು ದಾಖಲಾಗಿತ್ತು. ಈ ವರ್ಷದಲ್ಲಿ ಸರಾಸರಿ 41.29 ಇಂಚು ಅಧಿಕ ಮಳೆಯಾಗಿದೆ.

ಹಾರಂಗಿ ನೀರಿನ ಮಟ್ಟ : ಹಾರಂಗಿ ಜಲಾಶಯದ ಗರಿಷ್ಠ 2859 ಅಡಿ ನೀರಿಗಿಂತ ಪ್ರಸಕ್ತ 2856.41 ಅಡಿ ಕಾಪಾಡಿಕೊಳ್ಳಲಾಗಿದೆ. ಜಲಾಶಯಕ್ಕೆ 12.668 ಕ್ಯೂಸೆಕ್ಸ್ ಒಳಹರಿವು; 14,883 ಕ್ಯೂಸೆಕ್ಸ್ ನದಿಗೆ ಬಿಡಲಾಗಿದೆ. 450 ಕ್ಯೂಸೆಕ್ಸ್ ಜಲಾಶಯಕ್ಕೆ ಬಿಡಲಾಗಿದ್ದು, ಕಳೆದ ವರ್ಷ ಈ ಅವಧಿಗೆ 2848.18 ಅಡಿ ನೀರಿನೊಂದಿಗೆ ಪ್ರಸಕ್ತ 16.23 ಅಧಿಕವಿದೆ.

ತಪ್ಪದ ಮನೆ ಹಾನಿ

ಸೋಮವಾರಪೇಟೆ : ತಾಲೂಕಿನಾದ್ಯಂತ ಮಳೆಯ ಅಬ್ಬರ ತಗ್ಗಿದ್ದರೂ ಸಹ ಮನೆಗಳಿಗೆ ಹಾನಿ ಪ್ರಕರಣಗಳು ವರದಿಯಾಗುತ್ತಲೇ ಇವೆ.

ಹಟ್ಟಿಹೊಳೆ ಗ್ರಾಮದ ದೀಪಕ್, ಸುಳಿಮಳ್ತೆ ಗ್ರಾಮದ ಮಹಾದೇವಮ್ಮ, ಕೂಗೂರು ಗ್ರಾಮದ ಜಯಮ್ಮ, ಬೀಟಿಕಟ್ಟೆ ಹಾರಳ್ಳಿ ಗ್ರಾಮದ ಲಕ್ಷ್ಮೀನಾರಾಯಣ, ಕಾವೇರಮ್ಮ ಅವರುಗಳ ಮನೆ ಮೇಲೆ ಮರಬಿದ್ದು ಹಾನಿಯಾಗಿದೆ.

ತೋಳೂರುಶೆಟ್ಟಳ್ಳಿಯ ವೈ.ಎನ್. ಶಾಂತಪ್ಪ ಎಂಬವರಿಗೆ ಸೇರಿದ ನೂತನ ಮನೆಯ ಮೇಲ್ಛಾವಣಿ ಭಾರೀ ಗಾಳಿಗೆ ಜಖಂಗೊಂಡಿದ್ದು, ನಷ್ಟ ಸಂಭವಿಸಿದೆ.

ಶಾಲಾ ಕಟ್ಟಡ ಕುಸಿತ : ಭಾರೀ ಮಳೆಯಿಂದಾಗಿ ಕಡಂಗ ಶಾಲಾ ಕಟ್ಟಡ ಕುಸಿದು ಬಿದ್ದಿದೆ ಎಂದು ಶಾಲಾ ಮುಖ್ಯ ಶಿಕ್ಷಕಿ ವೈ.ಎ. ತಂಗಮ್ಮ ತಿಳಿಸಿದ್ದಾರೆ. ಇದರ ಪಕ್ಕದ ಇನ್ನೂ ಎರಡು ಕೊಠಡಿ ಅಪಾಯದ ಸ್ಥಿತಿಯಲ್ಲಿದೆ ಎಂದು ಅವರು ತಿಳಿಸಿದ್ದಾರೆ.

ಬಿರುನಾಣಿಯಲ್ಲಿ ಮನೆ ಕುಸಿತ

ಶ್ರೀಮಂಗಲ : ಬಿರುನಾಣಿ ಗ್ರಾ.ಪಂ ವ್ಯಾಪ್ತಿಯಲ್ಲಿ ಮಳೆ ಗಾಳಿಗೆ ಎರಡು ಮನೆ ಕುಸಿದು ಬಿದ್ದಿದೆ.

ಕಳಕೂರುವಿನ ಕಾಳಿಮಾಡ ಬೆಳ್ಯಪ್ಪ ಮನೆಗೆ ಮಳೆ ಗಾಳಿಯಿಂದ ತೇವಾಂಶ ತಗುಲಿ ಮನೆ ಕುಸಿದು ಬಿದ್ದಿದ್ದು, ಮನೆ ಕುಸಿಯುವ ಸಂದರ್ಭ ಬೆಳ್ಯಪ್ಪ ಅವರ ಪತ್ನಿ ಮನೆಯಿಂದ ಹೊರಗೆ ಹೋಗಿದ್ದರಿಂದ ಪ್ರಾಣಹಾನಿ ತಪ್ಪಿದೆ.

ಪರಕಟಗೇರಿ ಗ್ರಾಮದ ಕುಪ್ಪಣಮಾಡ ಬಿದ್ದಪ್ಪ ಅವರ ಮನೆಯೂ ಸಹ ಭಾಗಶಃ ಬಿದ್ದಿದ್ದು, ಯಾವದೇ ಪ್ರಾಣಹಾನಿಯಾಗಿಲ್ಲ. ಎರಡು ಮನೆಯ ಪಿಠೋಪಕರಣ, ಮನೆಯಲ್ಲಿದ್ದ ಸಾಮಾಗ್ರಿಗಳು ಹಾನಿಯಾಗಿದೆ. ಸ್ಥಳಕ್ಕೆ ವೀರಾಜಪೇಟೆ ತಹಶೀಲ್ದಾರ್ ಗೋವಿಂದರಾಜು, ಹುದಿಕೇರಿ ಕಂದಾಯ ಪರಿವೀಕ್ಷಕ ನಿಶಾನ್, ಬಿರುನಾಣಿ ಗ್ರಾ.ಪಂ ಅಧ್ಯಕ್ಷ ಬಿ.ಕೆ.ನಾಣಯ್ಯ ಭೇಟಿ ನೀಡಿ ಪರಿಶೀಲಿಸಿದರು.

ಮನೆ ಕುಸಿದು ಬಿದ್ದಿರುವ ಎರಡು ಕುಟುಂಬಗಳಿಗೆ ತಾತ್ಕಾಲಿಕವಾಗಿ ಸಮೀಪದಲ್ಲೆ ಸಂಬಂದಿಕರ ಮನೆಗೆ ತೆರವುಗೊಳಿಸಲಾಗಿದೆ.

ಕೊಳೆ ರೋಗಕ್ಕೆ ತುತ್ತಾಗಿರುವ ಫಸಲು

ಶ್ರೀಮಂಗಲ: ದ. ಕೊಡಗಿನ ಬಿರುನಾಣಿ ಗ್ರಾ.ಪಂ ವ್ಯಾಪ್ತಿಯಲ್ಲಿ ಹಾನಿ ಪ್ರದೇಶಗಳಿಗೆ ವೀರಾಜಪೇಟೆ ತಹಶೀಲ್ದಾರ್ ಗೋವಿಂದರಾಜು ಭೇಟಿ ನೀಡಿ ಪರಿಶೀಲಿಸಿದರು.

ಆದರೆ, ಮಳೆಯ ಅಬ್ಬರ ಸ್ವಲ್ಪ ಪ್ರಮಾಣದಲ್ಲಿ ತಗ್ಗಿದ್ದು, ಅಪಾರ ಪ್ರಮಾಣದಲ್ಲಿ ಕಾಫಿ, ಅಡಿಕೆ, ಕರಿಮೆಣಸು ಬೆಳೆಗಳಿಗೆ ನಷ್ಟ ಉಂಟಾಗಿದೆ. ಬಿರುನಾಣಿ ಗ್ರಾ.ಪಂ ವ್ಯಾಪ್ತಿಗೆ ಇದುವರೆಗೆ 146.75 ಇಂಚು ಮಳೆಯಾಗಿದ್ದು, ಕಳೆದ ವರ್ಷ ಒಟ್ಟು ಮಳೆ 165 ಇಂಚು ಆಗಿತ್ತು.

ಕಳೆದ 40 ದಿನದಿಂದ ನಿರಂತರವಾಗಿ ಬಿಡುವಿಲ್ಲದೆ ಸುರಿಯುತ್ತಿರುವ ಮಳೆಯಿಂದ ನೆಲದಲ್ಲಿ ತೇವಾಂಶ ಅಧಿಕವಾಗಿ ಕಾಫಿ, ಅಡಿಕೆ, ಕರಿಮೆಣಸು ಬೆಳೆಗಳಿಗೆ ಕೊಳೆ ರೋಗ ತಗುಲಿದೆ. ಕಾಫಿ ಅಪಾರ ಪ್ರಮಾಣದಲ್ಲಿ ಉದುರಿದೆ. ಅಲ್ಲದೆ, ಅಡಿಕೆ ಸಹ ಉದುರಿದ್ದು, ಬಹುತೇಕ ತೋಟಗಳಿಗೆ ಕೊಳೆ ರೋಗಕ್ಕೆ ಔಷಧಿ ಸಿಂಪಡಣೆ ಮಾಡಿದರೂ ಸಹ ಬೆಳೆ ಹಾನಿಯಾಗಿದೆ.

ಇದೀಗ ರೋಗಕ್ಕೆ ತುತ್ತಾದ ಬೆಳೆಗಳಿಗೆ ಸಿಂಪಡಣೆ ಮಾಡಲು ಮಳೆ ಬಿಡುವು ನೀಡದಿರುವದರಿಂದ ಬೆಳೆಗಾರರು ಚಿಂತಾಕ್ರಾಂತರಾಗಿದ್ದಾರೆ. ಈ ಸಂದರ್ಭ ಹುದಿಕೇರಿ ಕಂದಾಯ ಪರಿವೀಕ್ಷಕ ನಿಶಾನ್, ಚಿಮ್ಮಣಮಾಡ ಲೋಹಿತ್, ಅಣ್ಣಳಮಾಡ ರಾಯ್, ಗ್ರಾ.ಪಂ. ಅಧ್ಯಕ್ಷ ಡಿ.ಕೆ. ನಾಣಯ್ಯ ಮತ್ತಿತರರು ಹಾಜರಿದ್ದರು.

ನೆಲಸಮವಾದ ಮನೆ

ಸುಂಟಿಕೊಪ್ಪ : ಹಾಲೇರಿ ಕಾಂಡನಕೊಲ್ಲಿ ನಿವಾಸಿ ವಿಜಯ ಅವರ ಮನೆ ಮಳೆಗೆ ಕುಸಿದು ಬಿದ್ದು ನೆಲಸಮವಾಗಿದೆ.

ಮನೆಯಲ್ಲಿದ್ದ ವಿಜಯ ಅವರ ಕುಟುಂಬ ಮನೆಯಿಂದ ಓಡಿ ಹೊರಗೆ ಬಂದಿರುವದರಿಂದ ಸಂಭವಿಸಬಹುದಾದ ಪ್ರಾಣಹಾನಿ ತಪ್ಪಿದೆ. ಅಪಾರ ನಷ್ಟವುಂಟಾಗಿದೆ ಎನ್ನಲಾಗಿದೆ.

ಮಾದಾಪುರ ಜಂಬೂರುಬಾಣೆ ನಿವಾಸಿ ಆಟೋಚಾಲಕ ಶರಣು ಅವರ ಮನೆಯಗೋಡೆ ಕುಸಿದು ಬಿದ್ದು ಹೆಂಚು ಹಾರಿಹೋಗಿದೆ. ಸ್ಥಳಕ್ಕೆ ಸುಂಟಿಕೊಪ್ಪ ಕಂದಾಯ ಕಛೇರಿಯ ಗ್ರಾಮ ಲೆಕ್ಕಾಧಿಕಾರಿ ಪರಮೇಶ್ವರ ಗ್ರಾಮ ಸೇವಕ ಗಿರೀಶ ಭೇಟಿ ನೀಡಿ ಪರಿಶೀಲಿಸಿದರು.

ಹಾಲೇರಿ ಗ್ರಾಮದ ವೆಂಕಟೇಶ್ವರ ಅವರ ಮನೆ ಬಳಿಯ ರಸ್ತೆ ಕುಸಿದು ಬಿದ್ದಿದೆ; ಕೆದಕಲ್ ನೇಗದಾಳು ರಾಷ್ಟ್ರೀಯ ಹೆದ್ದಾರಿ ಬಳಿ ಟ್ರಾನ್ಸ್‍ಫಾರ್ಮರ್ ಮೇಲೆ ಮರ ಬಿದ್ದು ಹಾನಿಯಾಗಿದೆ.

ವಿದ್ಯುತ್ ಸಂಪರ್ಕಕ್ಕೆ ಗ್ರಾ.ಪಂ. ಸದಸ್ಯನ ಸ್ಪಂದನ

ಇಲ್ಲಿನ ಪಂಪ್‍ಹೌಸ್ ಬಡಾವಣೆಯಲ್ಲಿ ಗಾಳಿ ಮಳೆಗೆ ವಿದ್ಯುತ್ ಕಂಬ ತುಂಡಾಗಿ ಬಿದ್ದಿದ್ದು, ಕಳೆದ 5 ದಿನಗಳಿಂದ ಈ ಭಾಗದಲ್ಲಿ ವಿದ್ಯುತ್ ಸಂಪರ್ಕ ಕಡಿತಗೊಂಡಿದೆ. ಗ್ರಾ.ಪಂ. ಸದಸ್ಯ ಬಿ.ಎಂ. ಸುರೇಶ್ ಹಾಗೂ ಸ್ಥಳೀಯ ನಿವಾಸಿಗಳು ಮರದ ರಂಬೆ, ಕಾಡುಕಡಿದು ಜಾಗ ಸಮತಟ್ಟು ಮಾಡಿ ನಿಗಮದ ಸಿಬ್ಬಂದಿಗಳೊಂದಿಗೆ ವಿದ್ಯುತ್ ಕಂಬ ನೆಟ್ಟು ವಯರ್ ಅವಡಿಸಿ ಸಾರ್ವಜನಿಕರ ಪ್ರಶಂಸೆ ವ್ಯಕ್ತಪಡಿಸಿದ್ದಾರೆ.

ಮರ ಬಿದ್ದು ನಷ್ಟ

ಮಾದಾಪುರದ ಜಂಬೂರು ಬಾಣೆಯ ಕೃಷ್ಣಪ್ಪ ಅವರ ಶೌಚಾಲಯದ ಮರ ಬಿದ್ದ ಪರಿಣಾಮ ಜಖಂಗೊಂಡು ನಷ್ಟ ಸಂಭವಿಸಿದೆ. ಮಾದಾಪುರದ ಗಣೇಶ ಎಂಬವರ ಮನೆಗೆ ಸಿಲ್ವರ್ ಮರ ಬಿದ್ದ ಪರಿಣಾಮ ಮನೆಯ ಗೋಡೆ ಬಿರುಕು ಬಿಟ್ಟು ಮೇಲ್ಛಾವಣಿಗಳು ಹಾನಿಗೊಂಡಿದೆ. ಗ್ರಾಮ ಲೆಕ್ಕಾಧಿಕಾರಿ ಪರಮೇಶ್ ವiಹಜರು ನಡೆಸಿ ಮುಂದಿನ ಕ್ರಮ ಕೈಗೊಂಡಿದ್ದಾರೆ

ಸಿದ್ದಾಪುರ : ಕಳೆದ ಕೆಲವು ದಿನಗಳಿಂದ ಸುರಿಯುತ್ತಿರುವ ಧಾರಾಕಾರ ಮಳೆಯಿಂದಾಗಿ ಚೆನ್ನಯ್ಯನಕೋಟೆ ಗ್ರಾಮ ಪಂಚಾಯಿತಿ ವ್ಯಾಪ್ತಿಯಲ್ಲಿ 3 ಮನೆಗಳು ಕುಸಿದಿವೆ. ಮಾಲ್ದಾರೆ ಗ್ರಾಮ ಪಂಚಾಯಿತಿ ವ್ಯಾಪ್ತಿಯ ಬಾಡಗ ಬಾಣಂಗಾಲ ಗ್ರಾಮದಲ್ಲಿ ಒಂದು ಮನೆ ಕುಸಿದಿದ್ದು, ಯಾವದೇ ಅನಾಹುತಗಳು ಸಂಭವಿಸಲಿಲ್ಲ. ಚೆನ್ನಯ್ಯನಕೋಟೆ ಗ್ರಾಮ ಪಂಚಾಯಿತಿ ವ್ಯಾಪ್ತಿಯ ನಿವಾಸಿ ನೇತ್ರ, ಗೌರಿ, ಫಿಲೋಮಿನಾ ಹಾಗೂ ಮಾಲ್ದಾರೆ ಗ್ರಾಮ ಪಂಚಾಯಿತಿ ವ್ಯಾಪ್ತಿಯ ಬಾಡಗ ಬಾಣಂಗಾಲ ಗ್ರಾಮದ ನಿವಾಸಿ ಸೈನಾಭ ಅವರ ಮನೆಗಳು ಮಳೆಯಿಂದಾಗಿ ಭಾಗಶಃ ಕುಸಿದಿದೆ. ಸ್ಥಳಕ್ಕೆ ಅಮ್ಮತ್ತಿ ಹೋಬಳಿ ಕಂದಾಯ ಪರಿವೀಕ್ಷಕ ವಿನು, ಗ್ರಾಮಲೆಕ್ಕಿಗರಾದ ಭಾನು, ಹರೀಶ್ ಕುಮಾರ್, ಪಿ.ಡಿ.ಓ. ರಾಜನ್ ಭೇಟಿ ನೀಡಿ ಪರಿಶೀಲಿಸಿದರು. ಅಲ್ಲದೆ ನಷ್ಟದ ಅಂದಾಜು ಪಟ್ಟಿ ತಯಾರಿಸಿ ತಹಶೀಲ್ದಾರ್‍ರಿಗೆ ವರದಿ ಸಲ್ಲಿಸಿದ್ದಾರೆ.

ಸಿದ್ದಾಪುರ ಕಾವೇರಿ ನದಿಯಲ್ಲಿ ನೀರಿನ ಮಟ್ಟ ಇಳಿಮುಖಗೊಳ್ಳುತ್ತಿದೆ. ನೀರಿನ ಪ್ರಮಾಣ ಏರಿಕೆಯಾದಲ್ಲಿ ಕರಡಿಗೋಡಿನ ನದಿ ದಡದ ಅಪಾಯದಲ್ಲಿರುವ ಮನೆಗಳ ಕುಟುಂಬಸ್ಥರನ್ನು ಬೇರೆ ಸ್ಥಳಕ್ಕೆ ಸ್ಥಳಾಂತರ ಮಾಡಲು ಅಮ್ಮತ್ತಿ ಹೋಬಳಿ ಕಂದಾಯ ಇಲಾಖಾಧಿಕಾರಿಗಳು ತಾತ್ಕಾಲಿಕ ವ್ಯವಸ್ಥೆ ಮಾಡಿದ್ದಾರೆ.

ಮಳೆಯಿಂದಾಗಿ ಕುಸಿದ ಮೋರಿ

ಕರಿಕೆ: ಇಲ್ಲಿಗೆ ಸಮೀಪದ ಹನ್ನೊಂದನೇ ಮೈಲು ಎಂಬಲ್ಲಿ ಭಾರೀ ಮಳೆಯಿಂದಾಗಿ ಭಾಗಮಂಡಲ - ಕರಿಕೆ ಗಾಗಿ ಕೇರಳ ರಾಜ್ಯಕ್ಕೆ ಸಂಪರ್ಕ ಕಲ್ಪಿಸುವ ಅಂತರ್ ರಾಜ್ಯ ಹೆದ್ದಾರಿ ಬದಿ ಮೋರಿ ಕುಸಿದು ಸಂಪರ್ಕ ಕಡಿತಗೊಳ್ಳ್ಳುವ ಸಂಭವವಿದ್ದು ಒಂದುವೇಳೆ ಸಂಬಂಧಿಸಿದ ಇಲಾಖೆ ಕೂಡಲೆ ದುರಸ್ತಿ ಮಾಡದಿದ್ದಲ್ಲಿ ರಸ್ತೆ ಸಂಪೂರ್ಣವಾಗಿ ಕುಸಿದು ಬದಲಿ ಮಾರ್ಗವಿಲ್ಲದೆ ಈ ಭಾಗದ ಜನತೆ ಪರದಾಡುವ ಸಾದ್ಯತೆ ಎದುರಾಗಲಿದ್ದು ಅದಕ್ಕಿಂತ ಮೊದಲು ಜಿಲ್ಲಾಡಳಿತ ಎಚ್ಚೆತ್ತುಕೊಳ್ಳಬೇಕಿದೆ.

ತೂಗುಸೇತುವೆ ಕಾಮಗಾರಿ ಪೂರ್ಣ

ಇಲ್ಲಿಗೆ ಸಮೀಪದ ಚೆತ್ತುಕಾಯ ಎಂಬಲ್ಲಿಂದ ದೊಡ್ಡಚೇರಿ ಹಾಗೂ ಆಲತ್ತಿಕಡವುಗೆ ಸಂಪರ್ಕ ಕಲ್ಪಿಸುವ ತೂಗು ಪಾಲ ಕಾಮಗಾರಿ ಪೂರ್ಣ ಗೊಂಡಿದ್ದು ಗ್ರಾಮಸ್ಥರಿಗೆ ಸಂಚರಿಸಲು ಮುಕ್ತವಾಗಿದೆ.

ಸ್ಥಳೀಯ ಗ್ರಾಮ ಪಂಚಾಯತಿ ವತಿಯಿಂದ ಸುಮಾರು ಐವತ್ತು ಸಾವಿರ ವೆಚ್ಚದಲ್ಲಿ ಎಂಟು- ಹತ್ತು ಕಿ.ಮಿ.ದೂರದಿಂದ ಬಿದಿರನ್ನು ಸಂಗ್ರಹಿಸಿ ಸ್ಥಳೀಯ ಕೂಲಿ ಕಾರ್ಮಿಕರನ್ನು ಬಳಸಿಕೊಂಡು ಈ ತಾತ್ಕಾಲಿಕ ತೂಗು ಸೇತುವೆ ನಿರ್ಮಾಣ ಮಾಡುತ್ತಿದ್ದು ಮಳೆಯಿಂದಾಗಿ ನದಿ ತುಂಬಿ ಹರಿಯುತ್ತಿದ್ದು ಇದು ಅತ್ಯಂತ ಅಪಾಯಕಾರಿ ಕೆಲಸವಾಗಿದೆ.ಪ್ರತಿವರ್ಷ ಮೇ ಅಂತ್ಯದಲ್ಲಿ ಈ ಕೆಲಸ ಪೂರ್ಣಗೊಳ್ಳುತ್ತಿದ್ದರೂ ಈ ಬಾರಿ ದಿಢೀರ್ ಮಳೆ ಪ್ರಾರಂಭವಾಗಿ ನೀರಿನ ಮಟ್ಟ ಏರಿಕೆ ಯಾದ ಹಿನ್ನೆಲೆÉಯಲ್ಲಿ ತಡವಾಗಿದ್ದು, ಸ್ಥಳೀಯ ಪಂಚಾಯಿತಿ ಅಧ್ಯಕ್ಷ ರಾದ ಬಾಲಚಂದ್ರ ನಾಯರ್ ಹಾಗೂ ಅಭಿವೃದ್ಧಿ ಅಧಿಕಾರಿ ಬಿಪಿನ್‍ರವರು ಖುದ್ದಾಗಿ ನಿಂತು ಕಾಮಗಾರಿ ನಿರ್ವಹಣೆ ಮಾಡಿದ್ದು ಗ್ರಾಮಸ್ಥರ ಮೆಚ್ಚುಗೆಗೆ ಪಾತ್ರರಾಗಿದ್ದಾರೆ.

ಮರ ಬಿದ್ದು ಮಹಿಳೆ ಗಂಭೀರ

ಸೋಮವಾರಪೇಟೆ: ಇಲ್ಲಿಗೆ ಸಮೀಪದ ಹರದೂರು ಗ್ರಾಮ ಪಂಚಾಯಿತಿ ವ್ಯಾಪ್ತಿಯ ಗರಗಂದೂರು ಬಿ ಗ್ರಾಮದ ತೋಟಂಬೈಲು ಸೋಮಣ್ಣರವರ ಮನೆ ಪಕ್ಕದಲ್ಲಿದ್ದ ಸಿಲ್ವರ್ ಮರ ಬಿದ್ದು ಅವರ ಪತ್ನಿ ಪ್ರೇಮಾ (ಕನ್ನಿಕೆ) ಅವರು ಗಂಭೀರ ಸ್ಥಿತಿಗೆ ತಲುಪಿದ ಘಟನೆ ಇಂದು ನಡೆದಿದೆ. ಮನೆ ಸನಿಹವೇ ಕೆಲಸ ಮಾಡುತ್ತಿದ್ದ ಪ್ರೇಮಾ ಅವರ ಮೇಲೆ ಸಿಲ್ವರ್ ಮರ ಬಿದ್ದಿದ್ದು, ಸೊಂಟದ ಭಾಗಕ್ಕೆ ಪೆಟ್ಟಾಗಿ ಚಿಂತಾಜನಕ ಸ್ಥಿತಿಗೆ ತಲುಪಿದ್ದಾರೆ. ತಕ್ಷಣ ಅವರನ್ನು ಮಡಿಕೇರಿ ಜಿಲ್ಲಾ ಆಸ್ಪತ್ರೆಗೆ ದಾಖಲಿಸಿ ಚಿಕಿತ್ಸೆ ನೀಡಿದ ನಂತರ ಹೆಚ್ಚಿನ ಚಿಕಿತ್ಸೆಗಾಗಿ ಮಂಗಳೂರು ವೆನ್ಲಾಕ್ ಆಸ್ಪತ್ರೆಗೆ ದಾಖಲಿಸಲಾಗಿದೆ. ಗಾಯಾಳುವಿನ ಸ್ಥಿತಿ ಗಂಭೀರವಾಗಿದೆ ಎಂದು ಆಸ್ಪತ್ರೆ ಮೂಲಗಳು ತಿಳಿಸಿವೆ. ಘಟನೆ ನಡೆದ ಸ್ಥಳಕ್ಕೆ ಗ್ರಾಮ ಪಂಚಾಯಿತಿ ಸದಸ್ಯ ಗೌತಮ್ ಶಿವಪ್ಪ, ಯುವ ಕಾಂಗ್ರೆಸ್ ಹರದೂರು ವಲಯ ಅಧ್ಯಕ್ಷ ಸಲೀಂ, ತೊಟಂಬೈಲು ತಮ್ಮಯ್ಯ, ಪ್ರಕಾಶ್ ಇತರರು ಭೇಟಿ ನೀಡಿದ್ದರು.