ಮಡಿಕೇರಿ, ಜು. 18: ಅಧಿಕಾರಕ್ಕೆ ಬಂದ ಕೇವಲ ಎರಡು ತಿಂಗಳಲ್ಲಿ ಸ್ವರ್ಗವನ್ನು ಧರೆಗಿಳಿಸಲು ಸಾಧ್ಯವಿಲ್ಲ, ಸಮ್ಮಿಶ್ರ ಸರಕಾರದಲ್ಲಿರುವ ಮುಖ್ಯಮಂತ್ರಿಗಳಿಗೆ ಅಭಿವೃದ್ಧಿ ಪರ ದೃಢ ನಿರ್ಧಾರ ಕೈಗೊಳ್ಳಲು ಒಂದಷ್ಟು ಕಾಲಾವಕಾಶ ನೀಡಬೇಕಾಗುತ್ತದೆ. ಸಮಸ್ಯೆಗಳನ್ನು ಆಲಿಸಲು ಕೊಡಗು ಜಿಲ್ಲೆಗೆ ಆಗಮಿಸುತ್ತಿರುವ ಮುಖ್ಯ ಮಂತ್ರಿಗಳನ್ನು ಸರ್ವರೂ ಪಕ್ಷಾತೀತ ಮತ್ತು ಜಾತ್ಯತೀತವಾಗಿ ಗೌರವಿಸಿ ಸಂಕಷ್ಟಗಳ ಬಗ್ಗೆ ಗಮನ ಸೆಳೆಯುವ ಅಗತ್ಯವಿದೆ ಎಂದು ಜಾತ್ಯತೀತ ಜನತಾದಳದ ಜಿಲ್ಲಾ ವಕ್ತಾರ ಪಿ.ಎಸ್. ಭರತ್ ಕುಮಾರ್ ತಿಳಿಸಿದ್ದಾರೆ.

ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಅಧಿಕಾರ ವಹಿಸಿಕೊಂಡ ಕೇವಲ ಎರಡೇ ತಿಂಗಳಿನಲ್ಲಿ ಮುಖ್ಯಮಂತ್ರಿಗಳು ಕಾವೇರಿ ನದಿಯ ಉಗಮ ಸ್ಥಾನ ಕೊಡಗು ಜಿಲ್ಲೆಗೆ ಭೇಟಿ ನೀಡಿ ಜನರ ಸಮಸ್ಯೆಗಳಿಗೆ ಸ್ಪಂದಿಸಲು ಮುಂದಾಗುತ್ತಿರುವದು ಹೆಮ್ಮೆಯ ವಿಚಾರವಾಗಿದೆ ಎಂದರು.

ತಾ. 19 ಮತ್ತು 20 ರಂದು ಕುಮಾರಸ್ವಾಮಿ ಅವರು ಕೊಡಗು ಜಿಲ್ಲೆಗೆ ಭೇಟಿ ನೀಡುವ ಸಂದರ್ಭ ಕೊಡಗಿನ ಜನ ಪಕ್ಷಾತೀತ ಮತ್ತು ಜಾತ್ಯತೀತವಾಗಿ ತಮ್ಮ ಅಹವಾಲುಗಳನ್ನು ಹಂಚಿಕೊಳ್ಳಬೇಕಾಗಿದೆ. ಜಿಲ್ಲೆಯಲ್ಲಿ ಕಳೆದ 70 ವರ್ಷಗಳಿಂದ ಇರುವ ಸಮಸ್ಯೆಗಳು ಎರಡು ತಿಂಗಳ ಮುಖ್ಯಮಂತ್ರಿ ಬಗೆಹರಿಸಬೇಕೆನ್ನುವ ಕೆಲವರ ಭ್ರಮೆ ಹಾಸ್ಯಾಸ್ಪದವಾಗಿದೆ. ಕುಮಾರಸ್ವಾಮಿ ಅವರು ಕೇವಲ ಕೊಡಗು ಜಿಲ್ಲೆಯ ಮುಖ್ಯಮಂತ್ರಿಗಳಲ್ಲ, ಇಡೀ ರಾಜ್ಯದ ಸಮಸ್ಯೆಗಳನ್ನು ಅವರು ಆಲಿಸ ಬೇಕಾಗಿದೆ. ಒತ್ತಡದ ಕಾರ್ಯಗಳ ನಡುವೆಯೂ ಆದ್ಯತೆಯ ಮೇರೆಗೆ ಕೊಡಗು ಜಿಲ್ಲೆಯನ್ನು ಆಯ್ಕೆ ಮಾಡಿಕೊಂಡು ಭೇಟಿ ನೀಡುತ್ತಿರುವದು ನಮಗೆ ತೃಪ್ತಿ ತಂದಿದೆ ಎಂದರು. ಮುಖ್ಯಮಂತ್ರಿಗಳ ಕಾಳಜಿಗೆ ಜಿಲ್ಲೆಯ ಶಾಸಕರುಗಳು ಕೂಡ ಕೈಜೋಡಿಸ ಬೇಕಾಗಿದೆ ಎಂದು ಭರತ್ ಕುಮಾರ್ ತಿಳಿಸಿದರು. ಯಡಿಯೂರಪ್ಪ ಅವರು ರಾಜ್ಯದ ಮುಖ್ಯಮಂತ್ರಿಗಳಾಗಿದ್ದಾಗ ರೈತರ ಸಾಲಮನ್ನಾ ಮಾಡಲು ಸಾಧ್ಯವಾಗಿಲ್ಲ. ರಾಜ್ಯದಲ್ಲಿ ಕಳೆದ ಐದು ವರ್ಷಗಳಲ್ಲಿ ಸಾಲು ಸಾಲು ರೈತರು ಆತ್ಮಹತ್ಯೆಗೆ ಶರಣಾದಾಗ ಕೇಂದ್ರದ ಬಿಜೆಪಿ ನೇತೃತ್ವದ ಸರ್ಕಾರ ರೈತರ ನೆರವಿಗೆ ಬರಲಿಲ್ಲ, ಅಲ್ಲದೆ ಸಾಲ ಮನ್ನಾದ ಬಗ್ಗೆಯೂ ತಲೆಕೆಡಿಸಿ ಕೊಂಡಿಲ್ಲ. ರೈತ ಮುಖಂಡರು ನೆರವು ನೀಡುವಂತೆ ಕೇಂದ್ರವನ್ನು ಮನವಿ ಮಾಡಿದರು ಯಾವದೇ ಸಹಾಯ ಪ್ರಧಾನಮಂತ್ರಿಗಳಿಂದ ದೊರೆತಿಲ್ಲ. ಅಲ್ಲದೆ, ಸಂಸದ ಪ್ರತಾಪ್ ಸಿಂಹ ಅವರು ಕೊಡಗು ಜಿಲ್ಲೆಗೆ ಏನು ಕೊಡುಗೆ ನೀಡಿದ್ದಾರೆ ಎಂದು ಪ್ರಶ್ನಿಸಿದ ಭರತ್ ಕುಮಾರ್ ಕುಶಾಲನಗರದ ವರೆಗೆ ರೈಲು ಮಾರ್ಗವನ್ನು ತರಲಾಗಲಿಲ್ಲ ಎಂದು ಟೀಕಿಸಿದರು.

ಜೆಡಿಎಸ್ ಪುನರ್ ರಚನೆ : ಕೊಡಗು ಜಿಲ್ಲಾ ಜೆಡಿಎಸ್ ಘಟಕದ ಎಲ್ಲಾ ಸಮಿತಿಗಳನ್ನು ವಿಸರ್ಜಿಸಿ ಪುನರ್ ರಚಿಸಲಾಗುವದೆಂದು ಅವರು ತಿಳಿಸಿದರು. ಗೋಷ್ಠಿಯಲ್ಲಿ ಜೆಡಿಎಸ್ ಪರಿಶಿಷ್ಟ ಜಾತಿ ಘಟಕದ ರಾಜ್ಯ ಕಾರ್ಯದರ್ಶಿ ಹೆಚ್.ಎನ್. ಯೋಗೇಶ್ ಕುಮಾರ್, ಹಿಂದುಳಿದ ವರ್ಗಗಳ ಘಟಕದ ಪ್ರಧಾನ ಕಾರ್ಯ ದರ್ಶಿ ಬಿ.ಆರ್. ಸಂದೇಶ್ ಹಾಗೂ ನಗರಾಧ್ಯಕ್ಷ ಎಂ.ಹೆಚ್. ಮೊಹಮ್ಮದ್ ಉಪಸ್ಥಿತರಿದ್ದರು.