ಮಡಿಕೇರಿ, ಜು. 18: ಕೊಡಗು ಜಿಲ್ಲೆಯ ನೂತನ ಪೊಲೀಸ್ ಅಧೀಕ್ಷಕರಾಗಿ ಮಹಿಳಾ ಅಧಿಕಾರಿ ಡಾ. ಸುಮನ ಪೆಣ್ಣೇಕರ್ ಅವರು ಇಂದು ಅಧಿಕಾರ ವಹಿಸಿಕೊಂಡಿದ್ದಾರೆ. ಇದೇ ತಾ. 13 ರಿಂದ ಜಿಲ್ಲೆಯ ಪ್ರಬಾರ ಪೊಲೀಸ್ ಅಧೀಕ್ಷಕರಾಗಿದ್ದ ಚಾಮರಾಜನಗರದ ಜಿಲ್ಲಾ ಎಸ್ಪಿ ಧರ್ಮೇಂದ್ರಕುಮಾರ್ ವಿೂನ ಅವರಿಂದ ಸುಮನ ಅವರು ಅಧಿಕಾರ ಸ್ವೀಕರಿಸಿದರು.ಆ ಮೊದಲು ಜಿಲ್ಲಾ ಪೊಲೀಸ್ ಕೇಂದ್ರ ಕಚೇರಿಯಲ್ಲಿ ಪೊಲೀಸ್ ವಾದ್ಯಗೋಷ್ಠಿ ಸಹಿತ ಗೌರವ ರಕ್ಷೆ ಸ್ವೀಕರಿಸಿದ ಡಾ. ಸುಮನ ಅವರು, ‘ಶಕ್ತಿ’ಯೊಂದಿಗೆ ಮಾತನಾಡುತ್ತಾ, ಈಗಷ್ಟೇ ಕೊಡಗು ಜಿಲ್ಲೆಯ ಹೊಣೆಗಾರಿಕೆ ವಹಿಸಿಕೊಂಡಿದ್ದು, ಹೆಚ್ಚಿನ ಮಾಹಿತಿ ತಿಳಿಯಬೇಕಿದೆ ಎಂದು ನುಡಿದರು.ಈ ಕೊಡಗಿನ ಜನರು ಶಾಂತಿ ಪ್ರಿಯರು ಹಾಗೂ ಕಾನೂನನ್ನು ಗೌರವಿಸುತ್ತಾರೆ ಎಂದು ಕೇಳಿರುವದಾಗಿ ಮಾರ್ನುಡಿದ ಅವರು, ಜಿಲ್ಲೆಯಲ್ಲಿ ಕಾನೂನು ಸುವ್ಯವಸ್ಥೆಯೊಂದಿಗೆ ಸಾರ್ವಜನಿಕ (ಮೊದಲ ಪುಟದಿಂದ) ಹಿತ ಕಾಪಾಡುವದು ಪೊಲೀಸ್ ಇಲಾಖೆಯ ಕರ್ತವ್ಯವಾಗಿದ್ದು, ಆ ದಿಸೆಯಲ್ಲಿ ಗಮನ ಹರಿಸಲಾಗುವದು ಎಂದರು.
ದಕ್ಷಿಣ ಕನ್ನಡದ ಕಾರ್ಕಳದಲ್ಲಿ ಪ್ರೊಬೇಷನರಿ ಅವಧಿಯಲ್ಲಿ ಕಾರ್ಯನಿರ್ವಹಿಸಿದ್ದು, ನಕ್ಸಲ್ ಚಟುವಟಿಕೆ ಸೇರಿದಂತೆ ಯಾವದೇ ಕಾನೂನು ಬಾಹಿರ ಕೃತ್ಯಗಳಿಗೆ ಅವಕಾಶವಾಗದಂತೆ ಕೊಡಗು ಪೊಲೀಸ್ ಗಮನ ಹರಿಸುವ ನಿಟ್ಟಿನಲ್ಲಿ ನಿಗಾವಹಿಸಲಾಗುವದು ಎಂದು ನೂತನ ಎಸ್ಪಿ ತಿಳಿಸಿದರು.
ಮುಖ್ಯಮಂತ್ರಿಗಳ ಪ್ರವಾಸ ಹಿನ್ನೆಲೆಯಲ್ಲಿ ಇಂದು ಮತ್ತು ನಾಳೆ ಕೊಡಗಿನಲ್ಲಿ ಕಾರ್ಯನಿರ್ವಹಿಸಲಿರುವದಾಗಿ ಪ್ರಬಾರ ಹೊಣೆಗಾರಿಕೆ ನಿರ್ವಹಿಸಿದ ಎಸ್ಪಿ ಧರ್ಮೇಂದ್ರ ಕುಮಾರ್ ವಿೂನ, ಇಲ್ಲಿನ ಮಳೆ ಪರಿಸ್ಥಿತಿ, ಸಂಚಾರ ಕಿರಿಕಿರಿ ಇತ್ಯಾದಿ ಸಹಿತ ತಾ. 13 ರಿಂದ 6 ದಿನಗಳ ಕಾಲ ಕಾನೂನು ಸುವ್ಯವಸ್ಥೆ ಕಾಪಾಡುವ ದಿಸೆಯಲ್ಲಿ ಗಮನ ಹರಿಸಿದ್ದಾಗಿ ಇದೇ ವೇಳೆ ನುಡಿದರು.
ಜಿಲ್ಲಾ ಪೊಲೀಸ್ ಅಧೀಕ್ಷಕರಾಗಿದ್ದ ಪಿ. ರಾಜೇಂದ್ರ ಪ್ರಸಾದ್ ಅವರು ತಾ. 13 ರಿಂದ ತಾ. 29ರ ತನಕ ರಜೆಯಲ್ಲಿ ತೆರಳುವ ವೇಳೆ, ತಾನು ಚಾಮರಾಜನಗರ ಜಿಲ್ಲಾ ಹೊಣೆಗಾರಿಕೆಯೊಂದಿಗೆ, ಹೆಚ್ಚುವರಿಯಾಗಿ ಕೊಡಗಿನ ಜವಾಬ್ದಾರಿ ನಿರ್ವಹಿಸಿದ್ದು, ಇಲ್ಲಿನ ವಾತಾವರಣ ಖುಷಿ ತಂದಿದೆ ಎಂದರು.
2013ರ ತಂಡದ ಐಪಿಎಸ್ ಅಧಿಕಾರಿಣಿಯಾಗಿರುವ ಇವರು ವಿವಾಹಿತರಾಗಿದ್ದು, ಒಂದು ಮಗುವಿನ ತಾಯಿಯಾಗಿದ್ದಾರೆ.