ಕುಶಾಲನಗರ, ಜು. 18: ಕಳೆದ ಒಂದು ದಶಕದ ಹಿಂದೆ ಅವನತಿಯ ಅಂಚು ಕಾಣುವಂತಾಗಿದೆ. ಬಿದಿರು ಕಾಡುಗಳಿಗೆ ಇದೀಗ ಮತ್ತೆ ಮರುಜೀವ ದೊರೆತಿದೆ. ವನ್ಯಜೀವಿಗಳ ಆಹಾರ ಮತ್ತು ವಿವಿಧ ರೀತಿಯ ಉಪಯೋಗಕ್ಕೆ ದೊರಕುವ ಬಿದಿರು ಅಂದಾಜು 40 ರಿಂದ 50 ವರ್ಷಗಳ ಅವಧಿಯಲ್ಲಿ ಏಕಕಾಲದಲ್ಲಿ ನಾಶಗೊಂಡಿತ್ತು. ಮಾನವನ ಜೀವನದಲ್ಲಿ ಕೂಡ ಎಲ್ಲಾ ಹಂತಗಳಲ್ಲಿ ಪ್ರಯೋಜನಕ್ಕೆ ಬರುವ ಬಿದಿರು ಇದೀಗ ಮತ್ತೆ ಎಲ್ಲೆಡೆ ಬೆಳೆದು ನಿಂತಿರುವ ದೃಶ್ಯ ಗೋಚರಿಸಿದೆ. ಅರಣ್ಯ, ನದಿ ಮತ್ತಿತರ ಪ್ರದೇಶಗಳಲ್ಲಿ ಹೆಚ್ಚಾಗಿ ಕಂಡುಬರುವ ಬಿದಿರುಗಳು ಬೆಳೆಯುವ ಹಂತದಲ್ಲಿ ಸಣ್ಣ ಸಣ್ಣ ಪ್ರಾಣಿಗಳಿಗೆ ಆಹಾರವಾಗುವದರೊಂದಿಗೆ ನಂತರದ ಬೆಳವಣಿಗೆಯಲ್ಲಿ ಕಾಡಾನೆಗಳಿಗೆ ಇದರ ಪ್ರಯೋಜನ ಕಂಡುಬರುತ್ತವೆ.
ಬಿದಿರು ಮೆಳೆಗಳು ತಮ್ಮ ಶಾಶ್ವತ ಅಸ್ತಿತ್ವ ಕಾಣಬೇಕಾದಲ್ಲಿ ಕೆಲವೇ ವರ್ಷಗಳು ಬೇಕಾಗುತ್ತವೆ. 2005ರಲ್ಲಿ ಕುಶಾಲನಗರ ಅರಣ್ಯ ವಲಯ ಸೇರಿದಂತೆ ಸುತ್ತಮುತ್ತ ಬೆಳೆದು ನಿಂತಿದ್ದ ಸಾವಿರಾರು ಹೆಕ್ಟೇರ್ ಪ್ರದೇಶದ ಬಿದಿರುಗಳು ಏಕಕಾಲದಲ್ಲಿ ಹೂ ಕಾಣುವದರೊಂದಿಗೆ ನಂತರ ಬಿದಿರು ಮೆಳೆಗಳ ಸಂತಾನವೇ ನಾಶಗೊಂಡಿರುವದು ಗೋಚರಿಸಿತ್ತು. ಬಿದಿರಿನಲ್ಲಿ ಎರಡು ಜಾತಿಗಳಿದ್ದು ಅದರಲ್ಲಿ ಗ್ರೆಗೆರಿಯಸ್ ಬಿದಿರು ತಳಿ ಅಂದಾಜು 45 ರಿಂದ 50 ವರ್ಷಗಳ ಕಾಲ ಅಸ್ತಿತ್ವದಲ್ಲಿರುತ್ತವೆ. ಸ್ಪಾಂಡಿಕ್ ಎಂಬ ತಳಿಯ ಬಿದಿರುಗಳು ಹೆಚ್ಚು ಕಾಲ ಬೆಳೆಯುವದಿಲ್ಲ ಎನ್ನುತ್ತಾರೆ ಅರಣ್ಯ ಇಲಾಖೆಯ ನುರಿತ ತಜ್ಞರು.
2015ರ ಸಂದರ್ಭ ಸುಮಾರು ಸಾವಿರಾರು ಕೆಜಿ ಪ್ರಮಾಣದ ಬಿದಿರು ಭತ್ತ ನಾಶಗೊಂಡ ಸ್ಥಳಗಳಲ್ಲಿ ಬಿತ್ತುವ ಮೂಲಕ ಅವುಗಳು ಇದೀಗ ಬಹುತೇಕ ಬೃಹತ್ ಬಿದಿರುಗಳಾಗಿ ಬೆಳೆದು ನಿಂತಿರುವ ದೃಶ್ಯ ಕುಶಾಲನಗರ, ಯಡವನಾಡು, ವಾಲ್ನೂರು ದುಬಾರೆ ಮುಂತಾದ ಕಡೆಗಳಲ್ಲಿ ಕಾಣಬಹುದು. ಈ ನಡುವೆ ಮಳೆಗಾಲದಲ್ಲಿ ಬಿದಿರಿನ ಮೊಗ್ಗುಗಳು ಕಣಿಲೆಯಾಗಿ ಪರಿವರ್ತನೆಗೊಳ್ಳುವದರೊಂದಿಗೆ ಬೆಳೆಯುವ ಹಂತದಲ್ಲಿಯೇ ಇದನ್ನು ರುಚಿಕರ ಖಾದ್ಯವಾಗಿ ಬಳಸುತ್ತಾರೆ. ಆದರೆ ಬಿದಿರು ಕಣಿಲೆಗಳನ್ನು ಕಡಿಯುವದು ಅಥವಾ ಮಾರಾಟ ಮಾಡುವದು ಅರಣ್ಯ ಇಲಾಖೆಯ ಕಾಯ್ದೆಯನ್ವಯ ಶಿಕ್ಷಾರ್ಹ ಅಪರಾಧ ಎನ್ನುತ್ತಾರೆ ಸೋಮವಾರಪೇಟೆ ಸಹಾಯಕ ಅರಣ್ಯ ಸಂರಕ್ಷಣಾಧಿಕಾರಿ ಎಂ.ಎಸ್. ಚಿಣ್ಣಪ್ಪ. ಇಂತಹ ಅಪರಾಧ ಮಾಡಿದ ವ್ಯಕ್ತಿಗಳಿಗೆ ಇಲಾಖೆ ಮೂಲಕ ದಂಡ ಅಥವಾ ಕಾನೂನಿನನ್ವಯ ಶಿಕ್ಷೆ ವಿಧಿಸಲಾಗುವದು ಎನ್ನುವ ಎಚ್ಚರಿಕೆಯನ್ನು ನೀಡಿದ್ದಾರೆ.
ಇಲಾಖೆಯ ಸಸಿ ಸಂರಕ್ಷಣಾ ಕೇಂದ್ರಗಳಲ್ಲಿ ಪ್ರತಿ ವರ್ಷ ಸಾವಿರಾರು ಸಂಖ್ಯೆ ಬಿದಿರುಗಳನ್ನು ಬೆಳೆಸಿ ಅರಣ್ಯ, ನದಿ ತಟಗಳಲ್ಲಿ ನೆಡುವ ಕಾರ್ಯಕ್ರಮ ಕಳೆದ ಕೆಲವು ವರ್ಷಗಳಿಂದ ಮುಂದುವರೆದಿದೆ ಎಂದು ಚಿಣ್ಣಪ್ಪ ಮಾಹಿತಿ ನೀಡಿದ್ದಾರೆ. ಕಳೆದ ಕೆಲವು ದಶಕಗಳಿಂದ ಕುಶಾಲನಗರ ಕಾವೇರಿ ನಿಸರ್ಗಧಾಮ ಪ್ರವಾಸಿ ಕೇಂದ್ರದಲ್ಲಿ ಬಿದಿರು ಮೆಳೆಗಳು ನೂರಾರು ಸಂಖ್ಯೆಯಲ್ಲಿ ಪ್ರವಾಸಿಗರನ್ನು ತನ್ನತ್ತ ಸೆಳೆಯುತ್ತಿದ್ದವು. ಆದರೆ ಕಳೆದ ಕೆಲವೇ ವರ್ಷಗಳ ಅವಧಿಯಲ್ಲಿ ಈ ಪ್ರದೇಶದಲ್ಲಿ ಕೂಡ ಬಿದಿರು ತನ್ನ ಅಸ್ತಿತ್ವವನ್ನು ಏಕಕಾಲದಲ್ಲಿ ಕಳೆದುಕೊಂಡಿತ್ತು.
ಬಿದಿರಿನ ಹೂವಿನಿಂದ ಬಿದ್ದ ಬೀಜ ಮೊಳಕೆ ಬರುವದರೊಂದಿಗೆ ಅವುಗಳ ರಕ್ಷಣೆ ಮಾಡಿ ಇದೀಗ ಮತ್ತೆ ಕಾವೇರಿ ನಿಸರ್ಗಧಾಮ ಬಿದಿರು ಗಿಡಗಳೊಂದಿಗೆ ತನ್ನ ಗತಕಾಲ ಮರುಕಳಿಸಿರುವ ದೃಶ್ಯ ಗೋಚರಿಸಿದೆ. ಕಾಡಿನಲ್ಲಿ ಬಿದಿರುಗಳ ಅವನತಿಯ ಬೆನ್ನಲ್ಲೇ ಕೊಡಗು ಜಿಲ್ಲೆಯಲ್ಲಿ ಆಹಾರ ಅರಸಿಕೊಂಡು ಬರುತ್ತಿದ್ದ ಕಾಡಾನೆಗಳ ಉಪಟಳ ತಾರಕಕ್ಕೆ ಏರಿರುವದನ್ನು ಇತ್ತೀಚಿನ ದಿನಗಳಲ್ಲಿ ಗಮನಿಸ ಬಹುದು. ಇದೀಗ ಮತ್ತೆ ಅರಣ್ಯ ಪ್ರದೇಶಗಳು ಯಥಾಸ್ಥಿತಿಗೆ ಮರಳುವ ಮಟ್ಟಿಗೆ ಅರಣ್ಯ ಇಲಾಖೆ, ಸಂಘ-ಸಂಸ್ಥೆಗಳು ಯುದ್ದೋಪಾದಿಯಲ್ಲಿ ಕಾಡಿಗೆ ಮರುಜೀವ ಕಲ್ಪಿಸಲು ಪಣತೊಟ್ಟಿರುವದು ಉತ್ತಮ ಬೆಳವಣಿಗೆಯಾಗಿದೆ. ಈ ನಡುವೆ ಬೇಸಿಗೆಯ ಅವಧಿಯಲ್ಲಿ ಕಿಡಿಗೇಡಿಗಳು ಕಾಡಿಗೆ ಬೆಂಕಿ ಹಚ್ಚುವದರೊಂದಿಗೆ ಪರಿಸರದ ಬೆಳವಣಿಗೆಗೆ ತೊಡಕು ಉಂಟಾಗುತ್ತಿರುವದು ಕೂಡ ಪ್ರಸಕ್ತ ಬೆಳವಣಿಗೆಯಾಗಿದೆ.
ಕೊಡಗು ಜಿಲ್ಲೆಯ ಎಲ್ಲಾ ವಿಭಾಗ ಅರಣ್ಯ ಕ್ಷೇತ್ರಗಳಲ್ಲಿ ವಿವಿಧ ಯೋಜನೆಗಳ ಮೂಲಕ ಸಂಪೂರ್ಣ ಅರಣ್ಯೀಕರಣ ಮಾಡುವ ಯೋಜನೆ ನಿರಂತರವಾಗಿ ನಡೆಯುತ್ತಿದ್ದು, ಇದರಲ್ಲಿ ಬಿದಿರು ಮೆಳೆಗಳ ಅಭಿವೃದ್ಧಿ ಯೋಜನೆ ಕೂಡ ಕೈಗೊಳ್ಳಲಾಗುತ್ತಿದೆ ಎಂದು ಮಡಿಕೇರಿ ಉಪ ಅರಣ್ಯ ಸಂರಕ್ಷಣಾಧಿಕಾರಿ ಮಂಜುನಾಥ್ ತಿಳಿಸಿದ್ದಾರೆ.
ಒಟ್ಟಾರೆ ಅವನತಿ ಅಂಚಿನಲ್ಲಿದ್ದ ಬಿದಿರು ಮತ್ತೆ ತನ್ನ ಮರುಜೀವ ಕಾಣುವಲ್ಲಿ ಎಲ್ಲರೂ ಕೈಜೋಡಿಸಬೇಕಾಗಿದೆ.