ಮಡಿಕೇರಿ, ಜು. 18: ಕೊಡಗು ಜಿಲ್ಲೆಯಲ್ಲಿ ಪ್ರಸಕ್ತ ಸಾಲಿನ ಅತಿವೃಷ್ಟಿಯಿಂದಾಗಿ ಬಹುತೇಕ ಮುಖ್ಯ ರಸ್ತೆಗಳು ಹಾಗೂ ಗ್ರಾಮೀಣ ರಸ್ತೆಗಳು ಸಂಪೂರ್ಣವಾಗಿ ಹಾನಿಗೊಳ ಗಾಗಿದ್ದು, ಇವುಗಳ ಅಭಿವೃದ್ಧಿಗೆ ಕನಿಷ್ಟ 400 ಕೋಟಿ ರೂ.ಗಳ ವಿಶೇಷ ಪ್ಯಾಕೇಜ್ನ್ನು ನೀಡಬೇಕು ಎಂದು ಹಿಂದುಳಿದ, ದಲಿತ, ಅಲ್ಪಸಂಖ್ಯಾತ (ಅಹಿಂದ) ಒಕ್ಕೂಟದ ಕೊಡಗು ಜಿಲ್ಲಾ ಘಟಕ ಒತ್ತಾಯಿಸಿದೆ.
ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಒಕ್ಕೂಟದ ಜಿಲ್ಲಾಧ್ಯಕ್ಷ ಟಿ.ಎಂ. ಮುದ್ದಯ್ಯ ಅವರು, ತಾ. 19 ರಂದು ಜಿಲ್ಲೆಗೆ ಭೇಟಿ ನೀಡಲಿರುವ ಮುಖ್ಯಮಂತ್ರಿ ಹೆಚ್.ಡಿ. ಕುಮಾರಸ್ವಾಮಿ ಅವರಿಗೆ ಈ ಸಂಬಂಧವಾಗಿ ಮನವಿ ಸಲ್ಲಿಸುವದರೊಂದಿಗೆ ಕೊಡಗಿನ ಸಮಸ್ಯೆಗಳ ಕುರಿತು ಗಮನ ಸೆಳೆಯಲಾಗುವದು ಎಂದು ತಿಳಿಸಿದರು.
ಜಿಲ್ಲೆಗೆ ಹೊರದೇಶಗಳಿಂದ ಕರಿಮೆಣಸು ಆಮದಾಗುತ್ತಿರುವದರಿಂದ 600ರೂ.ಗಳಷ್ಟಿದ್ದ ಕರಿಮೆಣಸಿದ ಬೆಲೆ ಇದೀಗ ರೂ. 250 ಗಳಿಗೆ ಇಳಿಕೆಯಾಗಿದೆ. ಇದರಿಂದಾಗಿ ಸಾಕಷ್ಟು ರೈತರು ಸಂಕಷ್ಟಕ್ಕೆ ಸಿಲುಕಿದ್ದಾರೆ. ಕಳೆದ ಎರಡು ವರ್ಷಗಳಿಂದ ಬೆಲೆ ಏರಿಕೆಯ ನಿರೀಕ್ಷೆಯಲ್ಲಿ ದಾಸ್ತಾನು ಇರಿಸಿದ್ದ ಕರಿಮೆಣಸನ್ನು ಕಡಿಮೆ ಬೆಲೆಗೆ ಮಾರಲಾಗದ ಸ್ಥಿತಿಯಲ್ಲಿ ಬೆಳೆಗಾರರಿದ್ದು, ತೋಟದ ಕೆಲಸಕ್ಕೆ ಕೈಯ್ಯಲ್ಲಿದ್ದ ಹಣವೆಲ್ಲಾ ಖರ್ಚಾಗಿ ಇದೀಗ ಕಾರ್ಮಿಕರಿಗೂ ಕೆಲಸ ನೀಡಲಾಗದೆ ಬೆಳೆಗಾರರು ಹಾಗೂ ದುಡಿಯುವ ವರ್ಗ ಎರಡು ಕೂಡಾ ಸಂಕಷ್ಟಕ್ಕೆ ಸಿಲುಕಿದೆ ಎಂದು ಹೇಳಿದರು.
ಜಿಲ್ಲೆಯಲ್ಲಿ ನೆರೆ ಹಾವಳಿಯಿಂದಾಗಿ ಈಗಾಗಲೇ ಭತ್ತದ ಕೃಷಿ ಕೊಳೆತು ಹೋಗಿದ್ದು, ಹಲವಾರು ರೈತರು ತೊಂದರೆಗೆ ಈಡಾಗಿದ್ದಾರೆ. ಇವರಿಗೆ ಕನಿಷ್ಟ ಎಕರೆಗೆ 5 ಸಾವಿರ ರೂ.ಗಳ ಪರಿಹಾರ ನೀಡುವಂತಾಗ ಬೇಕು ಎಂದು ಆಗ್ರಹಿಸಿದರು.
ಮುಂದಿನ ದಿನಗಳಲ್ಲಿ ಭಾರೀ ಅನಾಹುತಗಳಾಗುವ ಸಾಧ್ಯತೆಗಳಿದ್ದು, ರಸ್ತೆ, ಸೇತುವೆಗಳ ಅಭಿವೃದ್ಧಿಗೂ ಕ್ರಮ ಕೈಗೊಳ್ಳಬೇಕು ಎಂದು ತಿಳಿಸಿದರು.
ಕಾರ್ಯದರ್ಶಿ ಎಂ. ಅಬ್ದುಲ್ಲಾ ಅವರು ಮಾತನಾಡಿದರು.