ಪೊನ್ನಂಪೇಟೆ, ಜು. 18: ರಾಜ್ಯದ ಮುಖ್ಯಮಂತ್ರಿಗಳಾದ ಕುಮಾರಸ್ವಾಮಿಯವರು ರಾಜ್ಯ ಬಜೆಟ್‍ನ್ನು ಮಂಡಿಸಿದಾಗ ಕೊಡಗಿನ ಬಗ್ಗೆ ಯಾವದೇ ಪ್ರಸ್ತಾಪ ಮಾಡಿಲ್ಲ. ಈ ಬಗ್ಗೆ ಜಿಲ್ಲಾದ್ಯಂತ ಸಿಟ್ಟು, ಬೇಸರ ವ್ಯಕ್ತಗೊಂಡಿದೆ. ಆದರೆ, ಮುಖ್ಯಮಂತ್ರಿಗಳು ಇದಕ್ಕೆ ಸಮಜಾಯಿಷಿಕೆ ನೀಡುತ್ತಾ ಸಿದ್ದರಾಮಯ್ಯ ಸರ್ಕಾರದಲ್ಲಿ ಅವರು ಮಂಡಿಸಿದ್ದ ಬಜೆಟ್ ಮತ್ತು ಯೋಜನೆಗಳು ಪೂರ್ಣವಾಗಿ ನಡೆಯುತ್ತದೆ, ಯಾವದೂ ನಿಲ್ಲುವದಿಲ್ಲ ಎಂದು ಹೇಳಿದ್ದಾರೆ. ಆದರೆ, ಇವರ ಹೇಳಿಕೆ ಸರಿಯಲ್ಲ ಎಂದು ಪೊನ್ನಂಪೇಟೆ ನಾಗರಿಕ ವೇದಿಕೆಯ ಸದಸ್ಯ ಅಡ್ಡಂಡ ಕಾರ್ಯಪ್ಪ ಬೇಸರ ವ್ಯಕ್ತಪಡಿಸಿದ್ದಾರೆ. ಸಿದ್ದರಾಮಯ್ಯ ಚುನಾವಣೆಗೆ ಮುನ್ನ ಮಂಡಿಸಿದ ಬಜೆಟ್‍ನಲ್ಲಿ ಕೊಡಗು ಜಿಲ್ಲೆಗೆ ರೂ. 50 ಕೋಟಿ ಅನುದಾನವನ್ನು ವಿಶೇಷ ಪ್ಯಾಕೇಜ್ ಎಂದು ಜಿಲ್ಲೆಯ ಗ್ರಾಮೀಣ ರಸ್ತೆಗಳ ಅಭಿವೃದ್ಧಿಗೆಂದು ಘೋಷಣೆ ಮಾಡಿದ್ದರು. ಕೊಡಗಿನವರೇ ಆದ ಕದ್ದಣಿಯಂಡ ಹರೀಶ್ ಅವರು ಈ ಬಗ್ಗೆ ಪ್ರಾಮಾಣಿಕವಾಗಿ ಪ್ರಯತ್ನಿಸಿದ ಫಲ ಇದಾಗಿತ್ತು. ನಂತರ ಸರ್ಕಾರದ ಆದೇಶ ಸಂ. ಲೋ.ಇ.155 ಐ.ಎಲ್ ದಿ:02-03-2018 ರಂತೆ ಆದೇಶ ಹೊರಡಿಸಿ ಆರ್ಥಿಕ ಇಲಾಖೆಯಿಂದ ಲೆಕ್ಕ ಶೀರ್ಷಿಕೆ 5054-04-337-0-05,154 ಜಿಲ್ಲಾ ರಸ್ತೆಗಳು ಮತ್ತು ರಸ್ತೆ ಸುಧಾರಣಾ ವೆಚ್ಚ ಶೀರ್ಷಿಕೆ 5054-04-0337-0-10-200 ರಂತೆ ಅನುಮೋದನೆಗೊಂಡು ಹಣ ಬಿಡುಗಡೆಗೆ ಆದೇಶ ನೀಡಿತ್ತು. ಆದರೆ, ಇದೇ ವೇಳೆಗೆ ರಾಜ್ಯ ವಿಧಾನಸಭಾ ಚುನಾವಣೆ ಬಂದದ್ದರಿಂದ ಈ ಯೋಜನೆ ಸ್ಥಗಿತಗೊಂಡಿತು. ಟೆಂಡರ್ ಕರೆಯಲು ಸಾಧ್ಯವಾಗಿರಲಿಲ್ಲ. ಇದೀಗ ಚುನಾವಣೆ ಮುಗಿದು ಹೊಸ ಸರ್ಕಾರ ರಚನೆಯಾಗಿ ರಾಜ್ಯದ ಮುಖ್ಯಮಂತ್ರಿಗಳು ಹೊಸ ಬಜೆಟ್ ಮಂಡಿಸಿದ್ದಾರೆ. ರೈತರ ಸಾಲ ಮನ್ನಾ ಮತ್ತು ಅನ್ನ ಭಾಗ್ಯದ ಯೋಜನೆಯ ಹಣದ ಕೊರತೆಗಾಗಿ ಕೊಡಗು ಜಿಲ್ಲೆಗೆ ಬಿಡುಗಡೆಯಾಗಿದ್ದ ರೂ. 50 ಕೋಟಿ ಅನುದಾನವನ್ನು ತಡೆಹಿಡಿಯಲಾಗಿದೆ. ರಾಜ್ಯದ ಮುಖ್ಯ ಅಭಿಯಂತರರಿಂದ ಪಡೆದ ಮಾಹಿತಿಯಂತೆ ಸದ್ಯಕ್ಕೆ ಬಿಡುಗಡೆಯಾದ ಹಣವನ್ನು ತಡೆಹಿಡಿದು ಈ ಬಗ್ಗೆ ಟೆಂಡರ್ ಕರೆಯದಂತೆ ಆದೇಶ ನೀಡಲಾಗಿದೆ ಎನ್ನಲಾಗಿದೆ. ಶಾಸಕರಾದ ಕೆ.ಜಿ.ಬೋಪಯ್ಯ, ಅಪ್ಪಚ್ಚು ರಂಜನ್, ಸುನಿಲ್ ಸುಬ್ರಮಣಿ, ವೀಣಾ ಅಚ್ಚಯ್ಯ ಈ ಬಗ್ಗೆ ಮುಖ್ಯಮಂತ್ರಿಗಳು ಗಮನ ಹರಿಸಲಿ ಇದೀಗ ಬೀಳುತ್ತಿರುವ ಭಾರೀ ಮಳೆಯಿಂದಾಗಿ ಕೊಡಗಿನ ಎಲ್ಲಾ ರಸ್ತೆಗಳು ಹಾಳಾಗಿದೆ. ಈಗಾಗಲೇ ಬಿಡುಗಡೆಯಾಗಿರುವ ರೂ. 50 ಕೋಟಿಯ ಜೊತೆಗೆ ಕನಿಷ್ಟ 500 ಕೋಟಿಯಷ್ಟು ಹಣ ರಸ್ತೆ ದುರಸ್ತಿಗೆ ಬೇಕಾಗಿದೆ. ಕೊಡಗಿಗೆ ಆಗಮಿಸುತ್ತಿರುವ ಮುಖ್ಯಮಂತ್ರಿಗಳಿಗೆ ಈ ಬೇಡಿಕೆಯನ್ನು ಇಟ್ಟು ನಮ್ಮ ಜನಪ್ರತಿನಿಧಿಗಳು ಒತ್ತಾಯಿಸಬೇಕೆಂದು ಕಾರ್ಯಪ್ಪ ಆಗ್ರಹ ಪಡಿಸಿದ್ದಾರೆ.