ಸುಂಟಿಕೊಪ್ಪ, ಜು. 18: ಇಲ್ಲಿಗೆ ಸಮೀಪದ ನಾಕೂರು ಶಿರಂಗಾಲ ಗ್ರಾಮ ಪಂಚಾಯಿತಿಯ ಕಾನ್‍ಬೈಲು ಗ್ರಾಮದ ಬಿ. ಐತ್ತಪ್ಪ ಅವರ ತೋಟಕ್ಕೆ ನುಗ್ಗಿದ್ದ ಮೂರು ಕಾಡಾನೆಗಳು ತೆಂಗಿನ ಮರವನ್ನು ನಾಶ ಪಡಿಸಿ ಕಾಫಿ, ಕಾಳು ಮೆಣಸು, ಇನ್ನಿತರ ಕೃಷಿ ಫಸಲುಗಳನ್ನು ತುಳಿದು, ಧ್ವಂಸಗೊಳಿಸಿವೆ ಇದರಿಂದ ಸಾವಿರಾರು ರೂ. ನಷ್ಟ ಉಂಟಾಗಿದೆ ಎಂದು ತೋಟದ ಮಾಲೀಕರು ಅರಣ್ಯ ಇಲಾಖೆಗೆ ನಷ್ಟ ಪರಿಹಾರಕ್ಕಾಗಿ ಮತ್ತು ತೋಟದಿಂದ ಕಾಡಾನೆಗಳನ್ನು ಓಡಿಸಲು ಮನವಿ ಸಲ್ಲಿಸಿದ್ದಾರೆ. ಕಾಡಾನೆಗಳ ಗುಂಪು ಈ ಭಾಗದಲ್ಲಿ ನೆಲೆವೂರಿದ್ದು, ಸುತ್ತಮುತ್ತಲಿನ ತೋಟಗಳ ಫಸಲನ್ನು ದ್ವಂಸಗೊಳಿಸುತ್ತಿವೆ ತೋಟದಲ್ಲಿಯೇ ಕಾಡಾನೆಗಳು ಬೀಡು ಬಿಡುತ್ತಿದ್ದು, ಅನೇಕ ಫಸಲುಗಳನ್ನು ನಷ್ಟಪಡಿಸಿವೆ. ಕಾಡಾನೆಗಳು ಸಂಚರಿಸುವ ಸ್ಥಳಗಳಲ್ಲಿ ಕಾಫಿ ಗಿಡಗಳು ಸಂಪೂರ್ಣ ಹಾಳಾಗುತ್ತಿವೆ. ಮುಂದಿನ ದಿನಗಳಲ್ಲಿ ಹೀಗೆಯೆ ಮುಂದುವರೆದರೆ ಸಣ್ಣ ಕೃಷಿಕರು ಜೀವನ ದೂಡಲು ಸಾಧ್ಯವಿಲ್ಲ್ಲ ಎಂದು ಐತಪ್ಪ ಅವರು ತಮ್ಮ ಅಳಲು ತೋಡಿಕೊಂಡಿದ್ದಾರೆ.