ಮಡಿಕೇರಿ, ಜು. 18: ಕೊಡಗು ರಾಜ್ಯದ ಅತ್ಯಂತ ಪುಟ್ಟ ಜಿಲ್ಲೆಯಾದರೂ ತನ್ನ ವಿಶಿಷ್ಟತೆಗಳ ಮೂಲಕ ರಾಜ್ಯ ಮಾತ್ರವಲ್ಲದೆ ರಾಷ್ಟ್ರ, ಅಂತರ್ರಾಷ್ಟ್ರೀಯ ಮಟ್ಟದಲ್ಲೂ ಗುರುತಿಸಿಕೊಂಡಿದೆ. ಇಲ್ಲಿನ ಪರಿಸರ, ಸಂಸ್ಕøತಿ, ಆಚಾರ-ವಿಚಾರಗಳು, ಅತಿಥಿ ಸತ್ಕಾರ ಮಾತ್ರವಲ್ಲದೆ ಕ್ರೀಡೆ, ದೇಶ ರಕ್ಷಣೆಯಂತಹ ವಿಚಾರಗಳಲ್ಲೂ ದೇಶಕ್ಕೆ ಹೆಸರು ತಂದವರು ಕೊಡಗಿನ ಜನರು. ಈ ವಿಚಾರಗಳೊಂದಿಗೆ ಜಿಲ್ಲೆಯ ಜನತೆ ಸಹೃದಯಿಗಳೂ ಆಗಿದ್ದಾರೆ. ಇಲ್ಲಿನವರ ಸ್ನೇಹಾಚಾರಗಳು ಇತರರಿಗೆ ಅಚ್ಚುಮೆಚ್ಚು ಕೂಡಾ...
ಆದರೆ, ಇಲ್ಲಿನ ನಿವಾಸಿಗಳ ಬದುಕಿನ ಬವಣೆ ಮಾತ್ರ ಯಾರಿಗೂ ಬೇಡವೇನೋ... ಸರಕಾರಗಳಿರಲಿ, ಇತರ ಜಿಲ್ಲೆ, ರಾಜ್ಯದವರಾಗಲಿ ಗುಡ್ಡಗಾಡು ಪ್ರದೇಶವಾದ ಕೊಡಗಿನ ಜನರ ಸಂಕಷ್ಟಗಳನ್ನು ಅದೂ ಕ್ಲಿಷ್ಟಕರವಾದ ಸಂದರ್ಭದಲ್ಲೂ ಅರಿಯುವದಿಲ್ಲ; ಬೆರೆಯುವದಿಲ್ಲ, ಸ್ಪಂದಿಸುವದಿಲ್ಲ ಎಂಬ ನೋವು ಇಲ್ಲಿನ ಜನತೆಯಲ್ಲಿದೆ.
ಸಾಧಾರಣವಾಗಿ ಕೊಡಗಿನ ಜನರು ಸರಕಾರಗಳಿಂದ ಹೆಚ್ಚಿನದೇನನ್ನೂ ನಿರೀಕ್ಷಿಸುವದಿಲ್ಲ. ಅಗತ್ಯತೆಗಳಾದ ಸಮರ್ಪಕ ರಸ್ತೆ, ನೀರು, ವಿದ್ಯುತ್, ದೂರವಾಣಿ, ಆಸ್ಪತ್ರೆಗಳಂತಹ ಅನಿವಾರ್ಯಗಳನ್ನು ಮಾತ್ರ ಬಯಸುತ್ತಾರೆ. ಬಹುತೇಕ ಇನ್ನಿತರ ಅಗತ್ಯತೆಗಳನ್ನು ಇಲ್ಲಿನ ಶಾಶ್ವತ ನಿವಾಸಿಗಳು ತಾವಾಗಿಯೇ ಕಲ್ಪಿಸಿಕೊಳ್ಳುತ್ತಾರೆ. ಇದರೊಂದಿಗೆ ಹೆಚ್ಚು ಸ್ವಾರ್ಥಿಗಳೂ ಆಗದೆ ಇತರರಿಗಾಗಿ ಮನ ಮಿಡಿಯುತ್ತಾರೆ. ಇದು ಕೇವಲ ಮಾನಸಿಕವಾಗಿ ಮಾತ್ರವಲ್ಲ ದೇಶದಲ್ಲಿ, ರಾಜ್ಯದಲ್ಲಿ ಪ್ರಾಕೃತಿಕ ದುರಂತಗಳು ಎದುರಾದಾಗ ಆರ್ಥಿಕವಾಗಿಯೂ ಸ್ಪಂದಿಸುತ್ತಾರೆ.
ಆದರೆ, ಕೊಡಗು ಬಹುತೇಕರಿಗೆ ‘ಚಿನ್ನದ ಮೊಟ್ಟೆ’ ಇಡುವ ಕೋಳಿ ಎಂಬಂತಾಗಿರುವದು ವಿಷಾದಕರ. ಮೋಜು, ಮಸ್ತಿಗಾಗಿ ಅಥವಾ ಇಲ್ಲಿಂದ ಸಂಗ್ರಹವಾಗುವ ಆರ್ಥಿಕ ಲಾಭಕ್ಕಾಗಿ ಮಾತ್ರ ಕೊಡಗು ಬೇಕೇ ಎಂಬಂತಾಗಿದೆ.
ವರ್ಷದ 12 ತಿಂಗಳ ಪೈಕಿ ಇಲ್ಲಿ ಬಹುತೇಕ ಸಮಯ ಮಳೆಗಾಲವಿರುತ್ತದೆ. ಈ ಸಂದರ್ಭದ ಕೊಡಗಿನ ಬದುಕು ಊಹೆಗೂ ನಿಲುಕದ್ದು. ಅದರಲ್ಲೂ ಪ್ರಸಕ್ತ ವರ್ಷದ ಮಳೆಗಾಲ ಇತ್ತೀಚಿನ ಹಲವು ವರ್ಷಗಳಲ್ಲಿ ಕಂಡು-ಕೇಳರಿಯದಂತದ್ದಾಗಿದೆ. ಕೃಷಿ ಪ್ರಧಾನ ಜಿಲ್ಲೆಯಾದ ಕೊಡಗಿನ ಬಹುತೇಕ ಫಸಲುಗಳು ನೆಲಕಚ್ಚುತ್ತಿವೆ. ಗ್ರಾಮೀಣ ಪ್ರದೇಶಗಳು ಮಾತ್ರವಲ್ಲ, ನಗರ, ಪಟ್ಟಣ ಪ್ರದೇಶಗಳ ಜನರು ಕೂಡ ಮನೆಯಿಂದ ದಾಟಲಾಗದಂತೆ ದಿಗ್ಬಂಧನಕ್ಕೆ ಒಳಗಾಗಿದ್ದಾರೆ.
ಶಾಲಾ-ಕಾಲೇಜುಗಳಿಗೆ ನಿರಂತರವಾಗಿ ಹತ್ತು-ಹನ್ನೆರಡು ದಿನಗಳ ರಜೆ ಘೋಷಣೆಯಾಗಿದ್ದು, ಹಲವು ಪ್ರಾಣಹಾನಿಗಳು ಸಂಭವಿಸಿವೆ. ರಸ್ತೆ ಕುಸಿತ, ಸೇತುವೆ ಕುಸಿತ, ಬರೆ ಜರಿತ, ಮನೆ ಜಖಂನಂತಹ ಪ್ರಕರಣಗಳಿಂದಾಗಿ ಇಡೀ ಜಿಲ್ಲೆ ಜರ್ಜರಿತವಾಗಿದೆ. ವಿದ್ಯುತ್ ಇಲ್ಲದ ದಿನಗಳು ಅದೆಷ್ಟೋ ಕಳೆದಿವೆ. ಇನ್ನೂ ಹಲವಾರು ಪ್ರದೇಶಗಳಲ್ಲಿ ಪ್ರವಾಹ ಪರಿಸ್ಥಿತಿ ಮುಂದುವರಿದಿರುವದು ಮಾತ್ರವಲ್ಲದೆ ಇನ್ನೂ ವಿದ್ಯುತ್ ಸಂಪರ್ಕ ಸರಿಯಾಗಿಲ್ಲ.
ರಾಜ್ಯದ ಬಹುತೇಕ ಕಡೆಗಳಿಗೆ ನೀರುಣಿಸಿದರೂ ಇಲ್ಲಿನ ಜನರು ಮಳೆಯ ನಡುವೆ ಕುಡಿಯುವ ನೀರನ್ನು ಸಂಗ್ರಹಿಸಬೇಕಾಗಿದೆ. ಅದೆಷ್ಟೋ ಕೋಟಿ ಹಣ ವಾಹನ ತೆರಿಗೆಯ ರೂಪದಲ್ಲಿ ಸರಕಾರದ ಬೊಕ್ಕಸ ತುಂಬುತ್ತಿದ್ದರೂ ಇಲ್ಲಿ ಸಮರ್ಪಕವಾದ ರಸ್ತೆಗಳೇ ಇಲ್ಲದಂತಾಗಿದೆ.
ಈ ಸನ್ನಿವೇಶದಲ್ಲಿ ನಾಡಿನೊಡೆಯ ಬರುತ್ತಿದ್ದಾರೆ
ರಾಜಕೀಯವಾದ ವಿಚಾರಗಳು ಏನೇ ಇರಬಹುದು. ಆದರೆ, ಕೊಡಗು ಜಿಲ್ಲೆಯೂ ರಾಜ್ಯದಲ್ಲಿ ತಾನೇ ಇದೆ. ಇಲ್ಲಿ ಏನಿದೆ, ಏನುಬೇಕಿದೆ, ಯಾವ ರೀತಿಯಲ್ಲಿ ವ್ಯವಸ್ಥೆಯನ್ನು ಸರಿಪಡಿಸಬೇಕು ಎಂಬ ದೃಢ ನಿಲುವು ಅತ್ಯಗತ್ಯವಿದೆ. ಇಡೀ ಜಿಲ್ಲೆ ನೋಡಲು ಹಚ್ಚಹಸಿರಿನಿಂದ ಕೂಡಿದ್ದರೂ ಒಡಲೊಳಗೆ ಏನೆಲ್ಲಾ ಸಮಸ್ಯೆಗಳಿವೆ ಎಂಬದು ಇತ್ಯರ್ಥವಾಗಬೇಕಾಗಿದೆ. ಕೇವಲ ಒಂದೆರಡು ದಿನಗಳು ಅಥವಾ ತಿಂಗಳು, ವರ್ಷದ ಯೋಜನೆ ಗಳಿಂದಾಗಿ ಅದೂ ರಾಜ್ಯ ವ್ಯಾಪಿ ಯಾದ ಏಕರೂಪದ ಯೋಜನೆ ಗಳಿಂದ ಮಲೆನಾಡು ಜಿಲ್ಲೆಯಾದ ಕೊಡಗಿಗೆ ಪ್ರಯೋಜನವಾಗದು. ಇತರೆಡೆಗಳಿರುವಂತೆ ಇಲ್ಲಿಯೂ ಒಂದೇ ತರಹದ ಸಮಸ್ಯೆಗಳು ಇವೆ ಎಂಬ ಅರ್ಥವನ್ನು ಬಿಟ್ಟು ಕೊಡಗಿನ ವಿಭಿನ್ನ ಸಮಸ್ಯೆಗಳನ್ನು ಮನಗಾಣಬೇಕಿದೆ.
ಸ್ಥಳೀಯ ಜನಪ್ರತಿನಿಧಿಗಳು, ಅಧಿಕಾರಿಗಳಿಂದ ‘ನಾಡಿನೊಡೆಯ’ ಸಮರ್ಪಕ ಮಾಹಿತಿಯನ್ನು ಪಡೆದು ಶಾಶ್ವತವಾದ ಪರಿಹಾರವನ್ನು ದೊರಕಿಸುವತ್ತ ಗಮನ ಹರಿಸಬೇಕಾಗಿದೆ ಎಂಬದು ಇಡೀ ಜಿಲ್ಲೆಯ ಜನತೆಯ ಬೇಡಿಕೆ ಹಾಗೂ ಬಯಕೆಯಾಗಿದೆ. -ಶಶಿ ಸೋಮಯ್ಯಜಿಲ್ಲೆಯ ವಾಸ್ತವತೆ ಇದು...
ಟ
ಟ
ಟ
ಟ
ಟ
ಟ
ಟ
ಟ
ಟ
ಟ
ಟ
ಟ
ಟ
ಟ
ಟ
ಟ
ಟ