ಮಡಿಕೇರಿ, ಜು. 18: ಪರಿಸರ ಕಾಪಾಡುವ ದೃಷ್ಟಿಯಿಂದ ವ್ಯಾಪಾರಿಗಳು ಪ್ಲಾಸ್ಟಿಕ್ಗಳನ್ನು ಬಳಸದಂತೆಯೂ, ಸುರಕ್ಷತೆಯ ದೃಷ್ಟಿಯಿಂದ ಅಂಗಡಿಗಳಲ್ಲಿ ಸಿ.ಸಿ. ಕ್ಯಾಮೆರಾ ಅಳವಡಿಸುವಂತೆಯೂ ಪ್ರಮುಖರು ವ್ಯಾಪಾರಿಗಳಿಗೆ ಕಿವಿಮಾತು ಹೇಳಿದರು.ಮಡಿಕೇರಿ ನಗರ ಚೇಂಬರ್ ಆಫ್ ಕಾಮರ್ಸ್ ಸ್ಥಾನೀಯ ಸಮಿತಿ ವತಿಯಿಂದ ಕಾವೇರಿ ಕಲಾಕ್ಷೇತ್ರದಲ್ಲಿ ನಡೆದ ಸಂವಾದ ಕಾರ್ಯಕ್ರಮದಲ್ಲಿ ನಗರದ ಅಭಿವೃದ್ಧಿಗೆ ಪೂರಕವಾದ ಇತರ ಪ್ರಮುಖ ವಿಷಯಗಳೂ ಚರ್ಚೆಗೆ ಬಂದವು.
ಉಪ ಪೊಲೀಸ್ ಅಧೀಕ್ಷಕ ಸುಂದರ್ರಾಜ್ ಅವರು ವ್ಯಾಪಾರಸ್ಥರು ಸಿ.ಸಿ. ಕ್ಯಾಮೆರಾ ಅಳವಡಿಸಿ ಸುರಕ್ಷತೆ ಕಾಪಾಡುವಂತೆ ಕರೆ ನೀಡಿದರು. ರಾತ್ರಿಯೂ ಅದನ್ನು ಚಾಲ್ತಿಯಲ್ಲಿಟ್ಟರೆ ಸಾಕಷ್ಟು ಅಪರಾಧಗಳು ಕಡಿಮೆಯಾ ಗುತ್ತದೆ ಎಂದರು. ಅಂಗಡಿಗಳಿಗೆ ಕೆಲಸ ಅರಸಿ ಬರುವವರ ಪೂರ್ಣ ವಿವರಗಳನ್ನು ಪಡೆಯುವಂತೆ ಅವರು ಸಲಹೆ ನೀಡಿದರು.
ನಗರದಲ್ಲಿ ಗಾಂಜಾ ವ್ಯವಹಾರ ಅವ್ಯಾಹತವಾಗಿ ನಡೆಯುತ್ತಿದ್ದು, ಈ ಬಗ್ಗೆ ಪೊಲೀಸ್ ಇಲಾಖೆ ಕಟ್ಟುನಿಟ್ಟಿನ ಕ್ರಮ ಕೈಗೊಳ್ಳುತ್ತಿದ್ದು, ಮಾಹಿತಿ ಇದ್ದವರು ತಮಗೆ ಸುಳಿವು ನೀಡುವಂತೆ ಕೋರಿದರು. ಸಾರ್ವಜನಿಕವಾಗಿ ಧೂಮಪಾನ ಮಾಡುವದು ಮತ್ತು ಮದ್ಯ ಸೇವನೆ ಮಾಡಿ ವಾಹನ ಚಾಲನೆ ಮಾಡುವವರ ಬಗ್ಗೆ ಕ್ರಮ ಕೈಗೊಳ್ಳಲಾಗುವದೆಂದರು. ನಗರದಲ್ಲಿ ಅಗತ್ಯಕ್ಕಿಂತ ಹೆಚ್ಚಾಗಿ ಆಟೋಗಳಿದ್ದು, ಸಾರಿಗೆ ಇಲಾಖೆ ಈ ಬಗ್ಗೆ ಗಮನ ಹರಿಸಬೇಕಿದೆ ಎಂದ ಸುಂದರ್ರಾಜ್, ಆಟೋ ನಿಲ್ದಾಣಗಳನ್ನು ಮರು ಗುರುತಿಸುವಿಕೆ ಮಾಡಲಾಗುತ್ತಿದೆ ಎಂದು ಮಾಹಿತಿ ನೀಡಿದರು.
ನಗರಸಭಾ ಅಧ್ಯಕ್ಷೆ ಕಾವೇರಮ್ಮ ಸೋಮಣ್ಣ ಅವರು ಮಾತನಾಡಿ, ಅಂಗಡಿ ಮಾಲೀಕರು ತ್ಯಾಜ್ಯಗಳನ್ನು ರಸ್ತೆಗೆ ಹಾಕುತ್ತಿದ್ದು, ಶುಚಿತ್ವಕ್ಕೆ ಗಮನ ಹರಿಸಬೇಕೆಂದರು. ಮಹದೇವಪೇಟೆ ರಸ್ತೆಯಲ್ಲಿ ಚರಂಡಿ ನಿರ್ಮಾಣ ಹಾಗೂ ಸ್ಲ್ಯಾಬ್ಗಳನ್ನು ಅಳವಡಿಸ ಲಾಗುವದು, ಗಣಪತಿ ಬೀದಿ ರಸ್ತೆ ಅಗಲೀಕರಣ ಮಾಡಲಾಗುವದೆಂದು ಮಾಹಿತಿಯಿತ್ತರು.
ಪ್ಲಾಸ್ಟಿಕ್ ನಿಷೇಧದ ಬಗ್ಗೆ ರಾಜ್ಯ ಸರಕಾರದ ಕಾನೂನಿನ ಬಗ್ಗೆ ಬೆಳಕು ಚೆಲ್ಲಿದ ಪೌರಾಯುಕ್ತೆ ಬಿ. ಶುಭಾ ಅವರು, ಪ್ಲಾಸ್ಟಿಕ್ ಕವರ್ಗಳ ತಯಾರಿಕೆ, ಬಳಕೆ ಹಾಗೂ ಶೇಖರಣೆ ಕೂಡಾ ಅಪರಾಧವಾಗಿದ್ದು, ಕಟ್ಟುನಿಟ್ಟಾಗಿ ಪಾಲಿಸುವಂತೆ ಮನವಿ ಮಾಡಿದರು.
ದಪ್ಪ ಗಾತ್ರದ ಪ್ಲಾಸ್ಟಿಕ್ ಬಳಕೆಗೂ ಅವಕಾಶವಿಲ್ಲ ಎಂದು ಸ್ಪಷ್ಟಪಡಿಸಿದ ಅವರು, ಪ್ಲಾಸ್ಟಿಕ್ ಬಳಕೆ ಮುಂದಿನ ಪೀಳಿಗೆಗೆ ಮಾರಕವಾಗುತ್ತದೆ ಎಂಬ ಭಾವನಾತ್ಮಕ ಚಿಂತನೆ ಹರಿಯಬೇಕು ಎಂದರು.
ಅಂಗಡಿ ಹಾಗೂ ಎಲ್ಲೆಡೆ ಹಸಿ ಮತ್ತು ಒಣ ಕಸ ಸಂಗ್ರಹಕ್ಕೆ ಪ್ರತ್ಯೇಕ ವ್ಯವಸ್ಥೆ ಕಲ್ಪಿಸಬೇಕೆಂದ ಬಿ. ಶುಭಾ, ಹಸಿ ತ್ಯಾಜ್ಯ ಬಳಸಿ ಗೊಬ್ಬರ ತಯಾರಿ ಸುವ ಬಗ್ಗೆ ಮಾಹಿತಿ ನೀಡಿದರು.
ಜಿಲ್ಲಾ ಚೇಂಬರ್ ಆಫ್ ಕಾಮರ್ಸ್ ಪ್ರಧಾನ ಕಾರ್ಯದರ್ಶಿ ಮೋಂತಿ ಗಣೇಶ್ ಅವರು ಪರಿಸರದ ಮೇಲೆ ಪ್ಲಾಸ್ಟಿಕ್ನ ದುಷ್ಪರಿಣಾಮವನ್ನು ವಿವರಿಸಿದರು. ನಗರದ 4 ಕಡೆ ಪ್ಲಾಸ್ಟಿಕ್ ಬಾಟಲ್ ಸಂಗ್ರಹಣಾ ಡಬ್ಬಿಗಳನ್ನು ಅಳವಡಿಸಲು ಅವಕಾಶ ಕೋರಿದರು. ಹಸಿ ತ್ಯಾಜ್ಯವನ್ನು ಗೊಬ್ಬರವನ್ನಾಗಿಸುವ ಬಗ್ಗೆ ತಾನು ಮನೆ ಮನೆಗೆ ತೆರಳಿ ಮಾಹಿತಿ ನೀಡಲು ತಯಾರಿರುವದಾಗಿ ತಿಳಿಸಿದರು.
ಜಿಲ್ಲಾ ಚೇಂಬರ್ ಮಾಜಿ ಅಧ್ಯಕ್ಷ ಜಿ. ಚಿದ್ವಿಲಾಸ್ ಅವರು ಅಭಿಪ್ರಾಯ ವ್ಯಕ್ತಪಡಿಸಿ, ಕಲ್ಯಾಣ ಮಂಟಪಗಳಲ್ಲಿ ನಡೆಯುವ ಸಮಾರಂಭಗಳಲ್ಲಿ ಪ್ಲಾಸ್ಟಿಕ್ ಬಾಟಲ್ಗಳಲ್ಲಿ ನೀರು, ಪ್ಲಾಸ್ಟಿಕ್ ತಟ್ಟೆ ಹಾಗೂ ಇತರ ಉಪಕರಣಗಳನ್ನು ಬಳಸದಂತೆ ಅರಿವು ಮೂಡಿಸಲು ನಗರ ಚೇಂಬರ್ ಮುಂದಾಗಬೇಕು ಎಂದರು. ನಗರದ ಹೊರ ಭಾಗಗಳಲ್ಲಿ ಚೇಂಬರ್ ವತಿಯಿಂದ ಪರಿಸರ ರಕ್ಷಣೆ, ಪ್ಲಾಸ್ಟಿಕ್ ನಿಷೇಧದ ಬಗ್ಗೆ ಫಲಕಗಳನ್ನು ಅಳವಡಿಸುವಂತೆಯೂ ಸಲಹೆ ನೀಡಿದರು.
ಶಾಲಾ ರಸ್ತೆಯ ವಿಸ್ತರಣೆಯ ಅಗತ್ಯತೆ, ಎಸ್.ಬಿ.ಐ. ರಸ್ತೆ ಬದಿ ಇಂಟರ್ಲಾಕ್ಗಳ ಅಳವಡಿಕೆ, ಪಾರ್ಕಿಂಗ್ ಜಾಗಗಳಲ್ಲಿ ಬಿಳಿ ಬಣ್ಣ ಅಳವಡಿಕೆ, ರಸ್ತೆ ಬದಿಗಳಲ್ಲಿ ನಿಲ್ಲಿಸಲಾಗಿರುವ ಗುಜರಿ ವಾಹನಗಳ ತೆರವು, ರಸ್ತೆ ಬದಿಗಳಲ್ಲಿ ನಡೆಸುವ ವರ್ಕ್ಶಾಪ್ಗಳ ತೆರವು, ಹಳ್ಳಿಯಿಂದ ಬಂದು ತರಕಾರಿ ಮಾರುವವರಿಗೆ ಪ್ರತ್ಯೇಕ ಜಾಗದ ವ್ಯವಸ್ಥೆ, ಸಿ.ಪಿ.ಸಿ. ವ್ಯಾಪ್ತಿಯಲ್ಲಿರುವ ನಗರಸಭೆಯ ಜಾಗದಲ್ಲಿ ಪಾರ್ಕಿಂಗ್ ಹಾಗೂ ಇತರ ವ್ಯವಸ್ಥೆಗಳ ಬಗ್ಗೆ ನಗರಸಭೆ ಹಾಗೂ ಪೊಲೀಸರ ಗಮನ ಸೆಳೆದರು.
ನಗರ ಚೇಂಬರ್ ಪದಾಧಿಕಾರಿಗಳಾದ ಧನಂಜಯ್, ಅರವಿಂದ್ ಕೆಂಚೆಟ್ಟಿ, ಬಿ.ಎಂ. ರಾಜೇಶ್, ಬಿ.ಕೆ. ಅರುಣ್, ದಿನಸಿ ವ್ಯಾಪಾರಿಗಳ ಸಂಘದ ಅಧ್ಯಕ್ಷ ಅಶ್ರಫ್, ಜಿಲ್ಲಾ ಚೇಂಬರ್ ಉಪಾಧ್ಯಕ್ಷ ಎಂ.ಇ. ಹಾರೂನ್, ನಿರ್ದೇಶಕ ಬಾಲಚಂದ್ರ ಉಳ್ಳಾಗಡ್ಡಿ, ಮಾಜಿ ನಗರಸಭಾ ಸದಸ್ಯ ಉಮೇಶ್, ಸಂತೆ ವ್ಯಾಪಾರಸ್ಥರ ಸಂಘದ ಅಧ್ಯಕ್ಷ ಇಸ್ಮಾಯಿಲ್ ಹಾಗೂ ಇತರರು ನಗರದ ಅಭಿವೃದ್ಧಿಗೆ ಪೂರಕ ವಾದ ಸಲಹೆಗಳನ್ನು ನೀಡಿದರು.
ಮಹದೇವಪೇಟೆಯಲ್ಲಿ ಸುಸ್ಥಿತಿಯಲ್ಲಿರದ ಆಟೋ ನಿಲುಗಡೆ, ಗಣಪತಿ ಬೀದಿಯಲ್ಲಿ ಪುಂಡ ಹುಡುಗರ ಹಾವಳಿ, ಅಲ್ಲಿ ಸಿ.ಸಿ. ಕ್ಯಾಮೆರಾ ಅಳವಡಿಕೆ, ಟಿಂಟ್ ಹಾಕಿರುವ ವಾಹನಗಳ ಚಾಲನೆ, ಗಾಂಜಾ ಉಪಟಳ ಹಾಗೂ ಇತರ ವಿಷಯಗಳ ಬಗ್ಗೆ ಅಧಿಕಾರಿಗಳು ಸಲಹೆ ಪಡೆದರು.
ನಗರ ಚೇಂಬರ್ ಅಧ್ಯಕ್ಷ ಬಿ.ಕೆ. ಅರುಣ್ಕುಮಾರ್ ಅವರು ಮಾತನಾಡಿ, ಪ್ಲಾಸ್ಟಿಕ್ ನಿಷೇಧದ ವಿಷಯದಲ್ಲಿ ವ್ಯಾಪಾರಿಗಳು ನಗರಸಭೆಗೆ ಸಹಕರಿಸುತ್ತಾರೆ, ಆದರೆ ದಿಢೀರನೆ ಅದರ ನಿಷೇಧದ ಬಗ್ಗೆ ಒತ್ತಡ ಹೇರದಂತೆ ಮನವಿ ಮಾಡಿದರು.
ಸಂಘಟನಾ ಕಾರ್ಯದರ್ಶಿ ಅರವಿಂದ ಕೆಂಚೆಟ್ಟಿ ಕಾರ್ಯಕ್ರಮ ನಿರೂಪಿಸಿ, ಆರ್.ಬಿ. ರವಿ ವಂದಿಸಿದರು. ವೃತ್ತ ನಿರೀಕ್ಷಕ ಮೇದಪ್ಪ, ಡಿ.ಸಿ.ಸಿ. ಬ್ಯಾಂಕ್ ನಿರ್ದೇಶಕ ಕನ್ನಂಡ ಸಂಪತ್, ಚೇಂಬರ್ ಪದಾಧಿಕಾರಿ ಗಳು, ನಗರದ ವಾಣಿಜ್ಯೋದ್ಯಮಿಗಳು ಪಾಲ್ಗೊಂಡಿದ್ದರು.