ವೀರಾಜಪೇಟೆ, ಜು. 18: ವೀರಾಜಪೇಟೆ ವಿಭಾಗಕ್ಕೆ ನಿನ್ನೆ ಬೆಳಗ್ಗಿನಿಂದಲೇ ಮಳೆ ಇಳಿಮುಖಗೊಂಡಿದೆ. ಇದರಿಂದ ರೈತ ವರ್ಗ ನಾಟಿ ಕೆಲಸವನ್ನು ಚುರುಕುಗೊಳಿಸಿದೆ. ತಾಲೂಕಿನಾದ್ಯಂತ ಹೊಳೆ, ತೋಡು, ಜಲಾವೃತಗೊಂಡ ಗದ್ದೆಗಳಲ್ಲಿ ನೀರಿನ ಪ್ರಮಾಣ ಇಳಿಮುಖಗೊಳ್ಳುತ್ತಿದೆ.

ಬೇತರಿ ಗ್ರಾಮದ ಕಾವೇರಿ ಹೊಳೆ, ನೆಲ್ಲಿ ಹುದಿಕೇರಿ ಹಾಗೂ ಕರಡಿಗೋಡಿನ ಕಾವೇರಿ ಹೊಳೆಯ ನೀರಿನ ಪ್ರಮಾಣ ಕುಗ್ಗುತ್ತಿದ್ದು ಈ ವಿಭಾಗದಲ್ಲಿ ನಿನ್ನೆ ಬೆಳಗ್ಗಿನಿಂದಲೇ ಮಳೆ ಕ್ಷೀಣಿಸಿದೆ.

ವೀರಾಜಪೇಟೆ ಬಳಿಯ ಕದನೂರು, ಅರಮೇರಿ, ಮಲ್ಲಂಬಟ್ಟಿ, ಕಾಕೋಟುಪರಂಬು, ಆರ್ಜಿ, ಪೆರುಂಬಾಡಿ ಬಾಳುಗೋಡು, ಬಿಟ್ಟಂಗಾಲ, ನಾಂಗಾಲ, ಮಗ್ಗುಲ, ಐಮಂಗಲ ಸೇರಿದಂತೆ ವಿವಿಧೆಡೆಗಳಲ್ಲಿ ನಾಟಿ ಕೆಲಸ ಚುರುಕುಗೊಂಡಿದೆ. ಮಳೆ ಇಳಿಮುಖವನ್ನು ಕಾಯುತ್ತಿದ್ದ ಕೃಷಿಕರು ನಾಟಿ ಕೆಲಸಕ್ಕೆ ಚಾಲನೆ ನೀಡಿದ್ದಾರೆ.

ನಿನ್ನೆ ಬೆಳಗ್ಗಿನಿಂದ ಇಂದಿನ ಬೆಳಗ್ಗಿನ ತನಕ ಒಟ್ಟು 0.51 ಇಂಚು ಮಳೆ ಸುರಿದಿದೆ.

ಎರಡು ಮನೆ ಜಖಂ

ಕಳೆದ 10 ದಿನಗಳಿಂದ ಸುರಿದ ಭಾರೀ ಮಳೆಗೆ ಬಿರುನಾಣಿ ಗ್ರಾಮದ ಕೆ.ಎನ್. ಬೆಳ್ಳಿಯಪ್ಪ ಹಾಗೂ ಕುಪ್ಪಣಮಾಡ ಬಿದ್ದಪ್ಪ ಎಂಬವರ ಮನೆ ಜಖಂಗೊಂಡು ನಷ್ಟ ಸಂಭವಿಸಿರುವದಾಗಿ ರೆವಿನ್ಯೂ ಸಿಬ್ಬಂದಿಗಳು ತಿಳಿಸಿದ್ದಾರೆ.

ತಾಲೂಕು ತಹಶೀಲ್ದಾರ್ ಆರ್. ಗೋವಿಂದರಾಜು ಅವರು ಇಂದು ಬೆಳಗ್ಗಿನಿಂದ ತಾಲೂಕಿನಾದ್ಯಂತ ಪ್ರವಾಸ ಕೈಗೊಂಡಿದ್ದು ಬಿರುನಾಣಿಯಲ್ಲಿ ಮನೆ ಜಖಂಗೊಂಡ ಸ್ಥಳಕ್ಕೆ ಭೇಟಿ ನೀಡಿ ರೆವಿನ್ಯೂ ಸಿಬ್ಬಂದಿಗಳೊಂದಿಗೆ ಮಹಜರು ನಡೆಸಿದರು.

ಕುಟ್ಟ, ಶ್ರೀಮಂಗಲ, ಹುದಿಕೇರಿ, ಪೊನ್ನಂಪೇಟೆ, ಕಾನೂರು ಸೇರಿದಂತೆ ವಿವಿಧೆಡೆಗಳಿಗೆ ಭೇಟಿ ನೀಡಿದ ಗೋವಿಂದರಾಜು ಅವರು ತಾಲೂಕಿನಾದ್ಯಂತ ಮಳೆ ಇಳಿಮುಖಗೊಂಡಿದೆ. ಬಿರುನಾಣಿಯಲ್ಲಿ ಎರಡು ಮನೆಗಳು ಜಖಂಗೊಂಡಿದೆ. ತಾಲೂಕಿನಾದ್ಯಂತ ನಾಟಿ ಕೆಲಸ ಬಿರುಸಿನಿಂದ ಸಾಗಿದೆ. ಜಲಾವೃತಗೊಂಡ ಗದ್ದೆಗಳಲ್ಲಿಯೂ ನೀರು ನಿಧಾನವಾಗಿ ಇಳಿಮುಖವಾಗುತ್ತಿರುವದರಿಂದ ಎಲ್ಲ ಕಡೆಗಳಲ್ಲಿ ನಾಟಿ ಕೆಲಸ ಸುಗಮವಾಗಿ ನಡೆಯಲಿದೆ ಎಂದು ಮಾಧ್ಯಮದವರಿಗೆ ತಿಳಿಸಿದರು.